ಎಸ್ಸೆಸ್ಸೆಲ್ಸಿ: ಮೊದಲ ಮೂರು ಸ್ಥಾನದಲ್ಲಿರಲಿ

7
ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಡಿ.ಸಿ ರೋಹಿಣಿ ಸಿಂಧೂರಿ ಸೂಚನೆ

ಎಸ್ಸೆಸ್ಸೆಲ್ಸಿ: ಮೊದಲ ಮೂರು ಸ್ಥಾನದಲ್ಲಿರಲಿ

Published:
Updated:
ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳ ಸಭೆ ನಡೆಸಿದರು.

ಹಾಸನ: ಮುಂದಿನ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಮೊದಲ ಮೂರನೇ ಸ್ಥಾನದಲ್ಲಿರಬೇಕು. ಅದಕ್ಕಾಗಿ ಈಗಿನಿಂದಲೇ ಪರಿಶ್ರಮ ವಹಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಶೈಕ್ಷಣಿಕ ಪ್ರಗತಿ ಕುರಿತ ಸಭೆ ನಡೆಸಿ ಮಾತನಾಡಿದರು.

ಈ ವರ್ಷ 10ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ ಹಾಸನ 7ನೇ ಸ್ಥಾನಕ್ಕೆ ಏರಿರುವುದು ಅಭಿನಂದನಾರ್ಹ ಆದರೆ, ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚಿನ ಸಾಮರ್ಥ್ಯ ಇದೆ. ಅದನ್ನು ಸೂಕ್ತ ಪ್ರೇರಣೆ ನೀಡುವ ಮೂಲಕ ಮುಂದಿನ ಸಾಲಿನಲ್ಲಿ ರಾಜ್ಯದಲ್ಲಿ 3ನೇ ಸ್ಥಾನದೊಳಗಿರುವಂತೆ ಮಾಡಲು ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಹೆಚ್ಚಿನ ಶ್ರಮ ವಹಿಸಬೇಕು ಎಂದರು.

ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಗ್ರೇಡಿಂಗ್ ಮಾಡಿ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿಶೇಷ ಪಾಠ ಪ್ರವಚನ ಕೈಗೊಳ್ಳಬೇಕು. ಆ ಮೂಲಕ ಎಲ್ಲಾ ಮಕ್ಕಳಲ್ಲೂ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಕಳೆದ ವರ್ಷ ಹಾಗೂ ಈ ವರ್ಷದ ಫಲಿತಾಂಶದಲ್ಲಿ ತಾಲ್ಲೂಕುವಾರು ಆಗಿರುವ ಪ್ರಗತಿಯ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿ, ಕೆಲವು ತಾಲ್ಲೂಕುಗಳು ನಿರಿಕ್ಷೇಗಿಂತ ಕಡಿಮೆ ಇದೆ. ಎಲ್ಲೆಡೆ ಕ್ಷೇತ್ರ ಶಿಕ್ಷಣಧಿಕಾರಿಗಳು ಹಾಗೂ ವಿಷಯ ಪರಿವೀಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಿ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಪ್ರೇರೆಪಿಸಬೇಕು. ಒಟ್ಟಾರೆ ಫಲಿತಾಂಶದ ಪ್ರಗತಿ ಶಿಕ್ಷಣ ಇಲಾಖೆ ಅಧಿಕಾರಿಗಳ ಹೊಣೆಗಾರಿಕೆ ಎಂದು ನಿರ್ದೇಶನ ನೀಡಿದರು.

ಈ ವರ್ಷ ಗಣಿತ ವಿಜ್ಞಾನ ಸೇರಿದಂತೆ ನಾಲ್ಕು ವಿಷಯಗಳ ಪಠ್ಯಗಳನ್ನು ಕೇಂದ್ರ ಬೋಧನ ಪಠ್ಯ ಮಾದರಿಗೆ ಬದಲಾವಣೆ ಆಗಿರುವುದರಿಂದ ಶಿಕ್ಷಕರಿಗೆ ತರಬೇತಿ ಒದಗಿಸಬೇಕು. ಅವರು ಸ್ವಯಂ ಕಲಿಕೆ ಮೂಲಕ ಪಠ್ಯದ ಬಗ್ಗೆ ಹಿಡಿತ ಸಾಧಿಸಬೇಕು ಎಂದು ತಿಳಿಸಿದರು.

ಎಲ್ಲಾ ಶಾಲೆಗಳಲ್ಲಿ ನಿತ್ಯ ಮಕ್ಕಳಿಗೆ ಪಠ್ಯ ಚಟುವಟಿಕೆ ಜತೆಗೆ ಕೃಷಿ ಹಾಗೂ ಪರಿಸರಕ್ಕೆ ಪೂರಕ ಚಟುವಟಿಕೆಗಳನ್ನು ಕಡ್ಡಾಯವಾಗಿ ನಡೆಸಬೇಕು. ಎಲ್ಲಾ ಶಾಲೆಗಳಲ್ಲಿ ವನ ಸಮೃದ್ಧಿ ಜತೆಗೆ ತರಕಾರಿ ಮತ್ತು ಹೂ ತೋಟಗಳ ಅಭಿವೃದ್ಧಿ ಪಡಿಸುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಬೇಕು. ಆ ಮೂಲಕ ಸಸ್ಯ ವಿಕಾಸದ ಪ್ರಕ್ರಿಯೆಯ ಅರಿವು ಮೂಡಿಸುವುದರ ಜತೆಗೆ ಶ್ರಮದ ಫಲದ ಸ್ವಯಂ ಅನುಭವ ದೊರೆಯುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.

ಶಾಲೆಗಳಲ್ಲಿ ಆಗಬೇಕಿರುವ ದುರಸ್ತಿ ಹಾಗೂ ಕಟ್ಟಡಗಳ ನಿರ್ಮಾಣ ಕಾರ್ಯಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ವಿವರವಾದ ವರದಿ ಸಲ್ಲಿಸಿದಲ್ಲಿ ಅದನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಪ್ರತಿ ಶಾಲೆಯಲ್ಲೂ ಮೂಲ ಸೌಕರ್ಯಗಳ ಅಭಿವೃದ್ಧಿ ಅಗತ್ಯ. ಆದರೆ, ಕೇವಲ ಇದರಿಂದ ಫಲಿತಾಂಶ ಉತ್ತಮಗೊಳ್ಳುವುದಿಲ್ಲ. ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳ ಒಟ್ಟಾರೆ ಪರಿಶ್ರಮ ಮುಖ್ಯ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಮಾತನಾಡಿ, ಈ ವರ್ಷ 4 ವಿಷಯಗಳ ಪಠ್ಯದಲ್ಲಿ ಆಗಿರುವ ಬದಲಾವಣೆ, ಕಟ್ಟಡಗಳ ದುಃಸ್ಥಿತಿ ಅಗತ್ಯಗಳ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಇದೇ ರೀತಿ ಪದವಿ ಪೂರ್ವ ಕಾಲೇಜಿನ ಕಟ್ಟಡಗಳಿಗೆ ಸಂಬಂಧಿಸಿದಂತೆಯೂ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಾಮರಾಜ್ ಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !