ಜಿಟಿ ಜಿಟಿ ಮಳೆ ನಡುವೆ ರಾಷ್ಟ್ರೀಯ ಹಬ್ಬದ ಸಂಭ್ರಮ

7
ಮೂಲೆ ಮೂಲೆಯಲ್ಲಿ ರಾಷ್ಟ್ರಗೀತೆ ಅನುರಣನ... ಮನ ಮನದಲ್ಲಿ ರಾಷ್ಟ್ರಭಕ್ತಿಯ ಸಿಂಚನ...

ಜಿಟಿ ಜಿಟಿ ಮಳೆ ನಡುವೆ ರಾಷ್ಟ್ರೀಯ ಹಬ್ಬದ ಸಂಭ್ರಮ

Published:
Updated:
Deccan Herald

ಕೋಲಾರ: ಜಿಟಿ ಜಿಟಿ ಮಳೆಯ ನಡುವೆ ಕ್ರೀಡಾಂಗಣದ ಮೂಲೆ ಮೂಲೆಯಲ್ಲೂ ರಾಷ್ಟ್ರಗೀತೆಯ ಅನುರಣನ... ಮನ ಮನದಲ್ಲೂ ರಾಷ್ಟ್ರಭಕ್ತಿಯ ಸಿಂಚನ... ಕಣ್ಣು ಹಾಯಿಸಿದಲ್ಲೆಲ್ಲಾ ತ್ರಿವರ್ಣ ಧ್ವಜದ ಸಾಲು... ಎಲ್ಲೆಲ್ಲೂ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ....

ಇಲ್ಲಿನ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ದೇಶದ 72ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಂಡುಬಂದ ದೃಶ್ಯಗಳಿವು. ಜಿಲ್ಲಾಡಳಿತವು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತು.

ನಗರದಲ್ಲಿ ಬೆಳಿಗ್ಗೆ ಮೋಡ ಮುಸುಕಿದ ವಾತಾವರಣವಿತ್ತು. ಜತೆಗೆ ಜಿಟಿ ಜಿಟಿ ಮಳೆ ಸುರಿಯುತ್ತಿದ್ದರಿಂದ ಸ್ವಾತಂತ್ರ್ಯ ದಿನಾಚರಣೆ ಸಕಾಲಕ್ಕೆ ಆರಂಭವಾಗುವ ಬಗ್ಗೆ ಅನುಮಾನ ಮೂಡಿತ್ತು. ಆದರೆ, ಕೆಲ ಹೊತ್ತಿನಲ್ಲೇ ಮೋಡಗಳು ಮರೆಯಾಗಿ ಬಿಸಿಲು ಬಂದಿತು. ಮಳೆ ನಿಲ್ಲುತ್ತಿದ್ದಂತೆ ಶಾಲಾ ಮಕ್ಕಳು, ಪೊಲೀಸರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಕ್ರೀಡಾಂಗಣದತ್ತ ಧಾವಿಸಿದರು.

ಪೂರ್ವ ನಿಗದಿಯಂತೆ 9 ಗಂಟೆಗೆ ಸಮಾರಂಭ ಆರಂಭವಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಕ್ರೀಡಾಂಗಣದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಪ್ರವೇಶದ್ವಾರದಲ್ಲಿ ಲೋಹ ಶೋಧಕಗಳನ್ನು ಅಳವಡಿಸಲಾಗಿತ್ತು. ಪೊಲೀಸ್‌ ಸಿಬ್ಬಂದಿಯು ಪ್ರತಿ ವ್ಯಕ್ತಿಯನ್ನು ತಪಾಸಣೆ ಮಾಡಿ ಕ್ರೀಡಾಂಗಣದ ಒಳ ಹೋಗಲು ಬಿಟ್ಟರು.

ಶಾಲಾ ಮಕ್ಕಳು, ಪೊಲೀಸರು, ಸೇವಾದಳ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌, ಎನ್‌ಸಿಸಿ ಹಾಗೂ ಗೃಹರಕ್ಷಕ ದಳ ಸಿಬ್ಬಂದಿಯು ಆಕರ್ಷಕ ಪಥಸಂಚಲನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ಸಮಾರಂಭದ ಸೊಗಸನ್ನು ಇಮ್ಮಡಿಗೊಳಿಸಿತು.

ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ ಹಾಗೂ ನ್ಯಾಯಾಲಯ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಬಸ್‌ ಚಾಲಕರು, ಆಟೊ ಚಾಲಕರು ಹಾಗೂ ಬೈಕ್‌ ಸವಾರರು ವಾಹನಗಳ ಮೇಲೆ ರಾಷ್ಟ್ರಧ್ವಜ ಹಾಕಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಅಂತರಗಂಗೆ ರಸ್ತೆಯ ಪ್ರವೇಶ ಭಾಗದಲ್ಲಿ ಬೃಹತ್‌ ಸ್ವಾಗತ ಕಮಾನು ಹಾಕಲಾಗಿತ್ತು.

ಆಕರ್ಷಕ ಪಥಸಂಚಲನ ನಡೆಸಿದ ಐ.ಆರ್.ವಿ ಶಾಲಾ ವಿದ್ಯಾರ್ಥಿಗಳ ತಂಡಕ್ಕೆ ಪ್ರಥಮ, ಮದರ್ ಥೆರೆಸಾ ಶಾಲಾ ತಂಡಕ್ಕೆ ದ್ವಿತೀಯ ಹಾಗೂ ಬಿ.ಎಂ.ಎಸ್ ಶಾಲಾ ತಂಡಕ್ಕೆ ತೃತೀಯ ಬಹುಮಾನ ನೀಡಲಾಯಿತು. ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಂಜೆ ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ನಗರವಾಸಿಗಳ ಮನಸೊರೆಗೊಂಡಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !