ಅಂತರ್ಜಾತಿ ವಿವಾಹವಾಗಿದ್ದ ದಂಪತಿ ಠಾಣೆಯಲ್ಲೇ ಆತ್ಮಹತ್ಯೆ ಯತ್ನ

7

ಅಂತರ್ಜಾತಿ ವಿವಾಹವಾಗಿದ್ದ ದಂಪತಿ ಠಾಣೆಯಲ್ಲೇ ಆತ್ಮಹತ್ಯೆ ಯತ್ನ

Published:
Updated:

ಕೋಲಾರ: ಅಂತರ್ಜಾತಿ ವಿವಾಹವಾಗಿದ್ದ ದಂಪತಿಯು ಪೋಷಕರ ಕಿರುಕುಳದಿಂದ ಮನನೊಂದು ಇಲ್ಲಿನ ಗ್ರಾಮಾಂತರ ಪೊಲೀಸ್‌ ಠಾಣೆ ಆವರಣದಲ್ಲೇ ಸೋಮವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಪೋಷಕರ ವಿರುದ್ಧ ದೂರು ನೀಡಲು ಠಾಣೆಗೆ ಬಂದಿದ್ದ ತಾಲ್ಲೂಕಿನ ದಂಡಿಗಾನಹಳ್ಳಿ ಗ್ರಾಮದ ಹೇಮಂತ್‌ಕುಮಾರ್‌ (25) ಮತ್ತು ಅವರ ಪತ್ನಿ ಚೈತ್ರಾ (20) ಪೊಲೀಸರ ಸಮ್ಮುಖದಲ್ಲೇ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಸಿದರು. ನಂತರ ಪೊಲೀಸರು ಅವರನ್ನು ರಕ್ಷಿಸಿ, ಪೋಷಕರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಅನ್ಯ ಜಾತಿಯ ಹೇಮಂತ್‌ಕುಮಾರ್‌ ಮತ್ತು ಚೈತ್ರಾ ಪರಸ್ಪರ ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಆರು ತಿಂಗಳ ಹಿಂದೆ ವಿವಾಹವಾಗಿದ್ದರು. ಹೀಗಾಗಿ ಎರಡೂ ಕುಟುಂಬದವರು ದಂಪತಿಯನ್ನು ಮನೆಗೆ ಸೇರಿಸಿರಲಿಲ್ಲ. ಚೈತ್ರಾ ಗರ್ಭಿಣಿಯಾದ ಕಾರಣ ಹೇಮಂತ್‌ಕುಮಾರ್‌ ಪತ್ನಿಯೊಂದಿಗೆ ಇತ್ತೀಚೆಗೆ ತಮ್ಮ ಮನೆಗೆ ಮರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಹೇಮಂತ್‌ಕುಮಾರ್‌, ತಮಗೆ ಮನೆ ಕೊಡಬೇಕೆಂದು ಪೋಷಕರಿಗೆ ಒತ್ತಾಯಿಸುತ್ತಿದ್ದರು. ಆದರೆ, ಪೋಷಕರು ಅವರ ಒತ್ತಾಯಕ್ಕೆ ಮಣಿದಿರಲಿಲ್ಲ. ಈ ವಿಚಾರವಾಗಿ ದೂರು ನೀಡಲು ಹೇಮಂತ್‌ಕುಮಾರ್‌ ಪತ್ನಿಯೊಂದಿಗೆ ಠಾಣೆಗೆ ಬಂದಿದ್ದರು. ಅವರ ಪೋಷಕರನ್ನು ಠಾಣೆಗೆ ಕರೆಸುವಷ್ಟರಲ್ಲಿ ದಂಪತಿಯು ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ರಾದ್ಧಾಂತ ಸೃಷಿಸಿದರು’ ಎಂದು ಪೊಲೀಸರು ಹೇಳಿದ್ದಾರೆ.

ಬಂಧಿಸಬೇಕು: ಪೊಲೀಸರ ಹೇಳಿಕೆ ನಿರಾಕರಿಸಿರುವ ಚೈತ್ರಾ, ‘ಮಾವ ಶ್ರೀನಿವಾಸ್, ಅತ್ತೆ ಮುನಿರತ್ನಮ್ಮ ಮತ್ತು ಮೈದುನ ಕಾರ್ತಿಕ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ದೌರ್ಜನ್ಯದ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಮೈದುನ, ಅತ್ತೆ ಮತ್ತು ಮಾವನನ್ನು ಬಂಧಿಸಬೇಕು’ ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !