ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ:ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್

6

ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ:ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್

Published:
Updated:
Deccan Herald

ಕೋಲಾರ: ‘ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಿದಾಗ ಮಾತ್ರ ಕಾರ್ಮಿಕರ ಸಬಲೀಕರಣಗೊಳ್ಳಲು ಸಾಧ್ಯ’ ಎಂದು ಜಾಗೃತಿ ಸೇವಾ ಸಂಸ್ಥೆಯ ಅಧ್ಯಕ್ಷ ಕೆ.ಆರ್.ಧನರಾಜ್ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಹಜರತ್ ಖುತುಬ್ ಘೌರಿ ಇಮ್ದಾದಿ ಬೈತುಲ್ಮಾಲ್ ಟ್ರಸ್ಟ್‌ ಮತ್ತು ಜಾಗೃತಿ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಕಾರ್ಮಿಕರ ಯೋಜನೆಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕಾರ್ಮಿಕರಿಗಾಗಿ ಸರ್ಕಾರಗಳು ವಿವಿಧ ಯೋಜನೆಗಳಿಂದ ಹಲವಾರು ಸೌಕರ್ಯ ಅನುಷ್ಟಾನಗೊಳಿಸಿದೆ. ಕಾರ್ಮಿಕ ಇಲಾಖೆ ಅಥವಾ ಮಂಡಳಿಯಿಂದ ಗುರುತಿನ ಚೀಟಿ ಪಡೆದುಕೊಂಡರೆ ಸೌಕರ್ಯ ಪಡೆದುಕೊಳ್ಳಲು ಅರ್ಹರಾಗುತ್ತಾರೆ’ ಎಂದು ತಿಳಿಸಿದರು.

ಮನೆ ಬಾಗಿಲಿಗೆ ಸೌಕರ್ಯ: ‘ಕಾರ್ಮಿಕರ ಮನೆ ಬಾಗಿಲಿಗೆ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆಯು ನಿರಂತರವಾಗಿ ಅರಿವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಅರ್ಥ ಮಾಡಿಕೊಂಡು ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಕಾರ್ಮಿಕ ಮಂಡಳಿಯಲ್ಲಿ ₨ 6,000 ಕೋಟಿ ಇದೆ. ಆದರೆ ಸಮರ್ಪಕವಾಗಿ ಯಾರೂ ಬಳಕೆ ಮಾಡಿಕೊಳ್ಳುತ್ತಿಲ್ಲ. ಗುರುತಿನಚೀಟಿ ಪಡೆದುಕೊಂಡಲ್ಲಿ ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಯಲ್ಲಿ ದಾಖಲಾದರೆ ₨ 6 ಸಾವಿರ, ಅಪಘಾತದಲ್ಲಿ ಮೃತಪಟ್ಟರೆ ₨ 3 ಲಕ್ಷ, ಅಪಘಾತದಲ್ಲಿ ಗಾಯಗೊಂಡರೆ ಚಿಕಿತ್ಸೆ ವೆಚ್ಚವನ್ನು ಮಂಡಳಿಯೆ ಪಾವತಿ ಮಾಡುತ್ತದೆ’ ಎಂದು ವಿವರಿಸಿದರು.

ಸ್ಥಳದಲ್ಲೇ ನೋಂದಣಿ: ‘ಗಂಬೀರ ಕಾಯಿಲೆಗಳ ಶಸ್ತ್ರ ಚಿಕಿತ್ಸೆಗೆ ₨ 2 ಲಕ್ಷ, ಗ್ಯಾಸ್ ಸೌಲಭ್ಯ, ಮಕ್ಕಳಿಗೆ ವಿದ್ಯಾರ್ಥಿ ವೇತನ, ಮಕ್ಕಳ ವಿವಾಹಕ್ಕೆ ₨ 50 ಸಾವಿರ, ನಾಗರಿಕರಾದರೆ ಪಿಂಚಣಿ ಸೌಕರ್ಯ ಸಿಗಲಿದೆ. ನಿಮಗೆ ಗುರುತಿನ ಚೀಟಿ ನೀಡಲು, ನಾವೇ ನಿಮ್ಮ ಬಳಿ ಬಂದು ನೋಂದಣಿ ಮಾಡಿಸುತ್ತಿದ್ದೇವೆ. ಪ್ರತಿವರ್ಷ ಕಾರ್ಡ್ ನವೀಕರಣ ಮಾಡಿಕೊಳ್ಳಬೇಕು. ಕಾರ್ಮಿಕರು ನೋಂದಣಿ ಮಾಡಿಸಿ ವರ್ಷದಿಂದ ಸೌಕರ್ಯ ದೊರೆಯುತ್ತದೆ’ ಎಂದು ಹೇಳಿದರು.

‘ಸರ್ಕಾರದ ಯೋಜನೆಗಳನ್ನು ಕಾರ್ಯಕಗತಗೊಳಿಸಲು ಸಂಘಸಂಸ್ಥೆಗಳವರು ಮುಂದೆ ಬಂದಾಗ ಮಾತ್ರ ಫಲಾನುಭವಿಗಳಿಗೆ ತಲುಪಿಸಲು ಸಾಧ್ಯ’ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್.ಮುನಿಯಪ್ಪ ತಿಳಿಸಿದರು.
‘ದಲಿತರು, ಅಲ್ಪಸಂಖ್ಯಾತರು ಸಬಲರಾದರೆ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ಅನೇಕ ಸಂಘ-ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಿಗೆ ಸೌಕರ್ಯ ತಲುಪಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ನಗರಸಭೆ ಸದಸ್ಯೆ ನಾರಾಯಣಮ್ಮ, ಕೆಯುಡಿಎ ಮಾಜಿ ಅಧ್ಯಕ್ಷ ಅಬ್ದುಲ್ ಖಯ್ಯೂಂ, ಮಾನವ ಹಕ್ಕುಗಳ ಸಮಿತಿಯ ಅಧ್ಯಕ್ಷ ಜಹೀರ್ ಅಹಮದ್, ಮೌಲ್ವಿ ಜುಬೇದ್, ಕಾರ್ಯಕ್ರಮದ ವ್ಯವಸ್ಥಾಪಕ ಇಮ್ರಾನ್, ಹಜರತ್ ಖುತುಬ್ ಘೌರಿ ಇಮ್ದಾದಿ ಬೈತುಲ್ಮಾಲ್ ಟ್ರಸ್ಟ್ ಅಧ್ಯಕ್ಷ ಸೈಯ್ಯದ್ ಸರ್ದಾರ್, ಕಾರ್ಯದರ್ಶಿ ಅಶು, ಸದಸ್ಯ ಸೈಯ್ಯದ್ ಅಮೀನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !