ಬುಧವಾರ, ಅಕ್ಟೋಬರ್ 21, 2020
24 °C
ಕ್ರಿಕೆಟ್: ಹೆಟ್ಮೆಯರ್ ಶತಕ ವ್ಯರ್ಥ; ಮಿಂಚಿದ ಶಮಿ

ರೊಹಿತ್–ಕೊಹ್ಲಿ ಅಮೋಘ ಜೊತೆಯಾಟ: ರನ್‌ಪ್ರವಾಹದಲ್ಲಿ ಕೊಚ್ಚಿಹೊದ ವಿಂಡೀಸ್

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಗುವಾಹಟಿ: ಭಾನುವಾರ ಸಂಜೆ ಬರ್ಸಾಪುರ ಕ್ರೀಡಾಂಗಣದಲ್ಲಿ ನಡೆದ ಮೊಟ್ಟಮೊದಲ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಹರಿದ ರನ್‌ಗಳ ಹೊಳೆಯು ಬ್ರಹ್ಮಪುತ್ರ ನದಿಯ ಪ್ರವಾಹವನ್ನು ನೆನಪು ಮಾಡಿಕೊಟ್ಟಿತು.

ಒಟ್ಟು 648 ರನ್‌ಗಳು ಹರಿದ ಈ ಕ್ರೀಡಾಂಗಣದಲ್ಲಿ ಮೂರು ಅಬ್ಬರದ ಶತಕಗಳು ದಾಖಲಾದವು. ಅದರಲ್ಲಿ ಭಾರತದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ದಾಖಲಿಸಿದ ಶತಕಗಳಿಗೆ ಜಯ ಒಲಿಯಿತು. ವಿಂಡೀಸ್‌ನ ಶಿಮ್ರೊನ್ ಹೆಟ್ಮೆಯರ್ ಅವರ ಶತಕ ವ್ಯರ್ಥವಾಯಿತು. ಎಂಟು ವಿಕೆಟ್‌ಗಳಿಂದ ಗೆದ್ದ ಭಾರತವು ಐದು ಪಂದ್ಯಗಳ ಸರಣಿಯಲ್ಲಿ 1–0ಯಿಂದ ಶುಭಾರಂಭ ಮಾಡಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವಿರಾಟ್ ಬಳಗಕ್ಕೆ ಸೆಡ್ಡು ಹೊಡೆಯುವಂತೆ ಆಡಿದ ವಿಂಡೀಸ್ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 322 ರನ್‌ ಗಳಿಸಿತು. ಸ್ವಲ್ಪ ಕಠಿಣವೇ ಆದ ಈ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲಿಯೇ ಆಘಾತ ಕಾದಿತ್ತು. ಎರಡನೇ ಓವರ್‌ನಲ್ಲಿಯೇ ಶಿಖರ್ ಧವನ್ (4 ರನ್) ಒಷೇನ್ ಥಾಮಸ್ ಅವರ ಎಸೆತಕ್ಕೆ ಕ್ಲೀನ್‌ ಬೌಲ್ಡ್‌ ಆದರು. ವಿಂಡೀಸ್ ಆಟಗಾರರು ಕುಣಿದಾಡಿ ಸಂಭ್ರಮಿಸಿದರು. ಇದಾದ ನಂತರ ಅವರಿಗೆ ಸಂಭ್ರಮಿಸುವ ಅವಕಾಶ ಸಿಗಲಿಲ್ಲ.

ಕ್ರೀಸ್‌ಗೆ ಬಂದ ನಾಯಕ ವಿರಾಟ್ ಕೊಹ್ಲಿ ಬೌಲರ್‌ಗಳ ಎಸೆತಗಳನ್ನು ನಿರ್ದಯವಾಗಿ ದಂಡಿಸಿದರು. ಅವರ ಆಟದ ವೇಗ ಮತ್ತು ಅಬ್ಬರವನ್ನು ಇನ್ನೊಂದು ಬದಿಯಲ್ಲಿದ್ದ ರೋಹಿತ್ ಶರ್ಮಾ ನೋಡುತ್ತ ನಿಂತರು. ಹೆಚ್ಚು ಎಸೆತಗಳನ್ನುಇ ಕೊಹ್ಲಿಗೆ ಎದುರಿಸಲು ಬಿಟ್ಟರು. ವಿರಾಟ್ ಅರ್ಧಶತಕ ಗಳಿಸಿದಾಗ ಶರ್ಮಾ ಕೇವಲ 23 ರನ್‌ ಗಳಿಸಿದ್ದರು. ಈ ಹಂತದಲ್ಲಿ ವಿರಾಟ್ 2018ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಎರಡು ಸಾವಿರ ರನ್‌ ಗಳಿಸಿದ ಮೈಲುಗಲ್ಲು ದಾಟಿದರು. ಇದರೊಂದಿಗೆ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದರು.

ಒಟ್ಟು 88 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಆಗ ರೋಹಿತ್ 55 ರನ್‌ ಗಳಿಸಿ ಆಡುತ್ತಿದ್ದರು. ಆಕರ್ಷಕ ಕವರ್‌ ಡ್ರೈವ್‌, ಪುಲ್, ಕಟ್, ಅಪ್ಪರ್ ಕಟ್‌ ಮತ್ತು ಬ್ಯಾಕ್‌ಫುಟ್‌ ಡ್ರೈವ್‌ಗಳ ರಸದೌತಣ ನೀಡಿದ ವಿರಾಟ್ ಶತಕದಲ್ಲಿ ಒಂದು ಸಿಕ್ಸರ್ ಇರಲಿಲ್ಲ. ಆದರೆ ಅಷ್ಟರಲ್ಲಿ ರೋಹಿತ್ 4 ಸಿಕ್ಸರ್ ದಾಖಲಿಸಿದ್ದರು. ಅವರು ತಾವೇದುರಿಸಿದ 84ನೇ ಎಸೆತದಲ್ಲಿ ಶತಕ ದಾಖಲಿಸಿದರು.  ಇವರಿಬ್ಬರೂ ಎರಡನೇ ವಿಕೆಟ್ ಜೊತೆಯಾಟದಲ್ಲಿ 246 ರನ್‌ಗಳನ್ನು ಸೇರಿಸಿದರು.

33ನೇ ಓವರ್‌ನಲ್ಲಿ ವಿರಾಟ್ ಫ್ರಂಟ್‌ಪುಟ್‌ ಶಾಟ್ ಪ್ರಯೋಗಿಸುವ ಯತ್ನದಲ್ಲಿ ಸ್ಟಂಪ್ಡ್‌ ಆದರು. ಅದರೊಂದಿಗೆ ಸುಂದರ ಜೊತೆಯಟಕ್ಕೆ ತೆರೆಬಿತ್ತು. ಕೊಹ್ಲಿ ಪ್ರೇಕ್ಷಕರತ್ತ ಬ್ಯಾಟ್‌ ಬೀಸಿ ಅಭಿನಂದನೆ ಸಲ್ಲಿಸುತ್ತಲೇ ಪೆವಿಲಿಯನ್‌ಗೆ ತೆರಳಿದರು.

ಕ್ರೀಸ್‌ಗೆ ಬಂದ ಅಂಬಟಿ ರಾಯುಡು (ಔಟಾಗದೆ 22) ಮತ್ತು ರೋಹಿತ್ ಜೊತೆಗೂಡಿ ತಂಡವನ್ನು ಜಯದ ಗಡಿ ಮುಟ್ಟಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು