ಪ್ಲಾಸ್ಟಿಕ್ ಮುಕ್ತ ನಗರ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ

ಕೋಲಾರ: ‘ನಾಗರಿಕರು ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಾಗ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದಲ್ಲಿ ಗೋ ಪ್ಲಾಗ್ ಸಂಸ್ಥೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತ ನಗರ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ನಗರವನ್ನು ಕಸ ಮುಕ್ತಗೊಳಿಸಲು ಸ್ಥಳೀಯ ಸಂಸ್ಥೆಗಳ ಮೇಲೆ ಅವಲಂಭನೆಯಾಗುವ ಬದಲು ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಹಕಾರ ನೀಡುವಂತಾಗಬೇಕು’ ಎಂದರು.
‘ಕಸದ ಸಮಸ್ಯೆ ಶಾಶ್ವತ ಸಮಸ್ಯೆಯಲ್ಲ. ಈ ಸಮಸ್ಯೆ ನಗರವನ್ನು ನಿರಂತರವಾಗಿ ಕಾಡುತ್ತಿದೆ. ಕಸ ವಿಲೇವಾರಿಗೆ ಹೆಚ್ಚಿನ ಗಮನ ಹರಿಸಲು ಕ್ರಮ ಕೈಗೊಳ್ಳಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಟ್ರಾಕ್‌ಗಳನ್ನು ಖರೀದಿಸಲು ಚಿಂತನೆ ನಡೆಸಲಾಗಿದೆ’ ಎಂದು ಹೇಳಿದರು.
‘ಗೋ ಪ್ಲಾಗ್ ಮತ್ತು ಗೋ ನೇಟಿವ್ ಸಂಸ್ಥೆ ಸಾಮಾಜಿಕ ಕಾಳಜಿಯಿಂದ ಪ್ರತಿ ತಿಂಗಳ ಮೊದಲ ಭಾನುವಾರ ಸ್ವಚ್ಚತಾ ಕಾರ್ಯ ಆಯೋಜಿಸುತ್ತಿರುವುದು ಶ್ಲಾಘನೀಯ. ಇದನ್ನು ಪ್ರಜ್ಞಾವಂತರೆಲ್ಲಾ ಬೆಂಬಲಿಸುವದರ ಜತೆಗೆ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು’ ಎಂದು ಸಲಹೆ ನೀಡಿದರು.
‘ನಗರದಲ್ಲಿ ಕಸ ಉತ್ಪತ್ತಿ ಮಾಡುವುದು ನಾವೇ. ಇದರಿಂದಾಗಿ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮೂಲಕ ಕಸ ಮುಕ್ತ ನಗರ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ ತಿಳಿಸಿದರು.
‘ನಗರ ಪ್ರದೇಶಕ್ಕಿಂತ ಗ್ರಾಮಗಳಲ್ಲಿ ಉತ್ತಮ ಪರಿಸರ ಇದೆ. ಗ್ರಾಮೀಣ ಭಾಗದ ಜನ ಸ್ವಚ್ಛತೆಗಾಗಿ ಯಾವುದೇ ಸಂಸ್ಥೆಗಳ ಮೇಲೆ ಅವಲಂಭನೆಯಾಗುವುದಿಲ್ಲ. ಸ್ವಯಂ ಪ್ರೇರಿತರಾಗಿ ತಮ್ಮ ಮನೆ ಸುತ್ತಮುತ್ತ ಸ್ವಚ್ಛಗೊಳಿಸಿಕೊಳ್ಳತ್ತಾರೆ. ಈ ಭಾವನೆ ನಗರ ಜನರಲ್ಲೂ ಮೂಡಬೇಕು’ ಎಂದರು.
‘ಸ್ವಚ್ಚತೆ, ಕಸವಿಲೇವಾರಿ ಒಂದು ದಿನದ ಕೆಲಸವಲ್ಲ. ಅದು ನಿರಂತರವಾಗಿ ನಡೆಯಬೇಕು. ಇಂತಹ ಉತ್ತಮ ಕಾರ್ಯಗಳಲ್ಲಿ ಯುವಕರು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು’ ಎಂದು ಹೇಳಿದರು.
ಗೋ ನೇಟಿವ್ ಸಂಸ್ಥೆ ಸಂಸ್ಥಾಪಕಿ ಸುಮಾ ಮಾತನಾಡಿ, ‘ನಗರದಲ್ಲಿ ಸ್ವಚ್ಛತೆ ಕೊರತೆ ಇದೆ. ಪ್ಲಾಸ್ಟಿಕ್ ನಿಷೇದದ ಮಾತು ಆದೇಶಗಳಲ್ಲೇ ಉಳಿದಿದೆ, ಇದನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲು ಸಂಬಧಪಟ್ಟ ಅಧಿಕಾರಿಗಳು ಮುಂದೆ ಬರಬೇಕು’ ಎಂದರು.
ಎಂಜಿ ರಸ್ತೆ, ಇಟಿಸಿಎಂ ವೃತ್ತ, ಮೆಕ್ಕೆವೃತ್ತ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಎಸ್.ಜಿ.ನಾರಾಯಣಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಘವೇಂದ್ರ, ಎನ್‍ಎಸ್‍ಎಸ್ ಅಧಿಕಾರಿ ಪ್ರಕಾಶ್, ಸಮರ್ಥ ಭಾರತ ಟ್ರಸ್ಟ್ ಅಧ್ಯಕ್ಷ ತ್ಯಾಗರಾಜ್, ನಗರಸಭೆ ಎಂಜನಿಯರ್ ಸುಧಾಕರಶೆಟ್ಟಿ, ಕ್ರೀಡಾಪಟು ನಸೀರ್ ಖಾನ್, ಗೋ ಪ್ಲಾಗ್ ಸಂಸ್ಥೆಯ ಪ್ರತಿನಿಧಿಗಳಾದ ಪ್ರಕಾಶ್, ಸುಭಯ್ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.