ಎಂಡೋಪೀಡಿತ ಪ್ರದೇಶಗಳ ನೀರು ಪರೀಕ್ಷೆ

7
ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ ಸೂಚನೆ

ಎಂಡೋಪೀಡಿತ ಪ್ರದೇಶಗಳ ನೀರು ಪರೀಕ್ಷೆ

Published:
Updated:
Deccan Herald

ಮಂಗಳೂರು: ಎಂಡೋಸಲ್ಫಾನ್‌ ಕೀಟನಾಶಕದಿಂದ ತೊಂದರೆಗೊಳಗಾಗಿರುವ ಎಲ್ಲ ಜನವಸತಿಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿ ಉನ್ನತಮಟ್ಟದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ, ವರದಿ ಸಲ್ಲಿಸುವಂತೆ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸೂಚಿಸಿತು.

ಬೆಳ್ತಂಗಡಿ ತಾಲ್ಲೂಕಿನ ಎಂಡೋಸಲ್ಫಾನ್‌ ಪೀಡಿತ ಪ್ರದೇಶಗಳಿಗೆ ಬುಧವಾರ ಭೇಟಿನೀಡಿ ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಕೆ.ಸಿ.ಕೊಂಡಯ್ಯ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಅವರಿಗೆ ಈ ಸೂಚನೆ ನೀಡಿದರು. ಜಿಲ್ಲೆಯ 92 ಗ್ರಾಮಗಳಲ್ಲಿ ನೀರಿನ ಪರೀಕ್ಷೆ ನಡೆಯಬೇಕಿದೆ.

‘35 ವರ್ಷಗಳಿಂದ ಈಚೆಗೆ ಎಂಡೋಸಲ್ಫಾನ್‌ ಬಳಕೆ ಮಾಡಿಲ್ಲ ಎಂಬ ಮಾಹಿತಿ ಇದೆ. ಆ ಬಳಿಕವೂ ನೀರು ಮತ್ತು ಭೂಮಿಯ ಒಳಗೆ ಕೀಟನಾಶಕದ ಅಂಶ ಉಳಿದುಕೊಂಡಿದೆಯೇ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು. ಇದಕ್ಕಾಗಿ ತೆರೆದ ಜಲಮೂಲಗಳು ಮತ್ತು ಅಂತರ್ಜಲವನ್ನು ಪರೀಕ್ಷಿಸಬೇಕು. ಸಂತ್ರಸ್ತರು ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಸಮಿತಿ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಈ ವಿಚಾರದಲ್ಲಿ ಸಮಗ್ರವಾದ ಅಧ್ಯಯನ ನಡೆಸಲಾಗುವುದು. ಯಾವುದೇ ಸಂಶಯಕ್ಕೆ ಎಡೆ ಇಲ್ಲದಂತೆ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷಿಸಲಾಗುವುದು. ಅಧ್ಯಯನ ಪೂರ್ಣಗೊಂಡ ಬಳಿಕ ವರದಿಯನ್ನು ಸಮಿತಿಗೆ ಸಲ್ಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದರು.

ಮಾಸಾಶನ ವಿಳಂಬ ಸಲ್ಲ

ಜಿಲ್ಲೆಯಲ್ಲಿ ಈಗ ಗುರುತಿಸಿರುವ 4,526 ಸಂತ್ರಸ್ತರ ಪೈಕಿ 426 ಜನರಿಗೆ ಮಾಸಾಶನ ವಿತರಣೆ ವಿಳಂಬ ಆಗಿರುವುದಕ್ಕೆ ಸಮಿತಿ ಆಕ್ಷೇಪ ವ್ಯಕ್ತಪಡಿಸಿತು. ತಕ್ಷಣದಲ್ಲೇ ಮಂಜೂರಾತಿ ಆದೇಶ ವಿತರಿಸುವಂತೆ ಸೂಚಿಸಿತು. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಸಮಿತಿಯ ಸೂಚನೆಯನ್ನು ರವಾನಿಸುವಂತೆಯೂ ಕೆಲವು ಸದಸ್ಯರು ಹೇಳಿದರು.

ಈ ಬಗ್ಗೆ ಉತ್ತರಿಸಿದ ಪುತ್ತೂರು ಉಪ ವಿಭಾಗಾಧಿಕಾರಿ ಎಚ್‌.ಕೆ.ಕೃಷ್ಣಮೂರ್ತಿ, ‘426 ಸಂತ್ರಸ್ತರಿಗೂ ಮಾಸಾಶನ ವಿತರಣೆಗೆ ಅಧಿಕೃತ ಆದೇಶ ಹೊರಡಿಸಲಾಗಿದೆ. ಎಲ್ಲ ‍ಪ್ರಕ್ರಿಯೆಗಳೂ ಅಂತಿಮಗೊಂಡಿವೆ. ಶೀಘ್ರದಲ್ಲಿಯೇ ಅವರೆಲ್ಲರಿಗೂ ಮಾಸಾಶನ ತಲುಪಿಸಲಾಗುವುದು’ ಎಂದು ಉತ್ತರಿಸಿದರು.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ

‘ಎಂಡೋಸಲ್ಫಾನ್‌ ಸಂತ್ರಸ್ತರ ಚಿಕಿತ್ಸೆಗಾಗಿ ಒಪ್ಪಂದ ಮಾಡಿಕೊಂಡಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸರಿಯಾದ ಸ್ಪಂದನೆ ದೊರಕುತ್ತಿಲ್ಲ. ಸಂತ್ರಸ್ತರನ್ನು ವಾಪಸು ಕಳುಹಿಸಲಾಗುತ್ತಿದೆ. ಜನಪ್ರತಿನಿಧಿಗಳ ದೂರವಾಣಿ ಕರೆಗೂ ಸ್ಪಂದಿಸುತ್ತಿಲ್ಲ’ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ದೂರಿದರು.

ಸಭೆಯಲ್ಲಿದ್ದ ಕೆಲವು ಆಸ್ಪತ್ರೆಗಳ ಪ್ರತಿನಿಧಿಗಳು ಆರೋಪ ನಿರಾಕರಿಸಿದರು. ಈ ಸಂಬಂಧ ಎಲ್ಲ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ, ಸಂತ್ರಸ್ತರ ಚಿಕಿತ್ಸೆಗೆ ಇರುವ ತೊಡಕುಗಳನ್ನು ನಿವಾರಿಸುವಂತೆ ಸಮಿತಿ ಜಿಲ್ಲಾಧಿಕಾರಿಗೆ ಸೂಚಿಸಿತು.

ಪೌಷ್ಟಿಕ ಆಹಾರ ಪೂರೈಕೆ

ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಂಡಯ್ಯ, ‘ಸಂತ್ರಸ್ತ ಕುಟುಂಬಗಳಿಗೆ ಪೌಷ್ಟಿಕ ಆಹಾರ ಪೂರೈಸಬೇಕಿದೆ. ಈ ಕುರಿತು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಶಿಫಾರಸು ಕಳುಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ’ ಎಂದರು.

ಸಂತ್ರಸ್ತರ ಮಾಸಾಶನದ ಮೊತ್ತವನ್ನು ಶೇಕಡ 33ರಷ್ಟು ಹೆಚ್ಚಿಸುವಂತೆ ಜಿಲ್ಲಾಡಳಿತ ಶಿಫಾರಸು ಮಾಡಿದೆ. ಆದರೆ, ಇನ್ನೂ ಜಾರಿಯಾಗಿಲ್ಲ. ಈ ಸಂಬಂಧ ವಿಸ್ತೃತ ವರದಿ ಪಡೆದು, ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.

ಎರಡು ಕಾಯಂ ಪುನರ್ವಸತಿ ಕೇಂದ್ರಗಳ ಸ್ಥಾಪನೆಗೆ ಮಂಜೂರಾತಿ ದೊರಕಿದೆ. ನಾಲ್ಕು ಡೇ ಕೇರ್‌ ಕೇಂದ್ರಗಳಿಗೂ ಮಂಜೂರಾತಿ ನೀಡಲಾಗಿದೆ. ಈ ಕೇಂದ್ರಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಮೀಪದಲ್ಲೇ ಸ್ಥಾಪಿಸುವಂತೆ ಸಮಿತಿ ಸೂಚಿಸಿದೆ ಎಂದರು.

ಸಮಿತಿಯ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎಸ್‌.ರವಿ, ಕೆ.ವಿ.ನಾರಾಯಣಸ್ವಾಮಿ, ಅರುಣ್‌ ಶಹಾಪುರ, ಕೆ.ಹರೀಶ್‌ಕುಮಾರ್, ಎಂ.ಎ.ಗೋಪಾಲಸ್ವಾಮಿ, ವಿಧಾನ ಪರಿಷತ್‌ ಕಾರ್ಯದರ್ಶಿ ಕೆ.ಆರ್‌.ಮಹಾಲಕ್ಷ್ಮಿ ಸಭೆಯಲ್ಲಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !