ಬಾರದ ಬಸ್‌; ಪ್ರಯಾಣಿಕರ ಆಕ್ರೋಶ

7
ಕಾರವಾರ ರಸ್ತೆಯ ಎಂ.ಟಿ. ಮಿಲ್‌, ಇಂಡಿ ಪಂಪ್‌ ಬಳಿ ಟ್ರಾಫಿಕ್‌ ಜಾಮ್‌

ಬಾರದ ಬಸ್‌; ಪ್ರಯಾಣಿಕರ ಆಕ್ರೋಶ

Published:
Updated:
Deccan Herald

ಹುಬ್ಬಳ್ಳಿ: ಸಂಜೆಯಿಂದಲೇ ಕಾಯ್ದರೂ ತಮ್ಮ ಊರುಗಳಿಗೆ ಹೋಗುವ ಬಸ್‌ಗಳು ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಸಾವಿರಾರು ಪ್ರಯಾಣಿಕರು ಕೆಲ ಹೊತ್ತು ಪ್ರತಿಭಟನೆ ನಡೆಸಿ ಸಾರಿಗೆ ಸಂಸ್ಥೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಲಘಟಗಿ, ದಾಸ್ತಿಕೊಪ್ಪ, ಮಿಶ್ರಿಕೋಟಿ, ಅದರಗುಂಚಿ, ಅಂಚಟಗೇರಿ, ಪಾಳ, ವರೂರ, ಕುಂದಗೋಳ, ಸಂಶಿ, ನೂಲ್ವಿ, ಬೆಟದೂರು, ಹಿರೇಹೊನ್ನಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ತೆರಳಲು ಕಾಯುತ್ತಿದ್ದ ಪ್ರಯಾಣಿಕರು ಸಂಜೆ 5 ಗಂಟೆಯಿಂದಲೇ ಕಾಯುತ್ತಿದ್ದರು. ಆದರೆ, ಕಾರವಾರ ರಸ್ತೆಯ ಎಂ.ಟಿ. ಮಿಲ್‌, ಇಂಡಿ ಪಂಪ್‌ ಬಳಿಕ ಸಂಚಾರ ದಟ್ಟಣಿಯಲ್ಲಿ ವ್ಯತ್ಯಯವಾಗಿದ್ದರಿಂದ ಬಸ್ಸುಗಳು ಅಲ್ಲೇ ಸಿಲುಕಿಕೊಂಡಿದ್ದವು. ಹೀಗಾಗಿ, ಸಂಜೆ 5.30ಕ್ಕೆ ಬಂದು ಮತ್ತೆ ವಾಪಸಾಗಬೇಕಿದ್ದ ಬಸ್ಸುಗಳು ರಾತ್ರಿ 8 ಗಂಟೆಯಾದರೂ ಬಂದಿರಲಿಲ್ಲ.

ಈ ಬಗ್ಗೆ ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಹೇಳಿದರೂ ಪ್ರಯಾಣಿಕರ ಸಹನೆ ಕಟ್ಟೆಯೊಡೆದಿತ್ತು. ಹೀಗಾಗಿ, ಕೂಡಲೇ ಬಸ್‌ ಬಿಡಬೇಕು ಎಂದು ಒತ್ತಾಯಿಸಿದರು. ಅವರ ಒತ್ತಾಯಕ್ಕೆ ಮಣಿದ ಸಾರಿಗೆ ಅಧಿಕಾರಿಗಳು ಕುಂದಗೋಳ ಹಾಗೂ ಕಲಘಟಗಿಗೆ ಎರಡು ಬಸ್‌ಗಳನ್ನು ತಕ್ಷಣ ವ್ಯವಸ್ಥೆ ಮಾಡಿದರು. ಅವೂ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದವು. ಮತ್ತಷ್ಟು ಬಸ್‌ಗಳಿಗೆ ಬೇಡಿಕೆ ಹೆಚ್ಚಾಯಿತು. ಕೆಲವೇ ನಿಮಿಷಗಳಲ್ಲಿ ಸಂಚಾರ ದಟ್ಟಣಿಯಲ್ಲಿ ಸಿಲುಕಿದ್ದ ಬಸ್‌ಗಳು ಒಂದೊಂದಾಗಿ ಬರತೊಡಗಿದಂತೆ ಪ್ರಯಾಣಿಕರ ಸಂಖ್ಯೆಯೂ ಕರಗಿತು.

ಸಮಸ್ಯೆ ಏನು? ಬೆಂಗಳೂರು, ಕಾರವಾರ ರಸ್ತೆ ಹಾಗೂ ಶಿರಸಿ ಕಡೆ ತೆರಳುವ ಎಲ್ಲ ಬಸ್‌ಗಳನ್ನು ಈಗ ಕಾರವಾರ ರಸ್ತೆಯ ಇಂಡಿ ಪಂಪ್‌ ಮೂಲಕವೇ ಓಡಿಸಲಾಗುತ್ತಿದೆ. ನಗರದ ಕಿತ್ತೂರು ಚನ್ನಮ್ಮ ವೃತ್ತದಿಂದ ಗಬ್ಬೂರು ಬೈಪಾಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಿಮೆಂಟ್‌ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ, ಆ ಮಾರ್ಗವಾಗಿ ಸಂಚರಿಸುವ ಎಲ್ಲ ಬಸ್‌ಗಳೂ ಕಾರವಾರ ಅಂಡರ್‌ ಪಾಸ್‌ ಮೂಲಕ ಸಂಚರಿಸಬೇಕಿದೆ. ಇದರಿಂದಾಗಿ ಸಂಚಾರ ದಟ್ಟಣಿ ಹೆಚ್ಚಾಗಿದ್ದುದರಿಂದ ಬಸ್‌ಗಳು ಸರಾಗವಾಗಿ ಸಂಚರಿಸಲು ಆಗುತ್ತಿಲ್ಲ ಎಂದು ಸಾರಿಗೆ ನಿಯಂತ್ರಕ ಕಾಶಿನಾಥ ಹೇಳಿದರು.

‘ಇದು ಒಂದು ದಿನದ ಸಮಸ್ಯೆಯಲ್ಲ. ದಿನಾಲೂ ಮೈಮುರಿಯುವಷ್ಟು ದುಡಿದು ಊರಿಗೆ ಹೋಗಲು ಇಲ್ಲಿಗೆ ಬಂದರೆ ಸರಿಯಾದ ಸಮಯಕ್ಕೆ ಬಸ್‌ ಇರುವುದೇ ಇಲ್ಲ. ಇದಕ್ಕೆ ಪರಿಹಾರ ಕಂಡು ಹಿಡಿಯಬೇಕಾದ ಸಾರಿಗೆ ಸಂಸ್ಥೆಯವರು ಸುಖಾಸುಮ್ಮನೇ ಸಬೂಬು ಹೇಳುತ್ತಿದ್ದಾರೆ’ ಎಂದು ದಾಸ್ತಿಕೊಪ್ಪ ಗ್ರಾಮದ ಪ್ರಶಾಂತ ಚೌರಿ ಹೇಳಿದರು.

‘ಕಲಘಟಗಿಗೆ ಹೋಗುವ ಬಸ್‌ ಹಿಡಿಯಲು ಇಲ್ಲಿ ಬಂದರೆ ರಾತ್ರಿಯವರೆಗೂ ಬಸ್‌ ಇರುವುದೇ ಇಲ್ಲ. ಮರುದಿನ ಬೆಳಿಗ್ಗೆ ಹೋಗೋಣವೆಂದು ಬಸ್‌ ನಿಲ್ದಾಣದಲ್ಲೇ ಮಲಗಿದರೆ ಪೊಲೀಸರು ಲಾಠಿಯಿಂದ ಹೊಡೆದು ಎಬ್ಬಿಸುತ್ತಾರೆ. ನಾವು ಪಿಕ್‌ ಪಾಕೆಟ್‌ ಮಾಡುವವರೆಂದು ಹೀಯಾಳಿಸುತ್ತಾರೆ’ ಎಂದು ಮಹೇಶ ನಾಡಗೌಡ ಅಲವತ್ತುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !