ಐದೂವರೆ ವರ್ಷ ನಾನೇ ಸಂಸದ: ಎಲ್‌ಆರ್‌ಎಸ್‌

7
ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಡಳಿತ ಕಚೇರಿ ಉದ್ಘಾಟನೆ

ಐದೂವರೆ ವರ್ಷ ನಾನೇ ಸಂಸದ: ಎಲ್‌ಆರ್‌ಎಸ್‌

Published:
Updated:
Deccan Herald

ಮಂಡ್ಯ: ‘ನಾನು ಕೇವಲ ಆರು ತಿಂಗಳಿಗೆ ಮಾತ್ರ ಸಂಸದನಾಗಿ ಆಯ್ಕೆಯಾಗಿಲ್ಲ. ಐದೂವರೆ ವರ್ಷ ಸಂಸದನಾಗಿ ಕೆಲಸ ಮಾಡುತ್ತೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ನಾನೆ ಜೆಡಿಎಸ್‌ ಅಭ್ಯರ್ಥಿಯಾಗಿ ಗೆದ್ದು ಬರುತ್ತೇನೆ’ ಎಂದು ಸಂಸದ ಎಲ್‌.ಆರ್‌.ಶಿವರಾಮೇಗೌಡ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಆಡಳಿತ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ‘ಜಿಲ್ಲೆಯ ಜನರಿಗೆ ಉತ್ತಮ ಸೇವೆ ನೀಡುವುದೇ ಈ ಕಚೇರಿಯ ಉದ್ದೇಶ. ವಾರಕ್ಕೆ ಒಂದು ದಿನ ಕಚೇರಿಯಲ್ಲಿ ಇದ್ದು ಸಾರ್ವಜನಿಕರ ಸಮಸ್ಯೆ ಆಲಿಸಿ ಪರಿಹರಿಸುತ್ತೇನೆ. ಸಂಸತ್ ಅಧಿವೇಶನ ಮುಕ್ತಾಯವಾದ ನಂತರ ಜನರಿಗೆ ಸಿಗುತ್ತೇನೆ. ಸದ್ಯ ಕಚೇರಿಯಲ್ಲಿ ಸಿಬ್ಬಂದಿಯನ್ನು ನೇಮಿಸಿದ್ದು, ನನ್ನ ಅನುಪಸ್ಥಿತಿಯಲ್ಲಿ ನಾಗರಿಕರು ಕುಂದು-ಕೊರತೆಗಳ ಅಹವಾಲುಗಳನ್ನು ಸಿಬ್ಬಂದಿಗೆ ಸಲ್ಲಿಸಬಹುದು’ ಎಂದು ಹೇಳಿದರು.

‘ಜನರಿಗೆ ಸೇವೆ ನೀಡುವ ಉದ್ದೇಶದಿಂದ ಕಚೇರಿ ಸ್ಥಾಪನೆ ಮಾಡಿದ್ದೇನೆಯೇ ಹೊರತು ಚುನಾವಣೆಯ ಉದ್ದೇಶಕ್ಕಲ್ಲ. ನಾನು ಜನರಿಂದ ಆಯ್ಕೆಯಾಗಿ ಸಂಸದನಾಗಿದ್ದು, ಆಡಳಿತಾವಧಿಯಲ್ಲಿ ಜನರ ಸೇವೆ ಮಾಡುತ್ತೇನೆ. ಕೇವಲ ಆರು ತಿಂಗಳಿಗೆ ಮಾತ್ರ ನನ್ನ ಸೇವೆ ಸೀಮಿತವಾಗಿಲ್ಲ. ಮುಂದಿನ ಚುನಾವಣೆಯಲ್ಲಿ ನಾನೇ ಸ್ಪರ್ಧಿಸಿ ಜನಸೇವೆ ಮಾಡುತ್ತೇನೆ. ಗೆಲುವಿಗಾಗಿ ಸಹಕರಿಸಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜಿಲ್ಲೆ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಾಂಗ್ರೆಸ್ ಹಾಗೂ ಬಿಎಸ್‌ಪಿ ಮುಖಂಡರೂ ನನಗೆ ಮತ ನೀಡಿ ಗೆಲ್ಲಿಸಿದ್ದಾರೆ. ನನ್ನ ಕ್ಷೇತ್ರದ ಜನರಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಲು ಸಿದ್ಧನಾಗಿದ್ದೇನೆ’ ಎಂದರು.

ಮನವಿ ಸಲ್ಲಿಕೆ: ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ನೂತನ ಕಟ್ಟಡದ ಅಗತ್ಯವಿದ್ದು, ಸಂಸದರ ಅನುದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಮನವಿ ಸಲ್ಲಿಸಿದರು. ಈ ಕುರಿತು ಶೀಘ್ರ ನಿರ್ಧಾರ ಪ್ರಕಟಿಸುವುದಾಗಿ ಸಂಸದರು ಭರವಸೆ ನೀಡಿದರು.

ಶಾಸಕರಾದ ಎಂ.ಶ್ರೀನಿವಾಸ್, ರವೀಂದ್ರ ಶ್ರೀಕಂಠಯ್ಯ, ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ತಗ್ಗಹಳ್ಳಿ ವೆಂಕಟೇಶ್, ಗೌರೀಶ್, ಬೇಲೂರು ಶಶಿಧರ್, ಮಂಜುಳಾ ಉದಯಶಂಕರ್, ಸುಜಾತಾಮಣಿ, ಮುನಾವರ್ ಖಾನ್, ತನ್ವೀರ್, ಕಲೀಂ ಉಲ್ಲಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !