ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ

7
ಕಸಾಪ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಭರವಸೆ

ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ

Published:
Updated:
Deccan Herald

ಕೋಲಾರ: ‘ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿಜೃಂಭಣೆಯಾಗಿ ಆಚರಿಸಲು ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಕುರಿತು ಇಲ್ಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ‘ಸಮ್ಮೇಳನದಲ್ಲಿ ಯಾವುದೇ ಪ್ರಚೋದನೆ ಅಥವಾ ವಿವಾದಕ್ಕೆ ಆಸ್ಪದ ನೀಡಬಾರದು. ಸಮ್ಮೇಳನವು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿರಬೇಕು’ ಎಂದರು.

‘ರಾಜ್ಯದ ಗಡಿ ಜಿಲ್ಲೆಯಾದ ಈ ಭಾಗದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮ್ಮೇಳನ ಸಹಕಾರಿಯಾಗಿದೆ. ಸಮ್ಮೇಳನಕ್ಕೆ ವಿವಿಧ ಇಲಾಖೆಗಳಿಂದ ಮತ್ತು ಸ್ಥಳೀಯ ಸಂಸ್ಥೆಯಿಂದ ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಸಮ್ಮೇಳನದ ಸಂದರ್ಭದಲ್ಲೇ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಇದೆ. ಹೀಗಾಗಿ ಜಿಲ್ಲೆಯ ಶಾಸಕರು ಸಮ್ಮೇಳನದಲ್ಲಿ ಭಾಗವಹಿಸುವ ಕುರಿತು ಗಮನಹರಿಸಬೇಕು’ ಎಂದರು.

ಸಮ್ಮೇಳನಾಧ್ಯಕ್ಷರ ಆಯ್ಕೆ: ‘ಸಮ್ಮೇಳನ 2 ದಿನಗಳ ಕಾಲ ನಡೆಯಲಿದ್ದು, ಸಾಹಿತಿ ಹಾಗೂ ವಕೀಲ ಸಿ.ಎಸ್.ದ್ವಾರಕನಾಥ್ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಮ್ಮೇಳನ ನಡೆಯಲಿದ್ದು, ಮುಖ್ಯದ್ವಾರಕ್ಕೆ ಗೋಪಾಲಕೃಷ್ಣರೆಡ್ಡಿ, ವೇದಿಕೆಗೆ ಟಿ.ಚನ್ನಯ್ಯರ ಹೆಸರಿಡಲಾಗುವುದು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿದರು.

‘ಜಿಲ್ಲೆಯ ಶಾಸಕರು ಹಾಗೂ ಉಸ್ತುವಾರಿ ಸಚಿವರು ಭಾಗವಹಿಸುತ್ತಾರೆ. ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ, ಸಾಹಿತಿ ಎಂ.ಎಸ್.ಪ್ರಭಾಕರ್ (ಕಾಮರೂಪಿ) ಅವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20 ಮಂದಿಗೆ ಸನ್ಮಾನ ಮಾಡಲಾಗುತ್ತದೆ. ಪುಸ್ತಕ ಪ್ರದರ್ಶನ ಮತ್ತು ಕವಿಗೋಷ್ಠಿ ನಡೆಯಲಿದೆ’ ಎಂದು ವಿವರಿಸಿದರು.

ನೀರಿನ ಸೌಲಭ್ಯ: ‘ರಂಗಮಂದಿರವನ್ನು ಉಚಿತವಾಗಿ ನೀಡಬೇಕು. ರಂಗಮಂದಿರ ಬಳಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಜತೆಗೆ ಸ್ವಚ್ಛತೆ ಕಾಪಾಡಬೇಕು. ಬ್ಯಾನರ್ ಅಳವಡಿಕೆಗೆ ಅವಕಾಶ ನೀಡಬೇಕು. ಗಣ್ಯರು ಭಾಗವಹಿಸುವುದರಿಂದ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಳ್ಳುವ ಕುರಿತು ಶಿಕ್ಷಣ ಇಲಾಖೆಗೆ ಸೂಚನೆ ನೀಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್‌ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !