ಭಾನುವಾರ, ಮಾರ್ಚ್ 7, 2021
29 °C
ಲಕ್ಷ್ಮಿಜನಾರ್ದನ ಪ್ರೌಢಶಾಲೆ ಆವರಣದಲ್ಲಿ ಹಬ್ಬದ ವಾತಾವರಣ, ಚಿಣ್ಣರ ಜಾತ್ರೆ ಸೃಷ್ಟಿ

ಸಹಸ್ರ ಮಕ್ಕಳಿಗೆ ವೇದಿಕೆಯಾದ ಪ್ರತಿಭಾ ಕಾರಂಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಂಡ್ಯ: ನಗರದ ಲಕ್ಷ್ಮಿ ಜನಾರ್ದನ ಪ್ರೌಢಶಾಲೆ ಆವರಣದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ 1,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪ್ರತಿಭೆ ತೋರಿದರು. ಜಿಲ್ಲೆಯ ಏಳೂ ತಾಲ್ಲೂಕುಗಳಿಂದ ಬಂದಿದ್ದ ವಿದ್ಯಾರ್ಥಿಗಳು ವಿವಿಧ ಕಲೆ ಪ್ರದರ್ಶಿಸಿ ನೋಡುಗರ ಮೆಚ್ಚುಗೆಗೆ ಪಾತ್ರರಾದರು.

ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಧ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆದವು. ಎಲ್ಲಾ ವಿದ್ಯಾರ್ಥಿಗಳು 75 ಕಲಾ ಪ್ರಕಾರಗಳನ್ನು ವೇದಿಕೆಗೆ ತಂದರು. ಅದರಲ್ಲಿ ಐದು ಪ್ರಕಾರಗಳನ್ನು ಸಾಮೂಹಿಕವಾಗಿ ಪ್ರದರ್ಶನ ಮಾಡಿದರು. ಜನಪದ ನೃತ್ಯ, ಕೋಲಾಟ, ರಸಪ್ರಶ್ನೆ, ಪೂಜಾ ಕುಣಿತ ಕಲೆಗಳನ್ನು ಸಾಮೂಹಿಕವಾಗಿ ಪ್ರದರ್ಶನ ನೀಡಿದರು. ಕಂಠಪಾಠ ಸ್ಪರ್ಧೆಯಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ ಹಾಗೂ ಉರ್ದು ವಿಭಾಗದಲ್ಲಿ ವಿದ್ಯಾರ್ಥಿಗಳು ಪದ್ಯಗಳನ್ನು ಪ್ರಸ್ತುತ ಪಡಿಸಿದರು.

ಕವ್ವಾಲಿ ವಿಶೇಷ: ಉತ್ತರ ಭಾರದಲ್ಲಿ ಪ್ರಸಿದ್ಧಿ ಪಡೆದಿದರುವ ಕವ್ವಾಲಿ ಕಲೆಯನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ರಂಜಾನ್‌ ವೇಳೆಯಲ್ಲಿ ಮಸೀದಿಗಳಲ್ಲಿ ಕವ್ವಾಲಿ ಪ್ರಮುಖ ಆಕರ್ಷಣೆಯಾಗಿರುತ್ತದೆ. ಕವ್ವಾಲಿ ಕಲಾವಿದರನ್ನು ಶಾಲೆಗೆ ಆಹ್ವಾನಿಸಿ ವಿದ್ಯಾರ್ಥಿಗಳಿಗೆ ತರಬೇತಿ ಕೊಡಿಸಿ ತಯಾರಿ ಮಾಡಲಾಗಿತ್ತು. ಸಾಹಿತ್ಯವನ್ನು ಅರ್ಥೈಸಿಕೊಂಡು ಗೀತೆಗಳನ್ನು ಪ್ರದರ್ಶನ ಪಡಿಸಿದರು. ಕವ್ವಾಲಿಗೆ ಪ್ರೇಕ್ಷಕರು, ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದರು.

ಪೂಜಾ ಕುಣಿತ: ಜನಪದ ಕಲೆಗಳ ತವರು ಎಂದು ಪ್ರಸಿದ್ಧಿ ಪಡೆದಿರುವ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಮಕ್ಕಳು ಪೂಜಾ ಕುಣಿತ ಕಲೆಯನ್ನು ಬಹಳ ಸುಂದರವಾಗಿ ಪ್ರಸ್ತುತಪಡಿಸಿದರು. ಮಂಡ್ಯ ತಾಲ್ಲೂಕಿನ ಕೀಲಾರ, ಪಾಂಡವಪುರ ತಾಲ್ಲೂಕಿನ ಲಕ್ಷ್ಮಿಸಾಗರ, ನಾರಾಯಣಪುರದಲ್ಲಿರುವ ಪೂಜಾಕುಣಿತ ಕಲಾವಿದರನ್ನು ಶಾಲೆಗೆ ಕರೆಸಿ ಮಕ್ಕಳಿಗೆ ತರಬೇತಿ ಕೊಡಿಸಲಾಗಿತ್ತು. ಪೂಜಾ ದೇವರುಗಳನ್ನು ತಲೆಯ ಮೇಲೆ ಹೊತ್ತು ವಾದ್ಯಗಳ ತಾಳಕ್ಕೆ ಅನುಗುಣವಾಗಿ ಮಕ್ಕಳು ಇಟ್ಟ ಹೆಜ್ಜೆಗಳು ಸಂಭ್ರಮ ಮೂಡಿಸಿದವರು. ಸಾಮೂಹಿಕ ನೃತ್ಯದಲ್ಲಿ ಪೂಜಾ ಕುಣಿತ ಪ್ರದರ್ಶನ ನೀಡುವಾಗ ಶಾಲಾ ಆವರಣದಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತ್ತು. ಜಿಲ್ಲಾಮಟ್ಟದ ಪ್ರತಿಭಾಕಾರಂಜಿಯಲ್ಲಿ ವಿಜೇತರಾದ ಮಕ್ಕಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ರಾಜ್ಯಮಟ್ಟದ ಸ್ಪರ್ಧೆ ಡಿ.15,16, 17ರಂದು ನಡೆಯಲಿದೆ.

‘ಪ್ರತಿಭಾ ಕಾರಂಜಿಯಿಂದಾಗಿ ಮಕ್ಕಳ ಸುಪ್ತ ಪ್ರತಿಭೆ ರಾಜ್ಯ, ರಾಷ್ಟ್ರಮಟ್ಟದವರೆಗೂ ಬೆಳಗುತ್ತಿದೆ. ಹಳ್ಳಿಗಾಡಿನ ಮಕ್ಕಳು ತಮ್ಮ ಶಕ್ತಿ ತೋರಿಸಲು ಇದು ಬಲುದೊಡ್ಡ ವೇದಿಕೆಯಾಗಿದೆ. ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗೆ ಈ ವೇದಿಕೆ ಪ್ರೇರಕ ಶಕ್ತಿಯಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸೂರ್ಯಪ್ರಕಾಶ್ ಮೂರ್ತಿ ಹೇಳಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರೇಖಾ ಸುರೇಶ್‌, ಸದಸ್ಯರಾದ ಚಿಕ್ಕಬೋರಯ್ಯ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ನಾಗೇಶ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ರವಿಶಂಕರ್‌, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಸ್‌.ದೇವರಾಜು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು