ದೀಪ ಆರಿಸಲು ಯತ್ನಿಸಿದವರಿಗೆ ಪಾಠ ಕಲಿಸಿ

ಕೋಲಾರ: ‘ತಾಯಂದಿರ ಮನೆಯಲ್ಲಿ ದೀಪ ಆರಿಸಲು ಯತ್ನಿಸಿದವರು ಕೆಲವೇ ದಿನಗಳಲ್ಲಿ ಮತ ಕೇಳಲು ಬರುತ್ತಾರೆ. ಅಂತಹವರಿಗೆ ತಕ್ಕಪಾಠ ಕಲಿಸಲು ಮಹಿಳೆಯರು ಮುಂದಾಗಬೇಕು’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ಕುಮಾರ್ ಸಲಹೆ ನೀಡಿದರು.
ತಾಲ್ಲೂಕಿನ ಅಣ್ಣಿಹಳ್ಳಿ ಎಸ್ಎಫ್ಸ್ಸಿಎಸ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ಸಂಘಗಳಿಗೆ ₹2 ಕೋಟಿ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ಡಿಸಿಸಿ ಬ್ಯಾಂಕ್ ಮುಚ್ಚಿಸಲು ಕೆಲ ದೊಡ್ಡ ಮನುಷ್ಯರು ಇಲ್ಲದ ಪ್ರಯತ್ನ ಮಾಡಿದರು, ಅದನ್ನು ನಾವು ಶಕ್ತಿಮೀರಿ ನಿಲ್ಲಿಸಿದ್ದೇವೆ’ ಎಂದರು.
‘ನ.15 ರೊಳಗೆ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಸದಿದ್ದರೆ ಬ್ಯಾಂಕ್ ಬಂದ್ ಆಗುತ್ತಿತು. ತಾಯಂದಿರು, ರೈತರಿಗೆ ಸಾಲ ಸಿಗದಂತೆ ಮಾಡುವ ಹುನ್ನಾರ ನಡೆಸಿದ್ದರು. ಅವರು ಮತ ಕೇಳಲು ಮನೆ ಬಳಿಗೆ ಬರುತ್ತಾರೆ. ಅಂತಹವರನ್ನು ಏನು ಮಾಡಬೇಕು ಎಂಬುದನ್ನು ನೀವೇ ನಿರ್ಧರಿಸಿ’ ಎಂದು ಕಿವಿ ಮಾತು ಹೇಳಿದರು.
‘ರೈತರು, ಮಹಿಳೆಯರು ವಾಣಿಜ್ಯ ಬ್ಯಾಂಕುಗಳಿಗೆ ಹೋಗಬಾರದು. ಅಲ್ಲಿ ಬಡ್ಡಿ ಜಾಸ್ತಿ, ಎಲ್ಲರಿಗೂ ಸಾಲ ಸಿಗುವಂತೆ ಮಾಡುವುದೇ ನಮ್ಮ ಗುರಿ. ಆಸ್ತಿ ಇಲ್ಲದ ತಾಯಂದಿರು ಸಾಲಕ್ಕಾಗಿ ಏನು ಅಡಮಾನ ಇಡಲು ಸಾಧ್ಯ’ ಎಂದರು.
‘ಸಮ್ಮಿಶ್ರ ಸರ್ಕಾರದಲ್ಲಿ ನಾನು, ಶ್ರೀನಿವಾಸಗೌಡರು ಎರಡು ದೇಹದ ಒಂದೇ ಆತ್ಮವಿದ್ದಂತೆ. ನಾವಿಬ್ಬರೂ ಸೇರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದು, ಬಡ್ಡಿರಹಿತ ಸಾಲದ ಮೊತ್ತವನ್ನು ₨ 5 ಲಕ್ಷದಿಂದ ₨ 10 ಲಕ್ಷಕ್ಕೇರಿಸಲು ಪ್ರಯತ್ನಸುತ್ತೇವೆ’ ಎಂದು ಭರವಸೆ ನೀಡಿದರು.
‘ದೇಶದಲ್ಲಿ ₹500 ಪಡೆದ ರೈತರು ಸಾಲ ಕಟ್ಟದಿದ್ದರೆ ಮನೆ ಮುಂದೆ ತಮಟೆ ಬಾರಿಸುತ್ತಾರೆ. ಆದರೆ ಸಾವಿರಾರು ಕೋಟಿ ಸಾಲ ಪಡೆದವರ ವಿಳಾಸ ಯಾರಿಗೂ ಗೊತ್ತಿಲ್ಲ. ಈ ನಿಟ್ಟಿನಲ್ಲಿ ದೇಶದ ಅರ್ಥವ್ಯವಸ್ಥೆ ಬದಲಾವಣೆಯಾಗಬೇಕು’ ಎಂದರು.
‘ಡಿಸಿಸಿ ಬ್ಯಾಂಕ್ ಮುಳುಗಿಯೇ ಹೋಯಿತು ಎಂದು ಬಾವಿಸಿದ್ದೆ. ಆಡಳಿತ ಮಂಡಳಿಯ ಪ್ರಯತ್ನದಿಂದ ಬ್ಯಾಂಕ್ ಸುಧಾರಣೆಯಾಯಿತು. ಅದಕ್ಕೆ ಬೇಕಾದರ ಆರ್ಥಿಕ ಶಕ್ತಿ ತುಂಬಿಸಲು ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಿದ್ದರಿಂದ ಸಾಧ್ಯವಾಯಿತು’ ಎಂದು ಹೇಳಿದರು.
‘ಸಮಾಜದಲ್ಲಿ ಬಡವರಿಗೆ ದ್ರೋಹ ಮಾಡಲು ಯತ್ನಿಸಿದವರಿಗೆ ಒಳ್ಳೆಯದಾಗಲ್ಲ. ಅಂತಹವರಿಗೆ ಜನರೇ ಬುದ್ಧಿಕಲಿಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.
‘ ₹50 ಸಾವಿರ ಬಡ್ಡಿಯಿಲ್ಲದೇ ಸಾಲ ನೀಡೋದು ಸುಲಭದ ವಿಷಯವಲ್ಲ. ವ್ಯಾಣಿಜ್ಯ ಬ್ಯಾಂಕ್ಗಳಲ್ಲಿ ಸಾಲ ಪಡೆದುಕೊಳ್ಳಬೇಕಾದರೆ ಅವರು ಕೇಳುವ ದಾಖಲೆಗಳಿಗೆ ಭಯಪಡಬೇಕು. ಬಡವರಿಗಾಗಿ ಡಿಸಿಸಿ ಬ್ಯಾಂಕ್ ಇದೆ. ಇದರಲ್ಲಿ ದೊರೆಯುವ ಸೌಕರ್ಯಗಳನ್ನು ಸದುಪಯೋಗಿಸಿಕೊಳ್ಳಲು ಮುಂದಾಗಬೇಕು’ ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಮಾತನಾಡಿ, ‘ಡಿಸಿಸಿ ಬ್ಯಾಂಕ್ ವತಿಯಿಂದ ಅವಿಭಜಿತ ಕಟ್ಟಕಡೆಯ ವ್ಯಕ್ತಿಗೂ ಸಾಲದ ಸೌಕರ್ಯ ಕಲ್ಪಿಸಿ ಆರ್ಥಿಕವಾಗಿ ಸುಧಾರಣೆಗೊಳಿಸುವುದೇ ನಮ್ಮ ಉದ್ದೇಶ’ ಎಂದು ತಿಳಿಸಿದರು.
‘ಬ್ಯಾಂಕ್ನಿಂದ ಇದುವರೆಗೂ ಸಾಲ ಪಡೆದುಕೊಂಡಿರುವವರು ಪ್ರಮಾಣಿಕವಾಗಿ ಮರುಪಾವತಿ ಮಾಡಿದ್ದಾರೆ. ಜತೆಗೆ ಬ್ಯಾಂಕ್ ಅಭಿವೃದ್ಧಿಗೂ ಸಹಕಾರ ನೀಡುತ್ತಿದ್ದಾರೆ. ಯಾವುದೇ ಲೋಪದೋಷಗಳು ಎದುರಾಗದಂತೆ ಎಚ್ಚವಹಿಸಲಾಗುತ್ತಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೋವಿಂದಸ್ವಾಮಿ, ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಸೊಣ್ಣೇಗೌಡ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.