ಜಿಲ್ಲೆಯಾದ್ಯಂತ ನರೇಗಾ ಅಭಿಯಾನ ಆರಂಭಿಸಿ

7
ಜಿಲ್ಲಾ ಪಂಚಾಯಿತಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಅಧ್ಯಕ್ಷ ಎಚ್.ವಿ.ಮಂಜುನಾಥ್ ಸಲಹೆ

ಜಿಲ್ಲೆಯಾದ್ಯಂತ ನರೇಗಾ ಅಭಿಯಾನ ಆರಂಭಿಸಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಬರದಿಂದ ಹೆಚ್ಚು ತೊಂದರೆಗೆ ಸಿಲುವ ಕೃಷಿ ಕಾರ್ಮಿಕರು ಬೇರೆ ಉದ್ಯೋಗಗಳನ್ನು ಅರಸಿ ವಲಸೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಪ್ರತಿ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಭಿಯಾನ ಹಮ್ಮಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ಅವರಿಂದ ನರೇಗಾ ಪ್ರಗತಿ ಮಾಹಿತಿ ಪಡೆದ ಅಧ್ಯಕ್ಷರು, ‘ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಮಳೆ ಕೊರತೆಯಾಗಿದೆ. ಬರ ಕಾಣಿಸಿಕೊಂಡಿದೆ. ಆದ್ದರಿಂದ ಜನರಿಗೆ ಉದ್ಯೋಗಾವಕಾಶಗಳನ್ನು ನೀಡುವಂತಹ ಯೋಜನೆಗಳನ್ನು ಆದ್ಯತೆ ಮೆರೆಗೆ ಕೈಗೆತ್ತಿಕೊಳ್ಳಬೇಕು. ಸದ್ಯದ ಸ್ಥಿತಿಯಲ್ಲಿ ಕೃಷಿ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಬಾರದು. ಆದ್ದರಿಂದ ನರೇಗಾ ಅಭಿಯಾನ ಹಮ್ಮಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಜನವರಿ ಮೊದಲ ವಾರದಿಂದ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶು ಸಂಗೋಪನೆ, ಸಾಮಾಜಿಕ ಅರಣ್ಯ ಇಲಾಖೆಗಳು ಸೇರಿ ನರೇಗಾ ಅಭಿಯಾನ ಹಮ್ಮಿಕೊಳ್ಳಬೇಕು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಇದರ ನೇತೃತ್ವವಹಿಸಬೇಕು. ವಾರದಲ್ಲಿ ಮೂರು ದಿನವಾದರೂ ಅಭಿಯಾನ ನಡೆಸಿ ಜನರಿಗೆ ನರೇಗಾ ಪ್ರಯೋಜನದ ಬಗ್ಗೆ ತಿಳಿಸುವ ಕೆಲಸ ಮಾಡೋಣ. ಇದರಲ್ಲಿ ನಾವು ಭಾಗವಹಿಸುತ್ತೇವೆ’ ಎಂದು ಹೇಳಿದರು.

‘ಪ್ರಸ್ತುತ ಕೃಷಿ ಇಲಾಖೆಯಲ್ಲಿ ನರೇಗಾ ಕೆಲಸಗಳ ಬಗ್ಗೆ ನಮಗೆ ಸಮಾಧಾನವಿಲ್ಲ. ನಮ್ಮವರೇ ಆದ ಕೃಷಿ ಸಚಿವರು ಇಡೀ ರಾಜ್ಯದಲ್ಲಿ ನಮ್ಮ ಜಿಲ್ಲೆ ಮೊದಲ ಸ್ಥಾನದಲ್ಲಿ ಇರಬೇಕು ಎಂದು ಹೇಳಿದ್ದಾರೆ. ಆದರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರೇ ಚುರುಕಾಗಿ ಕೆಲಸ ಮಾಡುತ್ತಿಲ್ಲ. ಎಷ್ಟು ಬಾರಿ ಅಂತ ಹೇಳುವುದು? ಅಧಿಕಾರಿಗಳಿಗೆ ಸದ್ಯ ಏನು ಕೆಲಸವಿದೆ? ನರೇಗಾಕ್ಕೆ ಗಮನ ಹರಿಸದೆ ಏನು ಮಾಡುತ್ತಿದ್ದಾರೆ’ ಎಂದು ಖಾರವಾಗಿ ಪ್ರಶ್ನಿಸಿದರು.

‘ತಕ್ಷಣವೇ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ನೋಟಿಸ್ ಕೊಡಿ’ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ಅವರಿಗೆ ಸೂಚನೆ ನೀಡಿದ ಅಧ್ಯಕ್ಷರು, ‘ಮುಂದಿನ ಸಭೆಯೊಳಗೆ ನರೇಗಾ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದಿದ್ದರೆ ಕಠಿಣ ಕ್ರಮ ಜರುಗಿಸೋಣ. ಇದು ರೇಷ್ಮೆ, ತೋಟಗಾರಿಕೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳಿಗೆ ಅನ್ವಯಿಸುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಗುರುದತ್ ಹೆಗಡೆ ಮಾತನಾಡಿ, ‘ಕೃಷಿ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ತುಂಬಾ ಬೇಸರ ತಂದಿದೆ. ನಮ್ಮ ಜಿಲ್ಲೆಯಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪದೇ ಪದೇ ಹೇಳುತ್ತಿದ್ದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಸಹಾಯಕ ನಿರ್ದೇಶಕರಿಗೆ ನೋಟಿಸ್ ನೀಡುವೆ. ಈ ಸಭೆಗೆ ಬಾರದ ಇಬ್ಬರು ಸಹಾಯಕ ನಿರ್ದೇಶಕರಿಗೆ ನೋಟಿಸ್ ನೀಡಿ. ನಿಮ್ಮ ಆಯುಕ್ತರಿಗೆ ಪತ್ರ ಬರೆಯುತ್ತೇನೆ’ ಎಂದು ಜಂಟಿ ನಿರ್ದೇಶಕರಿಗೆ ತಿಳಿಸಿದರು.

‘ನಿಯಮಿತವಾಗಿ ಸಭೆ ನಡೆಸುತ್ತಿದ್ದೇವೆ. ತರಬೇತಿ ನೀಡಿದ್ದೇವೆ ಆದರೂ ಸಹಿತ ಕೃಷಿ ಇಲಾಖೆಯಲ್ಲಿ ನರೇಗಾ ಪ್ರಗತಿ ತೃಪ್ತಿಕರವಾಗಿಲ್ಲ. ಪಕ್ಕದ ಜಿಲ್ಲೆಗಳಲ್ಲಿ 40ರಿಂದ 50 ಸಾವಿರ ಮಾನವ ದಿನಗಳ ಸೃಜನೆಯಾದರೆ, ನಮ್ಮಲ್ಲಿ ಐದು ಸಾವಿರ ಕೂಡ ದಾಟಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜುಲೈನಿಂದಲೇ ಹೇಳುತ್ತ ಬಂದರೂ ಏನೂ ಬದಲಾವಣೆಯಾಗಿಲ್ಲ. ಇದು ಗಂಭೀರ ವಿಚಾರ. ಆಯುಕ್ತರೊಂದಿಗೆ ಕೂಡ ಮಾತನಾಡುವೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ 100 ಬದು ನಿರ್ಮಾಣ, ಎರೆಹುಳು ಗೊಬ್ಬರ ಘಟಕ, ಕೃಷಿ ಅರಣ್ಯ ಕಾಮಗಾರಿಗಳು ನಡೆಯಬೇಕು’ ಎಂದು ತಾಕೀತು ಮಾಡಿದರು.

ಅಧ್ಯಕ್ಷರು, ‘ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿಗಳು ₹10 ಲಕ್ಷ ಸಹಾಯಧನ ಬಿಡುಗಡೆಗೆ ₹1.50 ಲಕ್ಷ ಕಮಿಷನ್ ಕೇಳುತ್ತಿದ್ದಾರೆ ಎಂದು ನನಗೆ ಲಿಖಿತವಾಗಿ ದೂರುಗಳು ಬಂದಿವೆ. ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಿ’ ಎಂದು ಸಿಇಒ ಅವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು, ಮುಖ್ಯ ಯೋಜನಾಧಿಕಾರಿ ಎನ್.ಮಾಧುರಾವ್, ಉಪ ಕಾರ್ಯದರ್ಶಿ ಎಂ.ಶಶಿಧರ್‌, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !