ಮಂಗಳವಾರ, ಜುಲೈ 27, 2021
28 °C

ಕಲೆಯೊಂದಿಗೆ ಕಾವ್ಯಾಭಿವ್ಯಕ್ತಿ

ಹೇಮಾ ವೆಂಕಟ್‌ Updated:

ಅಕ್ಷರ ಗಾತ್ರ : | |

Prajavani

ಗರದ ಹತ್ತಾರು ಗ್ಯಾಲರಿಗಳಲ್ಲಿ ಪ್ರತಿದಿನ ಕಲಾಕೃತಿಗಳ ಪ್ರದರ್ಶನ ನಡೆಯುತ್ತಲೇ ಇರುತ್ತದೆ. ಎಷ್ಟು ಮಂದಿ ವೀಕ್ಷಿಸುತ್ತಾರೆ, ಎಷ್ಟು ಮಾರಾಟವಾಗುತ್ತದೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೇ ಪ್ರದರ್ಶನ ನಡೆಸುವ ಕಲಾವಿದರು ಸಾಕಷ್ಟು ಮಂದಿ ಇದ್ದಾರೆ. ಪ್ರದರ್ಶನ ಎಂದರೆ ಗ್ಯಾಲರಿಯಲ್ಲಿ ಕಲಾಕೃತಿಗಳನ್ನು ತೂಗು ಹಾಕಿದರಷ್ಟೇ ಸಾಕೇ ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ.

ಕಲಾಪ್ರದರ್ಶನ ನಡೆಯುವ ಸಂದರ್ಭದಲ್ಲಿ ಅಲ್ಲೇ ಸೃಜನಶೀಲ ಕಾರ್ಯಕ್ರಮವೊಂದು ನಡೆದರೆ ಕಲಾವೀಕ್ಷಕರ ಸಂಖ್ಯೆಯೂ ಹೆಚ್ಚಬಹುದು. ಚಿತ್ರಕಲೆ ಸಂಗೀತ, ಕಾವ್ಯ, ಒಂದಕ್ಕೊಂದು ಸಂಬಂಧ ಹೊಂದಿದೆ. ಕಾವ್ಯ ಕಲಾಕೃತಿಗೆ ಪ್ರೇರಣೆಯಾಗಿ, ಕಲಾಕೃತಿಗಳು ಕಾವ್ಯಕ್ಕೆ ಪ್ರೇರಣೆಯಾಗಿರುವುದು ಇದೆ. 

ಕಲಾಕೃತಿಗಳನ್ನು ನೋಡಿ ಅಲ್ಲೇ ಕವಿ ಮನಸ್ಸೊಂದು ಕಾವ್ಯ ಸೃಷ್ಟಿಸಿದರೆ ಹೇಗೆ? ಹೀಗೊಂದು ಹೊಸ ಪ್ರಯೋಗ ವಸಂತ ನಗರದ ಆರ್ಟ್‌ ಹೌಸ್‌ ಗ್ಯಾಲರಿಯಲ್ಲಿ ಜನವರಿ 2ರಂದು ನಡೆಯಲಿದೆ. 

ಹಿರಿಯ ಕಲಾವಿದ ಚಿ.ಸು. ಕೃಷ್ಣಸೆಟ್ಟಿ ಅವರ ಹೊಸ ಕಲಾಕೃತಿಗಳ ಪ್ರದರ್ಶನ ‘ವಾಸ್ತವ ಮತ್ತು ಅವಾಸ್ತವ’ ವಸಂತನಗರದ ‘ಆರ್ಟ್‌ ಹೌಸ್‌ ಗ್ಯಾಲರಿ’ಯಲ್ಲಿ ನಡೆಯುತ್ತಿದೆ. ಜನವರಿ 3ರಂದು ಪ್ರದರ್ಶನ ಕೊನೆಗೊಳ್ಳಲಿದೆ. ಮೂರು ವರ್ಷಗಳಲ್ಲಿ ರಚಿಸಿದ 47 ಕಲಾಕೃತಿಗಳು ಪ್ರದರ್ಶನದಲ್ಲಿವೆ. ಶಾಯಿ ಮತ್ತು ಪೇಸ್ಟಲ್‌ ಬಳಸಿ ರಚನೆಗೊಂಡಿರುವ ಈ ಕಲಾಕೃತಿಗಳಿಗೆ ಯಾವುದೇ ಅಡಿ ಬರಹ ನೀಡಿಲ್ಲ. ಇವು ವಾಸ್ತವ ಮತ್ತು ಅವಾಸ್ತವತೆಯಿಂದ ಕೂಡಿದ ಕಲಾಕೃತಿಗಳು.  

ಜ. 2ರಂದು ಕಾವ್ಯಾಭಿವ್ಯಕ್ತಿ ಎಂಬ ವಿಶಿಷ್ಟ ಕಾರ್ಯಕ್ರಮ ಇದೇ ಗ್ಯಾಲರಿಯಲ್ಲಿ ಆಯೋಜನೆಗೊಂಡಿದೆ.  ಕೃಷ್ಣಸೆಟ್ಟಿ ಅವರ ಕಲಾಕೃತಿಗಳನ್ನು ವೀಕ್ಷಿಸಿ 21 ಕವಿಗಳು ಸ್ಥಳದಲ್ಲಿಯೇ ಕವಿತೆ ರಚಿಸಿ ಓದಲಿದ್ದಾರೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ಪ್ರಯೋಗ.

’ನನ್ನ ಕಲಾಕೃತಿಗಳನ್ನು ಒಂದಷ್ಟು ಕವಿಗಳು ವೀಕ್ಷಿಸಿ ಕಾವ್ಯದ ಮೂಲಕ ಪ್ರತಿಕ್ರಿಯೆ ನೀಡಲಿದ್ದಾರೆ. ಹಾಗಾಗಿ ಕಾವ್ಯಾಭಿವ್ಯಕ್ತಿ ಎಂದು ಹೆಸರಿಡಲಾಗಿದೆ’ ಎಂದು ಕೃಷ್ಣಸೆಟ್ಟಿ ಹೇಳುತ್ತಾರೆ.

ಹಿರಿಯ–ಕಿರಿಯ ಕವಿಗಳಾದ ಎಲ್‌.ಎನ್‌. ಮುಕುಂದರಾಜು, ಸುಬ್ಬು ಹೊಲೆಯಾರ್‌, ಆರ್.ಜಿ. ಹಳ್ಳಿ ನಾಗರಾಜ್‌, ಡಾ.ಎಚ್‌.ಎಲ್‌. ಪುಷ್ಪಾ, ಮಮತಾ ಸಾಗರ್, ಪಿ. ಚಂದ್ರಿಕಾ, ವಿ.ಎಂ. ಮಂಜುನಾಥ್, ಬೇಲೂರು ರಘುನಂದನ್‌, ಪದ್ಮಾ ಟಿ. ಚಿನ್ಮಯ, ಸತ್ಯಮಂಗಲ ಮಹದೇವ, ಆನಂದ ಕುಂಚನೂರು, ಲಕ್ಷ್ಮೀನಾರಾಯಣಸ್ವಾಮಿ, ರೂಪಶ್ರೀ ಕಲ್ಲಿಗನೂರು, ಶಿವಪ್ರಸಾದ್‌ ಪಟ್ಟಣಗೆರೆ, ಕೃಷ್ಣ ದೇವಾಂಗಮಠ, ಪುನೀತ್‌ಕುಮಾರ್‌ ಎಲ್, ಚಾಂದ್‌ ಪಾಷಾ, ವಸಂತಲಕ್ಷ್ಮಿ, ವಿದ್ಯಾ ಸತೀಶ್‌, ಮಹಾಂತೇಶ ಆಧುನಿಕ, ದರ್ಶನ್‌ ಆರಾಧ್ಯ ಮುಂತಾದವರು ಕಾವ್ಯ ಪ್ರತಿಕ್ರಿಯೆ ನೀಡಲಿದ್ದಾರೆ.

ಸ್ಥಳ: ಆರ್ಟ್‌ ಹೌಸ್‌ ಗ್ಯಾಲರಿ, 63, ಪ್ಯಾಲೇಸ್‌ ರಸ್ತೆ, ಮೌಂಟ್‌ ಕಾರ್ಮೆಲ್‌ ಕಾಲೇಜು ಬಳಿ, ವಸಂತನಗರ, ಬುಧವಾರ (ಜ.2) ಬೆಳಿಗ್ಗೆ 10.30.

ಅಂತರರಾಷ್ಟೀಯ ಕಲಾವಿದ
ಚಿ.ಸು.ಕೃಷ್ಣ ಸೆಟ್ಟಿ ಅವರು 1952ರಲ್ಲಿ ತೀರ್ಥಹಳ್ಳಿಯಲ್ಲಿ ಜನಿಸಿದರು. ದಾವಣಗೆರೆಯ  ಲಲಿತಕಲಾ  ವಿದ್ಯಾಲಯದಲ್ಲಿ ಲಲಿತಕಲಾ ಶಿಕ್ಷಣ, ಮೈಸೂರು ವಿಶ್ವವಿದ್ಯಾಲಯದಲ್ಲಿ ಸಾಹಿತ್ಯದಲ್ಲಿ ಎಂ.ಎ., ಭಾರತೀಯ ವಿದ್ಯಾಭವನದಿಂದ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಡಿಪ್ಲೊಮಾ, 3 ವರ್ಷ ದಾವಣಗೆರೆಯ ಲಲಿತಕಲಾ ಕಾಲೇಜಿನಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕೇಂದ್ರ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿ, ಆಡಳಿತಾಧಿಕಾರಿಯಾಗಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಮಾಸ್ಕೋದ ರಷ್ಯನ್‌ ಅಕಾಡೆಮಿಯ ಗೌರವ ಸದಸ್ಯತ್ವ ಪಡೆದ ಮೂರನೇ ಭಾರತೀಯರಾಗಿದ್ದಾರೆ.

ವಿನ್ಸೆಂಟ್‌ ವಾನ್‌ ಗೋಘ್‌ ಪ್ರಶಸ್ತಿ, ರಾಜೀವ್‌ ಗಾಂಧಿ ರಾಷ್ಟ್ರೀಯ ರತ್ನ ಪ್ರಶಸ್ತಿ, ‘ಕಲಾ ತಪಸ್ವಿ’ ಪ್ರಶಸ್ತಿ ಪಡೆದಿದ್ದಾರೆ. 2016ರಲ್ಲಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ, ಬೆಂಗಾಲ್‌ ಬೈನಾಲೆ 2018ರ ತೀರ್ಪುಗಾರರಾಗಿದ್ದರು. 

ಸದ್ಯ ಕೇಂದ್ರ ಸಂಸ್ಕೃತಿ ಸಚಿವಾಲಯದ ಟ್ಯಾಗೋರ್‌ ಫೆಲೋಶಿಪ್‌ ಕಮಿಟಿ ಮತ್ತು  ದೆಹಲಿಯ  ಗ್ಯಾಲರಿ ಆಫ್‌ ಮಾಡರ್ನ್ ಆರ್ಟ್‌ನ ಅಪೆಕ್ಸ್‌ ಕಮಿಟಿ ಸದಸ್ಯರಾಗಿದ್ದಾರೆ. ಆಲ್‌ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್‌ ಎಜುಕೇಷನ್‌ನ ಶೈಕ್ಷಣಿಕ ಮಂಡಳಿ ಸದಸ್ಯರಾಗಿದ್ದಾರೆ.

ನ್ಯೂಯಾರ್ಕ್, ಲಾಸ್‌ ಏಂಜಲೀಸ್‌, ಟೆಕ್ಸಾಸ್‌, ಮ್ಯಾಂಚೆಸ್ಟರ್, ಇಂಗ್ಲೆಂಡ್‌, ದೆಹಲಿ, ಹೈದರಾಬಾದ್ ಚೆನ್ನೈ, ಉದಯಪುರ, ಭುವನೇಶ್ವರ, ಮುಂಬೈ, ಗೋವಾ, ಲಕ್ನೋದಲ್ಲೂ ಚಿತ್ರಕಲಾ ಪ್ರದರ್ಶನ ನಡೆಸಿದ್ದಾರೆ. ಕೆಲವು ವಿದೇಶದ ಕಲಾ ಗ್ಯಾಲರಿಗಳಲ್ಲಿ ಇವರ ಕಲಾಕೃತಿಗಳು ಸ್ಥಾನ ಪಡೆದಿವೆ.


ಚಿ.ಸು.ಕೃಷ್ಣ ಸೆಟ್ಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು