ಕಲ್ಲಡ್ಕ ಪ್ರಭಾಕರ ಭಟ್‌ ಕೊಲೆಗೆ ಸಂಚು?

7
ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಹೆಚ್ಚಳ

ಕಲ್ಲಡ್ಕ ಪ್ರಭಾಕರ ಭಟ್‌ ಕೊಲೆಗೆ ಸಂಚು?

Published:
Updated:
Prajavani

ಮಂಗಳೂರು: ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್‌ ಅವರ ಕೊಲೆಗೆ ವಿದೇಶದಲ್ಲಿ ಕುಳಿತು ಸಂಚು ನಡೆಸಲಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಕಾರಣದಿಂದ ದಿಢೀರ್‌ ಆಗಿ ಅವರಿಗೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಕೆಲವು ಮತೀಯವಾದಿ ದುಷ್ಕರ್ಮಿಗಳು ಪ್ರಭಾಕರ ಭಟ್‌ ಕೊಲೆಗೆ ವಿದೇಶದಲ್ಲಿ ಕುಳಿತು ಸಂಚು ರೂಪಿಸುತ್ತಿರುವ ಕುರಿತು ಗುಪ್ತಚರ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಗೊತ್ತಾಗಿದೆ. ಬೆದರಿಕೆ ಇರುವ ಬಗ್ಗೆ ಪೊಲೀಸರಿಂದ ಎಚ್ಚರಿಕೆ ಬಂದಿರುವುದನ್ನು ಪ್ರಭಾಕರ ಭಟ್‌ ಖಚಿತಪಡಿಸಿದ್ದಾರೆ. ಆದರೆ, ಅಂತಹ ಎಚ್ಚರಿಕೆ ರವಾನಿಸಿರುವುದನ್ನು ಪೊಲೀಸರು ಅಲ್ಲಗಳೆಯುತ್ತಿದ್ದಾರೆ.

ಪ್ರಭಾಕರ ಭಟ್‌ ಅವರಿಗೆ ನೀಡಿದ್ದ ಪೊಲೀಸ್‌ ಭದ್ರತೆಯನ್ನು ಗುರುವಾರ ಮಧ್ಯಾಹ್ನದಿಂದ ಹೆಚ್ಚಿಸಲಾಗಿದೆ. ಈಗ ಅವರ ಭದ್ರತೆಗಾಗಿ ಒಬ್ಬ ಸಶಸ್ತ್ರ ಕಾನ್‌ಸ್ಟೆಬಲ್‌ ಸಹಿತ ನಾಲ್ವರು ಪೊಲೀಸರನ್ನು ನಿಯೋಜಿಸಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಆಗಾಗ ಅವರ ಮನೆ ಬಳಿ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಭಾಕರ ಭಟ್‌, ‘ಬೆದರಿಕೆ ಇರುವ ಕುರಿತು ಗುರುವಾರ ಬೆಳಿಗ್ಗೆ ಪೊಲೀಸರು ನನಗೆ ತಿಳಿಸಿದ್ದಾರೆ. ಭದ್ರತೆಯನ್ನೂ ಹೆಚ್ಚಿಸಿದ್ದಾರೆ. ಹೆಚ್ಚೇನೂ ಹೇಳಲು ಬಯಸುವುದಿಲ್ಲ’ ಎಂದರು.

ಈ ಕುರಿತು ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರನ್ನು ಸಂಪರ್ಕಿಸಿದಾಗ, ‘ಪ್ರಭಾಕರ ಭಟ್‌ ಅವರಿಗೆ ಬೆದರಿಕೆ ಇರುವ ಕುರಿತು ನಮಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಈವರೆಗೂ ಬಂದಿಲ್ಲ. ಅವರು ಪೊಲೀಸರ ರಕ್ಷಣೆಯಲ್ಲಿರುವ ವ್ಯಕ್ತಿ. ಅಂತಹವರ ಭದ್ರತಾ ವ್ಯವಸ್ಥೆಯಲ್ಲಿ ಆಗಾಗ ಬದಲಾವಣೆ ಮಾಡಲಾಗುತ್ತಿದೆ. ಹೊರಗಡೆ ತೆರಳುವಾಗ ಬೆಂಗಾವಲನ್ನೂ ನೀಡಲಾಗುತ್ತದೆ. ಇದು ಸಹಜ ಪ್ರಕ್ರಿಯೆ’ ಎಂದು ಉತ್ತರಿಸಿದರು.

‘ಹಿರಿಯ ಅಧಿಕಾರಿಗಳು ನೀಡಿರುವ ಮೌಖಿಕ ನಿರ್ದೇಶನದಂತೆ ಪ್ರಭಾಕರ ಭಟ್‌ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ನಾಲ್ವರು ಪೊಲೀಸರು ಅವರಿಗೆ ಭದ್ರತೆ ನೀಡುತ್ತಿದ್ದಾರೆ’ ಎಂದು ಬಂಟ್ವಾಳ ಠಾಣೆ ಇನ್‌ಸ್ಪೆಕ್ಟರ್‌ ಟಿ.ಡಿ.ನಾಗರಾಜ್‌ ತಿಳಿಸಿದರು.

ವಿಶ್ವ ಹಿಂದೂ ಪರಿಷತ್‌ ಮುಖಂಡ ಶರಣ್‌ ಪಂಪ್‌ವೆಲ್‌ ಸೇರಿದಂತೆ ಹಲವರ ಕೊಲೆಗೆ ಸಂಚು ನಡೆದಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ಆದರೆ, ಅಂತಹ ಯಾವುದೇ ಮಾಹಿತಿ ಇಲ್ಲ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 10

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !