ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಆಂಧ್ರದ ಗೌಡ್ತಿ: ಕೆ.ಟಿ.ಶ್ರೀಕಂಠೇಗೌಡ

ಮಂಡ್ಯ: ಅಂಬರೀಷ್ ಪತ್ನಿ ಸುಮಲತಾ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಂತೆ ಜೆಡಿಎಸ್ ಪಾಳಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಸುಮಲತಾ ಮೂಲ ಹಾಗೂ ಜಾತಿಯ ಬಗ್ಗೆ ಜೆಡಿಎಸ್ ಮುಖಂಡರು ಮಾತನಾಡಿರುವುದು ಜಿಲ್ಲೆಯಾದ್ಯಂತ ಪರ– ವಿರೋಧ ಚರ್ಚೆಗೆ ಕಾರಣವಾಗಿದೆ.
ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ‘ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಅವರು ಆಂಧ್ರಪ್ರದೇಶದ ಗೌಡ್ತಿ. ಅಂಬರೀಷ್ ಬದುಕಿದ್ದಾಗ ರಾಜಕಾರಣ ನನ್ನ ತಲೆಮಾರಿಗೆ ಕೊನೆಯಾಗಲಿ ಎಂದು ಹೇಳಿದ್ದರು. ನಾವು ಈಗಾಗಲೇ ರಮ್ಯಾ ಅವರನ್ನು ನೋಡಿಯಾಗಿದೆ. ಅವರು ಎಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಿದೆ. ಅಂಬರೀಷ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಕೆ ಸ್ಪರ್ಧಿಸಲಿಲ್ಲ? ಜನ ಸೋಲಿಸುತ್ತಾರೆ ಎಂಬುದು ಅವರಿಗೆ ಗೊತ್ತಿತ್ತು. ರಾಜಕಾರಣ ಹುಡುಗಾಟ ಅಲ್ಲ. ರಮ್ಯಾರಿಂದಲೇ ನಾವು ಪಾಠ ಕಲಿತಿದ್ದೇವೆ’ ಎಂದರು.
‘ಜನರ ನೋವಿಗೆ ಸ್ಪಂದಿಸುವವರು ನಮಗೆ ಬೇಕು. ಜನಪ್ರತಿನಿಧಿಗಳ ಆಯ್ಕೆ ವಿಚಾರದಲ್ಲಿ ಜಿಲ್ಲೆಯ ಜನರು ಸಾಕಷ್ಟು ನೋವು ಅನುಭವಿಸಿದ್ದಾರೆ. ಎಲ್ಲೋ ಕೂತು ಸ್ಪರ್ಧೆ ಮಾಡುವವರನ್ನು ಜನರು ಗೆಲ್ಲಿಸಲು ಸಾಧ್ಯವಿಲ್ಲ. ಎಚ್.ಡಿ.ದೇವೇಗೌಡ ಕುಟುಂಬದ ಸದಸ್ಯರು ಸೇವೆಯಿಂದ ಗುರುತಿಸಿಕೊಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಜಿಲ್ಲೆಯ ಜನರ ಜೊತೆ ಬೆರೆತಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಕ್ಷೇತ್ರದಾದ್ಯಂತ ಪ್ರವಾಸ ಮಾಡಿದ್ದಾರೆ. ಅವರು ಸ್ಪರ್ಧೆ ಮಾಡುವುದರಲ್ಲಿ ಅರ್ಥವಿದೆ. ಸುಮಲತಾ ಗೆದ್ದರೆ ಅವರನ್ನು ಹುಡುಕುವುದು ಎಲ್ಲಿ’ ಎಂದು ಪ್ರಶ್ನಿಸಿದರು.
ಶ್ರೀಕಂಠೇಗೌಡ ಹೇಳಿಕೆಗೆ ಅಂಬರೀಷ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ‘ಸುಮಲತಾ ಮಂಡ್ಯದ ಸೊಸೆ. ಅಂಬರೀಷ್ ಮೃತದೇಹವನ್ನು ಜಿಲ್ಲಾ ಕ್ರೀಡಾಂಗಣಕ್ಕೆ ತಂದಾಗ ಇದೇ ಶ್ರೀಕಂಠೇಗೌಡರು ಮೈಕ್ ಹಿಡಿದು ಸುಮಲತಾ ಮಂಡ್ಯದ ಸಂಕೇತ ಎಂದಿದ್ದರು. ಈಗ ರಾಜಕಾರಣಕ್ಕಾಗಿ ಅವರ ಮೂಲ ಪ್ರಶ್ನಿಸಿದ್ದಾರೆ. ವಿಚಾರವಾದಿ ಎಂದು ಗುರುತಿಸಿಕೊಳ್ಳುವ ಅವರು ಸುಮಲತಾ ಜಾತಿಯ ಬಗ್ಗೆ ಮಾತನಾಡಿದ್ದಾರೆ’ ಎಂದು ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೇಲೂರು ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಪ್ರತಿಕ್ರಿಯೆ ನೀಡಿ, ಏಳಕ್ಕೆ ಏಳೂ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೀಟು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಸ್ಪರ್ಧೆ ಮಾಡುವುದು, ಬಿಡುವುದು ಸುಮಲತಾ ಅವರಿಗೆ ಬಿಟ್ಟ ವಿಚಾರ ಎಂದರು.
ಮದ್ದೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಅಂಬರೀಷ್ ನಮ್ಮ ಪಕ್ಷದ ಮುಖಂಡರಾಗಿದ್ದರು. ಸುಮಲತಾ ರಾಜಕಾರಣಕ್ಕೆ ಬಂದರೆ ಸ್ವಾಗತ. ಅವರ ಸ್ಪರ್ಧೆ ವಿಚಾರ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಸೀಟು ಹಂಚಿಕೆ ಕುರಿತು ಮಾತುಕತೆ ನಡೆಯುತ್ತಿದೆ. ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸುಮಲತಾಗೆ ಹುಚ್ಚೆ?: ಮಂಡ್ಯ ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೆ ಸಿಗದಿದ್ದರೆ ಸುಮಲತಾ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿಯೂ ಹರಡಿದೆ. ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಮುಖಂಡ ಡಾ.ಸಿದ್ದರಾಮಯ್ಯ ಪ್ರತಿಕ್ರಿಯಿಸಿ ‘ಬಿಜೆಪಿಯಿಂದ ಸ್ಪರ್ಧಿಸಲು ಸುಮಲತಾ ಅವರಿಗೆ ಹುಚ್ಚೆ? ಸುಮಲತಾ ಯಜಮಾನರು ಕಾಂಗ್ರೆಸ್ನಲ್ಲಿದ್ದರು. ಅವರೇಕೆ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ? ನಾನೇ ಅಭ್ಯರ್ಥಿ ಎಂದು ನಮ್ಮ ಪಕ್ಷದ ಮುಖಂಡರು ಈಗಾಗಲೇ ಘೋಷಣೆ ಮಾಡಿದ್ದಾರೆ’ ಎಂದು ತಿಳಿಸಿದರು.
ವರಿಷ್ಠರ ತೀರ್ಮಾನ ಅಂತಿಮ
ಕಲಬುರ್ಗಿ: ‘ಮಂಡ್ಯ ಜಿಲ್ಲೆಯ ಎಲ್ಲ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರೇ ಇದ್ದಾರೆ. ಲೋಕಸಭಾ ಚುನಾವಣೆ ಮೈತ್ರಿಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಸೂಚಿಸಿದರೆ ನನ್ನ ಪುತ್ರ ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧಿಸುತ್ತಾನೆ. ಇಷ್ಟಕ್ಕೂ ನನ್ನ ಮಗನೇನು ಹಿಂಬಾಗಿನಿಲಿಂದ ಹೋಗಲು ಯತ್ನಿಸುತ್ತಿಲ್ಲವಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಕಾಂಗ್ರೆಸ್ ಮುಖಂಡ ಎ.ಮಂಜು ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಬಗ್ಗೆ ದೇವೇಗೌಡ ಹಾಗೂ ಇತರ ಹಿರಿಯ ನಾಯಕರು ನಿರ್ಧರಿಸುತ್ತಾರೆ’ ಎಂದು ಹೇಳಿದರು.
‘ದೇವೇಗೌಡ ಬಂದರೂ ನನ್ನನ್ನು ಸೋಲಿಸಲು ಆಗಲಿಲ್ಲ’ ಎಂಬ ಸಚಿವ ಜಮೀರ್ ಅಹಮ್ಮದ್ ಹೇಳಿಕೆಗೆ, ‘ಆ ಬಗ್ಗೆ ನಾನು ಮಾತನಾಡುವುದಿಲ್ಲ. ಆ ವಿಷಯ ದೇವೇಗೌಡ ಮತ್ತು ಜಮೀರ್ ಅಹಮ್ಮದ್ ಅವರಿಗೇ ಗೊತ್ತು’ ಎಂದರು.
ಬಜೆಟ್ ಮಂಡನೆ ಖಚಿತ: ‘ಫೆ. 8ರಂದು ಬಜೆಟ್ ಮಂಡನೆ ಮಾಡೇ ಮಾಡುತ್ತೇವೆ. ಈ ಬಾರಿಯ ಬಜೆಟ್ ಕೂಡ ರೈತ ಪರವಾಗಿರುತ್ತದೆ. ಸರ್ಕಾರ ಐದು ವರ್ಷ ಖಂಡಿತ ಇರುತ್ತದೆ. ಬಿ.ಎಸ್.ಯಡಿಯೂರಪ್ಪ ಅವರಿಗೆ ಸರ್ಕಾರ ಬೀಳಿಸಲು ಆಗಲಿಲ್ಲ. ಹೀಗಾಗಿ ಸುಮ್ಮನಾಗಿದ್ದಾರೆ. ಇದೀಗ ಆರ್.ಅಶೋಕ ಅವರನ್ನು ಮುಂದೆ ಬಿಟ್ಟಿದ್ದಾರೆ’ ಎಂದು ಆರೋಪಿಸಿದರು.
ಇದನ್ನೂ ಓದಿ..
ಲೋಕಸಭೆ ಚುನಾವಣೆ: ಸುಮಲತಾಗೆ ಸಿನಿತಾರೆಯರ ಬೆಂಬಲ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.