ರಾಜ್ಯ ರಾಜಕಾರಣಕ್ಕೆ ಬರುವ ಹುಚ್ಚೂ ಇಲ್ಲ, ಭ್ರಮೆಯೂ ಇಲ್ಲ: ಶೋಭಾ ಕರಂದ್ಲಾಜೆ

ಶುಕ್ರವಾರ, ಏಪ್ರಿಲ್ 26, 2019
33 °C
ಯಡಿಯೂರಪ್ಪ–ಸಂತೋಷ್‌ ಇಬ್ಬರೂ ಬಲಿಷ್ಠರೇ, ಅವರ ನಡುವೆ ಸ್ಪರ್ಧೆ ಇಲ್ಲ

ರಾಜ್ಯ ರಾಜಕಾರಣಕ್ಕೆ ಬರುವ ಹುಚ್ಚೂ ಇಲ್ಲ, ಭ್ರಮೆಯೂ ಇಲ್ಲ: ಶೋಭಾ ಕರಂದ್ಲಾಜೆ

Published:
Updated:
Prajavani

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪಕ್ಷದ ‘ಫೈರ್‌ಬ್ರಾಂಡ್‌’ ನಾಯಕಿ. ಪಕ್ಷದ ನೀತಿ, ನಿರ್ಧಾರಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿರುವುದು ಗುಟ್ಟಿನ ಸಂಗತಿಯಲ್ಲ. ಟಿಕೆಟ್‌ ಹಂಚಿಕೆಯಾಗಿ, ಮತದಾನಕ್ಕೆ ಕೆಲವೇ ದಿನಗಳು ಉಳಿದಿದೆ. ಪಕ್ಷದೊಳಗೆ ಇರುವ ಬೇಗುದಿ, ಭವಿಷ್ಯದ ಹಾದಿ, ತಮ್ಮ ಮುಂದಿನ ನಡೆಗಳ ಬಗ್ಗೆ ಅವರು ಚುನಾವಣಾ ಪ್ರಚಾರದ ನಡುವೆ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

*ರಾಜ್ಯದಲ್ಲಿ ಮೂವರು ಮಹಿಳೆಯರಿಗೆ ಟಿಕೆಟ್‌ ನೀಡುವ ನಿರೀಕ್ಷೆ ಕೊನೆಗೆ ಹುಸಿಯಾದುದು ಹೇಗೆ?

ಚುನಾವಣೆಯಲ್ಲಿ ಟಿಕೆಟ್‌ಗಾಗಿ ವಿಪರೀತ ಸ್ಪರ್ಧೆ ಇದ್ದೇ ಇರುತ್ತದೆ. ಹಾಲಿ ಸಂಸದರಿಗೆ ಟಿಕೆಟ್‌ ನೀಡಬೇಕಿತ್ತು. ಬಾಕಿ ಕ್ಷೇತ್ರಗಳಲ್ಲಿ ದುರ್ಬಲ ಅಭ್ಯರ್ಥಿಗೆ ಟಿಕೆಟ್‌ ನೀಡಿದರೆ ಸೋಲುವುದಕ್ಕಾಗಿಯೇ ಟಿಕೆಟ್‌ ನೀಡಲಾಗಿದೆ ಎಂಬ ಆಪವಾದ ಬರುತ್ತಿತ್ತು.

*ಬಿಜೆಪಿಯಲ್ಲಿ ಸುಮಲತಾಗೆ ಒಂದು ನ್ಯಾಯ, ತೇಜಸ್ವಿನಿಗೆ ಒಂದು ನ್ಯಾಯಾನಾ?

ಪಕ್ಷ ತೇಜಸ್ವಿನಿಗೆ ಅನ್ಯಾಯ ಮಾಡಿದೆ ಅನ್ನಿಸುವುದಿಲ್ಲ. ಅಲ್ಲಿ ಯುವಕನೊಬ್ಬನನ್ನು ಕಣಕ್ಕಿಳಿಸಿ ಬೆಳೆಸುವುದು ಹಿರಿಯರ ನಿರ್ಧಾರ ಇರಬಹುದು.

*ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಬಲಿಷ್ಠರೋ, ಸಂತೋಷ್‌ ಬಲಿಷ್ಠರೋ?

ಇಬ್ಬರೂ ಬಲಿಷ್ಠರೇ. ಯಡಿಯೂರಪ್ಪನವರು ಕಳೆದ 40 ವರ್ಷಗಳಿಂದ ವಿಧಾನಸಭೆಯ ಒಳಗೆ ಮತ್ತು ಹೊರಗೆ ಪಕ್ಷವನ್ನು ಕಟ್ಟಿ ಬೆಳೆಸಿದವರು. ಹೊಸದಾಗಿ ಇಂದು ಸಂಘಟನೆಗೆ ಬಂದವರು ಸಂತೋಷ್‌. ಅವರು ರಾಜ್ಯದಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದಲ್ಲಿ ಓಡಾಡುತ್ತ ಪಕ್ಷವನ್ನು ಬಲಪಡಿಸುತ್ತಿದ್ದಾರೆ. ಯಡಿಯೂರಪ್ಪ ಮತ್ತು ಸಂತೋಷ್‌ ಮಧ್ಯೆ ಕಾಂಪಿಟಿಷನ್‌ ಇಲ್ಲ, ಕಾಂಪಿಟಿಷನ್‌ ಮಾಡುವುದೂ ಇಲ್ಲ.

*ಮತ್ತೆ ಸಂಸದರಾಗಿ ಆಯ್ಕೆಯಾದಲ್ಲಿ, ರಾಜ್ಯದಲ್ಲಿ ಸರ್ಕಾರ ಪತನಗೊಂಡರೆ ನೀವು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ?

ಖಂಡಿತವಾಗಿಯೂ ಇಲ್ಲ. ಪಕ್ಷ ಯಾವ ಜವಾಬ್ದಾರಿಯನ್ನು ಕೊಡುತ್ತದೋ ಅದನ್ನು ಮಾಡುವವಳು ನಾನು. ಕಳೆದ ವಿಧಾನಸಭಾ ಚುನಾವಣೆ ತನಕವೂ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಬೇಕು ಎಂಬ ಸೂಚನೆ ಇತ್ತು. ಚುನಾವಣೆ ಸಂದರ್ಭದಲ್ಲಿ ಪಕ್ಷದ ಕಚೇರಿಯಲ್ಲಿ 24 ಗಂಟೆ ಕುಳಿತು ಪಕ್ಷದ ನಿರ್ವಹಣೆ ಮಾಡಬೇಕೆಂಬ ಸೂಚನೆ ಕೊಡಲಾಗಿತ್ತು. ಅದರಂತೆ ಮಾಡಿದ್ದೇನೆ. ಈ ಬಾರಿ ನನಗೆ ಸ್ಪರ್ಧೆ ಮಾಡಲೇಬೇಕು ಎಂಬ ಇಚ್ಛೆ ಇರಲಿಲ್ಲ. ಆದರೂ ಕೂಡ ಸ್ಪರ್ಧಿಸಲು ಪಕ್ಷ ನನಗೆ ತಿಳಿಸಿತು. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ನಿರ್ವಹಣೆ ಮಾಡುತ್ತೇನೆ. ಆದರೆ ನನಗೆ ತಕ್ಷಣ ರಾಜ್ಯ ರಾಜಕಾರಣಕ್ಕೆ ಬರಬೇಕು ಎಂಬ ಹುಚ್ಚೂ ಇಲ್ಲ, ಭ್ರಮೆಯೂ ಇಲ್ಲ.

*ಹಿರಿಯರನ್ನು ಗೌರವಿಸುವ, ಮಾತನಾಡುವ ನಿಮ್ಮ ಪಕ್ಷ ಆಡ್ವಾಣಿ, ಜೋಷಿ ಅವರಂತಹ ಹಿರಿಯರನ್ನೇ ದೂರ ಇಟ್ಟಿದೆಯಲ್ಲಾ?

ಹಿರಿಯರನ್ನು ನಾವು ಗೌರವದಿಂದ ನೋಡುತ್ತೇವೆ. ಆಡ್ವಾಣಿ, ಜೋಷಿಯವರ ವಯಸ್ಸು 85 ದಾಟಿದೆ. ಸಹಜವಾಗಿಯೇ ಅವರೇ ಸಕ್ರಿಯ ರಾಜಕಾರಣದಿಂದ ದೂರ ಇದ್ದಾರೆ. ಯಾವಾಗ ಬೇಕಾದರೂ ಅವರಿಂದ ನಾವು ಸಲಹೆ ಪಡೆಯಬಹುದು.

* ‘ಗೋಬ್ಯಾಕ್‌ ಶೋಭಾ’ ಎಂಬ ಘೋಷಣೆ ಮರೆಯಾಯಿತು ಅಂದುಕೊಂಡಿದ್ದೀರಾ?

ಈ ಹಿಂದೆ ಟಿಕೆಟ್‌ ಆಕಾಂಕ್ಷಿಗಳು ಈ ಘೋಷಣೆ ಮಾಡಿರಬಹುದು. ಆದರೆ ಇಂದು ಪಕ್ಷದೊಳಗೆ ಅದಿಲ್ಲ. ಇದನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಕೆಲಸ ಕಾಂಗ್ರೆಸ್‌ ಮಾಡಬಹುದು. ಏಕೆಂದರೆ ಕಾಂಗ್ರೆಸ್‌ಗೆ ಇಂದು ಚಿಹ್ನೆ ಇಲ್ಲ.

*ಪ್ರಮೋದ್‌ ಮಧ್ವರಾಜ್‌ ಬಗ್ಗೆ ಏನಂತೀರಿ?

ಪ್ರಮೋದ್‌ ಮಧ್ವರಾಜ್ ಬಗ್ಗೆ ಏನೂ ಹೇಳುವುದಿಲ್ಲ. ಹೇಳುವುದಿದ್ದರೆ ಅಯ್ಯೋ ಪಾಪ ಎನ್ನಬೇಕು. ಕಾಂಗ್ರೆಸ್‌ ಅವರಿಗೆ ಏನೂ ಅನ್ಯಾಯ ಮಾಡಿಲ್ಲ. ಮೊನ್ನೆ ಮೊನ್ನೆಯ ತನಕವೂ ಉಸ್ತುವಾರಿ ಸಚಿವರಾಗಿದ್ದವರು. ಮೊದಲ ಬಾರಿ ಶಾಸಕರಾಗಿದ್ದರೂ ಮಂತ್ರಿಯಾದ ಅವರು ಕಾಂಗ್ರೆಸ್‌ ಪಕ್ಷವನ್ನು ಯಾಕೆ ಬಿಟ್ಟಿದ್ದಾರೋ ಗೊತ್ತಿಲ್ಲ.

* ನಾಪತ್ತೆಯಾದ ಮೀನುಗಾರರ ಹುಡುಕಾಟ, ವಿಜಯ ಬ್ಯಾಂಕ್‌ ವಿಲೀನದಂತಹ ವಿಷಯಗಳಲ್ಲಿ ಕರಾವಳಿಯ ಹಿತ ಕಾಯುವಲ್ಲಿ ಈ ಭಾಗದ ಸಂಸದರು ವಿಫಲರಾಗಿದ್ದಾರೆ ಎಂಬ ಆರೋಪ ಇದೆಯಲ್ಲ?

ಇದೆಲ್ಲವೂ ಸುಳ್ಳು. ವಿಜಯ ಬ್ಯಾಂಕ್‌ ವಿಲೀನಗೊಳ್ಳುವ ಸಂದರ್ಭದಲ್ಲಿ ವಿಲೀನಗೊಂಡ ಬ್ಯಾಂಕ್‌ಗೆ ವಿಜಯ ಬ್ಯಾಂಕ್‌ ಎಂಬ ಹೆಸರು ಇಡಬೇಕೆಂಬ ಬೇಡಿಕೆಯನ್ನು ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಸಲ್ಲಿಸಿದ್ದೆವು. ಮೀನುಗಾರರು ನಾಪತ್ತೆಯಾಗಿರುವ ವಿಚಾರ ಗೊತ್ತಾದ ತಕ್ಷಣ ಕೇಂದ್ರದ ಗೃಹ, ರಕ್ಷಣಾ ಸಚಿವರ ಸಹಿತ ಹಲವರನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಇದು ಆಳಸಮುದ್ರದಲ್ಲಿ ಆಗಿರುವ ದುರ್ಘಟನೆ. ನಾವು ಮೀನುಗಾರರ ಜತೆಗೆ ಇದ್ದು, ಅವರನ್ನು ಹುಡುಕುವ ಕೆಲಸ ಮುಂದುವರಿದಿದೆ.

*ನಿಮ್ಮಂತೆ ಅನಂತಕುಮಾರ ಹೆಗಡೆ ಕೂಡ ಫೈರ್‌ಬ್ರ್ಯಾಂಡ್‌ ನಾಯಕ. ಅವರನ್ನು ಈ ಬಾರಿಯ ತಾರಾ ಪ್ರಚಾರಕರ ಪಟ್ಟಿಯಿಂದ ಕೈಬಿಟ್ಟಿದ್ದಾರಲ್ಲ?

ನಾವೆಲ್ಲ ಅಭ್ಯರ್ಥಿಗಳು. ನಾನು ಸಹ ಹಿಂದೆ ಸ್ಟಾರ್ ಕ್ಯಾಂಪೇನರ್‌ ಆಗಿದ್ದೆ. ನಾವು ಇಂದು ಚುನಾವಣೆ ಎದುರಿಸುತ್ತಿರುವುದರಿಂದ ಬೇರೆ ಕಡೆ ಹೋಗಿ ಪ್ರಚಾರ ನಡೆಸುವುದಕ್ಕೆ ಅವಕಾಶ ಇಲ್ಲ. ನಾನು 19ರ ನಂತರ ಪ್ರಚಾರಕ್ಕೆ ಹೋಗಬಹುದಷ್ಟೇ. ಉತ್ತರ ಕನ್ನಡದಲ್ಲಿ ಇದೇ 23ರಂದು ಮತದಾನ ನಡೆಯುವುದರಿಂದ ಅನಂತಕುಮಾರ್ ಹೆಗಡೆಗೆ ಈ ಬಾರಿ ಇತರೆಡೆ ಪ್ರಚಾರ ನಡೆಸುವುದಕ್ಕೆ ಅವಕಾಶ ಇಲ್ಲ.

* ಆಪರೇಶನ್‌ ಕಮಲ ಎಲ್ಲಿಗೆ ಬಂತು? ಅದರ ಫಲವಾಗಿರುವ ಉಮೇಶ್‌ ಜಾಧವ್‌ ಇಂದು ಪಕ್ಷದ ಅಭ್ಯರ್ಥಿಯೂ ಆಗಿದ್ದಾರಲ್ಲ?

ನಾವು ಆಪರೇಷನ್ ಕಮಲಮಾಡಲಿಕ್ಕೆ ಹೋಗಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರೇ ಮಾಡಿಕೊಂಡ ತಪ್ಪು ಮತ್ತು ಪಾಪದ ಕಾರಣಕ್ಕಾಗಿ ಅವರ ಶಾಸಕರು ಅವರನ್ನು ಬಿಟ್ಟು ಹೋಗುತ್ತಿದ್ದಾರೆ. ಈ ಸಮ್ಮಿಶ್ರ ಸರ್ಕಾರದ ಬಗ್ಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರಲ್ಲೇ ವಿಶ್ವಾಸ ಇಲ್ಲ. ಅವರ ಮಂತ್ರಿಗಳ ಜತೆಗೆ ಅವರೇ ಜಗಳವಾಡುತ್ತಿದ್ದಾರೆ. ಆನಂದ ಸಿಂಗ್‌ ಆಸ್ಪತ್ರೆಗೆ ಸೇರುವುದಕ್ಕೆ ಬಿಜೆಪಿ ಕಾರಣವಲ್ಲ. ಅವರ ಪಾಪದ ಭಾರಕ್ಕೆ ಅವರು ಕುಸಿಯುತ್ತಿದ್ದಾರೆ. ಉಮೇಶ್‌ ಜಾಧವ್‌ ಅವರಂತಹ ಹಿರಿಯರಿಗೆ ಕಾಂಗ್ರೆಸ್‌ನಲ್ಲಿ ಅವಕಾಶ ಇಲ್ಲ, ಕುಟುಂಬ ರಾಜಕಾರಣವನ್ನು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಬೆಳೆಸುತ್ತಿದೆ. ಇದಕ್ಕೆ ಬೇಸತ್ತು ಅವರು ಕಾಂಗ್ರೆಸ್‌ ಬಿಟ್ಟಿದ್ದಾರೆ.

* ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಉತ್ತರಾಧಿಕಾರಿ ಯಾರು?

ಇದನ್ನು ಪಕ್ಷ ತೀರ್ಮಾನಿಸುತ್ತದೆ. ಪಕ್ಷದಲ್ಲಿ ಯಾರಿಗೆ ವರ್ಚಸ್ಸು ಇದೆ, ಹೋರಾಟ ಮಾಡುತ್ತಾರೆ, ಪಕ್ಷವನ್ನು ಯಾರು ಮುನ್ನಡೆಸಬಲ್ಲರು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ನಮ್ಮದು ವಂಶ ಆಡಳಿತ ಪಾರ್ಟಿ ಅಲ್ಲ. ನಮ್ಮ ಪಾರ್ಟಿ ಚಾಯವಾಲಾನಂತಹವರನ್ನು ಕೂಡಾ ಪ್ರಧಾನಿಯನ್ನಾಗಿ ಮಾಡುವ ಪಾರ್ಟಿ.

* ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಯಿಂದ ಬಿಜೆಪಿಗೆ ತೊಂದರೆ ಆಗಲಿದೆಯೇ?

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ನಮಗೆ ವರದಾನ. ಅದನ್ನು ನಾವು ಈ ಚುನಾವಣೆಯಲ್ಲಿ ನೋಡುತ್ತಾ ಇದ್ದೇವೆ. ಆ ಎರಡು ಪಕ್ಷಗಳಲ್ಲಿ ಹೇಗೆ ಕಿತ್ತಾಟ, ಒಳಜಗಳ ನಡೆಯುತ್ತಿದೆ ಎಂಬುದನ್ನು ರಾಜ್ಯದ ಜನ ನಾಟಕ ನೋಡಿದ ಹಾಗೆ ಎಂಜಾಯ್‌ ಮಾಡ್ತಾ ಇದ್ದಾರೆ.

* ಉಡುಪಿ–ಚಿಕ್ಕಮಗಳೂರು ಜಿಲ್ಲೆಗಳ ಪೈಕಿ ಚಿಕ್ಕಮಗಳೂರು ಜಿಲ್ಲೆಯನ್ನು ನೀವು ಕಡೆಗಣಿಸಿದ ಆರೋಪ ಇದೆಯಲ್ಲಾ?

ಇದೆಲ್ಲವೂ ಸುಳ್ಳು. ಚಿಕ್ಕಮಗಳೂರು ಜಿಲ್ಲೆಯನ್ನು ನಾನು ಕಡೆಗಣಿಸಿಲ್ಲ. ಸಂಘಟನೆಯ ಜವಾಬ್ದಾರಿ ಇದ್ದ ಕಾರಣ ಕ್ಷೇತ್ರದಲ್ಲಿ ಓಡಾಟ ಕಡಿಮೆ ಇದ್ದುದು ನಿಜ. ಆದರೆ ನಾನು ಕ್ಷೇತ್ರವನ್ನು ಕಡೆಗಣಿಸಿಲ್ಲ. ಈ ಹಿಂದಿನ ಸಂಸದರು ತಂದಿದ್ದಕ್ಕಿಂತ ಹೆಚ್ಚಿನ ಅನುದಾನವನ್ನು ನಾನು ತಂದಿದ್ದೇನೆ.

ಹಿಂದೂಗಳ ಪರ ಮುಂದೆಯೂ ಧ್ವನಿ ಎತ್ತುತ್ತೇನೆ

* ಕರಾವಳಿಯಲ್ಲಿ ಬಿಜೆಪಿ ಕೋಮು ಭಾವನೆ ಕೆರಳಿಸಿ ಚುನಾವಣೆ ಗೆಲ್ಲುತ್ತದೆ ಎಂಬ ಆರೋಪ ಇದೆಯಲ್ಲಾ?

ಕೋಮುವಾದವನ್ನು ಕೆರಳಿಸುವಂತದ್ದು ಬಿಜೆಪಿ ಅಲ್ಲ. ನಮ್ಮ ಯುವಕರ ಹತ್ಯೆಯನ್ನು ಈ ಎರಡು ಜಿಲ್ಲೆ ಸಹಿಸಿಕೊಂಡಿದೆ. ‍ಪ್ರಶಾಂತ ಪೂಜಾರಿ, ಶರತ್‌ ಮಡಿವಾಳ, ದೀಪಕ್, ಪರಮೇಶ್‌ ಮೇಸ್ತ ಅವರಂತಹ ಅಮಾಯಕರನ್ನು ಕೊಚ್ಚಿ ಕೊಲ್ಲಲಾಗಿದೆ. ಕೋಮುವಾದಿಗಳು, ಹಿಂದೂ ವಿರೋಧಿಗಳು, ಜಿಹಾದಿಗಳು, ಭಾರತದ ವಿರೋಧಿಗಳು ಈ ಕೃತ್ಯ ಎಸಗಿದ್ದಾರೆ. ಅದರ ವಿರುದ್ಧ ಧ್ವನಿ ಎತ್ತುವಂತದ್ದು ನಮ್ಮ ಅನಿವಾರ್ಯ ಮತ್ತು ನಾನು ಈ ಜಾಗದಲ್ಲಿ ಉಳಿಯಬೇಕೆಂದರೆ ನಾನು ಧ್ವನಿ ಎತ್ತಲೇಬೇಕು. ಹಿಂದೂವಾಗಿರುವುವೇ ತಪ್ಪು ಎನ್ನುವುದಾದರೆ ಅದಕ್ಕೆ ಸೆಟೆದು ನಿಲ್ಲುವಂತಹ ಕೆಲಸವನ್ನು ನಾವು ಮಾಡಿಯೇ ಮಾಡುತ್ತೇವೆ. ಈಗ ಅಲ್ಲ, ಮುಂದೆಯೂ ಧ್ವನಿ ಎತ್ತುತ್ತೇವೆ, ಇದರಲ್ಲಿ ನಮಗೇನಾಗುತ್ತದೆ ಎಂದು ನೋಡುವುದಿಲ್ಲ. ಜಿಹಾದಿಗಳ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡುವುದು ನಮ್ಮ ಧರ್ಮ ಮತ್ತು ನಮ್ಮ ಶಕ್ತಿ.

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !