‘ಬಲಿಜರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದ್ದೇ ನಾನು’

ಬುಧವಾರ, ಏಪ್ರಿಲ್ 24, 2019
31 °C
ಪತ್ರಿಕಾಗೋಷ್ಠಿಯಲ್ಲಿ ಮೈತ್ರಿ ಅಭ್ಯರ್ಥಿ, ಸಂಸದ ಎಂ.ವೀರಪ್ಪ ಮೊಯಿಲಿ ಸ್ಪಷ್ಟನೆ

‘ಬಲಿಜರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದ್ದೇ ನಾನು’

Published:
Updated:
Prajavani

ಚಿಕ್ಕಬಳ್ಳಾಪುರ: ‘ಸ್ವಾತಂತ್ರ್ಯ ಪೂರ್ವದಿಂದಲೂ ಮುಂದುವರಿದ ಸಮುದಾಯಗಳಲ್ಲಿ ಸೇರಿದ್ದ ಬಲಿಜ ಸಮುದಾಯವನ್ನು ಚಿನ್ನಪ್ಪರೆಡ್ಡಿ ಆಯೋಗದ ವರದಿ ಶಿಫಾರಸ್ಸಿನಂತೆ ರಾಜ್ಯದಲ್ಲಿ ಮೊದಲಿಗನಾಗಿ ಹಿಂದುಳಿದ ವರ್ಗಕ್ಕೆ ಸೇರಿಸಿದ್ದು ನಾನು. ಆದರೆ ಈಗ ಕೆಲವರು ಬಲಿಜ ಸಮುದಾಯ ದತ್ತು ಪಡೆದ ರೀತಿಯಲ್ಲಿ ಮಾತನಾಡುತ್ತಿದ್ದಾರೆ’ ಎಂದು ಮೈತ್ರಿ ಅಭ್ಯರ್ಥಿ, ಸಂಸದ ಎಂ.ವೀರಪ್ಪ ಮೊಯಿಲಿ ಟೀಕೆ ಮಾಡಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ನಾನು ಮುಖ್ಯಮಂತ್ರಿ ಆಗುವವರೆಗೆ ಚಿನ್ನಪ್ಪರೆಡ್ಡಿ ಆಯೋಗದ ವರದಿಯನ್ನು ಮುಟ್ಟುವ ಧೈರ್ಯ ಯಾರೂ ಮಾಡಿರಲಿಲ್ಲ. ಅದಕ್ಕೂ ಮೊದಲು ಹಿಂದುಳಿದ ವರ್ಗದವರಿಗೆ ಯಾವುದೇ ಮೀಸಲಾತಿ ಇರಲಿಲ್ಲ. ನಾನು ಬಜಿಜ ಸಮುದಾಯವನ್ನು ಮೊದಲ ಬಾರಿಗೆ ಹಿಂದುಳಿದ ವರ್ಗಕ್ಕೆ ಸೇರಿಸಿದ ವಿಚಾರ ತಿಳಿದು ನನಗೆ ಬಲಿಜ ಸಮುದಾಯದವರು ಸನ್ಮಾನ ಮಾಡಿದ್ದರು’ ಎಂದು ಹೇಳಿದರು.

‘ಬಲಿಜ ಸಮುದಾಯದವರಿಗೆ ನಾನು ಎರಡು ಸಚಿವ ಸ್ಥಾನ, ಒಂದು ಉಪ ಸಭಾಧ್ಯಕ್ಷ ಸ್ಥಾನ ನೀಡಿದ್ದೆ. ನನ್ನ ಅವಧಿಯಲ್ಲಿ ಏಳು ಬಲಿಜ ಸಮುದಾಯದ ಶಾಸಕರು ಇದ್ದರು. ಎನ್.ಸಂಪಂಗಿ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಕೊಟ್ಟು ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಬಲಿಜ ಸಮುದಾಯದವರಿಗೆ ಕರ್ನಾಟಕದ ಇತಿಹಾಸದಲ್ಲಿಯೇ ನನ್ನಷ್ಟು ಪ್ರಾತಿನಿಧ್ಯ ಯಾರೂ ಕೊಟ್ಟಿಲ್ಲ’ ಎಂದು ತಿಳಿಸಿದರು.

‘ಹಿಂದುಳಿದ ವರ್ಗದವರ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಯಾವಾಗಲೂ ವಿರೋಧ ಮಾಡುತ್ತ ಬಂದಿದೆ. ಎಲ್.ಜಿ.ಹಾವನೂರು, ವೆಂಕಟಸ್ವಾಮಿ ಮತ್ತು ಚಿನ್ನಪ್ಪರೆಡ್ಡಿ ಅವರ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗಗಳ ವರದಿಗಳನ್ನು ವಿರೋಧಿಸುತ್ತಲೇ ಬಂದ ಬಿಜೆಪಿ ಹಿಂದುಳಿದ ವರ್ಗದವರಿಗೆ ರಾಜಕೀಯ ಮೀಸಲಾತಿ ಕೊಡಬಾರದು ಎಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು’ ಎಂದರು.

‘ಬಲಿಜ ಸಮುದಾಯಕ್ಕೆ ಸೇರಿದವರು, ಸದ್ಯ ಇಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿರುವವರು (ಸಿ.ಎಸ್.ದ್ವಾರಕಾನಾಥ್‌) ಹಿಂದೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ವೇಳೆ ಬಲಿಜರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಏಕೆ ಶಿಫಾರಸು ಮಾಡಲಿಲ್ಲ? ಅವರು ವರದಿ ನೀಡಲು ಸಮಯ ಕೇಳಿದರೂ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮಯ ಕೊಡಲಿಲ್ಲ’ ಎಂದು ಹೇಳಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಬಲಿಜ ಸಮುದಾಯದ ಸಮಾವೇಶದಲ್ಲಿ ಯಡಿಯೂರಪ್ಪ ಅವರು ಬಲಿಜರಿಗೆ 2ಎ ಮೀಸಲಾತಿ ನೀಡಬೇಕು ಎಂದು ಕಾರ್ಯಾದೇಶ ಹೊರಡಿಸಿದರು. ಅದನ್ನು ಹೈಕೋರ್ಟ್ ತಿರಸ್ಕರಿಸಿತು. ಆಯೋಗದ ವರದಿ ಮೂಲಕ ಮಾಡುವ ಶಿಫಾರಸಿಗೆ ಮಾತ್ರ ಕಾನೂನಾತ್ಮಕ ಮಾನ್ಯತೆ ಇರುತ್ತದೆಯೇ ಹೊರತು ಸಿಎಂ ಆದೇಶದಿಂದ ಮೀಸಲಾತಿ ಸಿಗುವುದಿಲ್ಲ’ ಎಂದು ತಿಳಿಸಿದರು.

‘ಹಿಂದುಳಿದ ವರ್ಗದವರ ಮೀಸಲಾತಿ ಪರಿಷ್ಕರಣೆ, ಬದಲಾವಣೆ ಮಾಡುವ ಹಕ್ಕು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಇದೆ. ಆದರೆ ಈವರೆಗೆ ಕಳೆದ 25 ವರ್ಷಗಳಲ್ಲಿ ಆ ಕೆಲಸ ಯಾರೂ ಮಾಡಲಿಲ್ಲ. ಯಡಿಯೂರಪ್ಪ ಮತ್ತು ಬಿಜೆಪಿ ಸರ್ಕಾರಕ್ಕೆ ಹಿಂದುಳಿದವರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ನಂಬಿಕೆ ಇದ್ದರೆ ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ನೀಡಲು ಸಮಯಾವಕಾಶ ನೀಡಬೇಕಿತ್ತು’ ಎಂದರು.

‘ನಾನು ಬಲಿಜರಿಗೆ ಅನ್ಯಾಯ ಮಾಡುವಂತಿದ್ದರೆ ಆಗಲೇ ಮಾಡಬೇಕಿತ್ತು. ಆದರೆ ನಾನು ಬಲಿಜರಿಗೆ ಅನ್ಯಾಯ ಮಾಡಿಲ್ಲ. ಇಂದಿಗೂ ನಾನು ಮುಖ್ಯಮಂತ್ರಿಯಾಗಿ ಮಾಡಿದ್ದ ಶಿಫಾರಸು ಜಾರಿಯಲ್ಲಿದೆ. ಆದರೂ ಬಲಿಜರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಕೊಡಬೇಕು ಎಂಬ ಅಪೇಕ್ಷೆ ಇದೆ. ಅದಕ್ಕೆ ನಾವು ಹೋರಾಟ ಮಾಡುತ್ತೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಎಚ್.ಕಾಂತರಾಜು ಅವರೊಂದಿಗೆ ಮಾತನಾಡಿರುವೆ’ ಎಂದು ಹೇಳಿದರು.

ಶಾಸಕ ಡಾ.ಕೆ.ಸುಧಾಕರ್, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಕಾಂಗ್ರೆಸ್‌ ಮುಖಂಡರಾದ ಕೆ.ವಿ.ನಾಗರಾಜ್, ಯಲುವಹಳ್ಳಿ ಎನ್.ರಮೇಶ್‌, ಗೋವಿಂದಸ್ವಾಮಿ, ಬಲಿಜ ಸಮುದಾಯದ ಮುಖಂಡರಾದ ಅಪ್ಪಾಲು ಮಂಜುನಾಥ್‌, ಲೀಲಾವತಿ ಶ್ರೀನಿವಾಸ್‌, ಮಂಜುನಾಥ್‌, ಮೊಬೈಲ್ ಬಾಬು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !