ಗುರುವಾರ , ಜೂನ್ 24, 2021
21 °C

ಸಕ್ಕರೆ ಎಂಬ ಬಿಳಿ ವಿಷ

ಡಾ.ಮುರಲಿ ಮೋಹನ್ ಚೂಂತಾರು Updated:

ಅಕ್ಷರ ಗಾತ್ರ : | |

Prajavani

ಉಪ್ಪು ಮತ್ತು ಸಕ್ಕರೆ ಎನ್ನುವುದು ನಮ್ಮ ದೈನಂದಿನ ಜೀವನದ ಅವಿಬಾಜ್ಯ ಅಂಗ. ಯಾವುದೇ ಆಹಾರಕ್ಕೆ ಒಂದಷ್ಟು ಉಪ್ಪು ಇಲ್ಲದಿದ್ದರೆ ರುಚಿಯಿರದು. ‘ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ’ ಎಂಬ ಮಾತು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಸಕ್ಕರೆ ಕೂಡಾ ನಾವು ಕುಡಿಯುವ ಕಾಫಿ, ಟೀ, ಅಥವಾ ಇನ್ನಾವುದೇ ಆಹಾರಕ್ಕೆ ಒಂದು ಚಮಚ ಸಕ್ಕರೆ ಸೇರಿಸಿದಲ್ಲಿ, ಅದರ ರುಚಿ ಇಮ್ಮಡಿಯಾಗುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತು ನಾವು ಯಾವಾತ್ತೂ ನೆನಪಿನಲ್ಲಿಡಬೇಕು.

ಅಗತ್ಯಕ್ಕಿಂತ ಜಾಸ್ತಿ ಉಪ್ಪು ಮತ್ತು ಸಕ್ಕರೆ ಬಹಳ ಅಪಾಯಕಾರಿ. ಈ ಕಾರಣದಿಂದಲೇ ವೈದ್ಯರು ಇವೆರಡನ್ನು ಬಿಳಿ ವಿಷ ಎಂದು ಕರೆಯುತ್ತಾರೆ. ಈ ಕಾರಣದಿಂದಲೇ ಇವೆರಡನ್ನೂ ಇತಿಮಿತಿಯೊಳಗೆ ಸೇವಿಸಬೇಕಾದ ಅನಿವಾರ್ಯತೆ ಇದೆ. ಒಬ್ಬ ಸಾಮಾನ್ಯ ಅಮೆರಿಕಾದ ಪ್ರಜೆ ಸುಮಾರು 17 ಚಮಚದಷ್ಟು ಸಕ್ಕರೆ ದಿನವೊಂದರಲ್ಲಿ ಸೇವಿಸುತ್ತಾರೆ. ಒಬ್ಬ ಸಾಮಾನ್ಯ ಭಾರತೀಯ ಸುಮಾರು 10 ಚಮಚ ಸಕ್ಕರೆ ದಿನಂಪ್ರತಿ ಸೇವಿಸುತ್ತಾನೆ. ನಮ್ಮ ದೇಹ ಈ ರೀತಿ ಹೆಚ್ಚಿನ ಸಕ್ಕರೆಯನ್ನು ಬಳಸಲು ಪೂರಕವಾದ ವಾತಾವರಣ ಹೊಂದಿಲ್ಲ. ಹೆಚ್ಚಿನ ಎಲ್ಲಾ ಸಕ್ಕರೆಗಳು ಫ್ರಕ್ಟೋಸ್ ಎಂಬ ರೂಪದಲ್ಲಿ ದೇಹಕ್ಕೆ ಸೇರುತ್ತದೆ. ಇದೊಂದು ನಮ್ಮ ಯಕೃತ್ತಿಗೆ ಮಾರಕವಾದ ವಸ್ತುವಾಗಿದ್ದು ನೇರವಾಗಿ ನಮ್ಮ ಲಿವರನ್ನೂ ಹಾನಿಗೊಳಿಸುತ್ತದೆ. ಹೆಚ್ಚಿನ ಎಲ್ಲಾ ಫ್ರಕ್ಟೊಸ್ ಲಿವರನಲ್ಲಿ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಈ ರೀತಿ ಲಿವರ್‍ನ ಮೇಲೆ ಹೆಚ್ಚಿನ ಒತ್ತಡ ಬಿದ್ದು, ಅದರ ಕಾರ್ಯ ಕ್ಷಮತೆ ಕುಗ್ಗಿಸಿ ಹತ್ತು ಹಲವಾರು ಸಮಸ್ಯೆಗಳಿಗೆ ನಾಂದಿ ಹಾಡುತ್ತದೆ. ದಿನವೊಂದಕ್ಕೆ 25 ಗ್ರಾಂಗಿಂತ ಜಾಸ್ತಿ ಫ್ರಕ್ಟೋಸ್ ಸೇವಿಸಲೇಬಾರದು. ಹೆಚ್ಚಾದ ಫ್ರಕ್ಟೋಸ್ ಕ್ಯಾನ್ಸರ್‍ಕಾರಕ ಜೀವಕೋಶಗಳನ್ನು ಪ್ರಚೋದಿಸಿ ಮತ್ತಷ್ಟು ತೀವ್ರವಾಗಿ ಜೀವಕೋಶಗಳು ಬೆಳೆಯುವಂತೆ ಪ್ರಚೋದನೆ ನೀಡುತ್ತದೆ ಎಂದೂ ಸಂಶೋಧನೆಗಳಿಂದ ತಿಳಿದು ಬಂದಿದೆ.

ಏನು ತೊಂದರೆಗಳು?
ಆಹಾರ ತಜ್ಞರಾದ ಕ್ಯಾಲಿಪೋರ್ನಿಯಾ ಯೂನಿವರ್ಸಿಟಿಯ ಪ್ರಾಧ್ಯಾಪಕ ಡಾ. ರಾಬರ್ಟ್ ಲಸ್ಟಿಂಗ್ ಪ್ರಕಾರ ಒಬ್ಬ ಸಾಮಾನ್ಯ ಮನುಷ್ಯರಿಗೆ ದಿನವೊಂದರಲ್ಲಿ ಗರಿಷ್ಠ 6 ಚಮಚ ಸಕ್ಕರೆ ನೀಡಬಹುದು. ಇದಕ್ಕಿಂತ ಜಾಸ್ತಿ ಸಕ್ಕರೆ ತೆಗೆದುಕೊಂಡಲ್ಲಿ ಹೆಚ್ಚಾದ ಸಕ್ಕರೆ ನೇರವಾಗಿ ಕೊಬ್ಬಾಗಿ ಪರಿವರ್ತನೆಯಾಗುತ್ತದೆ.

ಹೆಚ್ಚಾದ ಸಕ್ಕರೆ ನೇರವಾಗಿ ಲಿವರ್‍ನ ಮೇಲೆ ಒತ್ತಡ ಹಾಕುತ್ತದೆ. ನಾವು ಸೇವಿಸಿದ ಎಲ್ಲಾ ಸಕ್ಕರೆ ಆಹಾರ ಎಲ್ಲವೂ ಲಿವರ್‍ನ ಮುಖಾಂತರವೇ ಜೀರ್ಣವಾಗಬೇಕು. ಅಲ್ಕೋಹಾಲ್‍ನಿಂದ ಉಂಟಾಗುವ ತೊಂದರೆಯಂತೆ, ಹೆಚ್ಚಾದ ಸಕ್ಕರೆಯೂ ಕೂಡ ಲಿವರನ್ನು ಹಾನಿಗೊಳಿಸುತ್ತದೆ. ಸಕ್ಕರೆ ದೇಹದ ತೂಕ ಹೆಚ್ಚಿಸುತ್ತದೆ ಮತ್ತು ಇನ್ಸುಲಿನ್ ರಸದೂತದ ಕಾರ್ಯಕ್ಷಮತೆಯನ್ನು ಹಾಳುಗೆಡವುತ್ತದೆ. ಹೆಚ್ಚಾದ ಸಕ್ಕರೆ ಅಂಶ ದೇಹದ ಹಸಿವನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಹಸಿವಿನ ರಸದೂತವಾದ ಗೆಲ್ಲಿನ್ ಎಂಬ ರಸದೂತವನ್ನು ಉತ್ತೇಜಿಸುತ್ತದೆ. ಮತ್ತಷ್ಟು ಹಸಿವು ಹೆಚ್ಚಾಗಿ ಹೆಚ್ಚು ತಿನ್ನುವಂತೆ ಪ್ರೇರೇಪಿಸುತ್ತದೆ.

ಹೆಚ್ಚಾದ ಸಕ್ಕರೆ ಅಂಶ ದೇಹದ ಜೀರ್ಣಾಂಗ ವ್ಯವಸ್ಥೆ ಮತ್ತು ಮೂಲಭೂತ ಜೈವಿಕ ಕ್ರಿಯೆಗಳನ್ನು ನಿಷ್ಕ್ರಿಯಗೊಳಿಸುತ್ತದೆ. ತೂಕ ಜಾಸ್ತಿಯಾಗುವುದರ ಜೊತೆಗೆ ಹೊಟ್ಟೆಯ ಸುತ್ತ ಕೊಬ್ಬು ಶೇಖರಣೆ, ಕೊಲೆಸ್ಟೊರಾಲ್ ಪ್ರಮಾಣ ಹೆಚ್ಚುವುದು, ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವುದು ಮತ್ತು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ದೇಹದಲ್ಲಿ ಫ್ರಕ್ಟೋಸ್ ಪ್ರಮಾಣ ಜಾಸ್ತಿಯಾದಂತೆ, ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚುತ್ತದೆ. ಯೂರಿಕ್ ಆಮ್ಲ ಪ್ರಮಾಣ ಜಾಸ್ತಿಯಾದಂತೆ ಹೃದಯ ತೊಂದರೆ ಕಿಡ್ನಿ ವೈಫಲ್ಯಕ್ಕೆ ಪರೋಕ್ಷವಾಗಿ ಕಾರಣವಾಗುತ್ತದೆ. ಇದು ಒಂದು ಸರಣಿ ಸಮಸ್ಯೆಯಾಗುತ್ತದೆ.

ಕೊನೆಮಾತು:
ಸಕ್ಕರೆ ಎನ್ನುವುದು ಆಧುನಿಕ ಆಹಾರದಲ್ಲಿನ ಅತ್ಯಂತ ಅಪಾಯಕಾರಿ ವಸ್ತುವಾಗಿದೆ. ಇದರಿಂದ ಬರೀ ಕ್ಯಾಲರಿಗಳ ಮಟ್ಟ ಜಾಸ್ತಿಯಾಗುತ್ತದೆ ಹೊರತು ಇನ್ಯಾವುದೇ ಪೋಷಕಾಂಶ ಜೀವಸತ್ವ ಸಿಗುವುದಿಲ್ಲ ಮತ್ತು ಜೀವಕೋಶಗಳಲ್ಲಿ ಮೂಲಭೂತ ಜೈವಿಕ ಕ್ರಿಯೆಗಳನ್ನು ಹಾಳು ಮಾಡಿ ಬಿಡುತ್ತದೆ. ನೈಸರ್ಗಿಕವಾದ ಹಣ್ಣು ಹಂಪಲುಗಳಲ್ಲಿ ಸಕ್ಕರೆ ಅಂಶದ ಜೊತೆಗೆ ನಾರು, ನೀರು ಮತ್ತು ಇತರ ಜೀವಸತ್ವಗಳು ಲವಣಗಳು ಇರುತ್ತದೆ. ಆದರೆ ಕೃತಕ ಸಕ್ಕರೆ ದ್ರಾವಣದಲ್ಲಿ ಮತ್ತು ಆಹಾರಗಳಲ್ಲಿ ಇವೆಲ್ಲವೂ ಇರುವುದಿಲ್ಲ. ಬರೀ ಕ್ಯಾಲರಿ ಮಾತ್ರ ಸೇರಿಕೊಳ್ಳುತ್ತದೆ. ಫ್ರಕ್ಟೋಸ್‌ ಕಾರ್ನ್ ಸಿರಾಫ್ ಇದಕ್ಕೆ ತಾಜಾ ಉದಾಹರಣೆ. ಅಮೆರಿಕದ ಹೃದಯ ತಜ್ಞರ ಸಂಘದ ಪ್ರಕಾರ ದಿನವೊಂದಕ್ಕೆ ಪುರುಷರು 150 ಕ್ಯಾಲರಿ ಅಂದರೆ 37.5 ಗ್ರಾಂ ಎಂದು 9 ಟೀ ಸ್ಪೂನ್‍ಗಳಷ್ಟು ಸಕ್ಕರೆ ಸೇವಿಸಬಹುದು. ಮಹಿಳೆಯರಿಗೆ 100 ಕ್ಯಾಲರಿ ಅಂದರೆ 25ಗ್ರಾಮ ಅಥವಾ 6 ಟೀ ಸ್ಪೂನ್ ಚಮಚದಷ್ಟು ಸಕ್ಕರೆ ಸಾಕಾಗುತ್ತದೆ. ವಿಪರ್ಯಾಸವೆಂದರೆ ಒಂದು 100 ಮಿ.ಲೀ. ಕೋಕ್ ಕ್ಯಾನ್‍ನಲ್ಲಿ 140 ಕ್ಯಾಲರಿ ಮತ್ತು ಸಾಮಾನ್ಯ ಚಾಕಲೇಟ್ ಬಾರ್‍ನಲ್ಲಿ 120 ಕ್ಯಾಲರಿ ಇರುತ್ತದೆ.

ಕ್ಷಣಿಕ ಸುಖಕ್ಕಾಗಿ ಬಾಯಿ ಚಪಲಕ್ಕಾಗಿ, ನಾಲಗೆ ದಾಸರಾಗಿ ಅತಿಯಾದ ಉಪ್ಪು, ಖಾರ, ಸಿಹಿ ಸಕ್ಕರೆ ತಿಂದಲ್ಲಿ ನಿಮ್ಮ ದೇಹ ರೋಗ ರುಜಿನಗಳ ಹಂದರವಾಗಿ ನೀವು ಗಳಿಸಿದ ಹಣವೆಲ್ಲ ವೈದ್ಯಕೀಯ ವೆಚ್ಚಕ್ಕಾಗಿ ಖರ್ಚು ಮಾಡಬೇಕಾಗಿ ಬರಬಹುದು. ಎಲ್ಲವನ್ನೂ ಹಿತಮಿತವಾಗಿ ಸೇವಿಸಿದ್ದಲ್ಲಿ ರೋಗ ರುಜಿನಗಳಿಲ್ಲದೇ ನೂರು ಕಾಲ ಸುಖವಾಗಿ ಬದುಕಬಹುದು. ಅದರಲ್ಲಿಯೇ ನಮ್ಮೆಲ್ಲರ ಹಿತ ಅಡಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು