ಮಂಗಳವಾರ, ಸೆಪ್ಟೆಂಬರ್ 28, 2021
22 °C
ನಕಲಿ ಕಾರ್ಡ್ ವಿತರಣೆ ತಡೆಗೆ ಸರ್ಕಾರದ ಸುತ್ತೋಲೆ, ಹೆಚ್ಚು ಹಣ ವಸೂಲಿ ಮಾಡಿದರೆ ಕ್ರಮ

ಆರೋಗ್ಯ ಕಾರ್ಡ್‌: ಬೆರಳಚ್ಚು ಗುರುತು ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಆಯುಶ್ಮಾನ್‌ ಭಾರತ– ಆರೋಗ್ಯ ಕರ್ನಾಟಕ ಯೋಜನೆಯಡಿ ವಿತರಣೆ ಮಾಡಲಾಗುತ್ತಿದ್ದ ‘ಆರೋಗ್ಯ ಕಾರ್ಡ್‌’ ವಿತರಣೆಗೆ ಫಲಾನುಭವಿಗಳ ಬೆರಳಚ್ಚು ಗುರುತು (ಬಯೋ ಮೆಟ್ರಿಕ್‌) ಕಡ್ಡಾಯಗೊಳಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆ ಮೂಲಕ ನಕಲಿ ಕಾರ್ಡ್‌ ವಿತರಣೆಗೆ ತಡೆಯೊಡ್ಡಿದೆ.

ಕೆಲ ದಿನಗಳಿಂದ ಜಿಲ್ಲೆಯಲ್ಲಿ ನಕಲಿ ಆರೋಗ್ಯ ಕಾರ್ಡ್‌ ವಿತರಣೆ ಕಂಡು ಬಂದಿತ್ತು. ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಗೂ ದೂರು ದಾಖಲಾಗಿತ್ತು. ಆರೋಗ್ಯ ಇಲಾಖೆ ತಂಡ ಈಚೆಗೆ ಪರಿಶೀಲನೆ ಮಾಡಿದಾಗ ನಕಲಿ ಕಾರ್ಡ್‌ ವಿತರಣೆಯಾಗಿರುವುದು ಪತ್ತೆಯಾಗಿತ್ತು. ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌ಸಿ) ಏಜೆಂಟರು ₹ 200ರವರೆಗೆ ಹಣ ವಸೂಲಿ ಮಾಡಿ ಕಾರ್ಡ್‌ ವಿತರಣೆ ಮಾಡಿದ್ದರು. ಅಧಿಕೃತ ಏಜೆಂಟ್‌ ತನ್ನ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಬೇರೆಯವರಿಗೆ ನೀಡಿ ಅನಧಿಕೃತವಾಗಿ ಕಾರ್ಡ್‌ ವಿತರಣೆ ಮಾಡಿರುವುದು ಕಂಡು ಬಂದಿತ್ತು. ತಾಲ್ಲೂಕಿನ ಹೊಳಲು, ಕಮ್ಮನಾಯಕಹಳ್ಳಿ ಸೇರಿ ವಿವಿಧ ಹಳ್ಳಿಗಳಲ್ಲಿ ನಕಲಿ ಕಾರ್ಡ್‌ ವಿತಣೆ ಮಾಡಿರುವುದು ಪತ್ತೆಯಾಗಿತ್ತು.

ಮೊಬೈಲ್‌ ಸಂಖ್ಯೆಗೆ ಒಟಿಪಿ ಕಳಿಸಿ, ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಸಂಖ್ಯೆಯ ಆಧಾರದ ಮೇಲೆ ನಕಲಿ ಕಾರ್ಡ್‌ ವಿತರಣೆ ಮಾಡಿರುವುದು ಕಂಡುಬಂದಿತ್ತು. ವಿವಿಧ ಜಿಲ್ಲೆಗಳಿಂದ ಇದೇ ರೀತಿಯ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಕಾರ್ಡ್‌ ವಿತರಣೆಗೆ ಬೆರಳಚ್ಚು ಗುರುತು ಕಡ್ಡಾಯಗೊಳಿಸಿದೆ. ಆ ಮೂಲಕ ಮುಂದೆ ನಡೆಯಬಹುದಾದ ನಕಲಿ ಕಾರ್ಡ್‌ ವಿತರಣೆಗೆ ಕ್ರಮ ಕೈಗೊಂಡಿದೆ. ಏ.30ರಿಂದ ಆದೇಶ ಜಾರಿಗೆ ಬಂದಿದ್ದು ಏಜೆಂಟರು ಬಯೋಮೆಟ್ರಿಕ್‌ ಮೂಲಕ ಕಾರ್ಡ್‌ ವಿತರಣೆಗೆ ಸೂಚನೆ ನೀಡಲಾಗಿದೆ.

ಇನ್ನುಮುಂದೆ ಬೇರೆಯವರ ಹೆಸರಿನಲ್ಲಿ ಆರೋಗ್ಯ ಕಾರ್ಡ್‌ ಪಡೆಯಲು ಸಾಧ್ಯವಿಲ್ಲ. ಫಲಾನುಭವಿ ನೇರವಾಗಿ ವಿತರಣಾ ಕೇಂದ್ರಗಳಿಗೆ ತೆರಳಿ ಬೆರಳ ಗುರುತು ನೀಡಿ ಕಾರ್ಡ್‌ ಪಡೆಯಬೇಕಾಗಿದೆ. ನಿಯಮಾನುಸಾರ ಎ4 ಅಳತೆಯ ಕಾಗದದಲ್ಲಿ ಕಾರ್ಡ್‌ ಪ್ರತಿ ಮುದ್ರಿಸಿಕೊಟ್ಟರೆ ₹ 15, ಎಬಿಎಆರ್‌ಕೆ ಕಾರ್ಡ್‌ ಮಾದರಿಯಲ್ಲಿ ನೀಡಿದರೆ ₹ 30 ನೀಡಬೇಕು. ಆದರೆ ಅನಧಿಕೃತ ಏಜೆಂಟರು ₹ 200 ವಸೂಲಿ ಮಾಡುತ್ತಿದ್ದ ಕಾರಣ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಎಲ್ಲೆಲ್ಲಿ ಕಾರ್ಡ್‌: ಯೋಜನೆ ಜಾರಿಯಾದ ನಂತರ ಜಿಲ್ಲಾಸ್ಪತ್ರೆಯಲ್ಲಿ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಅದಕ್ಕಾಗಿ ಪ್ರತ್ಯೇಕ ಕೌಂಟರ್‌ ತೆರೆಯಲಾಗಿದೆ. ಜೊತೆಗೆ ಐದು ತಾಲ್ಲೂಕು ಆಸ್ಪತ್ರೆ ಹಾಗೂ 10 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಾರ್ಡ್‌ ವಿತರಣೆಗೆ ಯಂತ್ರ ಅಳವಡಿಸಲಾಗಿದ್ದು ಇನ್ನೆರಡು ದಿನಗಳಲ್ಲಿ ಕಾರ್ಡ್‌ ವಿತರಣಾ ಪ್ರಕ್ರಿಯೆ ಆರಂಭಗೊಳ್ಳುವುದು. ಜೊತೆಗೆ ಜಿಲ್ಲೆಯ 57 ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಗಳಿಗೆ ಕಾರ್ಡ್‌ ವಿತರಣೆಗೆ ಅನುಮತಿ ನೀಡಲಾಗಿದೆ. ಅಧಿಕೃತವಾಗಿ ಅನುಮತಿ ಪಡೆದಿರುವ ಸಿಎಸ್‌ಸಿ ಏಜೆಂಟರು ಬೆರಳಚ್ಚು ಗುರುತು ಪಡೆದು ಕಾರ್ಡ್‌ ವಿತರಣೆ ಮಾಡಲು ಸೂಚನೆ ನೀಡಲಾಗಿದೆ.

‘ನಿಗದಿ ದರಕ್ಕಿಂತ ಹೆಚ್ಚಿಗೆ ಹಣ ಪಡೆದರೆ ಸಾಮಾನ್ಯ ಸೇವಾ ಕೇಂದ್ರಗಳ ಅನುಮತಿ ರದ್ದುಗೊಳಿಸಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಹೆಚ್ಚಿಗೆ ಹಣ ಪಡೆಯುತ್ತಿರುವ ಮಾಹಿತಿ ಇದ್ದರೆ ಸಾರ್ವಜನಿಕರು ಉಚಿತ ಸಹಾಯವಾಣಿ 104ಕ್ಕೆ ಕರೆ ಮಾಡಿ ದೂರು ನೀಡಬಹುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಚೇಗೌಡ ತಿಳಿಸಿದರು.

ಕೇಂದ್ರ–ರಾಜ್ಯ ಸರ್ಕಾರದ ಯೋಜನೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಆಯುಶ್ಮಾನ್‌ ಭಾರತ– ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿವೆ. ರಾಜ್ಯದಲ್ಲಿದ್ದ ಯಶಸ್ವಿನಿ ಯೋಜನೆಯನ್ನು ರದ್ದುಗೊಳಿಸಿ ವಿವಿಧ ಆರೋಗ್ಯ ಸೇವೆಯನ್ನು ಈ ಯೋಜನೆ ಅಡಿ ವಿಲೀನಗೊಳಿಸಲಾಗಿದೆ. ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ ಉಳ್ಳವರು ಈ ಕಾರ್ಡ್‌ ಪಡೆಯಲು ಅರ್ಹರು. ಬಿಪಿಎಲ್‌ ಕಾರ್ಡ್‌ ಉಳ್ಳವರು ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯುತ್ತಾರೆ. ಎಪಿಎಲ್‌ ಕಾರ್ಡ್‌ನಲ್ಲಿ ಶೇ 70ರಷ್ಟು ಚಿಕಿತ್ಸಾ ವೆಚ್ಚವನ್ನು ರೋಗಿಗಳು ಭರಿಸಿದರೆ ಶೇ 30ರಷ್ಟು ವೆಚ್ಚವನ್ನು ಸರ್ಕಾರ ಭರಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು