ಮಂಗಳವಾರ, ಸೆಪ್ಟೆಂಬರ್ 28, 2021
22 °C

‘38 ಕೋಟಿ ಮಂದಿ ಅಸಂಘಟಿತ ಕಾರ್ಮಿಕರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ದೇಶದ 44 ಕೋಟಿ ಕಾರ್ಮಿಕರಲ್ಲಿ 2.5 ಕೋಟಿ ಸರ್ಕಾರಿ ಹಾಗೂ 4 ಕೋಟಿ ಸಂಘಟಿತ ಕಾರ್ಮಿಕರಿದ್ದಾರೆ. ಉಳಿದ 38 ಕೋಟಿ ಜನರು ಅಸಂಘಟಿತ ಕಾರ್ಮಿಕರಾಗಿದ್ದು, ಸರ್ಕಾರಿ ಸೌಲಭ್ಯ ಹಾಗೂ ಜೀವನ ಭದ್ರತೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಚ್.ಎಸ್.ಮಂಜುನಾಥ್ ಹೇಳಿದರು.

ಜಿಲ್ಲಾ ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಅಸಂಘಟಿತ ಕಾರ್ಮಿಕರ ವಲಯದ ಸಂಘಟನೆಗಳ ವತಿಯಿಂದ ಬುಧವಾರ ನಗರದ ನೆಹರೂ ಯುವ ಕೇಂದ್ರದಲ್ಲಿ ನಡೆದ ವಿಶ್ವ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ವಿಶ್ವದಲ್ಲಿ ಸಂಪತ್ತಿನ ಅಸಮಾನ ಹಂಚಿಕೆಯಿಂದಾಗಿ ಕಾರ್ಮಿಕ ವರ್ಗಕ್ಕೆ ಅನ್ಯಾಯವಾಗಿತ್ತು. ಇದೇ ಕಾರಣದಿಂದ ಅನಿಯಮಿತ ಕೆಲಸದ ಅವಧಿ ಹಾಗೂ ಕಾರ್ಮಿಕರ ಮೇಲೆ ಶೋಷಣೆ, ದಬ್ಬಾಳಿಕೆ ನಡೆಯುತ್ತಿದ್ದವು. ಇದನ್ನು ತಡೆಯುವ ನಿಟ್ಟಿನಲ್ಲಿ ಹೋರಾಟ, ತ್ಯಾಗ, ಬಲಿದಾನಗಳ ಮೂಲಕ ಕಾರ್ಮಿಕರು ಯಶಸ್ಸು ಸಾಧಿಸಿದ್ದಾರೆ. ಹೀಗಾಗಿ ಇಂದು ಎಂಟು ಗಂಟೆಗಳ ಅವಧಿಯ ಕೆಲಸ ನಿಗದಿಯಾಗಿದೆ’ ಎಂದರು.

‘ಅಸಂಘಟಿತ ಕಾರ್ಮಿಕರು ರಾಷ್ಟ್ರದ ಆದಾಯಕ್ಕೆ ಬಹುಮುಖ ಕೊಡುಗೆ ನೀಡುತ್ತಿದ್ದಾರೆ. ಸಾಧಾರಣ ಜೀವನ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕನಿಷ್ಠ ಕೂಲಿ ಯೋಜನೆ ಜಾರಿಗೊಳಿಸಿದೆ. ಸಮಾಜಕ್ಕೆ ಸಂಪತ್ತಿನ ಕೊಡುಗೆ ನೀಡುತ್ತಿರುವ ಕಾರ್ಮಿಕರು, ಅವರ ಪಾಲು ಪಡೆಯುವಲ್ಲಿ ವಿಫಲರಾಗಿದ್ದಾರೆ. ಎಲ್ಲಾ ಕಾರ್ಮಿಕರು ನೋಂದಣಿ ಮಾಡಿಸುವ ಮೂಲಕ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದು ಸಾಮಾಜಿಕ ಭದ್ರತೆ ಪಡೆದುಕೊಳ್ಳಬೇಕು’ ಎಂದರು.

ಉಪನ್ಯಾಸಕ ವ್ಯಕ್ತಿ ಡಾ.ಮನುಕುಮಾರ್ ಮಾತನಾಡಿ ‘ಕಾರ್ಮಿಕರು ನಿಜವಾದ ರಾಷ್ಟ್ರದ ಅಡಿಗಲ್ಲು ಆಗಿದ್ದಾರೆ. ಕಾರಣ ಯಾವುದೇ ಕ್ಷೇತ್ರದಲ್ಲಿ ಕಾರ್ಮಿಕರಿಲ್ಲದೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಪದವಿ ಪಡೆದವರಿಗಿಂತ ಅನುಭವ ಇರುವ ಕಾರ್ಮಿಕರು ಉತ್ತಮ ಕೌಶಲ ಹೊಂದಿರುತ್ತಾರೆ. ಬಂಡವಾಳಗಾರರಿಗೆ ದೆವ್ವವಾಗಿ ಕಾಣಿಸಿಕೊಂಡ ಕಾರ್ಲ್ ಮಾರ್ಕ್ಸ್ ಕಾರ್ಮಿಕರ ದೇವರಾಗಿದ್ದಾರೆ. ಬಂಡವಾಳ ಇದ್ದರೆ ಮಾತ್ರ ದೇಶದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಅದರ ಬದಲಾಗಿ ಶ್ರಮದ ಮೂಲವಾದ ಕಾರ್ಮಿಕರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಕಾರ್ಮಿಕರು ಸಂಘಟಿತರಾಗಿ ಕಾರ್ಯ ನಿರ್ವಹಿಸಬೇಕು’ ಎಂದರು.

ನೆಹರೂ ಯುವ ಕೇಂದ್ರದ ವ್ಯವಸ್ಥಾಪಕ ಬಸವರಾಜು, ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಆರ್.ನಾಗೇಂದ್ರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಎಲ್.ಶಿವಕುಮಾರ್, ಅನನ್ಯ ಹಾರ್ಟ್ ಸಂಸ್ಥೆ ನಿರ್ದೇಶಕಿ ಬಿ.ಎಸ್.ಅನುಪಮಾ, ಕಾರ್ಮಿಕ ಸಮಘಟನೆಗಳ ಮುಖಂಡರಾದ ಶಿವರಾಮು, ಟಿ.ಕೃಷ್ಣ, ರಾಜಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.