ಬಾಲ್ಯ ವಿವಾಹ ಧಿಕ್ಕರಿಸಿ ಪಿಯುಸಿಯಲ್ಲಿ ಸಾಧನೆ ತೋರಿದ ರೇಖಾಗೆ ಸನ್ಮಾನ

ಸೋಮವಾರ, ಮೇ 20, 2019
32 °C
’ಬಲವಂತಕ್ಕೆ ಬಾಳು ಬಲಿ ಕೊಡಬೇಡಿ’

ಬಾಲ್ಯ ವಿವಾಹ ಧಿಕ್ಕರಿಸಿ ಪಿಯುಸಿಯಲ್ಲಿ ಸಾಧನೆ ತೋರಿದ ರೇಖಾಗೆ ಸನ್ಮಾನ

Published:
Updated:
Prajavani

ಚಿಕ್ಕಬಳ್ಳಾಪುರ: ‘ಹೆಣ್ಣು ಮಕ್ಕಳು ಛಲದಿಂದ ವಿದ್ಯೆ ಕಲಿತಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಮಾನವ ಹಕ್ಕುಗಳ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.ಮುನಿರಾಜು ತಿಳಿಸಿದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಬಾಗೇಪಲ್ಲಿ ತಾಲ್ಲೂಕಿನ ಕೊತ್ತನೂರು ವಿದ್ಯಾರ್ಥಿನಿ ರೇಖಾ ಅವರಿಗೆ ನಗರದಲ್ಲಿ ಶುಕ್ರವಾರ ಮಾನವ ಹಕ್ಕುಗಳ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇವತ್ತು ಬಹುತೇಕ ಹೆಣ್ಣುಮಕ್ಕಳಿಗೆ ಉನ್ನತ ವ್ಯಾಸಂಗ ಮಾಡುವ ಆಸೆ ಇದ್ದರೂ ಪೋಷಕರು ಒತ್ತಾಯಕ್ಕೆ ಮಣಿದು ಅನೇಕರು ವಿವಾಹ, ಬಾಲ್ಯ ವಿವಾಹ ಮಾಡಿಕೊಂಡು ಶೈಕ್ಷಣಿಕ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಂತಹ ಸನ್ನಿವೇಶಗಳನ್ನು ಅನೇಕರು ದಿಟ್ಟತನದಿಂದ ಎದುರಿಸಿ ಉನ್ನತ ಸಾಧನೆ ಮಾಡಿ ಇತರ ಹೆಣ್ಣು ಮಕ್ಕಳಿಗೆ ಮಾದರಿಯಾದ ಉದಾಹರಣೆಗಳಿವೆ. ಅಂತಹವರ ಪೈಕಿ ರೇಖಾ ಕೂಡ ಒಬ್ಬರು’ ಎಂದು ಹೇಳಿದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುತ್ತಿದ್ದಂತೆ ರೇಖಾ ಅವರಿಗೆ ಬಾಲ್ಯ ವಿವಾಹ ಮಾಡಲು ಪೋಷಕರು ಸಿದ್ಧತೆ ನಡೆಸಿದ್ದರು. ಅದನ್ನು ಅರಿತ ಅವರು ಮಕ್ಕಳ ಹಕ್ಕುಗಳ ಕಲ್ಯಾಣ ಸಮಿತಿಗೆ ಕರೆ ಮಾಡಿ ವಿಷಯ ತಿಳಿಸಿ ಬಾಲ್ಯ ವಿವಾಹದಿಂದ ಪಾರಾಗಿದ್ದರು. ಬಳಿಕ ಪಿಯುಸಿಗೆ ಪ್ರವೇಶ ಪಡೆದು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 90 ರಷ್ಟು ಅಂಕ ಪಡೆಯುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ’ ಎಂದರು.

ವಿದ್ಯಾರ್ಥಿನಿ ರೇಖಾ ಮಾತನಾಡಿ, ‘ನಾನು ನಾಲ್ಕು ವರ್ಷ ಮಗುವಿದ್ದಾಗಲೇ ನನ್ನ ತಂದೆ ಮರಣ ಹೊಂದಿದರು. ತಾಯಿ ಚೌಡಮ್ಮ ಕೂಲಿನಾಲಿ ಮಾಡಿ ಎಸ್ಸೆಸ್ಸೆಲ್ಸಿ ವರೆಗೆ ಓದಿಸಿದರು. ಬಡತನದಿಂದಾಗಿ ಮುಂದೆ ಓದಿಸಲು ಸಾಧ್ಯವಿಲ್ಲ. ಸೋದರ ಮಾವನೊಂದಿಗೆ ಮದುವೆಯಾಗುವಂತೆ ತಿಳಿಸಿದರು. ಆದರೆ ಆ ಮದುವೆ ನನಗೆ ಇಷ್ಟ ಇರಲಿಲ್ಲ. ಹೀಗಾಗಿ ಸ್ನೇಹಿತೆ ಮುಖಾಂತರ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮದುವೆ ನಿಲ್ಲಿಸಿದೆ’ ಎಂದು ಹೇಳಿದರು.

‘ಉನ್ನತ ಶಿಕ್ಷಣ ಪಡೆಯುವ ಹಂಬಲವಿದ್ದ ಕಾರಣ ಬೆಂಗಳೂರಿನ ಹೆಸರಘಟ್ಟ ರಸ್ತೆಯ ಸ್ಪರ್ಶ ಕೇಂದ್ರದಲ್ಲಿ ಆಶ್ರಯ ಪಡೆದೆ. ಅಲ್ಲಿ ಸಿಬ್ಬಂದಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ ಕಾರಣ ಪಿಯುಸಿ ಮುಗಿಸಿದೆ. ಆ ಕೇಂದ್ರದಲ್ಲಿ ನನ್ನಂತೆ ಸಮಸ್ಯೆ ಅನುಭವಿಸಿದ ನೂರಾರು ಹೆಣ್ಣು ಮಕ್ಕಳಿದ್ದಾರೆ. ಅವರಿಗೆ ನಾನು ಸ್ಫೂರ್ತಿಯಾಗಬೇಕು ಎಂಬ ಆಸೆ ಇದೆ. ಪದವಿ ಮುಗಿಸಿ ನಂತರ ಐಎಎಸ್ ಅಧಿಕಾರಿಯಾಗಿ ಬಡ ಮಕ್ಕಳಿಗೆ ಸಹಾಯ ಮಾಡಬೇಕು ಎಂಬ ಕನಸಿದೆ’ ಎಂದು ತಿಳಿಸಿದರು.

‘ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಮತ್ತೊಬ್ಬರ ಒತ್ತಡಕ್ಕೆ ಒಳಗಾಗಿ ವಿದ್ಯಾಭ್ಯಾಸ ಹಾಳು ಮಾಡಿಕೊಳ್ಳಬಾರದು. ತಮ್ಮ ನೆರೆಹೊರೆಯಲ್ಲಿ ಎಲ್ಲಿಯಾದರೂ ಬಾಲ್ಯ ವಿವಾಹ ನಡೆಯುತ್ತಿರುವುದು ಗಮನಕ್ಕೆ ಬಂದರೆ ತಕ್ಷಣ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ತಿಳಿಸಿ ಮಕ್ಕಳ ಹಕ್ಕನ್ನು ರಕ್ಷಿಸುವ ಕೆಲಸ ಮಾಡಬೇಕು’ ಎಂದರು. ಮಾನವ ಹಕ್ಕುಗಳ ವೇದಿಕೆಯ ಪದಾದಿಕಾರಿಗಳಾದ ಮ್ಯಾಥ್ಯು ಮುನಿರಾಜು, ಆನಂದ್, ಶ್ರೀರಾಮ್ ಉಪಸ್ಥಿತರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !