ತಾರಕಕ್ಕೆ ಆರೋಪ–ಪ್ರತ್ಯಾರೋಪ

ಶುಕ್ರವಾರ, ಮೇ 24, 2019
28 °C

ತಾರಕಕ್ಕೆ ಆರೋಪ–ಪ್ರತ್ಯಾರೋಪ

Published:
Updated:

ನವದೆಹಲಿ: ಐದನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಳ್ಳುವುದಕ್ಕೂ ಕೆಲವೇ ಗಂಟೆಗಳ ಮುನ್ನ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಪರಸ್ಪರರ ಮೇಲೆ ಆರೋಪ ಪ್ರತ್ಯಾರೋಪಗಳ ಸುರಿಮಳೆಗೈದಿವೆ.

ಈ ಬಾರಿಯ ಆರೋಪಗಳಲ್ಲಿ ರಕ್ಷಣಾ ಒಪ್ಪಂದ ಹಾಗೂ ಭಷ್ಟಾಚಾರಗಳು ದೊಡ್ಡ ಸದ್ದು ಮಾಡಿವೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿ, ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದದ ತನಿಖೆ ನಡೆಸುವಂತೆ ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕಿದರು.

ಅತ್ತ ಬಿಜೆಪಿಯ ನಾಯಕರು ರಾಹುಲ್‌ ಅವರನ್ನೇ ರಕ್ಷಣಾ ಒಪ್ಪಂದಗಳಿಗೆ ತಳಕುಹಾಕಿ ‘ರಕ್ಷಣಾ ಒಪ್ಪಂದಗಳನ್ನು ಉತ್ತೇಜಿಸುವ ರಾಹುಲ್‌, ಈಗ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ’ ಎಂದರು.

‘ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಆಡಳಿತ ನಡೆಸುತ್ತಿದ್ದಾಗ ರಕ್ಷಣಾ ಗುತ್ತಿಗೆ ಪಡೆದಿದ್ದ ಬ್ರಿಟನ್‌ ಮೂಲದ ವಿದೇಶಿ ಪಾಲುದಾರ ಸಂಸ್ಥೆಯೊಂದರಲ್ಲಿ ರಾಹುಲ್‌ ಸಹ ಪ್ರವರ್ತಕರಾಗಿದ್ದರು’ ಎಂದು ಪತ್ರಿಕೆಯೊಂದರಲ್ಲಿ ಬಂದ ವರದಿಯ ಆಧಾರದಲ್ಲಿ ಬಿಜೆಪಿ ನಾಯಕರು ರಾಹುಲ್‌ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

‘ಯುಪಿಎ–1 ಆಡಳಿತದ ಕಾಲದಲ್ಲಿ ಪ್ರಭಾವಿ ಕುಟುಂಬದ ವ್ಯಕ್ತಿಯೊಬ್ಬರು ಪಾಲುದಾರರಾಗಿರುವ ವಿದೇಶಿ ಸಂಸ್ಥೆಗೆ ರಕ್ಷಣಾ ಗುತ್ತಿಗೆ ನೀಡಲಾಗಿತ್ತು ಎಂಬ ವರದಿಯನ್ನು ಓದಿದೆ. ಅದು ಅವರ ಸರ್ಕಾರ, ಅವರ ಸ್ನೇಹಿತರು, ಅವರದ್ದೇ ಆದ ರಕ್ಷಣಾ ಒಪ್ಪಂದ. ಅಂದರೆ ಅವರೇ ಎಲ್ಲವನ್ನೂ ಆಯೋಜಿಸಿದ್ದರು’ ಎಂದು ಪ್ರಧಾನಿ ಮೋದಿ ಅವರು ಪ್ರತಾಪಗಡದ ಚುನಾವಣಾ ರ್‍ಯಾಲಿಯಲ್ಲಿ ಯಾರ ಹೆಸರನ್ನೂ ಉಲ್ಲೇಖಿಸದೆ ಹೇಳಿದರು.

ಸಂಜೆ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಅರುಣ್‌ ಜೇಟ್ಲಿ, ‘2002ರಲ್ಲಿ ಭಾರತದಲ್ಲಿ ನೋಂದಣಿ ಮಾಡಿಕೊಂಡಿರುವ ಬ್ಯಾಕಾಪ್ಸ್‌ ಸರ್ವಿಸಸ್‌ ಪ್ರೈ.ಲಿ. ಸಂಸ್ಥೆಯಲ್ಲಿ ರಾಹುಲ್‌ ಹಾಗೂ ಅವರ ಸಹೋದರಿ ಪ್ರಿಯಾಂಕಾ ಅವರು ನಿರ್ದೇಶಕರಾಗಿದ್ದು, ಆ ಸಂಸ್ಥೆಯ ಜೊತೆಗೆ ನಡೆಸಿದ ಕೊಡು–ಕೊಳ್ಳುವಿಕೆಯನ್ನು ಬಹಿರಂಗ ಪಡಿಸುವಂತೆ ರಾಹುಲ್‌ಗೆ ಸವಾಲು ಹಾಕಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್‌, ‘ಈ ವಿಚಾರದಲ್ಲಿ ನೀವು ಬೇಕಾದ ತನಿಖೆ ಮಾಡಿಸಿ, ನನ್ನ ವಿರುದ್ಧ ಬೇಕಾದ ಕ್ರಮ ಕೈಗೊಳ್ಳಿ, ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ದಯವಿಟ್ಟು ರಫೇಲ್‌ ಬಗ್ಗೆಯೂ ತನಿಖೆ ನಡೆಸಿ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !