‘ಫೋನಿ’ ಆರ್ಭಟಕ್ಕೆ ಒಡಿಶಾ ನುಚ್ಚುನೂರು

ಭಾನುವಾರ, ಮೇ 26, 2019
30 °C

‘ಫೋನಿ’ ಆರ್ಭಟಕ್ಕೆ ಒಡಿಶಾ ನುಚ್ಚುನೂರು

Published:
Updated:
Prajavani

ಭುವನೇಶ್ವರ/ಕೋಲ್ಕತ್ತಾ/ಢಾಕಾ: ಒಡಿಶಾದಲ್ಲಿ ಶುಕ್ರವಾರ ಭಾರಿ ಹಾನಿ ಉಂಟು ಮಾಡಿದ್ದ ಫೋನಿ ಚಂಡಮಾರುತವು, ಶನಿವಾರ ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದೇಶವನ್ನು ತಲುಪಿದೆ. ಆದರೆ ಚಂಡಮಾರುತದ ತೀವ್ರತೆ ಕಡಿಮೆಯಾದ ಕಾರಣ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಲ್ಲಿ ಕಟ್ಟೆಚ್ಚರ ಹಿಂಪಡೆಯಲಾಗಿದೆ.

ಒಡಿಶಾದ ಪುರಿ, ಭುವನೇಶ್ವರ, ಬಾಲೇಶ್ವರ ಜಿಲ್ಲೆಗಳಲ್ಲಿ ಫೋನಿಯ ಆರ್ಭಟಕ್ಕೆ ಲಕ್ಷಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿವೆ ಇಲ್ಲವೇ ಮುರಿದು ಬಿದ್ದಿವೆ. ಪುರಿಮತ್ತು ಭುವನೇಶ್ವರದಲ್ಲಿ ವಿದ್ಯುತ್ ಸಂಪರ್ಕ ಜಾಲ ಸಂಪೂರ್ಣ ನಾಶವಾಗಿದೆ. ವಿಮಾನ ನಿಲ್ದಾಣ, ಆಸ್ಪತ್ರೆ ಮತ್ತು ರೈಲು ನಿಲ್ದಾಣಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸವನ್ನು ಯುದ್ಧೋಪಾದಿಯಲ್ಲಿ ಮಾಡಲಾಗುತ್ತಿದೆ.

ವಿದ್ಯುತ್ ರೈಲು ಜಾಲ ಸಂಪೂರ್ಣ ನಾಶವಾಗಿದೆ. ಹೀಗಾಗಿ ಒಡಿಶಾದ ಪ್ರಮುಖ ನಗರಗಳಲ್ಲಿ ಡೀಸೆಲ್ ಎಂಜಿನ್ ರೈಲಿನ ಸಂಚಾರವನ್ನು ಶನಿವಾರ ಆರಂಭಿಸಲಾಗಿದೆ. ರಾಜ್ಯದ ಬಹುತೇಕ ಕಡೆ ದೂರವಾಣಿ ಮತ್ತು ಮೊಬೈಲ್ ಸಂಪರ್ಕ ಕಡಿತಗೊಂಡಿದೆ.

ಸಾವಿರಾರು ಮನೆಗಳ ಚಾವಣಿ ಹಾರಿಹೋಗಿವೆ. ಸಾವಿರಾರು ಗುಡಿಸಲುಗಳು ನೆಲಕಚ್ಚಿವೆ. ಹೀಗಾಗಿ ನಿರಾಶ್ರಿತರ ಶಿಬಿರಗಳಲ್ಲಿ ಇರುವ 12 ಲಕ್ಷದಷ್ಟು ಜನರಲ್ಲಿ ಬಹುತೇಕರನ್ನು ಇನ್ನೂಅಲ್ಲೇ ಉಳಿಸಿಕೊಳ್ಳಲಾಗಿದೆ. ವಸತಿ ಸೌಕರ್ಯವನ್ನು ಮರುಕಲ್ಪಿಸುವ ಬಗ್ಗೆ ಸರ್ಕಾರವು ಇನ್ನಷ್ಟೇ ಕಾರ್ಯಯೋಜನೆ ಸಿದ್ಧಪಡಿಸಬೇಕಿದೆ.

ಬಚಾವಾದ ಪಶ್ಚಿಮ ಬಂಗಾಳ: ಫೋನಿ ಚಂಡಮಾರುತವು ಪಶ್ಚಿಮ ಬಂಗಾಳಕ್ಕೆ ಗಣನೀಯ ಹಾನಿ ಮಾಡದೆ, ರಾಜ್ಯವನ್ನು ಹಾದುಹೋಗಿದೆ. ಮುನ್ನೆಚ್ಚರಿಕೆಯಾಗಿ 45 ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ರಾಜ್ಯದಲ್ಲಿ ಕೆಲವು ಗುಡಿಸಲುಗಳಿಗಷ್ಟೇ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ವಿಮಾನ ಹಾರಾಟ ಆರಂಭವಾಗಿದೆ. ಆಂಧ್ರಪ್ರದೇಶದಲ್ಲಿ 10,000ಕ್ಕೂ ಹೆಚ್ಚು ತೆಂಗಿನಮರಗಳು ನೆಲಕಚ್ಚಿವೆ ಎಂದು ಅಲ್ಲಿನ ಸರ್ಕಾರ ಹೇಳಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 3

  Sad
 • 0

  Frustrated
 • 4

  Angry

Comments:

0 comments

Write the first review for this !