ಶುಕ್ರವಾರ, ಸೆಪ್ಟೆಂಬರ್ 17, 2021
29 °C
6 ದಿನಗಳಿಗೊಮ್ಮೆ ವಾರ್ಡ್‌ವಾರು ನಲ್ಲಿ ನೀರು ಸರಬರಾಜು

ಜೀವಜಲಕ್ಕೆ ಹಾಹಾಕಾರ: ಟ್ಯಾಂಕರ್ ನೀರು ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಮುಂದುವರಿದಿದ್ದು, ನಗರಸಭೆಯಿಂದ ವಾರ್ಡ್‌ವಾರು ನೀರು ಸರಬರಾಜು ನಡೆಯುತ್ತಿದೆ. 6 ದಿನಕ್ಕೊಮ್ಮೆ ಸರದಿಯಲ್ಲಿ ನೀರು ಬಿಡಲಾಗುತ್ತಿದೆ. ನೀರಿನ ಸಮಸ್ಯೆ ಗಂಭೀರವಾಗಿರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ನಗರಸಭೆ ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್ ಖುದ್ದು ಟ್ಯಾಂಕರ್ ನೀರು ಪೂರೈಕೆ ಉಸ್ತುವಾರಿ ವಹಿಸಿಕೊಂಡಿದ್ದು, ಸೋಮವಾರ ಮಲ್ಪೆ, ಕಲ್ಸಂಕ, ಗುಂಡಿಬೈಲು ಸೇರಿದಂತೆ ಹಲವೆಡೆ ನೀರು ಪೂರೈಕೆ ಮಾಡಲಾಯಿತು. ಸಾರ್ವಜನಿಕರು ಮುಗಿಬಿದ್ದು ಸಣ್ಣ ಪ್ಲಾಸ್ಟಿಕ್ ಟ್ಯಾಂಕರ್, ಕೊಡ, ಸ್ಟೀಲ್‌ ಬಾಕ್ಸ್‌ಗಳಲ್ಲಿ ನೀರು ಸಂಗ್ರಹಿಸಿಕೊಂಡರು. 

ಮತ್ತೊಂದೆಡೆ, ಬಜೆ ಜಲಾಶಯ ಸಂಪೂರ್ಣ ಬರಿದಾಗಿರುವುದರಿಂದ ಸ್ವರ್ಣಾ ನದಿ ತೀರದ ವ್ಯಾಪ್ತಿಯ ಹಳ್ಳಗಳಲ್ಲಿ ಸಂಗ್ರಹವಾಗಿದ್ದ ನೀರನ್ನು ಡ್ರೆಜ್ಜಿಂಗ್ ಮೂಲಕ ಜಾಕ್‌ವೆಲ್‌ಗೆ ಹರಿಸಿ, ವಾರ್ಡ್‌ವಾರು ನಲ್ಲಿಗಳಲ್ಲಿ ಪೂರೈಕೆ ಮಾಡಲಾಗುತ್ತಿದೆ. ನಗರಸಭೆಯ 35 ವಾರ್ಡ್‌ಗಳನ್ನು 6 ವಿಭಾಗಗಳಾಗಿ ವಿಂಗಡಿಸಿ ನೀರು ಪೂರೈಸಲಾಗುತ್ತಿದೆ. ಮೇ 9ರಿಂದ ನಲ್ಲಿಗಳಲ್ಲಿ ನೀರು ಬರುತ್ತಿದ್ದು, ಪ್ರತಿ ವಾರ್ಡ್‌ನಲ್ಲಿ 6 ದಿನಕ್ಕೊಮ್ಮೆ ನೀರು ಸಿಗುತ್ತಿದೆ.

ನಲ್ಲಿಗಳಲ್ಲಿ ನೀರಿನ ಒತ್ತಡ ಕಡಿಮೆಯಾಗಿರುವ ಕಾರಣದಿಂದ ಎತ್ತರದ ಬಡಾವಣೆಗಳಿಗೆ ನೀರು ತಲುಪುತ್ತಿಲ್ಲ. ಅಂತಹ ಕಡೆಗಳಿಗೆ ನಗರಸಭೆಯಿಂದ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ.

ಡ್ರೆಜ್ಜಿಂಗ್ ಮೂಲಕ ಸಂಗ್ರಹಿಸಲಾಗುತ್ತಿರುವ ನೀರು ಕೆಲವೇ ದಿನಗಳಲ್ಲಿ ಖಾಲಿಯಾಗುವ ಆತಂಕ ಎದುರಾಗಿದೆ. ಮುಂದೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅವಧಿಗೂ ಮುನ್ನ ಮುಂಗಾರು ಪ್ರವೇಶಿಸಿದರೆ ಕುಡಿಯವ ನೀರಿನ ಸಮಸ್ಯೆ ಪರಿಹಾರವಾಗಬಹುದು ಎನ್ನುತ್ತಾರೆ ಅಧಿಕಾರಿಗಳು.

ನೀರಿನ ಒರತೆ ಕ್ಷೀಣ: ನಗರದಲ್ಲಿ ಟ್ಯಾಂಕರ್‌ಗಳು ಲಭ್ಯವಿದ್ದರೂ ನೀರಿನ ಒರತೆಗಳು ಸಿಗುತ್ತಿಲ್ಲ. ಖಾಸಗಿ ಹಾಗೂ ಸರ್ಕಾರಿ ಬಾವಿಗಳಲ್ಲಿರುವ ನೀರು ಪಾತಾಳ ಕಂಡಿದೆ. ಹಲವೆಡೆ ಬಾವಿಗಳಲ್ಲಿ ನೀರಿದ್ದರೂ ಕುಡಿಯಲು ಯೋಗ್ಯವಾಗಿಲ್ಲ. ಸದ್ಯ ಕೊಳವೆ ಬಾವಿಗಳು ಹಾಗೂ ನಗರದ ಹೊರವಲಯಗಳ ಕಲ್ಲು ಕ್ವಾರಿ ಹಾಗೂ ಹಳ್ಳಗಳಲ್ಲಿ ಸಂಗ್ರಹವಾಗಿರುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸಲಾಗುತ್ತದೆ.

ಹೋಟೆಲ್‌ ಉದ್ಯಮಕ್ಕೆ ಹೊಡೆತ: ನೀರಿನ ಸಮಸ್ಯೆ ಗಂಭೀರವಾಗಿರುವ ಕಾರಣದಿಂದ ಹೋಟೆಲ್‌ ಉದ್ಯಮಕ್ಕೆ ಪೆಟ್ಟುಬಿದ್ದಿದೆ. ದುಬಾರಿ ಹಣ ಕೊಟ್ಟರೂ ಟ್ಯಾಂಕರ್ ನೀರು ಸಿಗದಿರುವುದು ಮಾಲೀಕರನ್ನು ಚಿಂತೆಗೀಡುಮಾಡಿದೆ. ‌

ಆಸ್ಪತ್ರೆಗಳಿಗೂ ಸಮಸ್ಯೆ:

ನಗರದಲ್ಲಿ ಖಾಸಗಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಿದ್ದು, ನೀರಿನ ಸಮಸ್ಯೆಯಿಂದ ನಲುಗುತ್ತಿವೆ. ಬಹುತೇಕ ಆಸ್ಪತ್ರೆಗಳು ಟ್ಯಾಂಕರ್ ನೀರನ್ನೇ ಅವಲಂಬಿಸಿದ್ದು, ಅಗತ್ಯ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. 

ಪ್ರವಾಸಿಗರಿಗೂ ತೊಂದರೆ: ಬೇಸಗೆ ರಜೆಯಾಗಿರುವುದರಿಂದ ಉಡುಪಿಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಅವರಿಗೂ ನೀರಿನ ಬಿಸಿ ತಟ್ಟಿದೆ. ವಸತಿ ನಿಲಯಗಳಲ್ಲಿ ಅಗತ್ಯ ಪ್ರಮಾಣದ ನೀರು ಲಭ್ಯವಾಗುತ್ತಿಲ್ಲ. ಸಾರ್ವಜನಿಕ ಶೌಚಾಲಯಗಳಲ್ಲೂ ನೀರಿನ ಸಮಸ್ಯೆ ಎದುರಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು