ಬುಧವಾರ, ಸೆಪ್ಟೆಂಬರ್ 29, 2021
20 °C
ಪರಸ್ಪರರ ಮೇಲೆ ಕೈತೋರಿಸಿದ ಬಿಜೆಪಿ, ಟಿಎಂಸಿ: ದೆಹಲಿ, ಕೋಲ್ಕತ್ತದಲ್ಲಿ ಶಾ, ಮಮತಾ ಪ್ರತಿಭಟನೆ

ವಿದ್ಯಾಸಾಗರರ ಪುತ್ಥಳಿ ಒಡೆದದ್ದು ಯಾರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋಲ್ಕತ್ತದಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆ ಹಾಗೂ ಈಶ್ವರಚಂದ್ರ ವಿದ್ಯಾಸಾಗರರ ಪುತ್ಥಳಿ ಧ್ವಂಸ ಘಟನೆ ಕುರಿತಂತೆ ಬಿಜೆಪಿ ಹಾಗೂ ಟಿಎಂಸಿ ಪರಸ್ಪರರ ಮೇಲೆ ಆರೋಪ– ಪ್ರತ್ಯಾರೋಪ ಮಾಡಲು ಆರಂಭಿಸಿವೆ.

‘ಬಿಜೆಪಿಯ ರೋಡ್‌ ಷೋ ಮೇಲೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಕಾರ್ಯಕರ್ತರೇ ಕಲ್ಲು ತೂರಾಟ ನಡೆಸಿದ್ದರು ಮತ್ತು ಪ್ರತಿಮೆ ಧ್ವಂಸಕ್ಕೂ ಅವರೇ ಕಾರಣ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಆರೋಪಿಸಿದ್ದಾರೆ. ಆದರೆ, ‘ಬಿಜೆಪಿಯವರು ಹೊರಗಿನಿಂದ ಜನರನ್ನು ಕರೆತಂದು ಗಲಭೆ ಮಾಡಿಸಿದ್ದಾರೆ’ ಎಂದು ಟಿಎಂಸಿ ಆರೋಪಿಸಿದೆ. ಘಟನೆ ಕುರಿತ ವಿಡಿಯೊ ಒಂದನ್ನು ಬಿಡುಗಡೆ ಮಾಡಿದೆ.

ಮಾಧ್ಯಮಗೋಷ್ಠಿಯಲ್ಲಿ ಟಿಎಂಸಿ ವಿರುದ್ಧ ಆರೋಪ ಮಾಡಿದ ಅಮಿತ್‌ ಶಾ, ‘ಗಲಭೆಯ ಹಿಂದೆ ವ್ಯವಸ್ಥಿತ ಸಂಚು ಇದೆ. ಮತದಾರರ ಸಹಾನುಭೂತಿ ಪಡೆಯಲು ಅವರು ಸಮಾಜ ಸುಧಾರಕ ಈಶ್ವರಚಂದ್ರರ ಪುತ್ಥಳಿಯನ್ನು ಧ್ವಂಸ ಮಾಡಿದ್ದಾರೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕೊನೆಯ ದಿನಗಳನ್ನು ಎಣಿಸುತ್ತಿದೆ. ಮಮತಾ ಅವರ ಆಡಳಿತವನ್ನು ಜನರು ಶೀಘ್ರದಲ್ಲೇ ಕೊನೆಗೊಳಿಸಲಿದ್ದಾರೆ’  ಎಂದರು.

ಚುನಾವಣಾ ಆಯೋಗದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿ, ‘ಟಿಎಂಸಿ ಕಾರ್ಯಕರ್ತರು ನಡೆಸಿದ ಹಿಂಸಾಚಾರಗಳಿಗೆ ಆಯೋಗವು ಮೂಕ ಪ್ರೇಕ್ಷಕನಾಗಿದೆ ಎಂದಿದ್ದಾರೆ.

‘ಪುತ್ಥಳಿ ಧ್ವಂಸ ಘಟನೆಯನ್ನು ‘ಬಂಗಾಳಿ ಅಸ್ತಿತ್ವದ ಮೇಲೆ ನಡೆಸಿದ ಹಲ್ಲೆ’ ಎಂದು ಬಿಂಬಿಸಲು ಟಿಎಂಸಿ ಯತ್ನಿಸಿದೆ. ಬಿಜೆಪಿಯು ಸ್ಥಳೀಯರ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಭಾವನೆಯನ್ನು ಮೂಡಿಸುವ ಪ್ರಯತ್ನವನ್ನು ಟಿಎಂಸಿ ಮಾಡುತ್ತಿದೆ. ನಾನು ರಾಷ್ಟ್ರದಾದ್ಯಂತ ಸಂಚರಿಸಿ ಚುನಾವಣಾ ಪ್ರಚಾರ ಮಾಡಿದ್ದೇನೆ. ಪಶ್ಚಿಮ ಬಂಗಾಳ ಬಿಟ್ಟು ಬೇರೆಲ್ಲೂ ಗಲಭೆ ನಡೆಯಲಿಲ್ಲ. ಸಿಆರ್‌ಪಿಎಫ್‌ ಯೋಧರು ಸ್ಥಳದಲ್ಲಿ ಇದ್ದ ಕಾರಣ ನಾನು ಅಪಾಯದಿಂದ ಪಾರಾದೆ’ ಎಂದರು.

ಘಟನಾ ಸ್ಥಳದ ಕೆಲವು ಭಾವಚಿತ್ರಗಳನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರದರ್ಶಿಸಿದ ಶಾ, ‘ಬಿಜೆಪಿ ಕಾರ್ಯಕರ್ತರು ವಿದ್ಯಾಸಾಗರ ಕಾಲೇಜಿನ ಗೇಟ್‌ನ ಹೊರಗಿದ್ದರು. ಘಟನೆಯ ಸಂದರ್ಭದಲ್ಲಿ ಗೇಟನ್ನು ಮುಚ್ಚಲಾಗಿತ್ತು. ಟಿಎಂಸಿ ಕಾರ್ಯಕರ್ತರು ಮಾತ್ರ ಒಳಗಿದ್ದರು. ವಿದ್ಯಾಸಾಗರರ ಪುತ್ಥಳಿಯು ಬೀಗ ಹಾಕಿದ್ದ ಕೊಠಡಿಯೊಂದರ ಒಳಗಿತ್ತು. ಆ ಕೊಠಡಿಯ ಬೀಗ ತೆಗೆದವರು ಯಾರು ಎಂದು ಶಾ ಪ್ರಶ್ನಿಸಿದರು.

ಘಟನೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದನ್ನು ಉಲ್ಲೇಖಿಸಿದ ಶಾ, ‘ಇಂಥ ಎಫ್‌ಐಆರ್‌ಗಳಿಗೆ ಬಿಜೆಪಿ ಹೆದರುವುದಿಲ್ಲ ಎಂಬುದು ದೀದಿಗೆ ಗೊತ್ತಿಲ್ಲವೇ’ ಎಂದು ಪ್ರಶ್ನಿಸಿದರು.

ಪ್ರತಿಭಟನೆ: ಮಂಗಳವಾರ ನಡೆದ ಗಲಭೆಯನ್ನು ಖಂಡಿಸಿ ಬಿಜೆಪಿ ಮುಖಂಡರು ಬುಧವಾರ ದೆಹಲಿಯ ಜಂತರ್‌ಮಂತರ್‌ನಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಜಿತೇಂದ್ರ ಸಿಂಗ್‌, ವಿಜಯ್‌ ಗೋಯಲ್‌ ಹಾಗೂ ಹರ್ಷವರ್ಧನ್‌ ಅವರು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೆಲವು ಕಾರ್ಯಕರ್ತರು ‘ಬಂಗಾಳವನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ಉಳಿಸಿ’ ಎಂಬ ಫಲಕಗಳನ್ನು ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

‘ಮಮತಾ ಬ್ಯಾನರ್ಜಿ ಅವರು ಪ್ರಜಾಪ್ರಭುತ್ವದ ಹತ್ಯೆ ಮಾಡುತ್ತಿದ್ದಾರೆ. ಹಿಂದೆ ಕಮ್ಯುನಿಸ್ಟರನ್ನು ಬೆಂಬಲಿಸುತ್ತಿದ್ದ ಶಕ್ತಿಗಳು ಇಂದು ಮಮತಾ ಬೆಂಬಲಕ್ಕೆ ನಿಂತಿವೆ. ಅವರು ಇಂಥ ಕೃತ್ಯಗಳನ್ನು ನಡೆಸುತ್ತಲೇ ಇದ್ದರೆ ಹೆಚ್ಚು ಹೆಚ್ಚು ಜನರು ಬಿಜೆಪಿಯನ್ನು ಬೆಂಬಲಿಸಲು ಆರಂಭಿಸುತ್ತಾರೆ’ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಟಿಎಂಸಿ ಪ್ರತಿಭಟನೆ: ಘಟನೆಯನ್ನು ಖಂಡಿಸಿ ಕೋಲ್ಕತ್ತದಲ್ಲಿ ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಟಿಎಂಸಿ ಅಧ್ಯಕ್ಷೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಅಮಿತ್‌ ಶಾ ಅವರು ತಮ್ಮನ್ನು ತಾವು ಏನೆಂದು ತಿಳಿದುಕೊಂಡಿದ್ದಾರೆ? ಅವರು ಎಲ್ಲಕ್ಕಿಂತ ಮೇಲಿನ ವ್ಯಕ್ತಿಯೇ? ಅವರು ದೇವರೇ? ಅವರ ವಿರುದ್ಧ ಯಾರೂ ಪ್ರತಿಭಟನೆ ನಡೆಸುವುದಿಲ್ಲ ಎಂದು ಅವರು ಭಾವಿಸಿದ್ದಾರೆಯೇ?’ ಎಂದು ಮಮತಾ ಕಿಡಿ ಕಾರಿದರು.

ವಿಡಿಯೊ ಬಿಡುಗಡೆ

‘ಬಿಜೆಪಿಯ ಗೂಂಡಾಗಳೇ ವಿದ್ಯಾಸಾಗರರ ಪುತ್ಥಳಿಯನ್ನು ಧ್ವಂಸ ಮಾಡಿದ್ದಾರೆ’ ಎಂದು ಆರೋಪಿಸಿರುವ ಟಿಎಂಸಿಯು ಆ ಬಗ್ಗೆ ಒಂದು ವಿಡಿಯೊವನ್ನು ಬಿಡುಗಡೆ ಮಾಡಿದೆ. ‘ಈ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು’ ಎಂದೂ ಪಕ್ಷ ತಿಳಿಸಿದೆ.

ದೆಹಲಿಯಲ್ಲಿ ಮಧ್ಯಮಗೋಷ್ಠಿ ನಡೆಸಿದ ಟಿಎಂಸಿ ವಕ್ತಾರ ಡೆರೆಕ್‌ ಒ’ ಬ್ರಯಾನ್‌, ‘ನಿನ್ನೆಯ ಘಟನೆಯು ಪಶ್ಚಿಮ ಬಂಗಾಳದ ಜನರಲ್ಲಿ ತೀವ್ರ ಅಸಮಾಧಾನ, ಆಕ್ರೋಶ ಉಂಟುಮಾಡಿದೆ. ಬಂಗಾಳದ ಘನತೆಗೆ ಈ ಘಟನೆ ಧಕ್ಕೆ ಉಂಟುಮಾಡಿದೆ. ಪುತ್ಥಳಿಯನ್ನು ಬಿಜೆಪಿಯವರೇ ಧ್ವಂಸ ಮಾಡಿದ್ದಾರೆ ಎಂಬುದನ್ನು ಈ ವಿಡಿಯೊ ಸಾಬೀತುಪಡಿಸುತ್ತದೆ. ಜೊತೆಗೆ, ಅಮಿತ್ ಶಾ ಒಬ್ಬ ಸುಳ್ಳುಗಾರ ಎಂಬುದನ್ನೂ ಇದು ಸ್ಪಷ್ಟ ಪಡಿಸುತ್ತದೆ’ ಎಂದರು.

‘ಅಮಿತ್‌ ಶಾ ಅವರ ರೋಡ್‌ ಷೋದಲ್ಲಿ ಪಾಲ್ಗೊಳ್ಳುವವರು ಕಬ್ಬಿಣದ ರಾಡುಗಳು ಹಾಗೂ ಆಯುಧಗಳೊಂದಿಗೆ ಬನ್ನಿ’ ಎಂದು ಬಿಜೆಪಿ ಕಾರ್ಯಕರ್ತರು ವಾಟ್ಸ್‌ ಆ್ಯಪ್‌ ಮೂಲಕ ನೀಡಿದ್ದ ಸಂದೇಶದ ತುಣುಕನ್ನೂ ಡೆರೆಕ್‌ ಅವರು ಪ್ರದರ್ಶಿಸಿದರು.

‘ಪುತ್ಥಳಿಯನ್ನು ಧ್ವಂಸಗೊಳಿಸಿದ ನಂತರ ಬಿಜೆಪಿ ಕಾರ್ಯಕರ್ತರು ‘ವಿದ್ಯಾಸಾಗರ್‌ ಫಿನಿಷ್ಡ್‌, ವೇರ್‌ ಈಸ್‌ ದ ಜೋಶ್‌’ ಎಂಬ ಘೋಷಣೆ ಕೂಗಿದ್ದರು. ಅದರ ಆಡಿಯೊ ಸಂಗ್ರಹಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ’ ಎಂದು ಡೆರೆಕ್‌ ಹೇಳಿದ್ದಾರೆ.

ವಿದ್ಯಾಸಾಗರರ ಚಿತ್ರ

ಮಮತಾ ಬ್ಯಾನರ್ಜಿ ಸೇರಿದಂತೆ ಟಿಎಂಸಿಯ ಮುಖಂಡರೆಲ್ಲರೂ ತಮ್ಮ ಟ್ವಿಟರ್‌, ಫೇಸ್‌ಬುಕ್‌ ಖಾತೆಗಳಲ್ಲಿ  ವಿದ್ಯಾಸಾಗರರ ಚಿತ್ರವನ್ನು ಹಾಕುವ ಮೂಲಕ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಎಂಸಿಯ ಅಧಿಕೃತ ಫೇಸ್‌ಬುಕ್‌ ಮತ್ತು ಟ್ವಿಟರ್‌ ಖಾತೆಗಳಲ್ಲೂ ವಿದ್ಯಾಸಾಗರರ ಚಿತ್ರವನ್ನು ಹಾಕಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು