ಮಂಗಳವಾರ, ಸೆಪ್ಟೆಂಬರ್ 21, 2021
26 °C
ಸ್ಪಷ್ಟವಾಗಿಲ್ಲ ಮಾಯಾವತಿ ನಡೆ

ಕಾಂಗ್ರೆಸ್‌ ಬೆಂಬಲಿಸಲು ಅಖಿಲೇಶ್‌ ಸಿದ್ಧ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ‘ಸರ್ಕಾರ ರಚಿಸಲು ಎನ್‌ಡಿಎಗೆ ಸಂಖ್ಯಾಬಲ ಕಡಿಮೆಯಾದರೆ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಜಾತ್ಯತೀತ ಪಕ್ಷಗಳ ಒಕ್ಕೂಟಕ್ಕೆ ಬೆಂಬಲ ನೀಡಲು ಸಿದ್ಧ’ ಎಂದು ಎಸ್‌ಪಿ ಮುಖಂಡ ಅಖಿಲೇಶ್‌ ಯಾದವ್‌ ಅವರು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರಿಗೆ ಭರವಸೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿಯೇತರ ಪಕ್ಷಗಳ ಮೈತ್ರಿಕೂಟವೊಂದನ್ನು ರಚಿಸುವ ನಿಟ್ಟಿನಲ್ಲಿ ಚಂದ್ರಬಾಬು ನಾಯ್ಡು ಅವರು ವಿವಿಧ ಪಕ್ಷಗಳ ರಾಜಕೀಯ ಮುಖಂಡರನ್ನು ಭೇಟಿಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಶನಿವಾರ ಸಂಜೆ ಅವರು ಲಖನೌಗೆ ತೆರಳಿ ಅಖಿಲೇಶ್‌ ಹಾಗೂ ಮಾಯಾವತಿ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದ್ದಾರೆ.

ಆದರೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಕರೆದಿರುವ ಬಿಜೆಪಿಯೇತರ ಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲು ಅಖಿಲೇಶ್‌ ಮತ್ತು ಮಾಯಾವತಿ ಅವರು ಒಪ್ಪಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯಾದರೂ ಅದರ ನೇತೃತ್ವವನ್ನು ಕಾಂಗ್ರೆಸ್‌ಗೆ ನೀಡಲು ಮಾಯಾವತಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮಾಯಾವತಿ ಅವರು ಅನೇಕ ಬಾರಿ ಕಾಂಗ್ರೆಸ್‌ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಆದರೆ ಕಾಂಗ್ರೆಸ್‌ಗೆ ಬೆಂಬಲ ನೀಡಲು ಅಖಿಲೇಶ್‌ ಅವರು ಆಕ್ಷೇಪ ವ್ಯಕ್ತಪಡಿಸಲಾರರು ಎಂದು ಮುಲಗಳು ತಿಳಿಸಿವೆ.

ನಾಯ್ಡು ಅವರ ವಿರೋಧಿ, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಅವರು ಕೆಲವು ದಿನಗಳ ಹಿಂದೆಯೇ ಬಿಜೆಪಿ– ಕಾಂಗ್ರೆಸ್‌ ನಿಂದ ಸಮಾನ ಅಂತರ ಕಾಯ್ದುಕೊಳ್ಳುವ ಸಂಯುಕ್ತ ರಂಗವೊಂದನ್ನು ಆರಂಭಿಸುವ ಪ್ರಯತ್ನ ಆರಂಭಿಸಿದ್ದರು. ದಕ್ಷಿಣ ಭಾರತದ ಕೆಲವು ನಾಯಕರನ್ನು ಅವರು ಭೇಟಿಮಾಡಿ ಮಾತುಕತೆ ನಡೆಸಿದ್ದರು. ಆದರೆ ಅವರ ಮಾತುಕತೆ ಅಂಥ ಫಲಕಾರಿಯಾಗಿರಲಿಲ್ಲ.

ಕಾಂಗ್ರೆಸ್‌ ನೇತೃತ್ವದ ಒಕ್ಕೂಟದಲ್ಲಿ ಟಿಆರ್‌ಎಸ್‌ ಅನ್ನು ಸೇರಿಸಿಕೊಳ್ಳಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಚಂದ್ರಬಾಬು ನಾಯ್ಡು ಅವರು ‘ಟಿಆರ್‌ಎಸ್‌ ಅಷ್ಟೇ ಅಲ್ಲ ಬಿಜೆಪಿ ವಿರೋಧಿ ಎಲ್ಲ ಪಕ್ಷಗಳಿಗೂ ಬಾಗಿಲು ತೆರೆದಿದೆ’ ಎಂದಿದ್ದರು.

ಕೇಂದ್ರದಲ್ಲಿ ಸರ್ಕಾರ ರಚಿಸುವ ನಿಟ್ಟಿನಲ್ಲಿ ವಿರೋಧಪಕ್ಷಗಳು ಈಗಾಗಲೇ ರಾಜಕೀಯ ಚಟುವಟಿಕೆಗಳನ್ನು ಬಿರುಸುಗೊಳಿಸಿವೆ. ಅಂತಿಮ ಹಂತದ ಚುನಾವಣೆ ಭಾನುವಾರ ಮುಗಿಯಲಿದ್ದು, ಮೇ 23ರಂದು ಮತ ಎಣಿಕೆ ನಡೆಯಲಿವೆ. ಈಗಾಗಲೇ ನಾಯಕರು ಭೇಟಿ
ಗಳನ್ನು ಆರಂಭಿಸಿದ್ದು, ಫಲಿತಾಂಶ ಬರುವ ಮೊದಲು ರಾಜಕೀಯ ಚಟುವಟಿಕೆಗಳು ಇನ್ನಷ್ಟು ಬಿರುಸು
ಗೊಳ್ಳುವ ಸಾಧ್ಯತೆ ಗೋಚರಿಸುತ್ತಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು