ಭಾನುವಾರ, ಸೆಪ್ಟೆಂಬರ್ 20, 2020
23 °C
ಬಿಬಿಎಂಪಿ ಅಧಿಕಾರಿಗಳ ಹೊಣೆಗೇಡಿತನದಿಂದ, ಮಳೆ ಎನ್ನುವುದು ಬೆಂಗಳೂರಿಗರಿಗೆ ದುಃಸ್ವಪ್ನವಾಗಿದೆ

ಮಳೆ–ಗಾಳಿಗೆ ರಾಜಧಾನಿ ತತ್ತರಪಾಲಿಕೆ ನೀಡಬೇಕಿದೆ ಉತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಸಹನೀಯ ಧಗೆಯಿಂದ ತತ್ತರಿಸಿರುವ ಬೆಂಗಳೂರಿನ ಜನರಿಗೆ ಕಳೆದೊಂದು ವಾರದಿಂದ ಬೀಳುತ್ತಿರುವ ಮಳೆ ತುಸುವಾದರೂ ನೆಮ್ಮದಿ ತರಬೇಕಾಗಿತ್ತು. ಆದರೆ, ಮಳೆ ಎಂದರೆ ರಾಜಧಾನಿಯ ಜನ ಬೆಚ್ಚಿಬೀಳುವಂತಾಗಿದೆ. ಅರ್ಧ ತಾಸು ಮಳೆ ಬಿದ್ದರೂ ಮಹಾನಗರದ ರಸ್ತೆಗಳು ಹೊಳೆಯ ರೂಪ ಪಡೆದುಕೊಳ್ಳತೊಡಗುತ್ತವೆ. ಟ್ರಾಫಿಕ್‌ ಚಕ್ರವ್ಯೂಹ ರೂ‍ಪುಗೊಂಡು, ಪ್ರಯಾಣಿಕರು ಗಂಟೆಗಟ್ಟಲೆ ರಸ್ತೆಯಲ್ಲಿ ಇರಬೇಕಾಗುತ್ತದೆ.

ಇಷ್ಟು ಸಾಲದು ಎನ್ನುವಂತೆ, ಉರುಳುವ ಮರಗಳು ಹಾಗೂ ವಿದ್ಯುತ್‌ ಕಂಬಗಳು ಜೀವಕಂಟಕಗಳಂತೆ ಕಾಣಿಸುತ್ತಿವೆ. ವಿದ್ಯುತ್‌ ಸ್ಥಗಿತಗೊಂಡು ಕತ್ತಲೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ. ಕಳೆದ ವಾರಾಂತ್ಯದಲ್ಲಿ ಮಳೆಯಿಂದಾದ ಅನಾಹುತಗಳನ್ನು ನೋಡಿ. ಭಾನುವಾರ ರಾತ್ರಿ ಸುರಿದ ಮಳೆಗೆ 140 ವಿದ್ಯುತ್‌ ಕಂಬಗಳು, 24 ಮರಗಳು ನೆಲಕಚ್ಚಿವೆ. ಶನಿವಾರದ ಮಳೆಗೆ 58 ಮರಗಳು ಉರುಳಿವೆ. ಅಷ್ಟು ಮಾತ್ರವಲ್ಲ, ಮನೆಯ ಮೇಲೆ ಬಿದ್ದಿದ್ದ ತೆಂಗಿನಗರಿಯನ್ನು ತೆಗೆಯಲು ಹೋಗಿ ಸತೀಶ್‌ ಎನ್ನುವ ಕಾರ್ಮಿಕ ವಿದ್ಯುತ್‌ ಆಘಾತಕ್ಕೆ ಬಲಿಯಾಗಿದ್ದಾರೆ.

ಕೆಲವು ಪಾರ್ಕಿಂಗ್‌ ಸ್ಥಳಗಳಲ್ಲಿ ಕೊಂಬೆರೆಂಬೆಗಳು ಬಿದ್ದು ಆಟೊ, ಕಾರುಗಳು ಜಖಂಗೊಂಡಿವೆ. ಸ್ವಲ್ಪದಿನಗಳ ಹಿಂದೆ ನಾಗವಾರದ ಹೊರವರ್ತುಲ ರಸ್ತೆಯಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬ ಸಾವಿಗೀಡಾದುದು ಹಾಗೂ ಗಾಯತ್ರಿನಗರದಲ್ಲಿ ಯುವತಿಯೊಬ್ಬರ ಮೇಲೆ ಮರ ಬಿದ್ದು ಆಕೆಯ ತಲೆ–ಬೆನ್ನುಹುರಿಗೆ ಗಾಯವಾದ ಪ್ರಕರಣಗಳನ್ನೂ ನೆನಪಿಸಿಕೊಳ್ಳಬಹುದು. ಇವೆಲ್ಲ ಘಟನೆಗಳ ಹಿನ್ನೆಲೆಯಲ್ಲಿ, ರಾಜಧಾನಿಯ ನಾಗರಿಕರಿಗೆ ಸುರಿಯುವ ಮಳೆ ಮೃತ್ಯುರೂಪಿಯಾಗಿ ಕಾಣಿಸಿದರೆ ಆಶ್ಚರ್ಯವೇನಿಲ್ಲ. ಮುಂಗಾರುಪೂರ್ವ ಮಳೆಯಿಂದಲೇ ಇಷ್ಟೆಲ್ಲ ಅನಾಹುತ ಸಂಭವಿಸಿರುವಾಗ, ಮುಂಗಾರಿನ ಉತ್ಕರ್ಷದ ದಿನಗಳಲ್ಲಿ ರಾಜಧಾನಿಯ ‍ಪಾಡನ್ನು ಕಲ್ಪಿಸಿಕೊಳ್ಳುವುದೂ ಕಷ್ಟ.

ನಾಗರಿಕರಿಗೆ ಸಂತಸ ತರಬೇಕಿದ್ದ ಮಳೆ ಆತಂಕ ಹುಟ್ಟಿಸುತ್ತಿರುವುದಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳೇ ಕಾರಣಕರ್ತರೆನ್ನುವುದು ಬಹಿರಂಗ ಗುಟ್ಟು. ಪ್ರತಿ ಮಳೆಗಾಲದಲ್ಲೂ ಮಳೆ–ಗಾಳಿಯಿಂದಾಗಿ ಬೆಂಗಳೂರಿನಲ್ಲಿ ಜೀವಹಾನಿ, ಆಸ್ತಿಪಾಸ್ತಿ ನಷ್ಟ ಸಂಭವಿಸುತ್ತದೆ. ಅಪಾಯ ಸಂಭವಿಸಿದಾಗಲೆಲ್ಲ ಪಾಲಿಕೆಯ ಅಧಿಕಾರಿಗಳು ಯುದ್ಧಕಾಲದ ಶಸ್ತ್ರಾಭ್ಯಾಸದ ವೀರರಂತೆ ಕಾಣಿಸುತ್ತಾರೆ. ಉಳಿದ ದಿನಗಳಲ್ಲಿ ಅವರದು ಕುಂಭಕರ್ಣ ನಿದ್ದೆ ಹಾಗೂ ಉಡಾಫೆಯ ಮಾತುಗಾರಿಕೆ. ಈ ಹೊಣೆಗೇಡಿತನದಿಂದಾಗಿಯೇ ಮಳೆ ಎನ್ನುವುದು ಬೆಂಗಳೂರಿಗರಿಗೆ ದುಃಸ್ವಪ್ನವಾಗಿರುವುದು. ಎರಡು ವರ್ಷಗಳ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಅವರು, ‘ಬೆಂಗಳೂರಿನ ನಾಗರಿಕರಿಗೆ ಮಳೆಯಿಂದ ಆಗುತ್ತಿರುವ ಅನಾಹುತದಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾಲು ಇದೆ.

ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಬೆಂಗಳೂರಿನ ಅಭಿವೃದ್ಧಿಗೆ ಸಹಸ್ರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ, ಆದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಲೋಪಕ್ಕೆ ಕಾರಣರಾದ ಒಬ್ಬ ಅಧಿಕಾರಿಯ ಮೇಲೂ ಕ್ರಮ ಕೈಗೊಂಡಿಲ್ಲವೇಕೆ’ ಎಂದು ಪ್ರಶ್ನಿಸಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ. ಲೋಪಕ್ಕೆ ಕಾರಣರಾದ ಎಷ್ಟು ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದೀರಿ ಎನ್ನುವ ಪ್ರಶ್ನೆಯನ್ನು ಈಗ ಮುಖ್ಯಮಂತ್ರಿಯವರಿಗೇ ಕೇಳಬೇಕಾಗಿದೆ. ಮಳೆಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪಾಲಿಕೆ ಆಯುಕ್ತರು ಹಾಗೂ ಮೇಯರ್‌ ತುರ್ತು ಪರಿಹಾರ ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಆದರೆ, ಇವೆಲ್ಲ ಕಾಮಗಾರಿಗಳು ಮಳೆಯ ಜೊತೆಗೇ ನಡೆಯುತ್ತವೆ ಎನ್ನುವುದು ವ್ಯವಸ್ಥೆಯ ಅದಕ್ಷತೆಗೆ ಕನ್ನಡಿಯಂತಿದೆ.

ಮಳೆ ಸುರಿದು ಮೋರಿ–ರಸ್ತೆಗಳು ಏಕವಾದಾಗ ರಾಜಕಾಲುವೆಯ ಹೂಳನ್ನು ತೆಗೆಯಲು ಪ್ರಯತ್ನಿಸಲಾಗುತ್ತದೆ. ನೀರು ನಿಂತ ಗುಂಡಿಗಳಿಗೆ ಕಲ್ಲು–ಮಣ್ಣು ಸುರಿಯಲಾಗುತ್ತದೆ. ಇದೇ ಕೆಲಸವನ್ನು ಮಳೆಗೆ ಮುನ್ನ ಮಾಡುವುದಕ್ಕೆ ಏನು ತೊಂದರೆ? ವಿದ್ಯುತ್‌ ತಂತಿಗಳನ್ನು ಸ್ಪರ್ಶಿಸುವ ಮರದ ಕೊಂಬೆಗಳನ್ನು ಒಣಹವೆಯ ದಿನಗಳಲ್ಲಿ ಏಕೆ ಕತ್ತರಿಸುವುದಿಲ್ಲ? ಮಳೆಯು ಅನಾಹುತಕಾರಿಯಾಗದಂತೆ ನಗರವನ್ನು ನೋಡಿಕೊಳ್ಳುವಲ್ಲಿ ರಾಜಕೀಯ ಮುಖಂಡರು ಪಕ್ಷಭೇದ ಮರೆತು ಶ್ರಮಿಸಬೇಕಾಗಿದೆ. ಕರ್ತವ್ಯಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಸ್ವತಃ ಮುಖ್ಯಮಂತ್ರಿ ಮಾಡಬೇಕಾಗಿರುವುದು ಸದ್ಯದ ಜರೂರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು