ಶನಿವಾರ, ಸೆಪ್ಟೆಂಬರ್ 19, 2020
22 °C
ರಾಜ್ಯ ಸರ್ಕಾರವು ಮಳೆ ಬರಿಸಲು ಒಂದೆಡೆ ವೈಜ್ಞಾನಿಕ ತಂತ್ರಜ್ಞಾನಕ್ಕೆ ಮೊರೆ, ಮತ್ತೊಂದೆಡೆ ಪೂಜೆ, ಹೋಮಕ್ಕೆ ಶರಣಾಗಿರುವುದು ವಿಪರ್ಯಾಸ

ಕೆಸರು ವಿಜ್ಞಾನದ್ದು, ಮೊಸರು ಜಪದ್ದು!

ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ Updated:

ಅಕ್ಷರ ಗಾತ್ರ : | |

Prajavani

ಒಂದು ಸತ್ಯ ಸೂತ್ರವಿದೆ: ಭೂಮಿಯ ಫಲವತ್ತತೆ, ಮಳೆ, ಬೀಜ ಎಲ್ಲವೂ ಸಮಾನವಾಗಿರುವ ಷರತ್ತಿನೊಂದಿಗೆ ಈ ಸೂತ್ರವನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸಿ. ರೈತನ ಪರಿಶ್ರಮ+ಪ್ರಾರ್ಥನೆ= ಸಮೃದ್ಧ ಬೆಳೆ; ರೈತನ ಪರಿಶ್ರಮ–ಪ್ರಾರ್ಥನೆ= ಸಮೃದ್ಧ ಬೆಳೆ; ಪ್ರಾರ್ಥನೆ–ರೈತನ ಶ್ರಮ= ಶೂನ್ಯ ಬೆಳೆ. ಇದನ್ನು ನಾವು ವೈಜ್ಞಾನಿಕ ಮನೋವೃತ್ತಿ ಶಿಬಿರಗಳಲ್ಲಿ ಶಾಲಾ ಮಕ್ಕಳಿಗೆ ಹೇಳಿದಾಗ ಅವರಿಗೂ ಅರ್ಥವಾಗುತ್ತದೆ, ತಾವು ಪರೀಕ್ಷೆಯಲ್ಲಿ ಪಾಸಾಗಬೇಕು ಎಂದರೆ ಪೂಜೆ, ಹರಕೆ, ಪ್ರಾರ್ಥನೆಯಲ್ಲ, ತಮ್ಮ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು. ಆದರೆ ಇಂಥ ಸರಳವಾದ ಸತ್ಯ ನಮ್ಮ ಸರ್ಕಾರಕ್ಕೆ ಗೊತ್ತಾಗದೇ ಇರುವುದು ವಿಪರ್ಯಾಸ.

ಸಕಾಲದಲ್ಲಿ ಮಳೆ ಬೀಳುವಂತೆ ಮಾಡಲು ಒಂದೆಡೆ ಮೋಡ ಬಿತ್ತನೆ ಹೆಸರಿನಲ್ಲಿ ವೈಜ್ಞಾನಿಕ ತಂತ್ರಜ್ಞಾನದ ಮೊರೆ ಹೋಗಿರುವ ರಾಜ್ಯ ಸರ್ಕಾರವು ಮತ್ತೊಂದೆಡೆ ಜಪ, ಪೂಜೆ, ಅಭಿಷೇಕ, ಹೋಮದಂಥ ಧಾರ್ಮಿಕ ವಿಧಿಗಳನ್ನು ಇದೇ 6ರಂದು ನಡೆಸಲು ಮುಂದಾಗಿದೆ (ಪ್ರ.ವಾ., ಜೂನ್ 1). ಇದು ನಾಡನ್ನು ನಡೆಸಲು ನಾವು ಆರಿಸಿರುವ ನಮ್ಮ ಪ್ರತಿನಿಧಿಗಳ ಎಡಬಿಡಂಗಿತನವನ್ನು ಬಿಂಬಿಸುತ್ತದೆ.

ನಮ್ಮಲ್ಲಿ ಒಂದು ಗಾದೆಯಿದೆ, ‘ಕೈ ಕೆಸರಾದರೆ ಬಾಯಿ ಮೊಸರು’ ಎಂದು. ಆದರೆ ಮೋಡ ಬಿತ್ತನೆ, ಹೋಮ ಹವನ ಎರಡನ್ನೂ ಮಾಡಿದಾಗ ಏನಾಗುತ್ತದೆ ಎಂದರೆ ‘ಕೈ ಕೆಸರಾಗುವುದು’ ವಿಜ್ಞಾನ–ತಂತ್ರಜ್ಞಾನದ್ದು, ‘ಬಾಯಿ ಮೊಸರು’ ಆಗುವುದು ಮಾತ್ರ ಹೋಮ ಹವನದ್ದು. ಲಕ್ಷಾಂತರ ವರ್ಷಗಳಿಂದ ಅರಿವು, ವಿಜ್ಞಾನ, ತಂತ್ರಜ್ಞಾನದಿಂದ ಆಗಿರುವ ಪ್ರತಿ ಹಂತದ ಪ್ರಗತಿಯ ಶ್ರೇಯಸ್ಸನ್ನು ಇನ್ಯಾರೋ ಪಡೆದುಕೊಳ್ಳುತ್ತಾರೆ. ಇದು ಎಲ್ಲಾ ಧರ್ಮಗಳ ದೇವರುಗಳ ಏಜೆಂಟರುಗಳಿಗೆ, ಕಂಪನಿಗಳಿಗೆ ಸಲ್ಲುವ ಮಾತು. ಶ್ರಮ ಯಾರದೋ, ಸುಖ ಯಾರದೋ ಎಂಬ ಮೋಸದ ಪದ್ಧತಿ ಇಂದು ನಿನ್ನೆಯದಲ್ಲ! ಸಂವಿಧಾನದ ಬಲದಿಂದ ಅಧಿಕಾರವನ್ನು ವಹಿಸಿಕೊಳ್ಳುವ ಜನಪ್ರತಿನಿಧಿಗಳು, ಗದ್ದುಗೆ ಏರಿದ ಕೂಡಲೇ ಸಂವಿಧಾನವನ್ನು ಸಂದಿಗೆ ಬಿಸಾಕುತ್ತಾರೆ. ಅಂಥವರಿಗೆ, ಅದರ ಭಾಗ 4ಎ, ವಿಧಿ 51ಎ(ಎಚ್)ರಲ್ಲಿ ನಾವು, ‘ವೈಜ್ಞಾನಿಕ ಮನೋವೃತ್ತಿ’ಯನ್ನು ಬೆಳೆಸಿಕೊಳ್ಳುವುದು ಪ್ರತಿ ಭಾರತೀಯ ನಾಗರಿಕರ ಕರ್ತವ್ಯವೆಂದು ಒಪ್ಪಿಕೊಂಡಿರುವುದು ಗಮನಕ್ಕೇ ಬರುವುದಿಲ್ಲ. ಹೌದು, ಸಂವಿಧಾನದ ವಿಧಿ 25 ಮತ್ತು 26ರ ಪ್ರಕಾರ, ನಮಗೆ ಬೇಕಾದ ಧರ್ಮವನ್ನು ಅವಲಂಬಿಸುವ ಸ್ವಾತಂತ್ರ್ಯವಿದೆ. ಆದರೆ ಇದನ್ನು ಮೂಲಭೂತ ಹಕ್ಕನ್ನಾಗಿ ನೀಡಿರುವುದು ನಾಗರಿಕರಿಗೆ ಮತ್ತು ಸಮುದಾಯಗಳಿಗೇ ವಿನಾ ಸರ್ಕಾರಗಳಿಗೆ ಅಲ್ಲ. ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಜನತಂತ್ರಾತ್ಮಕ ಗಣರಾಜ್ಯವಾದ ಈ ದೇಶದ ಸರ್ಕಾರಗಳು ‘ಧರ್ಮನಿರಪೇಕ್ಷ’ ಆಗಿರಬೇಕು, ವೈಜ್ಞಾನಿಕ ಮತ್ತು ಆ ಮೂಲಕವೇ ಸುಧಾರಣೆಯ ಮನೋಭಾವವನ್ನು ಆಚರಿಸಬೇಕು ಎಂದಿದೆ. ಆದರೆ ಈಗಂತೂ ನಾಗರಿಕರಿಗೆ ತಾವು ಯಾರು, ತಮ್ಮ ಹಕ್ಕು, ಅಧಿಕಾರ, ಪ್ರಭಾವ ಏನು ಎಂಬುದರ ಪ್ರಾಥಮಿಕ ಪರಿಚಯವೂ ಇಲ್ಲದ ಸ್ಥಿತಿ ಉಂಟಾಗಿ ‘...ಉಂಡವನೇ ಜಾಣ’ ಎನ್ನುವ ಪರಿಸ್ಥಿತಿ ಉಂಟಾಗಿದೆ.

ಕೊಡಚಿ ಮಹಾರುದ್ರ ಎಂಬುವರು ಬರೆದ ‘ಮಳಿಯಾಟ, ಮಕ್ಕಳಾಟ’ ಎಂಬ ಕಥೆ ಇಲ್ಲಿ ಪ್ರಸ್ತುತ ಅನ್ನಿಸುತ್ತದೆ. ನಿರಂತರ ಎರಡು ವರ್ಷ ಮಳೆ ಬಂದಿರುವುದಿಲ್ಲ. ಈ ವರ್ಷವೂ ಬರುವುದಿಲ್ಲ ಎಂದು ಊರಿನ ಮಠದ ಸ್ವಾಮಿಗಳು ಭವಿಷ್ಯ ನುಡಿದಿರುತ್ತಾರೆ. ರೈತರು ಕಂಗಾಲು. ಆದರೆ, ಆ ಊರಿನ ದಲಿತ ಮಹಿಳೆ ಮಾತಂಗಿಯ ಮನೆಯವರು, ಮಳೆ ಬಾರದೇ ಇದ್ದಾಗ ಸಗಣಿಯಲ್ಲಿ ಮಾಡಿದ ಒಂದು ‘ಬುರ್ಜಿ’ಯನ್ನು ರೊಟ್ಟಿ ಮಾಡುವ ಹಂಚಿನ ಮೇಲಿಟ್ಟುಕೊಂಡು, ಊರಿನ ಮನೆಮನೆಗೆ ಹೋಗಿ, ‘ಕಾರ ಮಳಿಯೆ ಕಪ್ಪತ್ತ ಮಳಿಯೆ’ ಎಂದು ಹಾಡಿ ಮಳೆಯನ್ನು ಬರುವಂತೆ ಬೇಡಿಕೊಳ್ಳುತ್ತಾರೆ. ಊರಿನವರು ಅವರಿಗೆ ಧಾನ್ಯವನ್ನು ದಾನ ಮಾಡುತ್ತಾರೆ. ಅದಾದ ಸ್ವಲ್ಪ ದಿನದಲ್ಲಿ ಅಲ್ಲಿ ಮಳೆಯಾಗುತ್ತದೆ ಎಂಬ ನಂಬಿಕೆ ಇರುತ್ತದೆ. ಮಠವು ಮಾತಂಗಿಯ ಮಾತನ್ನು ಧಿಕ್ಕರಿಸಿ ನಗುತ್ತದೆ. ಇದರಿಂದ ಹಟಕ್ಕೆ ಬಿದ್ದ ಮಾತಂಗಿ, ಊರ ಹೊರಗಿರುವ ಮಾರಮ್ಮನ ಹಾಳು ಗುಡಿಯಲ್ಲಿ ಮಳೆಗಾಗಿ ತಪಸ್ಸು ಮಾಡತೊಡಗುತ್ತಾಳೆ. ದಿನ ಕಳೆದ ಹಾಗೆ ಊರ ಜನ ಮಠವನ್ನು ಬಿಟ್ಟು ದಲಿತ ಮುದುಕಿ ಮಾತಂಗಿ ತಪಸ್ಸು ಮಾಡುತ್ತಿರುವ ಗುಡಿಯ ಬಳಿ ಸೇರುತ್ತಾರೆ. ಕಡೆಗೂ ಒಂದು ದಿನ ಜೋರು ಮಳೆ ಸುರಿಯುತ್ತದೆ. ಮಾತಂಗಿಯ ತಪಸ್ಸಿನಿಂದಲೇ ಮಳೆ ಬಂದಿದ್ದು ಎಂದು ನಂಬಿದ ಜನ ಆಕೆಯ ಮೆರವಣಿಗೆ ಮಾಡುತ್ತಾರೆ. ಮಾತಂಗಿ ಹದಿನೈದು ದಿನಗಳಲ್ಲಿ ಒಬ್ಬ ಪವಾಡ ದೇವತೆಯಾಗಿ ಬಿಡುತ್ತಾಳೆ. ನೋಡಿದರೆ ಆಗಿರುವುದೇ ಬೇರೆ. ಆ ಇಡೀ ಪ್ರದೇಶದಲ್ಲಿ ಮಳೆಯಾಗದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲಾಧಿಕಾರಿ ಮೋಡ ಬಿತ್ತನೆಯ ಪ್ರಯೋಗವನ್ನು ಮಾಡಿಸಿರುತ್ತಾರೆ. ಅದರ ಪರಿಣಾಮವಾಗಿ ಮಳೆ ಸುರಿದಿರುತ್ತದೆ. ಇಲ್ಲಿಯೂ ಆಗಿದ್ದೇನು? ವಿಜ್ಞಾನದ ಕೈ ಕೆಸರು, ಅಂಧವಿಶ್ವಾಸದ ಬಾಯಿ ಮೊಸರು.

ಈಗಲಾದರೂ ಸರ್ಕಾರಗಳು ವಿಜ್ಞಾನ, ತಂತ್ರಜ್ಞಾನದ ಮೇಲೆ ವಿಶ್ವಾಸವಿಡಲಿ, ಅಂಧ ವಿಶ್ವಾಸವನ್ನು ಕೈಬಿಡಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.