ಗುರುವಾರ , ಸೆಪ್ಟೆಂಬರ್ 23, 2021
22 °C
ಮುಸ್ಲಿಮರಿಂದ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ

ಸಡಗರದ ‘ಈದ್ ಉಲ್ ಫಿತ್ರ್’ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಇಸ್ಲಾಂ ಧರ್ಮದ ಕಡ್ಡಾಯ ಕರ್ಮಗಳಲ್ಲಿ ಒಂದಾದ ರಂಜಾನ್ ತಿಂಗಳ ಉಪವಾಸ ವ್ರತಾಚರಣೆಯನ್ನು ಜಿಲ್ಲೆಯಾದ್ಯಂತ ಮುಸ್ಲಿಮರು ಬುಧವಾರ ಅತ್ಯಂತ ಸಡಗರ, ಸಂಭ್ರಮ ಮತ್ತು ಶ್ರದ್ಧಾಭಕ್ತಿಯಿಂದ ಈದ್ ಉಲ್ ಫಿತ್ರ್ ಆಚರಣೆ ಮೂಲಕ ಅಂತ್ಯಗೊಳಿಸಿದರು.

ನಗರದಲ್ಲಿ ಬೆಳಿಗ್ಗೆಯಿಂದಲೇ ಶ್ವೇತವಸ್ತ್ರಧಾರಿಗಳಾಗಿ ತಮ್ಮ ಪ್ರದೇಶದ ಮಸೀದಿಗೆ ತೆರಳಿದ ಜನರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಬಿ.ಬಿ.ರಸ್ತೆಯಲ್ಲಿ ಜೂನಿಯರ್‌ ಕಾಲೇಜ್‌ ಮುಂಭಾಗದ ಮಸೀದಿಯಿಂದ ಮೆರವಣಿಗೆಯ ಮೂಲಕ ಬಜಾರ್ ರಸ್ತೆ, ಗಂಗಮ್ಮನಗುಡಿ, ಎಂ.ಜಿ.ರಸ್ತೆ ಮಾರ್ಗವಾಗಿ ಸಾಗಿ ಪ್ರಶಾಂತ್‌ನಗರದ ಈದ್ಗಾ ಮೈದಾನದಲ್ಲಿ ಕಲೆತರು.

ಬಳಿಕ ಎಲ್ಲರೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಇಮಾಮ್ ಅವರು ವಿಶೇಷ ಪ್ರವಚನ ನೀಡಿದರು. ಉಪವಾಸ ಪೂರ್ಣಗೊಳ್ಳುತ್ತಲೇ ಬಹುತೇಕ ಜನರು ಬಡಜನರಿಗೆ ಝಕಾತ್ (ದಾನ) ನೀಡುವ ಮೂಲಕ ಸಾರ್ಥಕತೆ ಅನುಭವಿಸಿದರು.

ನಗರದಲ್ಲಿ ಇಸ್ಲಾಂ ಧರ್ಮೀಯರ ಮನೆಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಮನೆ ಮಂದಿ ಎಲ್ಲರೂ ಹೊಸ ಬಟ್ಟೆ ಧರಿಸಿ ಸಂಭ್ರಮಿಸುತ್ತಿದ್ದುದು ಕಂಡುಬಂತು. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರಾದಿಯಾಗಿ ಪರಸ್ಪರ ಆಲಿಂಗನದ ಮೂಲಕ ಹಬ್ಬದ ಸಂತಸವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು.

ನೆಂಟರು, ಆತ್ಮೀಯರ ಮನೆಗೆ ತೆರಳಿ ಹಬ್ಬದ ಶುಭಾಶಯ ಹೇಳುತ್ತಿದ್ದರು. ಹಬ್ಬದ ತಹರೇವಾರಿ ತಿಂಡಿ ತಿನಿಸುಗಳ ಭೋಜನದ ಘಮಲು ಮನೆಗಳಲ್ಲಿ ಮನೆ ಮಾಡಿತ್ತು. ಹಬ್ಬದ ಆಚರಣೆಗೆ ಅಡ್ಡಿಯಾಗದಂತೆ ಪಟ್ಟಣದಲ್ಲಿ ಸೂಕ್ಷ್ಮ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಧಾರ್ಮಿಕ ಕೇಂದ್ರಗಳ ಬಳಿ ಪೊಲೀಸ್‌ ಪಹರೆ ಹಾಕಲಾಗಿತ್ತು.

ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಡಾ.ಕೆ.ಸುಧಾಕರ್‌, ಮಾಜಿ ಶಾಸಕರಾದ ಕೆ.ಪಿ. ಬಚ್ಚೇಗೌಡ, ಮುಖಂಡರಾದ ನವೀನ್‌ ಕಿರಣ್‌, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್, ನಗರಸಭೆ ಮಾಜಿ ಅಧ್ಯಕ್ಷ ಮುನಿಕೃಷ್ಣ, ರಯಾನ್ ಫೌಂಡೇಷನ್ ಅಧ್ಯಕ್ಷ ಬಿ.ಎಸ್.ರಫಿವುಲ್ಲಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಹಬ್ಬದ ಶುಭಾಶಯ ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು