ಬೆಟ್ಟದ ತಪ್ಪಲಲ್ಲಿ ಓಟಗಾರರ ಕಲರವ

ಮಂಗಳವಾರ, ಜೂನ್ 18, 2019
31 °C
‘ನಮ್ಮ ನಿಮ್ಮ ಸೈಕಲ್ ಫೌಂಡೇಶನ್’ ವತಿಯಿಂದ ‘ಯೋಗಿ ರನ್’ ಕಾರ್ಯಕ್ರಮ ಆಯೋಜನೆ

ಬೆಟ್ಟದ ತಪ್ಪಲಲ್ಲಿ ಓಟಗಾರರ ಕಲರವ

Published:
Updated:
Prajavani

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿಯಲ್ಲಿ ‘ನಮ್ಮ ನಿಮ್ಮ ಸೈಕಲ್ ಫೌಂಡೇಶನ್’, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ಭಾರತೀಯ ಪುರಾತತ್ವ ಇಲಾಖೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಭಾನುವಾರ ‘ಯೋಗಿ ರನ್’ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಂದಿ ಬೆಟ್ಟದ ಸುತ್ತಲಿರುವ ಪಾರಂಪರಿಕ ಕ್ಷೇತ್ರಗಳ ಸಂರಕ್ಷಣೆ, ಸುಂದರ ಪರಿಸರ ಮತ್ತು ಸಾಹಸ ತಾಣವಾದ ಬೆಟ್ಟವನ್ನು ಹೆಚ್ಚು ಪ್ರಚಾರ ಪಡಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ದೇಶ, ವಿದೇಶಗಳ ಸುಮಾರು 700 ಜನರು ಭಾಗವಹಿಸಿದ್ದರು.

ಬೆಳಿಗ್ಗೆ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದ ಆವರಣದಲ್ಲಿ ಯೋಗಾಭ್ಯಾಸ ಶಿಬಿರ ಆಯೋಜಿಸಲಾಗಿತ್ತು. ಬಳಿಕ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ 21, 12 ಮತ್ತು 5 ಕಿ.ಮೀ ಓಟದ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧಾಳುಗಳು ಭೋಗ ನಂದೀಶ್ವರ ದೇವಸ್ಥಾನದ ಮುಂಭಾಗದಿಂದ ಓಟ ಆರಂಭಿಸಿ, ಸುಲ್ತಾನಪೇಟೆಯಲ್ಲಿ ಹಾಯ್ದು, ಮೆಟ್ಟಿಲು ದಾರಿಯ ಮೂಲಕ ನಂದಿ ಬೆಟ್ಟವನ್ನು ಏರಿ, ಅದೇ ಮಾರ್ಗದಲ್ಲಿ ದೇವಾಲಯದ ಬಳಿ ವಾಪಾಸಾಗಿ ಓಟ ಮುಕ್ತಾಗೊಳಿಸಿದರು.

ಪುರುಷರ ವಿಭಾಗದಲ್ಲಿ 21 ಕಿ.ಮೀ ದೂರದ ಓಟದಲ್ಲಿ ಇಥಿಯೋಪಿಯಾದ ಮಿಕಿಯಾಸ್ ಯೆಮತಾ ಲೆಮ್ಲೇನು, 12 ಕಿ.ಮೀ ಓಟದಲ್ಲಿ ಇಥಿಯೋಪಿಯಾದ ಅಮಾನುಯೆಲ್ ಅಬ್ದು, 5 ಕಿ.ಮೀ ಓಟದಲ್ಲಿ ಬೆಂಗಳೂರಿನ ಚಂದನ್ ಕುಮಾರ್ ಪ್ರಥಮ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದ 21 ಕಿ.ಮೀ ಓಟದ ಸ್ಪರ್ಧೆಯಲ್ಲಿ ಬೆಂಗಳೂರಿನ ಉಪಾಸನಾ, 12 ಕಿ.ಮೀ ಓಟದಲ್ಲಿ ಇಥಿಯೋಪಿಯಾದ ಜಿನಾಶ್ವರ್ಕ್ ಯೆನೆವ್ ಮತ್ತು 5 ಕಿ.ಮೀ ಓಟದ ಸ್ಪರ್ಧೆಯಲ್ಲಿ ಬೆಂಗಳೂರಿನ ಅಮಿಶಾ ಪ್ರಥಮ ಸ್ಥಾನ ಪಡೆದರು. ಪ್ರತಿ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಅನುಕ್ರಮವಾಗಿ ₹10 ಸಾವಿರ, ₹8 ಸಾವಿರ ಮತ್ತು ₹5 ಸಾವಿರ ನಗದು ಬಹುಮಾನ, ಸ್ಮರಣಿಕೆ, ಪದಕ ಮತ್ತು ಪ್ರಮಾಣಪತ್ರ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ‘ನಮ್ಮ ನಿಮ್ಮ ಸೈಕಲ್ ಫೌಂಡೇಶನ್’ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಆರ್.ಮುರುಳಿ, ‘ಯೋಗಿ ರನ್ ಒಂದು ವಿಶೇಷ ಕಾರ್ಯಕ್ರಮ. ಇಲ್ಲಿ ಯೋಗದೊಂದಿಗೆ ಕ್ರೀಡೆಯ ಸಂಯೋಗವಿದೆ. ಸಂಸ್ಕೃತಿಯೊಡನೆ ಆಧುನಿಕತೆಯ ಸಂಗಮವಿದೆ. ನಾದ ಮತ್ತು ತಾಳದೊಂದಿಗೆ ಓಟದ ಸಮ್ಮಿಲನವಿದೆ’ ಎಂದು ಹೇಳಿದರು.

‘ನಮ್ಮ ನಾಡಿನ ಭವ್ಯತೆ ಮತ್ತು ದಿವ್ಯತೆಯನ್ನು ಜನರ ಹೃದಯ ತಲುಪಿಸಲು ಕೈಕೊಂಡಿರುವ ಈ ಕಾರ್ಯಕ್ರಮದಲ್ಲಿ ಆರೋಗ್ಯದ ದೃಷ್ಟಿಯಿಂದ ಯೋಗ, ಓಟದ ಸ್ಪರ್ಧೆ ಏರ್ಪಡಿಸುವ ಜತೆಗೆ ಪ್ಲಾಸ್ಟಿಕ್ ಮಾರಕದ ಬಗ್ಗೆ ಅರಿವು ಮೂಡಿಸಿದ್ದೇವೆ. ಭಾರತೀಯ ಸಂಸ್ಕೃತಿಯ ಭಾಗವಾದ ಶಿಲ್ಪಕಲೆಯ ಜತೆಗೆ ದೇಶಿಯ ತಿನಿಸು ಮತ್ತು ಪರಿಸರದ ಸೌಂದರ್ಯವನ್ನು ಸವಿಯಲು ನಂದಿ ಬೆಟ್ಟ ಸೂಕ್ತವಾದ ಸ್ಥಳ ಎಂದು ಜನರಿಗೆ ತಿಳಿಸುವ ಉದ್ದೇಶದಿಂದ ಇಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.

‘ನಮ್ಮ ನಿಮ್ಮ ಸೈಕಲ್ ಫೌಂಡೇಶನ್’ ಪದಾಧಿಕಾರಿಗಳು, ‘ಮನುಕುಲದ ಮೆಲ್ಮೆಗಾಗಿ ಸನ್ನದ್ಧ ಯುವ ಪಡೆ’ ಹಾಗೂ ‘ಪರಿಕಾರಂ’ ತಂಡದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !