ಗುರುವಾರ , ಸೆಪ್ಟೆಂಬರ್ 24, 2020
21 °C
ಟಿಯನಾನ್ಮೆನ್‌ ಹತ್ಯಾಕಾಂಡಕ್ಕೆ ಸಾಕ್ಷಿಯಾದವರು ಜಾಣ ಮರೆವಿಗೆ ಜಾರಿರುವುದೇಕೆ?

ಬಲಾಢ್ಯ ರಾಷ್ಟ್ರದ ಕರಾಳ ಅಧ್ಯಾಯಕ್ಕೆ 30

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

Prajavani

ಚೀನಾ ಇದೀಗ ಸಾಮರಿಕವಾಗಿ ಮತ್ತು ಆರ್ಥಿಕವಾಗಿ ಸಶಕ್ತ ರಾಷ್ಟ್ರ. ಬಲಾಢ್ಯ ರಾಷ್ಟ್ರ ಎಂದು ಕರೆಸಿಕೊಳ್ಳುವುದರಲ್ಲಿ ಹೆಚ್ಚುಗಾರಿಕೆ ಇದೆ ಎಂದು ಚೀನೀಯರು ಒಂದು ಕಾಲಘಟ್ಟದಲ್ಲಿ ನಂಬಿದ್ದರು. ಆ ನಿಟ್ಟಿನಲ್ಲಿಯೇ ಹೆಜ್ಜೆ ಇಟ್ಟರು. ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಳ್ಳುವತ್ತ ಚೀನಾ ಹೆಜ್ಜೆ ಇಡುವಾಗ, ಆ ನೆಲದಲ್ಲಿ ಆಕ್ರಂದನ, ಅಟ್ಟಹಾಸ ಒಟ್ಟಿಗೇ ಕೇಳುತ್ತಿತ್ತು. ಅತಿಶಿಸ್ತಿನ ಬಾಸುಂಡೆ ಜನರನ್ನು ಬಾಧಿಸಿತು. 1989ರಲ್ಲಿ ಭರವಸೆಯ ಟಿಸಿಲಾಗಿ ಕಂಡಿದ್ದ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಆಂದೋಲನ ಕೊನೆಗೆ ದಾರಿತಪ್ಪಿ ಟಿಯನಾನ್ಮೆನ್ ಹತ್ಯಾಕಾಂಡದೊಂದಿಗೆ ಮುಕ್ತಾಯವಾಗಿತ್ತು.

ಟಿಯನಾನ್ಮೆನ್ ಚೌಕದ ಆ ಹತ್ಯಾಕಾಂಡಕ್ಕೆ ಇದೇ ಜೂನ್ 4ಕ್ಕೆ ಬರೋಬ್ಬರಿ 30 ವರ್ಷ ತುಂಬಿತು. ಇತಿಹಾಸದ ಈ ಕರಾಳ ಅಧ್ಯಾಯವನ್ನು ತಾನು ಮರೆತಂತೆ ಚೀನಾ ನಟಿಸಿತು. ಆದರೆ ಅಂತರ್ಜಾಲದಲ್ಲಿ ಲಭ್ಯವಿದ್ದ ಆ ಸಂದರ್ಭದ ಉಲ್ಲೇಖಗಳನ್ನು, ಚಿತ್ರಗಳನ್ನು ಅಳಿಸಿಹಾಕುವ ಪ್ರಯತ್ನ ಮಾಡಿತು!

ಅಷ್ಟಕ್ಕೂ ಸಾಮರ್ಥ್ಯದ ವಿಷಯದಲ್ಲಿ ಎದೆಸೆಟೆಸಿ ನಿಲ್ಲುವ ಬಲಾಢ್ಯ ಚೀನಾ, ಟಿಯನಾನ್ಮೆನ್ ಚೌಕದ ಉಲ್ಲೇಖ ಬಂದಾಕ್ಷಣ ಕಳೆಗುಂದುವುದೇಕೆ? 89ರಲ್ಲಿ ಆದದ್ದಾದರೂ ಏನು? ಟಿಯನಾನ್ಮೆನ್ ಚೌಕಕ್ಕೆ ಚೀನಾ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ. ಇದೇ ಸ್ಥಳದಲ್ಲಿ ಮಾವೊ ಜಿಡಾಂಗ್ 1919ರಲ್ಲಿ ಕ್ರಾಂತಿಯ ಕಹಳೆ ಊದಿದ್ದರು. ಕಮ್ಯುನಿಸ್ಟ್‌ ಸಿದ್ಧಾಂತದ ತಳಹದಿಯ ಮೇಲೆ ಆಡಳಿತ ವ್ಯವಸ್ಥೆಯ ರೂಪುರೇಷೆಯನ್ನು 1949ರಲ್ಲಿ ಇದೇ ಸ್ಥಳದಲ್ಲಿ ಮಾವೊ ಘೋಷಿಸಿದ್ದರು. ನಾಲ್ಕು ದಶಕಗಳು ಉರುಳುವಷ್ಟರಲ್ಲಿ ಆ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳು ಬಂಡೆದ್ದು ಪ್ರತಿಭಟಿಸಲು ಟಿಯನಾನ್ಮೆನ್ ಚೌಕವನ್ನೇ ಆಯ್ದುಕೊಂಡಿದ್ದರು! ಈ ಪ್ರತಿಭಟನೆಗೆ ಪೂರಕವಾಗಿ ಕೆಲವು ಬೆಳವಣಿಗೆಗಳು ನಡೆದಿದ್ದವು.

1980ರ ದಶಕದಲ್ಲಿ ಚೀನಾ ಉದಾರೀಕರಣದತ್ತ ಮುಖ ಮಾಡಿತು. ಡೆಂಗ್ ಜಿಯೋಪಿಂಗ್ ಮುಂದಿರಿಸಿದ ಆರ್ಥಿಕ ಉದಾರೀಕರಣಕ್ಕೆ ಒತ್ತಾಸೆಯಾಗಿ ಚೀನೀ ಕಮ್ಯುನಿಸ್ಟ್‌ ಪಕ್ಷದ ಕಾರ್ಯದರ್ಶಿ ಹು ಯಾವೋಬಾಂಗ್ ನಿಂತಿದ್ದರು. ವಿದ್ಯಾರ್ಥಿ ಸಮೂಹದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಅವರ ಪ್ರೀತಿಗೆ ಪಾತ್ರರಾಗಿದ್ದರು. ಅಂತೆಯೇ ತಮ್ಮ ಉದಾರವಾದಿ ಚಿಂತನೆಗಳಿಂದಾಗಿ ಕಟ್ಟಾ ಕಮ್ಯುನಿಸ್ಟರ ವಿರೋಧ ಕಟ್ಟಿಕೊಂಡಿದ್ದರು. ಹೀಗಾಗಿ ಪಕ್ಷದ ಕಾರ್ಯದರ್ಶಿ ಹುದ್ದೆಯಿಂದ ಅವರನ್ನು ವಜಾಗೊಳಿಸಲಾಯಿತು. ನಂತರವೂ ಪಕ್ಷದ ಸಭೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದ ಹು, ಪಕ್ಷ ತೆಗೆದುಕೊಂಡ ತಪ್ಪು ನಿರ್ಣಯಗಳನ್ನು ಗಟ್ಟಿ ದನಿಯಲ್ಲಿ ಖಂಡಿಸುತ್ತಿದ್ದರು. 89ರ ಏಪ್ರಿಲ್ 9ರಂದು ಅಂತಹುದೇ ಒಂದು ಸಭೆಯಲ್ಲಿ ಪಾಲ್ಗೊಂಡ ಹು, ಪಕ್ಷದ ಕೆಲವು ಧೋರಣೆಗಳನ್ನು ಭಾವನಾತ್ಮಕವಾಗಿ ಏರುದನಿಯಲ್ಲಿ ಖಂಡಿಸಿದ್ದರು. ಆ ಸಮಯದಲ್ಲೇ ಪಾರ್ಶ್ವವಾಯುವಿಗೆ ತುತ್ತಾಗಿ ಒಂದು ವಾರದ ನಂತರ ತೀರಿಕೊಂಡರು.

ಹು ಯಾವೋಬಾಂಗ್ ಅಂತಿಮಯಾತ್ರೆಯ ವಿಷಯದಲ್ಲಿ ವಿದ್ಯಾರ್ಥಿ ಸಮೂಹ ಮತ್ತು ಚೀನಿ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ಬೀಜಿಂಗ್ ವಿಶ್ವವಿದ್ಯಾಲಯದ ಕಾನೂನು ಮತ್ತು ರಾಜ್ಯಶಾಸ್ತ್ರ ವಿಭಾಗದ 600 ವಿದ್ಯಾರ್ಥಿಗಳು ಏಪ್ರಿಲ್ 17ರಂದು ಹು ಪರ ಘೋಷಣೆ ಕೂಗುತ್ತಾ ಟಿಯನಾನ್ಮೆನ್ ಚೌಕದಲ್ಲಿ ಸೇರಿದರು. ಮರುದಿನ ವಿದ್ಯಾರ್ಥಿಗಳೊಂದಿಗೆ ಇತರರೂ ಸೇರಿಕೊಂಡರು. ಸಾರ್ವತ್ರಿಕ ಶ್ರದ್ಧಾಂಜಲಿ ಸಭೆಯ ಕಾರಣಕ್ಕೆ ಸಂಘಟಿತಗೊಂಡವರು ರಾಷ್ಟ್ರೀಯ ಆಂದೋಲನವನ್ನೇ ಹುಟ್ಟುಹಾಕಿದ್ದರು. 1919ರ ಬಳಿಕದ ಅತಿದೊಡ್ಡ ವಿದ್ಯಾರ್ಥಿ ಚಳವಳಿಯಾಗಿ ಇದು ಬೆಳೆಯಿತು. ಏಪ್ರಿಲ್ 22ರಂದು ಹು ಅಂತ್ಯಸಂಸ್ಕಾರ ನೆರವೇರಿತು. ಆದರೆ ವಿದ್ಯಾರ್ಥಿ ಸಮೂಹ ತಣ್ಣಗಾಗಲಿಲ್ಲ. ಸರ್ಕಾರದ ವಿರುದ್ಧ ಘೋಷಣೆ ಕೂಗಿತು.

ಆರ್ಥಿಕವಾಗಿ ಸುಧಾರಣೆಗಳಿಗೆ ತೆರೆದುಕೊಂಡ ಆಡಳಿತ, ರಾಜಕೀಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯತ್ತ ಮುಖ ಮಾಡಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಯಿತು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂಬ ವಿಷಯ ಕಾರ್ಮಿಕರು, ಗೃಹಿಣಿಯರನ್ನು ಟಿಯನಾನ್ಮೆನ್ ಚೌಕದತ್ತ ಕರೆತಂದಿತು. ಸಾಮಾಜಿಕ ಭದ್ರತೆ, ಅಗತ್ಯ ವಸ್ತುಗಳ ಬೆಲೆ ನಿಯಂತ್ರಣವು ಆಗ್ರಹಗಳ ಪಟ್ಟಿಗೆ ಸೇರಿದವು. ಇಷ್ಟೇ ಅಲ್ಲದೆ ಮಾಧ್ಯಮ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಕಾಯ್ದೆಗಳ ಮಾರ್ಪಾಟು ಹೀಗೆ ಒಂದೊಂದೇ ವಿಷಯ ಸೇರಿಕೊಂಡು ಆಂದೋಲನ ದೊಡ್ಡ ಮಟ್ಟದಲ್ಲಿ ಬೆಳೆಯಿತು. ಪ್ರತಿಭಟನೆಯು ರಾಜಧಾನಿಯನ್ನು ದಾಟಿ ಇತರ ನಗರಗಳಿಗೆ ಹಬ್ಬಿತು. ಮೇ 13ರಂದು ಸಾವಿರ ವಿದ್ಯಾರ್ಥಿಗಳು ಆಮರಣ ಉಪವಾಸ ಕೈಗೊಂಡರು.

ಹು ನಂತರ ಝಾವೊ ಝಿಯಾಂಗ್, ಕಮ್ಯುನಿಸ್ಟ್‌ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದರು. ಝಾವೊ ಅವರ ಧೋರಣೆ ಮತ್ತು ಬದ್ಧತೆ, ಹು ನಿಲುವುಗಳ ಮುಂದುವರಿಕೆಯಂತಿತ್ತು. ಝಾವೊ ಪ್ರಯತ್ನದಿಂದಾಗಿ ವಿದ್ಯಾರ್ಥಿಗಳ ಕೆಲವು ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿತು. ಹು ಅಂತ್ಯಸಂಸ್ಕಾರದ ಬಳಿಕ ಝಾವೊ ಉತ್ತರ ಕೊರಿಯಾಕ್ಕೆ ಅಧಿಕೃತ ಭೇಟಿಗಾಗಿ ತೆರಳಿದರು. ಝಾವೊ ಅನುಪಸ್ಥಿತಿಯಿಂದಾಗಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಯಿತು. ಕಮ್ಯುನಿಸ್ಟ್‌ ಪಕ್ಷದ ಮುಖವಾಣಿ ‘ಪೀಪಲ್ಸ್ ಡೈಲಿ’ಯ ಸಂಪಾದಕೀಯದಲ್ಲಿ ‘ಈ ಪ್ರತಿಭಟನೆ ಪಕ್ಷ ವಿರೋಧಿ ಮತ್ತು ಸಮಾಜವಾದ ವಿರೋಧಿ ಉದ್ದೇಶಗಳೊಂದಿಗೆ ಆಯೋಜನೆಗೊಂಡಿರುವ ಪೂರ್ವನಿಯೋಜಿತ ಮತ್ತು ಸಂಘಟಿತ ಪ್ರಕ್ಷುಬ್ಧತೆ’ ಎಂದು ವಿದ್ಯಾರ್ಥಿ ಚಳವಳಿಯನ್ನು ಕರೆಯಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಮತ್ತಷ್ಟು ಕೆರಳಿದರು.

ಈ ನಡುವೆ ಸೋವಿಯತ್ ನಾಯಕ ಗೋರ್ಬಚೆವ್ ಅವರ ಚೀನಾ ಭೇಟಿ ನಿಗದಿಯಾಗಿತ್ತು. 30 ವರ್ಷಗಳ ನಂತರ ಸೋವಿಯತ್ ನಾಯಕರೊಬ್ಬರು ಚೀನಾ ರಾಜಧಾನಿಗೆ ಆಗಮಿಸುತ್ತಿದ್ದುದು ಆ ಭೇಟಿಯ ಮಹತ್ವ ಹೆಚ್ಚಿಸಿತ್ತು. ಗೋರ್ಬಚೆವ್ ಭೇಟಿಯ ವರದಿ ಮಾಡಲು ವಿವಿಧ ದೇಶಗಳಿಂದ ಬಂದಿದ್ದ ಪತ್ರಕರ್ತರು ಟಿಯನಾನ್ಮೆನ್ ಪ್ರತಿಭಟನೆಯ ಸುದ್ದಿಯನ್ನೂ ಜಗತ್ತಿಗೆ ಹಂಚಿದರು. ಚೀನಾ ಸರ್ಕಾರದ ಮೇಲೆ ಒತ್ತಡ ಹೆಚ್ಚಿತು.

ಚೀನಾ ಸರ್ಕಾರ ಪ್ರತಿಭಟನೆ ಹತ್ತಿಕ್ಕಲು ಸೇನೆ ಬಳಸುವ ನಿರ್ಣಯಕ್ಕೆ ಬಂದಿತು. ಆದರೆ ಇದನ್ನು ಝಾವೊ ವಿರೋಧಿಸಿದರು. ಮೇ 20ರಂದು ಝಾವೊ ಅವರನ್ನು ಅಮಾನತುಗೊಳಿಸಿ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನಕ್ಕೆ ಜಿಯಾಂಗ್ ಜೆಮಿನ್ ಅವರನ್ನು ತರಲಾಯಿತು. ಝಾವೊರನ್ನು ಗೃಹಬಂಧನಕ್ಕೆ ದೂಡಲಾಯಿತು. ವಿದ್ಯಾರ್ಥಿಗಳನ್ನು ಬೆದರಿಸಲು ಸೇನೆಯನ್ನು ಬಳಸಲಾಯಿತು. ಸೈನಿಕರು ಟಿಯನಾನ್ಮೆನ್ ಚೌಕದತ್ತ ಹೆಜ್ಜೆ ಹಾಕಿದರು. ಆದರೆ ಸೈನಿಕರು ಆಯುಧ ಹೊಂದಿರಲಿಲ್ಲ. ವಿದ್ಯಾರ್ಥಿಗಳು ಸೈನಿಕರ ಮೇಲೆ ದಾಳಿ ನಡೆಸಿದರು. ಪರಿಸ್ಥಿತಿ ಬಿಗಡಾಯಿಸಿತು. ಶಸ್ತ್ರಸಜ್ಜಿತ ಸೈನಿಕರ ತಂಡ ಟ್ಯಾಂಕರ್‌ಗಳೊಂದಿಗೆ ಚೌಕಕ್ಕೆ ಧಾವಿಸಿತು. ಮರುದಿನ ಬೆಳಗಿನ ಹೊತ್ತಿಗೆ ಸುಮಾರು 10 ಸಾವಿರ ವಿದ್ಯಾರ್ಥಿಗಳ ಹತ್ಯೆ ನಡೆದಿತ್ತು. ಆಶಾಕಿರಣವಾಗಿ ಕಂಡಿದ್ದ ಪ್ರಜಾಪ್ರಭುತ್ವವಾದಿ ಆಂದೋಲನ ದಿಕ್ಕುತಪ್ಪಿದ ಹೋರಾಟವಾಗಿ ಹತ್ಯಾಕಾಂಡದಲ್ಲಿ ಕೊನೆಯಾಯಿತು. ಅಂತರರಾಷ್ಟ್ರೀಯ ಸಮುದಾಯವು ಚೀನಾ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿತು. ಟಿಯನಾನ್ಮೆನ್ ಹತ್ಯಾಕಾಂಡ ಕರಾಳ ಅಧ್ಯಾಯವಾಗಿ ಚೀನಾದ ಪಾಲಿಗೆ ಉಳಿಯಿತು.

89ರ ಬಳಿಕ ಈ ಮೂವತ್ತು ವರ್ಷಗಳಲ್ಲಿ ಟಿಯನಾನ್ಮೆನ್ ಘಟನೆಯನ್ನು ನೆನೆದವರು, ಜೂನ್ 4ರಂದು ಸಾಂಕೇತಿಕವಾಗಿ ಪ್ರತಿಭಟನೆ, ಜಾಥಾ ಕೈಗೊಂಡವರು ಒಂದಲ್ಲಾ ಒಂದು ಕಾರಣಕ್ಕೆ ಶಿಕ್ಷೆಗೆ ಗುರಿಯಾದರು. ಈ ವರ್ಷವೂ ಹಲವು ವಿದ್ಯಾರ್ಥಿ ಮುಖಂಡರನ್ನು ಚೀನಾ ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದು ವರದಿಯಾಯಿತು. ಒಟ್ಟಿನಲ್ಲಿ ಚೀನಾ ಆಡಳಿತ ತಾನು ಎಸಗಿದ ಪ್ರಮಾದವನ್ನು ಜನರ ಸ್ಮೃತಿಯಿಂದ ಒರೆಸಿಹಾಕಲು 30 ವರ್ಷಗಳ ನಂತರವೂ ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಆ ಘಟನೆಗೆ ಸಾಕ್ಷಿಯಾದವರೂ, ಆಡಳಿತದ ಕಠೋರ ನಿರ್ಧಾರಗಳನ್ನು ತುಟಿಕಚ್ಚಿ ಸಹಿಸಿ ನಿಂತವರೂ ಹತ್ಯಾಕಾಂಡದ ವಿಷಯದಲ್ಲಿ ಬಲವಂತದ ಮರೆವಿಗೆ ಜಾರಿದ್ದಾರೆ. ಬಲಾಢ್ಯ ರಾಷ್ಟ್ರದ ಬೆಳವಣಿಗೆಯಲ್ಲಿ ಇಂಥ ಹಲವು ಕರಾಳ ಛಾಯೆಗಳು ಜೀವಂತವಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು