ಭಾನುವಾರ, ಏಪ್ರಿಲ್ 18, 2021
29 °C

ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನ ನಿಷೇಧ ಮಸೂದೆಗೆ ಸಂಪುಟ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನವನ್ನು ನಿಷೇಧಿಸುವ ಮತ್ತು ಸಮೀಪದ ಸಂಬಂಧಿಗೆ ಮಾತ್ರ ಬಾಡಿಗೆ ತಾಯಿಯಾಗಲು ಅವಕಾಶ ಕಲ್ಪಿಸುವ ‘ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ– 2019’ಕ್ಕೆ ಕೆಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

‘ಕೇಂದ್ರದಲ್ಲಿ ‘ರಾಷ್ಟ್ರೀಯ ಬಾಡಿಗೆ ತಾಯ್ತನ ಮಂಡಳಿ’ ಹಾಗೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಮಟ್ಟದಲ್ಲಿ ‘ರಾಜ್ಯಮಟ್ಟದ ಮಂಡಳಿ’ಗಳನ್ನು ಸ್ಥಾಪಿಸುವ ಮೂಲಕ ಬಾಡಿಗೆ ತಾಯ್ತನ ವ್ಯವಸ್ಥೆಯನ್ನು ನಿಯಂತ್ರಿಸುವ ಪ್ರಸ್ತಾವ ಮಸೂದೆಯಲ್ಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಉದ್ದೇಶಿತ ಕಾನೂನು, ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದರ ಜೊತೆಗೆ, ಬಂಜೆತನದಿಂದ ಬಳಲುವ ಭಾರತೀಯ ದಂಪತಿಗೆ ನೈತಿಕ ರೀತಿಯಲ್ಲಿ ಮಕ್ಕಳನ್ನು ಪಡೆಯಲು ನೆರವಾಗಲಿದೆ. ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನವನ್ನು ನಿಷೇಧಿಸುವುದರಿಂದ ಮಾನವ ಭ್ರೂಣ ಹಾಗೂ ವೀರ್ಯದ ಮಾರಾಟ ಮತ್ತು ಖರೀದಿಯೂ ನಿಷೇಧ
ಗೊಳ್ಳುತ್ತದೆ. ಆದರೆ ಬಾಡಿಗೆ ತಾಯ್ತನದ ಅಗತ್ಯವಿರುವ ದಂಪತಿಗೆ ಕೆಲವು ನಿಬಂಧನೆಗಳಡಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲು ಅನುಮತಿ ನೀಡಲಾಗುವುದು. ಬಾಡಿಗೆ ತಾಯಿಯಾಗಿ ಮಗುವನ್ನು ಹೆತ್ತುಕೊಡುವ ಮಹಿಳೆ ಮತ್ತು ಆ ಮೂಲಕ ಹುಟ್ಟಿದ ಮಗು ಶೋಷಣೆಗೆ ಒಳಗಾಗುವುದನ್ನು ಸಹ ಉದ್ದೇಶಿತ ಕಾನೂನು ತಡೆಯುತ್ತದೆ’ ಎಂದು ಅಧಿಕಾರಿ ತಿಳಿಸಿದರು.

ಲೋಕಸಭೆಯಲ್ಲಿ 2018ರ ಡಿಸೆಂಬರ್‌ನಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು. 16ನೇ ಲೋಕಸಭೆ ವಿಸರ್ಜನೆಯಾದ್ದರಿಂದ ಈಗ ಮಸೂದೆಯನ್ನು ಪುನಃ ಮಂಡಿಸಬೇಕಾಗಿ ಬಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು