ಭಾನುವಾರ, ನವೆಂಬರ್ 17, 2019
28 °C
ನೀರಿನ ಘಟಕಗಳ ಕಾರ್ಯನಿರ್ವಹಣೆ ತನಿಖೆಗೆ ಆದೇಶ

ಕಾಗದದ ಮೇಲಷ್ಟೇ ಶುದ್ಧ ನೀರು: ಸಚಿವ ಈಶ್ವರಪ್ಪ

Published:
Updated:
Prajavani

ಬಳ್ಳಾರಿ: ‘ಕಾಗದದ ಮೇಲಷ್ಟೇ ಶುದ್ಧ ಕುಡಿಯುವ ನೀರಿನ ಪೂರೈಕೆ ಆಗುತ್ತಿದೆಯೇ ಹೊರತು ಜನರಿಗೆ ಸಿಗುತ್ತಿಲ್ಲ. ಈ ಬಗ್ಗೆ ದೂರುಗಳೂ ಹೆಚ್ಚಿವೆ. ಶುದ್ಧ ನೀರಿನ ಘಟಕಗಳ ಕಾರ್ಯನಿರ್ವಹಣೆ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಘಟಕಗಳು ಎಷ್ಟಿವೆ? ಎಲ್ಲೆಲ್ಲಿವೆ? ಹೇಗೆ ಕಾರ್ಯನಿರ್ವಹಿಸುತ್ತಿವೆ? ಯಾವ ಏಜೆನ್ಸಿ ನಿರ್ವಹಿಸುತ್ತಿದೆ? ಶುದ್ಧ ನೀರು ಜನರಿಗೆ ಸಿಗುತ್ತಿದೆಯೇ ಎಂಬುದರ ಕುರಿತು ಅಧಿಕಾರಿಗಳ ತಂಡ ಪರಿಶೀಲಿಸಲಿದೆ. ಪರಿಶೀಲನೆಯ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಫೋಟೊ ಸಹ ಪಡೆಯುವಂತೆ ತಿಳಿಸಲಾಗಿದೆ. ಸಮಗ್ರ ವರದಿಯ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಇದೇ 8ರಂದು ಬೆಳಗಾವಿಯಲ್ಲಿ ಸಭೆ ನಡೆ
ಯಲಿದೆ. 9ರಂದು ಅಲ್ಲಿಯೇ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಜತೆಗೂ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)