ಶನಿವಾರ, ಅಕ್ಟೋಬರ್ 19, 2019
28 °C

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನ ಕೊಲೆ

Published:
Updated:

ಬೆಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಹಾಲಕ್ಷ್ಮೀ ಲೇಔಟ್‍ನ ಜೆ.ಸಿ. ನಗರ ನಿವಾಸಿ ಪ್ರಣವ್ (26) ಕೊಲೆಯಾದ ಯುವಕ. ವೈಯಕ್ತಿಕ ದ್ವೇಷದಿಂದ ಕೃತ್ಯ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಬಿಸಿಎ ಪದವಿ ಪಡೆದಿರುವ ಪ್ರಣವ್, ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ಕಚೇರಿಗೆ ಕೆಲಸ ಹೋಗುತ್ತಿದ್ದ. ಆದರೆ, ಒಂದು ತಿಂಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ಮಂಗಳವಾರ ಸಂಜೆ ಏಳು ಗಂಟೆ ಸುಮಾರಿಗೆ ಮನೆಯಿಂದ ಹೊರಹೋದ ಪ್ರಣವ್, ರಾಜಾಜಿನಗರದ ಉದ್ಯಾನದ ಕಡೆ ತೆರಳಿದ್ದಾರೆ. ಈ ವೇಳೆ ಅಲ್ಲಿಗೆ ಕೆಲವು ಸ್ನೇಹಿತರು ಬಂದಿದ್ದಾರೆ. ಪ್ರಣವ್ ಮತ್ತು ಆತನ ಸ್ನೇಹಿತರು ವೈಯಕ್ತಿಕ ವಿಚಾರಕ್ಕೆ ಪರಸ್ಪರ ವಾಗ್ವಾದ ಮಾಡಿದ್ದು, ಹೊಡೆದಾಟವೂ ನಡೆದಿದೆ. ಪ್ರಣವ್‌ರನ್ನು ಪಾರ್ಕ್‌ನಲ್ಲಿದ್ದ ಕಟ್ಟೆಯ ಮೇಲೆ ದೂಡಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಘಟನೆಯನ್ನು ಗಮನಿಸಿದ ಸ್ಥಳೀಯರು ರಾತ್ರಿ 8.30ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಮಾಗಡಿ ರಸ್ತೆ ಠಾಣೆಯ ಹೊಯ್ಸಳ ವಾಹನದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಣವ್‌ರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.

‘ಪ್ರಣವ್ ಜತೆ ಮತ್ತೊಬ್ಬ ಯುವಕ ಕೂಡಾ ಬಂದಿರುವ ದೃಶ್ಯ ಪಾರ್ಕ್ ಸಮೀಪ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆತ ಯಾರು ಎಂಬುವುದನ್ನು ಪತ್ತೆ ಹಚ್ಚಬೇಕಿದೆ. ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)