ಮಂಗಳವಾರ, ಜೂನ್ 15, 2021
23 °C

ದಲಿತ ದೌರ್ಜನ್ಯ ಪ್ರಕರಣ: ಬೆಳಗಾವಿಯಲ್ಲೇ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: `ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಜನರಲ್ಲಿ ಅರಿವು ಕಡಿಮೆ ಇದ್ದು, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಕಾರ್ಯಕ್ರಮ ಹಾಗೂ ಪ್ರವಾಸ ಹಮ್ಮಿಕೊಳ್ಳಲಾಗಿದೆ~ ಎಂದು ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯದ ಪೊಲೀಸ್ ಹೆಚ್ಚುವರಿ ಮಹಾ ನಿರ್ದೇಶಕ (ಎಡಿಜಿಪಿ) ಎ.ಎಸ್.ಎನ್. ಚಿಕ್ಕೆರೂರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಎಚ್.ಡಿ. ಕೋಟೆ, ದಾಂಡೇಲಿ, ಗುಲ್ಬರ್ಗ, ಬೀದರ್ ಮತ್ತಿತರ ಕಡೆಗಳಲ್ಲಿ ಪ.ಜಾ. ಹಾಗೂ ಪ.ಪಂ.ಕ್ಕೆ ದೊರೆಯುವ ಪರಿಹಾರ, ಯೋಜನೆಗಳು, ಸೌಲಭ್ಯಗಳು, ಕಾನೂನು ರಕ್ಷಣೆ ಮತ್ತಿತರ ವಿಚಾರಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಸಂಬಂಧಿತ ಜಿಲ್ಲೆಗಳ ವರಿಷ್ಠಾಧಿಕಾರಿಗಳಿಗೂ ಸೂಚನೆ ನೀಡಲಾಗುವುದು~ ಎಂದರು.`ಈ ಕಾಯ್ದೆಯಡಿ ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು (2011ರಲ್ಲಿ 111) ಪ್ರಕರಣಗಳು ದಾಖಲಾಗಿವೆ. 2011ರಲ್ಲಿ ಗುಲ್ಬರ್ಗದಲ್ಲಿ 83, ಕೊಪ್ಪಳದಲ್ಲಿ 27, ಬೀದರ್‌ನಲ್ಲಿ 27, ಯಾದಗಿರಿಯಲ್ಲಿ 66, ರಾಯಚೂರಿನಲ್ಲಿ 87 ಪ್ರಕರಣಗಳು ದಾಖಲಾಗಿವೆ. 2009ರಿಂದ ಇಲ್ಲಿ ತನಕ ಬೆಳಗಾವಿಯಲ್ಲಿ 18, ಗುಲ್ಬರ್ಗ, ಯಾದಗಿರಿ, ಬೀದರ್‌ನಲ್ಲಿ ತಲಾ ಒಂದೊಂದು ಪ್ರಕರಣಗಳಲ್ಲಿ ಶಿಕ್ಷೆಯಾಗಿವೆ. ಕೊಪ್ಪಳ ಮತ್ತು ರಾಯಚೂರಿನಲ್ಲಿ ಶಿಕ್ಷೆಯಾದ ಪ್ರಕರಣಗಳಿಲ್ಲ~ ಎಂದರು.`ಸ್ಥಳೀಯ ಮಟ್ಟದಲ್ಲಿ ನಡೆಯುವ ರಾಜಿ ಪಂಚಾಯಿತಿ, ಕೇಸು ಹಿಂಪಡೆಯುವುದು, ಸಾಕ್ಷ್ಯ ಹಿಂಪಡೆಯುವುದು  ಮತ್ತಿತರ ಕಾರಣಗಳಿಂದಾಗಿ ಶಿಕ್ಷೆಯ ಪ್ರಮಾಣ ಕಡಿಮೆಯಾಗಿದೆ. ಬೆದರಿಕೆ, ದಬ್ಬಾಳಿಕೆ ಮತ್ತಿತರ ಕಾರಣಗಳಿಂದ ದೂರು ನೀಡದೇ ಇದ್ದಿರಲೂಬಹುದು. ಈ ಬಗ್ಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ರಾಷ್ಟ್ರೀಯ ಆಯೋಗ ರಾಜ್ಯ ಸರ್ಕಾರಕ್ಕೆ ನೀಡಿದ ನಿರ್ದೇಶನದ ಮೇರೆಗೆ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗುವುದು~ ಎಂದರು.ದುರುಪಯೋಗ: `ಈ ಕಾಯ್ದೆಯ ದುರುಪಯೋಗ ಆಗಲು ಸಾಧ್ಯವಿಲ್ಲ. ಏಕೆಂದರೆ ಡಿವೈಎಸ್ಪಿ ದರ್ಜೆಯ ಪೊಲೀಸ್ ಅಧಿಕಾರಿ ಪ್ರಕರಣ ದಾಖಲಿಸುತ್ತಾರೆ. `ಬಿ~ ರಿಪೋರ್ಟ್ (ತಳ್ಳಿ ಹಾಕಲು) ಸಲ್ಲಿಸಲು ಪೊಲೀಸ್ ಮಹಾ ನಿರೀಕ್ಷಕರ ಅನುಮತಿ ಬೇಕು. ಹೀಗಾಗಿ ದುರುಪಯೋಗ ಎಂಬ ಆರೋಪಗಳನ್ನು ನಾನು ಒಪ್ಪುವುದಿಲ್ಲ. ಆದರೆ ಈ ಕಾಯ್ದೆ ಅಡಿಯಲ್ಲಿ ಸಾಕಷ್ಟು ಪರಿಹಾರ ದೊರೆಯದೇ ಇರುವ ಕಾರಣಗಳ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ~ ಎಂದರು.ನಕಲಿ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 2,000 ದೂರುಗಳು ದಾಖಲಾಗಿವೆ. ಈ ಪೈಕಿ 1993ಕ್ಕಿಂತ ಮೊದಲಿನ ಪ್ರಕರಣವನ್ನು ರಾಜ್ಯಮಟ್ಟದ ಜಾತಿ-ಪ್ರವರ್ಗ ಪರಿಶೀಲನಾ ಸಮಿತಿ ಪರಿಶೀಲಿಸಿದರೆ, ಆ ಬಳಿಕದ ಪ್ರಕರಣವನ್ನು ಜಿಲ್ಲಾ ಮಟ್ಟದ ಸಮಿತಿಗಳು ಪರಿಶೀಲಿಸುತ್ತವೆ. ಆ ಬಳಿಕ ಕ್ರಮಕ್ಕಾಗಿ ಸಂಬಂಧಿತ ಇಲಾಖೆಗಳಿಗೆ ಸೂಚನೆ ನೀಡಲಾಗುವುದು~ ಎಂದರು.ಕೆನೆಪದರ: `ಮೀಸಲಾತಿ ಒಳಗಿನ ಕೆನೆಪದರ ದುರುಪಯೋಗ ಪಡಿಸಿಕೊಂಡು ಉದ್ಯೋಗ ಪಡೆದಿದ್ದ ಬಗ್ಗೆ ಸಾರ್ವಜನಿಕರು ದೂರು ನೀಡಿದರೆ ಪರಿಶೀಲಿಸಿ ತನಿಖೆ ನಡೆಸಲಾಗುವುದು. ಜಾತಿ ಹಾಗೂ ಧರ್ಮ ವಿಚಾರಗಳು ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ಎಚ್ಚರದಿಂದ ಕಾರ್ಯ ನಿರ್ವಹಿಸಲಾಗುವುದು~ ಎಂದರು.ಐಜಿಪಿ ಬಸನಳ್ಳಿ, ಎಸ್ಪಿಗಳಾದ ಪ್ರವೀಣ ಮಧುಕರ ಪವಾರ್, ವಸಂತ ಶೇರಿಕಾರ, ಕೆ. ಯಲ್ಲಪ್ಪ, ಅಶೋಕ ಕೆರೂರು ಮತ್ತಿತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.