ಗುರುವಾರ , ಮೇ 6, 2021
23 °C

ಅಪೌಷ್ಟಿಕತೆ:ಆತ್ಮಸಾಕ್ಷಿ ಕೆಲಸಮಾಡಿ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಾಳೆ ನಿಮ್ಮ ಮೊಮ್ಮಕ್ಕಳಿಗೂ ಅಪೌಷ್ಟಿಕತೆ ಕಾಡಬಹುದು! ಆತ್ಮಸಾಕ್ಷಿಯಿಂದ ಕೆಲಸ ಮಾಡಿ...

ಐಎಎಸ್ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಹೀಗೆ ಮಾತಿನ ಚಾಟಿ ಬೀಸಿದವರು ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎನ್.ಕೆ. ಪಾಟೀಲ್.ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸುಧಾರಣೆ ಬಗ್ಗೆ ವರದಿ ಸಲ್ಲಿಸಲು ರಾಜ್ಯ ಹೈಕೋರ್ಟ್ ನೇಮಿಸಿದ ಸಮಿತಿ ಅಧ್ಯಕ್ಷರಾದ ಅವರು, ಗುರುವಾರ ಗುಲ್ಬರ್ಗದಲ್ಲಿ ವಿಭಾಗ ಮಟ್ಟದ ಸಭೆಯಲ್ಲಿ ಮಾತನಾಡಿದರು.

ಹಿರಿಯ ಅಧಿಕಾರಿಯೊಬ್ಬರ ವರದಿಯೊಂದಕ್ಕೆ ಅಸಮಾಧಾನ ಸೂಚಿಸಿದ ಅವರು, `ನಾನು ಕೆಲವೆಡೆ ಅನಿರೀಕ್ಷಿತ ಭೇಟಿಗಳನ್ನು ನೀಡಿದ್ದೇನೆ. ಅಂಗನವಾಡಿಗಳು ಕುರಿದೊಡ್ಡಿ ಹಾಗಿವೆ. ರಸ್ತೆಯಲ್ಲೇ ಅಡುಗೆ ಮಾಡ್ತಾರೆ.

 

ಶೌಚಾಲಯ ಇಲ್ಲ. ಸ್ಟೌ ಇದೆ ಗ್ಯಾಸ್ ಇಲ್ಲ. ಅಕ್ಕಿ ಇದೆ ಪಾತ್ರೆ ಇಲ್ಲ. ಅವಲಕ್ಕಿ ಅಸಹ್ಯ. ಇನ್ನೊಂದೆಡೆ ಜಿಲ್ಲೆಯ ಆಸ್ಪತ್ರೆಗಳಲ್ಲಿ ಪ್ರಾಣಿಗಳನ್ನೂ ದಾಖಲಿಸಲು ಸಾಧ್ಯವಿಲ್ಲ. ನಿಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸುತ್ತೀರಾ?  ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.`ವರದಿಗಳನ್ನು ಒಪ್ಪಿಸುತ್ತೀರಿ. ಅವು ಕಣ್ಣೊರೆಸುವ ತಂತ್ರಗಳು. ತಳಮಟ್ಟದ ವಾಸ್ತವವಲ್ಲ. ವಸ್ತುಸ್ಥಿತಿ ನೋಡಲು ಒಂದು ಬಾರಿಯಾದರು ಹೋಗಿದ್ದೀರಾ? ಎಂದ ಅವರು, ವರದಿಗೂ ವಾಸ್ತವಕ್ಕೂ ತಾಳ-ಮೇಳ ಇಲ್ಲ. ಯಾಕೆ ಹೀಗಾಗ್ತಿದೆ? ಆತ್ಮಸಾಕ್ಷಿಯಿಂದ ಕೆಲಸ ಮಾಡಿ. ಪ್ರಾಮಾಣಿಕರಾಗಿದ್ದಾಗ ಯಾರಿಗೂ ಹೆದರಬೇಕಾಗಿಲ್ಲ~ ಎಂದರು.

`ಇಲಾಖೆಗಳ ಮಧ್ಯೆ ಹೊಂದಾಣಿಕೆ ಇಲ್ಲ. ಹಲವರಿಗೆ ಹೊಂದಾಣಿಕೆ ಅರ್ಥವೇ ಗೊತ್ತಿಲ್ಲ. ಹಲವು ಅಧಿಕಾರಿಗಳಿಗೆ ತಮ್ಮ  ವ್ಯಾಪ್ತಿಯ ತಳಮಟ್ಟದ ಕಚೇರಿ, ಅಂಗನವಾಡಿ, ಶಾಲೆಗಳು ಎಲ್ಲಿವೆ ಎಂಬುದೇ ಗೊತ್ತಿಲ್ಲ~ ಎಂದು ಅಚ್ಚರಿ ವ್ಯಕ್ತಪಡಿಸಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಹಿರಿಯ ಅಧಿಕಾರಿಗಳು, ಪ್ರಾದೇಶಿಕ ಆಯುಕ್ತೆ, ಗುಲ್ಬರ್ಗ ವಿಭಾಗದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಆರೋಗ್ಯ ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತಿತರರು ಇದ್ದರು.

ಜೂ.15-ಮಧ್ಯಂತರ ವರದಿ

ಗುಲ್ಬರ್ಗ:
ಎಂಟು ಜಿಲ್ಲೆಗಳಲ್ಲಿ 68 ಸಾವಿರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಸಮಗ್ರ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜೂನ್15ರೊಳಗೆ ಮಧ್ಯಂತರ ವರದಿ ಸಲ್ಲಿಸಲಾಗುವುದು ಎಂದು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸುಧಾರಣೆ ಬಗ್ಗೆ ವರದಿ ಸಲ್ಲಿಸಲು ಹೈಕೋರ್ಟ್ ನೇಮಿಸಿದ ಸಮಿತಿ ಅಧ್ಯಕ್ಷ, ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, `ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಪೌಷ್ಟಿಕತೆ ಪತ್ತೆಯಾಗಿದೆ. ಇಲ್ಲಿಯ ವಸ್ತುಸ್ಥಿತಿ ಅಧ್ಯಯನ ನಡೆಸಿ ಸರ್ಕಾರಕ್ಕೆ ಉನ್ನತ ವರದಿ (ಮಾಸ್ಟರ್ ಪ್ಲಾನ್) ಸಲ್ಲಿಸಲಾಗುವುದು. ಇದಕ್ಕೆ ಮುಂಚಿತವಾಗಿ ಸರ್ಕಾರೇತರ ಸಂಸ್ಥೆ, ಸ್ಥಳೀಯರು, ತಜ್ಞರು, ಆಸಕ್ತರು ಸಲಹೆ-ಸೂಚನೆಗಳನ್ನು ಸಮಿತಿಗೆ ಕಳುಹಿಸಿಕೊಡಬಹುದು. ಶುಲ್ಕ ರಹಿತ ಸಹಾಯವಾಣಿ ಸಂಖ್ಯೆ (1800-425-25250) ಆರಂಭಿಸಲಾಗಿದ್ದು, ಕರೆ ಮಾಡಿಯೂ ಸಮಸ್ಯೆಗಳನ್ನು ತಿಳಿಸಬಹುದು~ ಎಂದರು.`ಅಪೌಷ್ಟಿಕತೆ ಮತ್ತು ಶಿಶುಮರಣದ ಬಗ್ಗೆ ನಿಗಾ ವಹಿಸಲು ಪ್ರತಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ 5 ಮಂದಿಯ ಸಮಿತಿ ರಚಿಸಿ, ಹೊಣೆಗಾರರನ್ನಾಗಿ ಮಾಡಲಾಗುವುದು. ಮಕ್ಕಳ ವೈದ್ಯಕೀಯ ತಪಾಸಣೆ ನಡೆಸಿ ಸೂಕ್ತವಾದ ಪೌಷ್ಟಿಕ ಆಹಾರ ನೀಡಲು, ಅಂಗನವಾಡಿಗಳಿಗೆ ಪಾತ್ರೆ, ಆಹಾರ ಧಾನ್ಯ, ಮೂಲಸೌಕರ್ಯ ಕಲ್ಪಿಸಲು, ಪುನರ್ವಸತಿ ಕೇಂದ್ರದ ಮಾದರಿಯಲ್ಲಿ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗುವುದು.~ ಎಂದರು.`ಮಾಧ್ಯಮ ವರದಿ ಹಾಗೂ ವಿವೇಚನಾ ಸಂಸ್ಥೆಯ ಬಿ.ಎಲ್.ಪಾಟೀಲ್ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಆಧರಿಸಿ, ವಿಚಾರಣೆ ನಡೆಸಿದ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ತೀವ್ರ ಕಾಳಜಿ ವಹಿಸಿ ಈ ಸಮಿತಿಯನ್ನು ರಚಿಸಿದ್ದಾರೆ. ಅಪೌಷ್ಟಿಕತೆ ನಿರ್ಮೂಲನೆ ಮಾಡಲು ಬೇಕಾದ ಹಣ ನೀಡಲಾಗುವುದು ಎಂದು ಸರ್ಕಾರದ ಅಡ್ವೋಕೇಟ್ ಜನರಲ್ ಭರವಸೆ ನೀಡಿದ್ದಾರೆ~ ಎಂದರು. `ಗುಲ್ಬರ್ಗ ವಿಭಾಗದಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಿದೆ. ಹೀಗಾಗಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ಸರ್ಕಾರವು ಹಾಲು-ಮೊಟ್ಟೆ ಕೊಡುತ್ತೇವೆ ಎಂದು ಹೇಳಿದೆ. ಆದರೆ ಬೀದರ್‌ನಲ್ಲಿ ಭೇಟಿ ನೀಡಿದ್ದ ನಾಲ್ಕು ಅಂಗನವಾಡಿಯ ವಾಸ್ತವ ಸ್ಥಿತಿಯೇ ಬೇರೆಯಾಗಿತ್ತು. ಸ್ವಚ್ಛತೆ, ವ್ಯವಸ್ಥೆ, ಮೂಲಸೌಕರ್ಯವಿರಲಿಲ್ಲ~ ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.