ಭಾನುವಾರ, ಮೇ 22, 2022
21 °C

ಸಹಕಾರಿ ಕಾಯಿದೆ ಕೈಬಿಡಿ: ಬಿಜೆಪಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕೇಂದ್ರ ಸರ್ಕಾರವು ಉದ್ದೇಶಿತ ‘ಬಹುರಾಜ್ಯ ಸಹಕಾರಿ ಸಂಘಗಳ ಕಾಯಿದೆ’ಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಗುಲ್ಬರ್ಗ ಜಿಲ್ಲಾಧಿಕಾರಿ ಮುಂಭಾಗದಲ್ಲಿ ಮಂಗಳವಾರ ಬಿಜೆಪಿಯ ಸಹಕಾರಿ ಘಟಕದ ಸದಸ್ಯರು ಧರಣಿ ನಡೆಸಿದರು. ಕೇಂದ್ರ ಸರ್ಕಾರವು ಈ ಅಧಿವೇಶನದಲ್ಲಿ ‘ಬಹುರಾಜ್ಯ ಸಹಕಾರಿ ಸಂಘಗಳ ಕಾಯಿದೆ’ಯ ಮಸೂದೆಯನ್ನು ಜಾರಿ ತರಲು ಉದ್ದೇಶಿಸಿದೆ.ಇದು ಜಾರಿಗೊಂಡರೆ ನೇರ ತೆರಿಗೆಗೆ ಸಣ್ಣ ಸಣ್ಣ ಸಹಕಾರಿ ಸಂಘಗಳು ಒಳಪಡಲಿವೆ. ಷೇರುದಾರರ ಹಣದಿಂದ ರೈತರ, ಕೂಲಿಕಾರ್ಮಿಕರ, ಕೃಷಿಕರ, ಬಡವರ ಏಳಿಗೆಗಾಗಿ ಶ್ರಮಿಸುತ್ತಿರುವ ಈ ಸಹಕಾರಿ ಸಂಘಗಳು ದಿವಾಳಿ ಆಗುವ ಸಾಧ್ಯತೆ ಹೆಚ್ಚು ಎಂದು ಧರಣಿ ನಿರತರು ಆತಂಕ ವ್ಯಕ್ತಪಡಿಸಿದ್ದಾರೆ.ಭಾರತದಲ್ಲಿ ಸಹಕಾರಿ ಕ್ಷೇತ್ರವು ಲಾಭದಾಯಕ ಉದ್ದಿಮೆಯಲ್ಲ. ಅದೊಂದು ಚಳವಳಿ. ಬಡವರ, ಶ್ರಮಿಕರ ಬದುಕನ್ನು ಹಸನುಗೊಳಿಸಿದ ಆರ್ಥಿಕ ವ್ಯವಸ್ಥೆ.ದೇಶದ ಮೊದಲ ಪ್ರಧಾನಿ ಜವಹಾರಲಾಲ ನೆಹರೂ ಅವರು ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅಲ್ಲಿಂದ ವಾಜಪೇಯಿ ತನಕ ಎಲ್ಲ ಪ್ರಧಾನಿಗಳ ದೃಷ್ಟಿಕೋನವೂ ಅದೇ ಆಗಿತ್ತು. ಈ ಕಾಳಜಿಯನ್ನು ಮನಮೋಹನ್ ಸಿಂಗ್ ಅವರು ಮುಂದುವರಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದ್ದಾರೆ. ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಮನವಿ ಮಾಡಿರುವ ಧರಣಿ ನಿರತರು, ಕೇಂದ್ರವು ಮಸೂದೆ ಕೈ ಬಿಡದಿದ್ದಲ್ಲಿ ರಾಜ್ಯಾದ್ಯಂತ ಸಹಕಾರಿಗಳ ಉಗ್ರ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.ಧರಣಿಯಲ್ಲಿ ಚಂದ್ರಶೇಖರ ತಲ್ಲಳ್ಳಿ, ಬಸವರಾಜ ಸ್ವಾಮಿ, ಚಂದ್ರಶೇಖರ ಇಂಗಿನ, ಚಂದ್ರಪ್ಪ ಉಪ್ಪಿನ, ವ್ರಸಂಗಪ್ಪ, ಶರಣಪ್ಪ ತಳವಾರ, ಧರ್ಮಣ್ಣ ಇಟಗಾ, ಪ್ರಹ್ಲಾದ, ಚಂದ್ರಶೇಖರ ನಾಲ್ವಾರ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.