ಗುರುವಾರ , ಮೇ 28, 2020
27 °C

ಜೇವರ್ಗಿ, ಚಿತ್ತಾಪುರದಲ್ಲಿ ಬಿಜೆಪಿಗೆ ನಿರಾಶೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬಿಜೆಪಿಯ ನಾಲ್ವರ ಪೈಕಿ ಜೇವರ್ಗಿ ಹಾಗೂ ಚಿತ್ತಾಪುರ ಶಾಸಕರು ಶ್ರಮವಹಿಸಿ ತಮ್ಮ ಕ್ಷೇತ್ರದಲ್ಲಿ ತಲಾ ಒಂದು ಜಿಲ್ಲಾ ಪಂಚಾಯಿತಿ ಸ್ಥಾನ ವಶಪಡಿಸಿಕೊಂಡಿದ್ದರೆ, ಬಿಜೆಪಿ ಸ್ಪಷ್ಟ ಬಹುಮತ ಗಳಿಸಲು ಸಾಧ್ಯವಾಗುತ್ತಿತ್ತು. ಕಳೆದ ಸಲ ಕೇವಲ ಎಂಟು ಸದಸ್ಯರನ್ನು ಹೊಂದಿದ್ದ ಬಿಜೆಪಿ ಈ ಸಲ ತನ್ನ ಸಂಖ್ಯೆಯನ್ನು 20ಕ್ಕೆ ಏರಿಸಿಕೊಂಡಿದ್ದರೂ, ತನ್ನದೇ ಆದ ಬಹುಮತ ಪಡೆಯಲು ಸಾಧ್ಯವಾಗಿಲ್ಲ ಎಂಬುದಂತೂ ಸತ್ಯ.ಆಯ್ಕೆಯಾದ ಎರಡೂವರೆ ವರ್ಷಗಳಲ್ಲಿ ಆಡಳಿತಾರೂಢ ಬಿಜೆಪಿ ಶಾಸಕರ ಬಗ್ಗೆ ಮತದಾರರ ಒಲವು ಏನೆಂಬುದು ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಗುಲ್ಬರ್ಗ ತಾಲ್ಲೂಕಿನ 7 ಜಿಪಂ ಕ್ಷೇತ್ರಗಳ ಪೈಕಿ 6ರಲ್ಲಿ ಹಾಗೂ ಚಿಂಚೋಳಿಯ ಆರು ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಪರಾಭವ ಅನುಭವಿಸಿ, ರಾಜ್ಯದ ಗಮನ ಸೆಳೆದಿದ್ದ ಜೇವರ್ಗಿಯಲ್ಲಿ ಬಿಜೆಪಿ ದಯನೀಯ ಸ್ಥಿತಿ ಅನುವಿಸಬೇಕಾಗಿದೆ.ಧರ್ಮಸಿಂಗ್ ಅವರನ್ನು ಸೋಲಿಸಿ, ಬಿಜೆಪಿಯ ಗೆಲುವಿನ ಪತಾಕೆ ಹಾರಿಸಿದ ಶಾಸಕ ದೊಡ್ಡಪ್ಪಗೌಡ ನರಿಬೋಳ ಅವರ ವರ್ಚಸ್ಸು ಕುಸಿದಿದೆಯೇ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.ಜಿಪಂನ ಆರು ಕ್ಷೇತ್ರಗಳ ಪೈಕಿ ಕೇವಲ ಒಂದೇ ಕಡೆ ಬಿಜೆಪಿ ಗೆಲವು ಸಾಧಿಸಿದ್ದರೆ, ನಾಲ್ಕು ಕಾಂಗ್ರೆಸ್ ಹಾಗೂ ಒಂದು ಪಕ್ಷೇತರರ ಪಾಲಾಗಿದೆ. ಅದರಲ್ಲೂ ಶಾಸಕರ ಸಹೋದರ ಬಸವರಾಜ ಪಾಟೀಲ ನರಿಬೋಳ ಸ್ವತಃ ಸೋಲಿನ ಕಹಿ ಅನುಭವಿಸಿದ್ದು ಬಿಜೆಪಿ ವಲಯವನ್ನು ಬೆಚ್ಚಿಬೀಳಿಸಿದೆ.ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣಾ ಪ್ರಚಾರಕ್ಕೆಂದು ಜೇವರ್ಗಿಗೆ ಖುದ್ದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದರು. ತಮ್ಮ ಸರ್ಕಾರದ ಸಾಧನೆಗಳನ್ನು ಜನರ ಮುಂದಿಟ್ಟಿದ್ದರು. ಆದರೆ ಆ ತಾಲ್ಲೂಕಿನಲ್ಲೇ ಬಿಜೆಪಿ ಹಿನ್ನಡೆ ಅನುಭವಿಸಿದೆ.‘ನಾಯಕ’ರ ಪ್ರಭಾವ ಇಲ್ಲ: ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಗೆ ಆಯ್ಕೆಗೊಂಡಾಗ ತೆರವು ಮಾಡಿದ್ದ ಚಿತ್ತಾಪುರ ವಿಧಾನಸಭೆ ಕ್ಷೇತ್ರಕ್ಕೆ ಮರುಚುನಾವಣೆ ನಡೆದಿತ್ತು.ಕಾಂಗ್ರೆಸ್‌ನಿಂದ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ ಅವರನ್ನು ಪರಾಭವಗೊಳಿಸಿ, ಬಿಜೆಪಿಯ ವಾಲ್ಮೀಕಿ ನಾಯಕ್ ಆಯ್ಕೆಯಾದರು. ಕಾಂಗ್ರೆಸ್ ಹಿಡಿತದಿಂದ ಬಿಜೆಪಿ ಕಿತ್ತುಕೊಂಡಿದ್ದ ಈಗ ಕ್ಷೇತ್ರದಲ್ಲೂ ಬಿಜೆಪಿ ಸಾಧನೆ ನಿರಾಶೆ ಮೂಡಿಸಿದೆ.ಜಿಪಂನ ಏಳು ಸ್ಥಾನಗಳ ಪೈಕಿ ಕೇವಲ ಒಂದೇ ಸ್ಥಾನ


ಬಿಜೆಪಿ ಪಾಲಾಗಿದೆ. ಉಳಿದ ಆರು ಕ್ಷೇತ್ರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡು ಕಾಂಗ್ರೆಸ್ ಪಕ್ಷ ಪ್ರಾಬಲ್ಯ ಮೆರೆದಿದೆ. ಜೇವರ್ಗಿ ಹಾಗೂ ಚಿತ್ತಾಪುರ ತಾಲ್ಲೂಕುಗಳಲ್ಲಿ ಕಾಂಗ್ರೆಸ್ ಮತ್ತೆ ಚೈತನ್ಯ ಪಡೆದುಕೊಂಡಿರುವುದು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೋಚರಿಸಿದೆ. ಗುಲ್ಬರ್ಗ ತಾಲ್ಲೂಕಿನ 7 ಕ್ಷೇತ್ರಗಳ ಪೈಕಿ ಆರರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ಆರು ಸ್ಥಾನಗಳ ಪೈಕಿ ನಾಲ್ಕು ಕ್ಷೇತ್ರ ವಶಪಡಿಸಿಕೊಂಡ ಚಿಂಚೋಳಿ ತಾಲ್ಲೂಕು ಸ್ಥಿತಿ ಕೂಡ ಉತ್ತಮ ಎಂಬಂತಿದೆ.“ಆಡಳಿತಾರೂಢ ಸರ್ಕಾರ, ಸಂಪುಟ ಸಭೆ ಸೇರಿದಂತೆ ಹಲವು ಕೊಡುಗೆಗಳನ್ನು ಈ ಜಿಲ್ಲೆಗೆ ನೀಡಿದ್ದಾಗಿ ಮುಖ್ಯಮಂತ್ರಿ ಹೇಳಿಕೊಳ್ಳುತ್ತಿದ್ದರು. ಇದಕ್ಕೆ ತಕ್ಕಂತೆ ನಮ್ಮ ಪಕ್ಷದ ಇಬ್ಬರು ಶಾಸಕರು ಇನ್ನಷ್ಟು ಚುರುಕಾಗಿ ತಮ್ಮ ತಾಲ್ಲೂಕುಗಳಲ್ಲಿ ಕೆಲಸ ಮಾಡಿದ್ದರೆ ಜಿಲ್ಲಾ ಪಂಚಾಯಿತಿಯಲ್ಲಿ ನಮ್ಮದೇ ಆದ ಬಹುಮತವನ್ನು ಪಡೆಯಲು ಸಾಧ್ಯವಾಗುತ್ತಿತ್ತು” ಎಂದು ಬಿಜೆಪಿಯ ನೂತನ ಜಿಪಂ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.