ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ

ಮಂಗಳವಾರ, ಏಪ್ರಿಲ್ 23, 2019
25 °C

ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ

Published:
Updated:

ಬೆಂಗಳೂರು: ವ್ಯಾಜ್ಯದಲ್ಲಿರುವ ಆಸ್ತಿ ವಿಚಾರವನ್ನು ಬಗೆಹರಿಸಿಕೊಡಲು ರಿಯಲ್ ಎಸ್ಟೇಟ್ ಏಜೆಂಟ್‌ನಿಂದ ₹ 7 ಲಕ್ಷ ಲಂಚ ಪಡೆದ ಆರೋಪದಲ್ಲಿ ಕೆಂಗೇರಿ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ವಿ.ಎಸ್. ಶಬರೀಶ್ ಹಾಗೂ ಬ್ಯಾಂಕ್‌ವೊಂದರ ನಿವೃತ್ತ ಉದ್ಯೋಗಿ ಹುಲ್ಲೂರಯ್ಯ ಎಂಬಾತನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಬಂಧಿಸಿದ್ದಾರೆ. 

ಹೊಟೇಲ್‌ವೊಂದರಲ್ಲಿ ಮಂಗಳವಾರ ಏಜೆಂಟ್‌ನಿಂದ ಹಣ ಪಡೆಯುವ ವೇಳೆ ಶಬರೀಶ್ ಹಾಗೂ ಹುಲ್ಲೂರಯ್ಯ ಅವರನ್ನು ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿ ತಿಳಿಸಿದರು. 

ಬೆಂಗಳೂರಿನ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರು 2013ರಲ್ಲಿ ಮಾಗಡಿಯಲ್ಲಿ ಜಮೀನು ಖರೀದಿಸಿ ನಿವೇಶನ ಮಾಡಿ ಮಾರಾಟ ಮಾಡಿದ್ದರು. ನಿವೇಶನ ವಿಚಾರವಾಗಿ ತಕರಾರುಗಳು ಇದ್ದ ಕಾರಣ ಖರೀದಿ ಮಾಡಿದ್ದ 40ಕ್ಕೂ ಹೆಚ್ಚು ಜನರಿಗೆ ನಿವೇಶನವನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಆಸ್ತಿಯನ್ನು ವಾಪಸ್ ತೆಗೆದುಕೊಂಡು ತಮ್ಮ ಹಣವನ್ನು ಮರಳಿಸುವಂತೆ ಏಜೆಂಟ್‌ಗೆ ಮನವಿ ಮಾಡಿದ್ದರು. ಅದಕ್ಕೆ ಆತ ಸ್ಪಂದಿಸದ ಕಾರಣ ನಿವೇಶನ ಖರೀದಿಸಿದವರು, ಮಾಗಡಿ ಪೊಲೀಸ್ ಠಾಣೆಗೆ ಸಂಪರ್ಕಿಸಿದ್ದರು.  

ಠಾಣೆಯ ಸಿಪಿಐ ಆಗಿದ್ದ ವಿ.ಎಸ್. ಶಬರೀಶ್ ಈ ಕುರಿತು ವಿಚಾರಣೆ ನಡೆಸಿದ್ದರು. ಆದರೆ, ಇತ್ತೀಚೆಗೆ ಅವರನ್ನು ಮಾಗಡಿಯಿಂದ ಕೆಂಗೇರಿ ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. 

ತಮ್ಮ ವ್ಯಾಪ್ತಿ ಇಲ್ಲದಿದ್ದರೂ ಆಸ್ತಿ ವಿಚಾರವಾಗಿ ಮಧ್ಯಸ್ಥಿಕೆ ಮುಂದುವರೆಸಿದ್ದ ಇನ್ಸ್‌ಪೆಕ್ಟರ್ ಶಬರೀಶ್ ಅವರು, ವಿಷಯವನ್ನು ಮುಕ್ತಾಯಗೊಳಿಸಲು ₹15 ಲಕ್ಷ ನೀಡಬೇಕು. ಇಲ್ಲದಿದ್ದರೆ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದರು. ಲಂಚ ನೀಡಲು ಇಚ್ಛಿಸದ ರಿಯಲ್ ಎಸ್ಟೇಟ್ ಏಜೆಂಟ್ ದೂರು ನೀಡಿದ್ದರು ಎಂದು ಎಸಿಬಿಯ ಹಿರಿಯ ಅಧಿಕಾರಿ ತಿಳಿಸಿದರು.

ಹೊಟೇಲ್‌ವೊಂದರಲ್ಲಿ ದೂರುದಾರರಿಂದ ಮುಂಗಡವಾಗಿ ₹7 ಲಕ್ಷ ಲಂಚ ಪಡೆಯುವ ವೇಳೆ ಇನ್ಸ್‌ಪೆಕ್ಟರ್ ಶಬರೀಶ್ ಹಾಗೂ ಹುಲ್ಲೂರಯ್ಯ ಅವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಅಧಿಕಾರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !