ಮಳೆ ನಿರೀಕ್ಷೆಯಲ್ಲಿ ಬಿತ್ತನೆ ಬೀಜ ಸಂಗ್ರಹ; ಅಲ್ಲಲ್ಲಿ ಕೃಷಿ ಚಟುವಟಿಕೆ ಆರಂಭ

ಮಂಗಳವಾರ, ಜೂನ್ 18, 2019
31 °C
ಇನ್ನೂ ಸರಿಯಾಗಿ ಸುರಿಯದ ಮುಂಗಾರು ಪೂರ್ವ ವರ್ಷಧಾರೆ

ಮಳೆ ನಿರೀಕ್ಷೆಯಲ್ಲಿ ಬಿತ್ತನೆ ಬೀಜ ಸಂಗ್ರಹ; ಅಲ್ಲಲ್ಲಿ ಕೃಷಿ ಚಟುವಟಿಕೆ ಆರಂಭ

Published:
Updated:
Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಸಾಕಷ್ಟು ಪ್ರಮಾಣದಲ್ಲಿ ಬಾರದೇ ಇದ್ದರೂ ಮುಂದೆ ಮಳೆ ಚೆನ್ನಾಗಿ ಸುರಿಯಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಅಲ್ಲಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.

ಮಳೆ ಬಂದ ತಕ್ಷಣ ಬಿತ್ತನೆ ಮಾಡುವ ಉದ್ದೇಶದಿಂದ ಬಹುತೇಕ ರೈತರು ಬಿತ್ತನೆ ಬೀಜಗಳನ್ನು ಸಂಗ್ರಹಿಸಿಕೊಟ್ಟುಕೊಳ್ಳಲು ಮುಂದಾಗಿದ್ದಾರೆ. 15 ದಿನಗಳಿಂದೀಚೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಆಗುತ್ತಿರುವುದರಿಂದ ಕೃಷಿ ಇಲಾಖೆ ಕೂಡ 16 ಹೋಬಳಿಗಳಲ್ಲಿರುವ 16 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲು ಆರಂಭಿಸಿದೆ. ಅಲಸಂದೆ, ಹೆಸರು, ಉದ್ದು, ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ ಬೀಜಗಳನ್ನು ವಿತರಿಸಲಾಗುತ್ತಿದೆ.

‘ನಮ್ಮಲ್ಲಿ 537 ಕ್ವಿಂಟಲ್‌ಗಳಷ್ಟು ಬಿತ್ತನೆ ಬೀಜ ದಾಸ್ತಾನು ಇತ್ತು. ಇದುವರೆಗೆ 327 ಕ್ವಿಂಟಲ್‌ಗಳಷ್ಟು ವಿತರಣೆ ಮಾಡಲಾಗಿದೆ. ಸದ್ಯಕ್ಕೆ ಬೀಜಗಳ ಕೊರತೆ ಇಲ್ಲ. ಅಗತ್ಯಬಿದ್ದರೆ ಇನ್ನಷ್ಟು ಬೀಜಗಳನ್ನು ಪೂರೈಸಲಾಗುವುದು. ಹತ್ತಿ ಬೀಜ ನಮ್ಮಲ್ಲಿ ಇಲ್ಲ. ಆದರೆ, ಖಾಸಗಿಯವರ ಬಳಿ ಸಾಕಷ್ಟು ದಾಸ್ತಾನು ಇದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಂ.ತಿರುಮಲೇಶ ‘ಪ್ರಜಾವಾಣಿ’ಗೆ ತಿಳಿಸಿದರು.

ರಸಗೊಬ್ಬರ: ‘ನಮ್ಮಲ್ಲಿ ಸಾಕಷ್ಟು ರಸಗೊಬ್ಬರ ದಾಸ್ತಾನು ಇದೆ. ಖಾಸಗಿಯವರ ಹಾಗೂ ಕೆಎಸ್‌ಸಿಎಂಎಫ್‌ ಬಳಿ ಯೂರಿಯಾ, ಡಿಎಪಿ, ಎಂಒಪಿ ಎಸ್‌ಎಸ್‌ಪಿ ಹಾಗೂ ಕಾಂಪ್ಲೆಕ್ಸ್‌ಗಳು ಸೇರಿದಂತೆ 4,159 ಟನ್‌ಗಳಷ್ಟು ರಸಗೊಬ್ಬರ ಸಂಗ್ರಹ ಇದೆ’ ಎಂದು ಅವರು ಮಾಹಿತಿ ನೀಡಿದರು.

ಕಡಿಮೆ ಮಳೆ: ಸಾಮಾನ್ಯವಾಗಿ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಮಳೆಯಾಗುತ್ತದೆ. ಕಳೆದ ವರ್ಷ ಜಿಲ್ಲೆಯಲ್ಲಿ ಮುಂಗಾರಿಗೂ ಮೊದಲು ಉತ್ತಮ ಮಳೆಯಾಗಿತ್ತು. ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಕೊಳ್ಳೇಗಾಲ ತಾಲ್ಲೂಕಿನಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. 

ಈ ಎರಡು ತಿಂಗಳಲ್ಲಿ (ಏ.26ರ ವರೆಗೆ) ಜಿಲ್ಲೆಯಲ್ಲಿ ಸಾಮಾನ್ಯವಾಗಿ 66 ಮಿ.ಮೀ ಮಳೆಯಾಗುತ್ತದೆ. ಈ ಸಲ 52 ಮಿ.ಮೀ ಮಳೆಯಾಗಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ ಶೇ 21ರಷ್ಟು ಮಳೆ ಕೊರತೆ ಆಗಿದೆ. ಜನವರಿ 1ರಿಂದ ಇಲ್ಲಿವರೆಗೆ ಬಿದ್ದ ಮಳೆಯ ಅಂಕಿ– ಅಂಶಗಳನ್ನು ನೋಡಿದರೆ ಶೇ 16ರಷ್ಟು ಕಡಿಮೆ ಮಳೆ ಯಾಗಿದೆ. ನಾಲ್ಕು ತಿಂಗಳ ಅವಧಿಯಲ್ಲಿ 74 ಮಿ.ಮೀ ವಾಡಿಕೆ ಮಳೆಯಾಗುತ್ತದೆ. ಈ ವರ್ಷ 62 ಮಿ.ಮೀ ಆಗಿದೆ.

ಕೊಳ್ಳೇಗಾಲದಲ್ಲಿ ಹೆಚ್ಚು: ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಗೆ ಬರುವ ಹನೂರು ಭಾಗದಲ್ಲಿ ಹೆಚ್ಚು ಮಳೆ ಸುರಿದಿದೆ. ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ (26ರ ವರೆಗೆ) ಕೊಳ್ಳೇಗಾಲ ತಾಲ್ಲೂಕಿನಲ್ಲಿ 66 ಮಿ.ಮೀ ಮಳೆಯಾಗುತ್ತದೆ. ಈ ವರ್ಷ 64 ಮಿ.ಮೀ ಮಳೆ ಬಿದ್ದಿದೆ. ಜನವರಿ 1ರಿಂದ ಬಿದ್ದ ಮಳೆಯ ಪ್ರಮಾಣವೂ ಶೇ 17ರಷ್ಟು ಹೆಚ್ಚಿದೆ. ವಾಡಿಕೆಯ 69 ಮಿ.ಮೀ ಹೋಲಿಸಿದರೆ, ಈ ಬಾರಿ 80 ಮಿ.ಮೀ ಮಳೆಯಾಗಿದೆ. 

ತಾಲ್ಲೂಕಿನ ಲೊಕ್ಕನಹಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಜನವರಿ 1ರಿಂದ ಇದುವರೆಗೆ ಇಲ್ಲಿ 94 ಮಿ.ಮೀ ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 72 ಮಿ.ಮೀ ಮಳೆಯಾಗುತ್ತದೆ.

ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಸತತ ಮಳೆಯಾಗಿದ್ದರೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಈ ಬಾರಿ ಶೇ 34ರಷ್ಟು ಮಳೆ ಕೊರತೆ ಉಂಟಾಗಿದೆ. ಮಾರ್ಚ್‌ 1ರಿಂದ ಇದುವರೆಗೆ (ಏಪ್ರಿಲ್‌) ತಾಲ್ಲೂಕಿನಲ್ಲಿ 76 ಮಿ.ಮೀ ಮಳೆಯಾಗುತ್ತದೆ. ಈ ವರ್ಷ 46 ಮಿ.ಮೀ ಮಳೆಯಾಗುವ ಮೂಲಕ ಶೇ 39ರಷ್ಟು ಮಳೆ ಕೊರತೆಯಾಗಿದೆ. 

ಬಿತ್ತನೆ ಆರಂಭ: ಮುಂದೆ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಗುಂಡ್ಲುಪೇಟೆ, ಹನೂರು ಭಾಗದಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಉಳುಮೆ ಮಾಡಿ ಮಣ್ಣನ್ನು ಹದ ಮಾಡುತ್ತಿದ್ದಾರೆ. ಗುಂಡ್ಲುಪೇಟೆ, ಕಸಬಾ ಮತ್ತು ಬೇಗೂರು ಹೋಬಳಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಿತ್ತನೆಯೂ ಆರಂಭವಾಗಿದೆ. 

ಮುಂದುವರಿದ ಬಿಸಿಲಿನ ವಾತಾವರಣ

ಜಿಲ್ಲೆಯ ಕೆಲವು ಕಡೆಗಳಲ್ಲಿ ಸಂಜೆ ಹೊತ್ತು ಮಳೆಯಾಗುತ್ತಿದ್ದರೂ ಹಗಲು ಹೊತ್ತಿನಲ್ಲಿ ಬಿಸಿಲಿನ ವಾತಾವರಣ ಮುಂದುವರಿದೆ. ಜಿಲ್ಲೆಯ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿದೆ. ಶುಕ್ರವಾರ ಜಿಲ್ಲೆಯಲ್ಲಿ 36.2 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣತೆ ದಾಖಲಾಗಿತ್ತು. 21.1 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣತೆ ದಾಖಲಾಗಿದೆ. 

ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಇದೇ 29, 30 ಮತ್ತು ಮೇ 1ರಂದು ಜಿಲ್ಲೆಯಲ್ಲಿ ಮಳೆಯಾಗಲಿದೆ. 30ರಂದು ಉತ್ತಮವಾಗಿ ಮಳೆ ಬೀಳಲಿದೆ.  

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !