ಬುಧವಾರ, ಆಗಸ್ಟ್ 10, 2022
20 °C
ಕಾರವಾರ ತಾಲ್ಲೂಕಿನ ಮಲ್ಲಾಪುರದ ಕುಗ್ರಾಮ ಕುಚೆಗಾರದಲ್ಲಿ ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ಯುವಕ

PV Web Exclusive | ಕುಗ್ರಾಮದಲ್ಲಿ ಪದವೀಧರನ ‘ಕ್ಷೀರಕ್ರಾಂತಿ’

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಎಲ್ಲರೂ ಒಂದು ದಾರಿಯಲ್ಲಿ ಓಡ್ತಿದ್ದಾರೆ ಅಂತ ನಾನೂ ಅವರ ಹಿಂದೆ ಓಡಿದರೆ 10 ಜನರಲ್ಲಿ ನಾನೂ ಒಬ್ಬ ಅಷ್ಟೇ. ಅದಕ್ಕಿಂತ ನಾನೇ ಬೇರೆ ದಾರಿಯಲ್ಲಿ ಹೋಗ್ತಿದ್ದಾಗ ನಾಲ್ಕಾರು ಜನ ನೋಡ್ತಾರೆ. ನನ್ನಿಂದ ಅವರೂ ಪ್ರೇರಣೆ ಪಡೆಯಬಹುದು...’

ತಾಲ್ಲೂಕಿನ ಮಲ್ಲಾಪುರ ಗ್ರಾಮದ ಕುಗ್ರಾಮ ಕುಚೆಗಾರದ ಯುವಕ, ಬಿ.ಕಾಂ ಪದವೀಧರ ಗಣಪತಿ ಭಟ್ ಈ ರೀತಿ ಹೇಳುತ್ತಿದ್ದರೆ ಅವರ ಮಾತಿನಲ್ಲಿ ಆತ್ಮವಿಶ್ವಾಸ ಕಾಣಿಸುತ್ತಿತ್ತು. ಐದು ವರ್ಷಗಳ ಹಿಂದೆ ಹೈನುಗಾರಿಕೆಯನ್ನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ಅವರು, ಕುಟುಂಬದ ಸಹಕಾರದಿಂದ ಅದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದಾರೆ.

ಕೇವಲ ಒಂದು ಆಕಳಿನಿಂದ ಆರಂಭಿಸಿ ಈಗ ಒಟ್ಟು 11 ಹಸುಗಳು ಹಾಗೂ ಆರು ಕರುಗಳನ್ನು ಸಾಕುವವರೆಗೆ ಅಭಿವೃದ್ಧಿ ಕಂಡಿದ್ದಾರೆ. ದಿನಕ್ಕೆ 90 ಲೀಟರ್ ಹಾಲು ಕರೆಯುತ್ತಿದ್ದು, ತಮ್ಮದೇ ಡೇರಿ ಮೂಲಕ ಹಾಲು ಮಾರಾಟ ಮಾಡುತ್ತಿದ್ದಾರೆ. ಕೈಗಾ ಅಣುವಿದ್ಯುತ್ ಸ್ಥಾವರದ ಸಿಬ್ಬಂದಿಯ ಮಲ್ಲಾಪುರದ ವಸತಿ ಸಮುಚ್ಛಯಕ್ಕೆ ಬೆಳಿಗ್ಗೆ ಹಾಗೂ ಸಂಜೆ ಹಾಲು ಪೂರೈಸುತ್ತಿದ್ದಾರೆ.

ಆಸಕ್ತಿ ಹೇಗೆ ಬಂತು?: ‘ನಾನು ಇಲ್ಲಿದ್ದರೂ ದೂರದ ನಗರಕ್ಕೆ ಹೋದರೂ ಕೆಲಸ ಮಾಡಲೇಬೇಕು. ಇಲ್ಲಿ ಕೆಲಸದ ಅಭದ್ರತೆ ಇಲ್ಲವೇ ಇಲ್ಲ. ನನ್ನಿಂದ ಎಷ್ಟು ವರ್ಷ ಸಾಧ್ಯವೋ ಅಷ್ಟು ವರ್ಷ ಕೆಲಸ ಮಾಡಬಹುದು. ನನ್ನನ್ನು ಕೆಲಸದಿಂದ ತೆಗೆದು ಹಾಕುವವರು ಯಾರೂ ಇಲ್ಲ. ನನಗೆ ಇಂತಿಷ್ಟು ವೇತನ ಬಡ್ತಿ ಕೊಡ್ತೇವೆ ಎಂದು ಹೇಳುವವರೂ ಇಲ್ಲ. ಯಾರದ್ದೋ ಆದೇಶದಂತೆ ನಾನು ಕೆಲಸ ಮಾಬೇಕಾಗಿಲ್ಲ. ನನಗೆ ಸರಿ ಕಂಡ ಕೆಲಸವನ್ನು ಮಾಡಬಹುದು. ನನಗೆ ಇನ್ನೂ ವಯಸ್ಸಿದೆ. ಇದೇ ಕಾರಣಕ್ಕೆ ನಾನು ಹೈನುಗಾರಿಕೆ ಶುರು ಮಾಡಿದೆ’ ಎಂದು ಗಣಪತಿ ತಮ್ಮ ವೃತ್ತಿಯ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

‘ನಾನು ದೂರದ ನಗರದಲ್ಲಿ ಉದ್ಯೋಗ ಪಡೆದು ಸಿಗುವ ವೇತನದಷ್ಟು ಆದಾಯವನ್ನು ಇಲ್ಲೇ ಪಡೆಯುತ್ತಿದ್ದೇನೆ. ಈ ಕೆಲಸದಲ್ಲಿ ಹಣ ಬರುವುದು ಸ್ವಲ್ಪ ತಡವಾಗಬಹುದು. ಆದರೆ, ಖಂಡಿತ ಬರುತ್ತದೆ. ಹೈನುಗಾರಿಕೆ ಕಷ್ಟ ಎಂದು ಬಹುತೇಕರು ಹೇಳುತ್ತಾರೆ. ಹಾಗಿದ್ದರೆ ಇದನ್ನೊಮ್ಮೆ ನೋಡೋಣ ಎಂದು ಆರಂಭದಲ್ಲಿ ಒಂದು ಆಕಳಿನಿಂದ ಆರಂಭಿಸಿದೆ. ಈಗ 17ಕ್ಕೇರಿದೆ’ ಎಂದು ಮುಗುಳ್ನಗುತ್ತಾರೆ.

ಅಧ್ಯಯನ ಅಗತ್ಯ: ‘ಯಾವುದೇ ಕ್ಷೇತ್ರಕ್ಕೆ ಧುಮುಕುವ ಮೊದಲು ಅದರಲ್ಲಿ ನಮಗೆ ಆಗಬಹುದಾದ ತೊಂದರೆ ಮತ್ತು ಸಿಗಬಹುದಾದ ಯಶಸ್ಸು ಎರಡನ್ನೂ ನೋಡಬೇಕು. ನಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಚೆನ್ನಾಗಿದೆಯೇ ಎಂದು ಅಧ್ಯಯನ ಮಾಡಬೇಕು. ಕೃಷಿಯಲ್ಲಿ ಬಹುತೇಕರು ಹಿನ್ನಡೆ ಅನುಭವಿಸಲು ಇದುವೇ ಕಾರಣ. ಅವರಿಗೆ ಮಾರುಕಟ್ಟೆ ಸೌಲಭ್ಯ ಸರಿಯಾಗಿ ಇರುವುದಿಲ್ಲ. ಏನೂ ಅಧ್ಯಯನ ಮಾಡದೇ ಏಕಾಏಕಿ ಬಂಡವಾಳ ಹೂಡುವುದರಿಂದ ತೊಂದರೆಯಾಗುತ್ತದೆ’ ಎಂದು ಅಭಿಪ್ರಾಯಪಡುತ್ತಾರೆ.

‘ನಾನು ಹೈನುಗಾರಿಕೆ ಆರಂಭಿಸುವ ಮೊದಲು ಆರು ತಿಂಗಳು ಸಾಕಷ್ಟು ಡೇರಿಗಳಿಗೆ ಭೇಟಿ ನೀಡಿದ್ದೆ. ಅವರು ಹೇಗೆ ಮಾಡುತ್ತಿದ್ದಾರೆ, ನಾನು ಹೇಗೆ ಮಾಡಬಹುದು ಎಂಬುದನ್ನು ಹೋಲಿಸಿಕೊಂಡೆ. ಅದರ ತಿಳಿವಳಿಕೆ ಬಂದಷ್ಟೂ ಯಶಸ್ಸಿನ ಪ್ರಮಾಣ ಹೆಚ್ಚಿತು’ ಎಂದು ಅನುಭವ ತೆರೆದಿಡುತ್ತಾರೆ.

ಕುಟುಂಬದ ಸಹಕಾರ:

‘ನಮ್ಮ ಕೆಲಸಗಳಿಗೆ ಕುಟುಂಬದ ಸಹಕಾರ ಸಿಕ್ಕಿದರೆ ಅರ್ಧ ಕೆಲಸ ಪೂರ್ಣಗೊಂಡಂತೆ ಆಗುತ್ತದೆ. ನಾನು ಪದವಿ ಅಧ್ಯಯನ ಮಾಡಿದ ಬಳಿಕ ಅಣ್ಣನ ಜೊತೆ ಚರ್ಚಿಸಿದೆ. ಕೃಷಿಯನ್ನೇ ಮುಂದುವರಿಸುವುದು ಎಂದು ನಿರ್ಧರಿಸಿದೆವು. ತಂದೆ, ತಾಯಿ ಕೂಡ ಸಹಮತ ಸೂಚಿಸಿದರು’ ಎಂದು ವಿವರಿಸುತ್ತಾರೆ.

ಗಣಪತಿ ಅವರ ಅಣ್ಣ ಸೂರಜ್ ಪ್ರಸಾದ ಬಿ.ಬಿ.ಎಂ ಕಾನೂನು ಪದವೀಧರ. ಅವರು ತಮ್ಮನ ಆಸಕ್ತಿಗೆ ಹೆಗಲು ಕೊಟ್ಟರು. ಮಲ್ಲಾಪುರದಲ್ಲಿ ಅಂಗಡಿ ವ್ಯವಹಾರವನ್ನು ಅವರು ನಿಭಾಯಿಸುತ್ತಾರೆ. ತಾಯಿ ಸವಿತಾ ಮನೆ ವ್ಯವಹಾರಗಳನ್ನು ನೋಡಿಕೊಂಡರೆ, ತಂದೆ ಮಹಾಬಲೇಶ್ವರ ಭಟ್, ಮಕ್ಕಳ ಕೆಲಸಕ್ಕೆ ಮಾರ್ಗದರ್ಶನ ಮಾಡುತ್ತ ಕೆಲಸದಲ್ಲಿ ನೆರವಾಗುತ್ತಾರೆ.

‘ಇಲ್ಲಿ ಏನೂ ಇಲ್ಲ. ಆಕಳಿಗೆ ಹಿಂಡಿ ತರಬೇಕಿದ್ದರೆ 55 ಕಿಲೋಮೀಟರ್ ದೂರದ ಯಲ್ಲಾಪುರಕ್ಕೆ ಹೋಗಬೇಕು. ಹುಲ್ಲು, ಜೋಳದ ದಂಟು ಎಲ್ಲವನ್ನೂ ಹೊರಗಿನಿಂದಲೇ ತರಬೇಕು. ಒಂದು ಒಳ್ಳೆಯ ಗುದ್ದಲಿ ಬೇಕಿದ್ದರೂ ಯಲ್ಲಾಪುರಕ್ಕೇ ಹೋಗಬೇಕು. ಈ ಭಾಗದಲ್ಲಿ ಪಶು ವೈದ್ಯರ ಕೊರತೆಯೂ ಇದೆ. ನಾನು ಆರಂಭದಲ್ಲಿ ಇಲ್ಲಿಗೆ ಬರುವಾಗ ಇಡೀ ಕಾರವಾರ ತಾಲ್ಲೂಕಿಗೆ ಒಬ್ಬರೇ ವೈದ್ಯರಿದ್ದರು. ಕಾರವಾರವೂ ಇಲ್ಲಿಂದ 55 ಕಿಲೋಮೀಟರ್ ದೂರವಿದೆ. ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಮಾಡಿ ಮತ್ತೊಬ್ಬರು ವೈದ್ಯರನ್ನು ನಮ್ಮೂರಿಗೆ ಕರೆಸಿಕೊಂಡೆವು’ ಎಂದು ಮಹಾಬಲೇಶ್ವರ ಭಟ್ ತಾವು ಎದುರಿಸಿದ ಸವಾಲುಗಳನ್ನು ವಿವರಿಸುತ್ತಾರೆ.

ಇಲಾಖೆಯ ಸಹಾಯ: ‘ಕಾಡು, ರಸ್ತೆಯಿಲ್ಲದ ಕುಚೆಗಾರದಲ್ಲಿ ಹೈನುಗಾರಿಕೆ ಮಾಡುತ್ತಿರುವುದು ನಿಜಕ್ಕೂ ಸಾಹಸ. ನಮ್ಮ ಇಲಾಖೆಯಿಂದ ಔಷಧಿ, ಆಕಳಿಗೆ ಕೃತಕ ಗರ್ಭಧಾರಣೆ, ಮೇವಿನ ಬೀಜಗಳು, ಜಲಮೇವು (ಹೈಡ್ರೊಫೋನಿಕ್) ಸೌಲಭ್ಯವನ್ನು ಅವರಿಗೆ ಕೊಡಲಾಗಿದೆ. ಹುಲ್ಲು ಕತ್ತರಿಸುವ ಯಂತ್ರವನ್ನೂ ಶೀಘ್ರವೇ ನೀಡಲಾಗುತ್ತದೆ. ಸರ್ಕಾರದ ವಿವಿಧ ಯೋಜನೆಗಳ ಸಹಕಾರ ಪಡೆದರೆ ಕೃಷಿ, ಹೈನುಗಾರಿಕೆಗೆ ಸಹಕಾರಿಯಾಗುತ್ತದೆ ಎಂಬುದಕ್ಕೆ ಇವರು ಉದಾಹರಣೆ’ ಎನ್ನುತ್ತಾರೆ. ದೇವಳಮಕ್ಕಿ ಪಶು ಆಸ್ಪತ್ರೆಯ ವೈದ್ಯ ಡಾ.ಪ್ರಕಾಶ ಸಂತಸ ವ್ಯಕ್ತಪಡಿಸುತ್ತಾರೆ.

ಗಣಪತಿ ಅವರಿಗೆ ಹೈನುಗಾರಿಕೆ ಮೇಲಿರುವ ಪ್ರೀತಿಯನ್ನು ಪರಿಗಣಿಸಿ 2019–20ನೇ ಸಾಲಿನಲ್ಲಿ ‘ಆತ್ಮ ಯೋಜನೆ’ಯಡಿ  ಕಾರವಾರ ತಾಲ್ಲೂಕುಮಟ್ಟದ ‘ಶ್ರೇಷ್ಠ ಕೃಷಿಕ– ಹೈನುಗಾರಿಕೆ’ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ, ಇಲಾಖೆಗಳ ಪ್ರೋತ್ಸಾಹದಿಂದ ಸಂತಸಗೊಂಡಿರುವ ಕುಟುಂಬವು ಈಗ ಹೈನುಗಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ಯೋಜಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು