ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಮಾಸು? ಅದು ಬೀಳಬಿದ್ದರೆ ತ್ರಾಸು

ಅಕ್ಷರ ಗಾತ್ರ

ಹಿಂದಿನ ದಿನ ಕರು ಹಾಕಿದ ತಮ್ಮ ಜರ್ಸಿ ಹಸುವಿನ ಮಾಸು/ಸತ್ತೆ ಇನ್ನೂ ಬಿದ್ದಿಲ್ಲ ಎಂಬ ದೂರು ನೀಡಿದ ಶಿವಳ್ಳಿಯ ನಿಂಗಣ್ಣನವರ ಮನೆಯ ಕೊಟ್ಟಿಗೆಗೆ ಹೋದ ಪಶುವೈದ್ಯರಿಗೆ ಕಂಡಿದ್ದು -ಅವರ ಹಸುವಿನ ಹಿಂಭಾಗದಲ್ಲಿ ಜೋತಾಡುತ್ತಿದ್ದ ಸತ್ತೆಗೆ ಒಂದು ಪೊರಕೆ ಕಟ್ಟಿಕೊಂಡಿದ್ದ ದೃಶ್ಯ.

ನಿಂಗಣ್ಣ ಈ ಹಸುವನ್ನು ಇತರ ರಾಸುಗಳಿಂದ ಕೊಂಚ ದೂರವೇನೋ ಕಟ್ಟಿದ್ದರು. ಎದುರಿಗೇ ಅದರ ಪುಟ್ಟ ಕರು. ಸ್ವಚ್ಛವಾದ ನೆಲಹಾಸು. ಮೈತೊಳೆಸಿ ಶುಭ್ರವಾಗಿ ಕಾಣುತ್ತಿದ್ದ ಚುರುಕಾದ ಬಾಣಂತಿ ಹಸು. ಎಲ್ಲಾ ಓಕೆ. ಆದರೆ ಪೊರಕೆ ಯಾಕೆ?

ಮಾಸುಚೀಲವು ತಾಯಿಯ ಗರ್ಭಕೋಶದೊಳಗೆ ಕರುವನ್ನು ಆವರಿಸಿರುತ್ತದೆ. ದಿನ ತುಂಬಿ ಒಮ್ಮೆ ಕರು ಹೊರಜಗತ್ತನ್ನು ಪ್ರವೇಶಿಸಿದೊಡನೆ ಈ ಮಾಸುಚೀಲದ ಕೆಲಸ ಮುಗಿಯಿತು. ಈಗ ಅದು ತಾಯಿಯ ದೇಹಕ್ಕೆ ಬೇಡವಾದ ವಸ್ತು. ಹಾಗಂತ ಕರು ಹಾಕಿದೊಡನೆಯೇ ಮಾಸು ಹೊರಬೀಳುವುದಿಲ್ಲ. ಒಂದು ಗಂಟೆಯಿಂದ ಎಂಟು ಹತ್ತು ತಾಸುಗಳಾದರೂ ಬೇಕಾಗಬಹುದು. ಇದು ಹನ್ನೆರಡು ತಾಸಾದರೂ ಬೀಳದಿದ್ದರೆ ಸೂಕ್ತ ಚಿಕಿತ್ಸೆ ಅಗತ್ಯ. ಆದರೆ ಕೆಲ ರೈತರಿಗೆ ಆತುರ. ಮಾಸು ಬೀಳದ ಹೊರತು ಅವರ ಚಡಪಡಿಕೆ ನಿಲ್ಲದು. ಪೊರಕೆ, ಚಪ್ಪಲಿಯಂತಹ ವಸ್ತುಗಳನ್ನು ಕಟ್ಟಿ ಅದರ ಭಾರಕ್ಕೆ ಮಾಸು ಬೇಗ ಬೀಳುತ್ತೇನೋ ಎಂದು ನಿರೀಕ್ಷಿಸುವುದು ಅನುಸರಿಸಬಾರದ ಪದ್ಧತಿಗಳಲ್ಲೊಂದು!

ಏನಿದು ಮಾಸು?

ಕರುವಿಗೆ ಆಹಾರಾಂಶವನ್ನು ಪೂರೈಸಲು, ಚಯಾಪಚಯ ಕ್ರಿಯೆಯ ತ್ಯಾಜ್ಯ ವಸ್ತುಗಳನ್ನು ಹೊರಹಾಕಲು, ಭೌತಿಕ ರಕ್ಷಣೆ ನೀಡಲು, ಪ್ರಸವದ ನಂತರ ತಾಯಿಯ ಹಾಲು ಉತ್ಪಾದನೆಯನ್ನು ಪ್ರಚೋದಿಸುವ ಹಾರ್ಮೋನುಗಳನ್ನು ಮತ್ತು ಕಿಣ್ವಗಳನ್ನು ಉತ್ಪಾದಿಸಲು, ಹಾಗೂ ಪ್ರಸವ ಕ್ರಿಯೆ ಸುಲಲಿತಗೊಳ್ಳುವಂತೆ ನೋಡಿಕೊಳ್ಳಲು ಮಾಸುಚೀಲ ಸಹಕಾರಿ. ಇದು ತಾಯಿ ಮತ್ತು ಕರುವಿನ ಮಧ್ಯೆ ಇರುವ ಮಾಧ್ಯಮ.

ತಾಯಿ ಮತ್ತು ಮಾಸು ಚೀಲದ ನಡುವಿನ ಸಂಪರ್ಕ ಹೇಗಿರುತ್ತದೆಂದರೆ -ಅತ್ತ ಕಡೆ ತಾಯಿಯ ಗರ್ಭಕೋಶದ ಒಳಮೈಯಲ್ಲಿರುವ ಜೀವಕೋಶಗಳ ಲೋಳ್ಪದರ ಮತ್ತು ಮಾಸುಚೀಲದ ಹೊರಮೈಯಲ್ಲಿರುವ ಜೀವಕೋಶಗಳ ಪದರಗಳು ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. ನಮ್ಮ ಎರಡೂ ಕೈಗಳ ಎಲ್ಲಾ ಬೆರಳುಗಳನ್ನು ಪರಸ್ಪರ ಬೆಸೆದರೆ ಹೇಗಿರುತ್ತದೆಯೋ ಹಾಗೆ. ಸುಮಾರು 70 ರಿಂದ 120 ಕಡೆಗಳಲ್ಲಿ ನಿಂಬೆಹಣ್ಣಿನ ಗಾತ್ರದ ಗಂಟುಗಳಂತೆ ತೋರುವ ಪ್ಲಾಸೆಂಟೋಮ್ ಎಂದು ಕರೆಯುವ ಈ ಬೆಸುಗೆಗಳು ಏರ್ಪಟ್ಟಿರುತ್ತವೆ. ನಂತರ ಈ ಬೆಸುಗೆಗಳೆಲ್ಲವೂ ತಂತಾನೇ ಕಳಚಿಕೊಂಡು ‘ಮಾಸು ಬೀಳುತ್ತದೆ’. ಕರು ಹಾಕುವಾಗ ಮತ್ತು ಮಾಸು ಬೀಳುವಾಗ ರಕ್ತಸ್ರಾವವಾಗುವುದು ಈ ಬೇರ್ಪಡಿಕೆಯಿಂದಾಗಿಯೇ. ಇಷ್ಟು ಬೆಸುಗೆಗಳಲ್ಲಿ ಕೆಲವೇ ಕೆಲವೊಂದಷ್ಟು ಕಳಚಿಕೊಳ್ಳದೇ ಉಳಿದರೂ ಮಾಸು ಬೀಳಲಾರದು. ಇಂತಹ ಸಂದರ್ಭದಲ್ಲಿ ಮಾಸು ತೆಗೆಯುವಾಗ ಗರ್ಭಕೋಶದೊಳಕ್ಕೆ ಕೈಹಾಕಿ ಬಿಡಿಸಬೇಕಾದ್ದು ಇದೇ ಗಂಟುಗಳನ್ನು. ಕೆಲವೊಮ್ಮೆ ಗರ್ಭಕೋಶವು ಹೊರಚಾಚಿಕೊಂಡು ನೆನೆ ಬಂದಿರುವುದನ್ನು ಹಲವರು ನೋಡಿರಬಹುದು. ಆಗ ಗರ್ಭಕೋಶದ ಮೇಲೆ ಕೆಂಪಗೆ ಗಂಟುಗಂಟಾಗಿ ಕಾಣುವುದು ಇದೇ ಪ್ಲಾಸೆಂಟೋಮುಗಳು. ರಕ್ತಪರಿಚಲನೆ ಹೆಚ್ಚಿರುವುದರಿಂದ ಇವಕ್ಕೆ ಪೆಟ್ಟಾದರೆ ಬಹಳಷ್ಟು ರಕ್ತಸ್ರಾವ ಉಂಟಾಗುತ್ತದೆ. ಹೀಗಾಗಿ ಮಾಸು ತೆಗೆಯುವಾಗ ಅಥವಾ ನೆನೆಯನ್ನು ಒಳಗೆ ಸೇರಿಸುವಾಗ ಈ ಗಂಟುಗಳಿಗೆ ಪೆಟ್ಟಾಗದಂತೆ ಎಚ್ಚರವಹಿಸಬೇಕಾಗುತ್ತದೆ.

ಈ ಪ್ಲಾಸೆಂಟೋಮುಗಳ ಮೂಲಕ ಆಹಾರಾಂಶ ಮತ್ತು ಆಮ್ಲಜನಕಭರಿತವಾದ ರಕ್ತವು ತಾಯಿಯ ಕಡೆಯಿಂದ ಕರುವಿನ ಕಡೆಗೂ, ಕರುವಿನ ಚಯಾಪಚಯ ಕ್ರಿಯೆಯಿಂದುಂಟಾದ ವಿಸರ್ಜನೆಯ ವಸ್ತುಗಳನ್ನೊಳಗೊಂಡ ಮಲಿನರಕ್ತವು ಕರುವಿನ ಕಡೆಯಿಂದ ತಾಯಿಯ ಕಡೆಗೂ ಪ್ರವಹಿಸುತ್ತದೆ. ಈ ರಕ್ತಪರಿಚಲನೆಯನ್ನು ಕೈಗೊಳ್ಳುವ ರಕ್ತನಾಳಗಳಿಗೆ ಒಟ್ಟಾಗಿ ‘ಹೊಕ್ಕುಳುಬಳ್ಳಿ’ ಎನ್ನುತ್ತಾರೆ. ಇವು ಮಾಸುಚೀಲದಿಂದ ಕರುವಿನ ದೇಹವನ್ನು ಪ್ರವೇಶಿಸುವ ಜಾಗವೇ ಹೊಕ್ಕುಳು. ಕಿರುಬೆರಳ ಗಾತ್ರದ ಹೊಕ್ಕುಳುಬಳ್ಳಿ ಪ್ರಸವದ ಸಮಯದಲ್ಲಿ ಸಾಮಾನ್ಯವಾಗಿ ತಂತಾನೇ ತುಂಡಾಗುತ್ತದೆ. ಒಂದುವೇಳೆ ಇದು ತುಂಡಾಗದೇ ಉಳಿದರೆ ಕರುವಿನ ಹೊಕ್ಕುಳಿನಿಂದ ಒಂದೂವರೆ ಇಂಚು ದೂರದಲ್ಲಿ ದಾರದಿಂದ ಕಟ್ಟಿ ಅದರ ಕೆಳಗೆ ಹೊಸ ಬ್ಲೇಡು ಅಥವಾ ಶುಭ್ರ ಕತ್ತರಿಯಿಂದ ಕತ್ತರಿಸಬೇಕು. ಆ ಜಾಗಕ್ಕೆ ಕೊಂಚ ಅರಿಷಿಣ ಅಥವಾ ಅಯೋಡಿನ್ ಮುಲಾಮನ್ನು ಲೇಪಿಸಬೇಕು.

ಮಾಸು ಬೀಳದಿರಲು ಕಾರಣಗಳು

ಗರ್ಭಧರಿಸಿದ ರಾಸುಗಳಲ್ಲಿ ಪೌಷ್ಟಿಕಾಂಶ ಕೊರತೆ, ನಿಶ್ಯಕ್ತಿ, ಬಲಹೀನತೆ, ರಕ್ತಹೀನತೆ, ನಿರ್ಜಲೀಕರಣ (ಡೀಹೈಡ್ರೇಶನ್), ಕ್ಯಾಲ್ಸಿಯಂ ಹಾಗೂ ಇತರೆ ಲವಣಾಂಶಗಳ ಕೊರತೆಯಿಂದ, ರಾಸುಗಳನ್ನು ನಡೆದಾಡಲು ಬಿಡದಿದ್ದರೆ ಇತ್ಯಾದಿ ಕಾರಣಗಳಿಂದ ಮಾಸು ಬೀಳದಿರಬಹುದು. ಗರ್ಭಕೋಶದ ಸೋಂಕು, ಅತೀವ ಪ್ರಸವ ವೇದನೆ, ಗರ್ಭಪಾತ, ಪ್ರಸವದ ನಂತರ ನೋವು/ಬೇನೆ ಬರದಿರುವುದು, ಗರ್ಭಾಶಯ ತಿರುಚಿಕೊಳ್ಳುವುದು, ಅನುವಂಶೀಯತೆಯಿಂದ ವಿಚಿತ್ರ ಕರುಗಳ ಜನನವಾದರೆ ಕೂಡ ಮಾಸು ಸುಲಲಿತವಾಗಿ ಬೀಳಲಿಕ್ಕಿಲ್ಲ.

ಪ್ರಸವವಾದ ಮೇಲೆ ಮಾಸು ತಂತಾನೇ ಬೀಳಲು ತಾಯಿಗೆ ಒಂದು ಬಕೆಟ್ ಹೂಬಿಸಿ (ಉಗುರುಬೆಚ್ಚಗೆ) ನೀರಿಗೆ ಒಂದು ಲೋಟ ಬೆಲ್ಲ ಕದಡಿ ಕುಡಿಸಬಹುದು. ಕೆಲವರು ಭತ್ತವನ್ನು ಅಥವಾ ಬಿದಿರು ಸೊಪ್ಪನ್ನು ತಿನ್ನಿಸುತ್ತಾರೆ. ಒಂದೆರಡು ಲೋಳೆಸರ ಎಲೆಗಳನ್ನು ತಿನ್ನಿಸುವ ಪದ್ಧತಿಯೂ ಇದೆ. ಮುಖ್ಯವಾಗಿ ರಾಸುಗಳು ಗರ್ಭಧರಿಸಿದ ಎಂಟನೇ ತಿಂಗಳಿನಿಂದ ಪ್ರತಿದಿನ ಅರ್ಧದಿಂದ ಒಂದು ಕೆ.ಜಿಯಷ್ಟು ಮೊಳಕೆ ಬರಿಸಿದ ದ್ವಿದಳ ಧಾನ್ಯದ ಕಾಳುಗಳನ್ನು (ಹುರುಳಿ, ಉದ್ದು, ಹೆಸರು) ಬೇಯಿಸಿ, ರುಬ್ಬಿ ಕೊಡುತ್ತ ಬಂದರೆ ಮಾಸು ಸುಲಲಿತವಾಗಿ ಬೀಳುವುದಲ್ಲದೇ ಪ್ರಸವದ ಅಸುಪಾಸಿನಲ್ಲಿ ಕಂಡುಬರುವ ಹಲವಾರು ಅನಾರೋಗ್ಯಗಳನ್ನು ತಪ್ಪಿಸಬಹುದು. ಇದರಿಂದ ಹಾಲಿನ ಇಳುವರಿ ಹೆಚ್ಚ್ಚುತ್ತದೆ. ಮುಂದೆ ಬೇಗ ಬೆದೆಗೆ ಬರಲೂ ಸಹಕಾರಿ. ಯಲ್ಲಾಪುರದ ಮಂಜುನಾಥ ಗರ್ಭಧರಿಸಿದ ತಮ್ಮ ಎಲ್ಲ ಹಸುಗಳಿಗೂ ಎಂಟನೇ ತಿಂಗಳಿನಿಂದ ಆರಂಭಿಸಿ ಕರು ಹಾಕಿ ಹದಿನೈದು ದಿನಗಳ ತನಕ ತಪ್ಪದೇ ಮೊಳಕೆ ತರಿಸಿದ ಹುರುಳಿಯನ್ನು ದಿನಕ್ಕೆ ಅರ್ಧ ಕೆ.ಜಿಯಷ್ಟು ನೀಡುತ್ತಾರೆ. ಇದರಿಂದ ಕರುವಿನ ಬೆಳವಣಿಗೆ ಮತ್ತು ಬಾಣಂತಿ ಹಸುವಿನ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ಹಾಲು ಉತ್ಪಾದನೆ ಹೆಚ್ಚುತ್ತದೆ ಎಂಬುದು ಅವರ ಅಭಿಪ್ರಾಯ.

ಗಮನಿಸಬೇಕಾದ್ದು

ಸತ್ತೆ ಬೀಳದೇ ಹೋದರೆ ಚಿಂತಿಸಬೇಕಿಲ್ಲ, ಸತ್ತೆಯ ತುದಿಗೆ ಭಾರವಾದ ವಸ್ತುಗಳನ್ನು ಕಟ್ಟಬಾರದು. ಹನ್ನೆರಡು ತಾಸು ಕಳೆದರೂ ಬೀಳದಿದ್ದರೆ ಪಶುವೈದ್ಯರ ಸಲಹೆ ಪಡೆಯಬೇಕು. ಹಾಗೆಯೇ ಬಿಟ್ಟರೆ ಗರ್ಭಕೋಶಕ್ಕೆ ಸೋಂಕು ತಗಲುತ್ತದೆ. ದುರ್ವಾಸನೆ ಶುರುವಾಗುತ್ತದೆ. ಕ್ರಮೇಣ ರಕ್ತಕ್ಕೂ ಈ ನಂಜು ಸೇರಿಹೋಗಬಹುದು. ತೀವ್ರತರದ ಕೆಚ್ಚಲು ಬಾವು ಕೂಡ ತಲೆದೋರಬಹುದು. ಇತ್ತೀಚಿನ ಸಂಶೋಧನೆಗಳ ಪ್ರಕಾರ ಕಸ/ಸತ್ತೆ/ಮಾಸು ಚೀಲವನ್ನು ಕೈ ಹಾಕಿ ತೆಗೆಯುವ ಅಗತ್ಯವಿಲ್ಲ. ಬದಲಾಗಿ ಹೊರಗೆ ಕಾಣುತ್ತಿರುವಷ್ಟನ್ನು ಮಡಿಲಿನ ತುಟಿಗಳ ಮಟ್ಟದಲ್ಲಿ ಕತ್ತರಿಸಿ ಸೂಕ್ತ ಆಂಟಿಬಯೋಟಿಕ್ ಚಿಕಿತ್ಸೆ ಕೊಡಿಸುವುದು ಸೂಕ್ತ. ಹೀಗೆ ಮಾಡಿದಲ್ಲಿ ಹೆಚ್ಚೆಂದರೆ ಒಂದು ವಾರದಲ್ಲೇ ಸಂಪೂರ್ಣ ಸತ್ತೆ ಬೀಳುತ್ತದೆ. ಕೆಲವೊಮ್ಮೆ ಕೈಹಾಕಿ ಒತ್ತಾಯಪೂರ್ವಕವಾಗಿ ಸತ್ತೆ ತೆಗೆಯುವಾಗ ಗರ್ಭಕೋಶಕ್ಕೆ ಗಾಯಗಳಾಗಿ ಸೋಂಕು ಉಂಟಾಗುತ್ತದೆ. ಇದು ಬಂಜೆತನಕ್ಕೂ ಕಾರಣವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT