ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸುಗಳಲ್ಲಿ ಭತ್ತದ ಹೊಟ್ಟಿನ ಸಮಸ್ಯೆ

Last Updated 6 ಮೇ 2019, 20:00 IST
ಅಕ್ಷರ ಗಾತ್ರ

ಇನ್ನು ಮುಂದೆ ಭತ್ತದ ಹೊಟ್ಟಿನ ಕೊಯ್ಲಿನ ಸಮಯ. ಬಹಳಷ್ಟು ರೈತರು ಭತ್ತದ ಒಕ್ಕಲು ಆದ ಮೇಲೆ ಭತ್ತದಿಂದ ಹೊಟ್ಟನ್ನು ಬೇರ್ಪಡಿಸಿ ಹೊಲದಲ್ಲೋ ಅಥವಾ ಬಣವೆ ಹಾಕಿದಲ್ಲೋ ಚೆಲ್ಲುತ್ತಾರೆ. ಅಲ್ಲದೇ ಅಕ್ಕಿ ಗಿರಣಿಯವರೂ ಭತ್ತದಿಂದ ಅಕ್ಕಿ ಮಾಡಿದ ಮೇಲೆ ಉಳಿಯುವ ಹೊಟ್ಟನ್ನೂ ಹೊರಗೆ ಚೆಲ್ಲುತ್ತಾರೆ. ಬೇಸಿಗೆಯಲ್ಲಿ ಮೇವು ದೊರೆಯದ ಕಾರಣ, ಹಸಿದ ಜಾನುವಾರು ಈ ಭತ್ತದ ಹೊಟ್ಟನ್ನು ತಿನ್ನುವ ಸಂದರ್ಭ ಇರುತ್ತದೆ.

ಅಲ್ಪ ಸ್ವಲ್ಪ ಭತ್ತದ ಹೊಟ್ಟನ್ನು ತಿಂದರೆ ಜಾನುವಾರಿಗೆ ಏನೂ ಆಗದು. ಆದರೆ ಹೆಚ್ಚು ಪ್ರಮಾಣದಲ್ಲಿ ತಿಂದರೆ ತೊಂದರೆ ಕಟ್ಟಿಟ್ಟ ಬುತ್ತಿ. ಏಕೆಂದರೆ ಭತ್ತದ ಜೊಳ್ಳು ಅಥವಾ ಹೊಟ್ಟಿನಲ್ಲಿ ಯಾವುದೇ ಪೌಷ್ಟಿಕಾಂಶವಿರುವುದಿಲ್ಲ. ಹಾಗೆಂದು ಅದು ಜೀರ್ಣವಾಗುವುದೂ ಇಲ್ಲ. ಭತ್ತದ ಹೊಟ್ಟಿನ ಹೊರಮೈ ಒರಟಾಗಿ ಇರುವುದರಿಂದ ಹಾಗೂ ಅದರ ತುದಿಗಳು ಬಹಳ ಚೂಪಾಗಿರುವುದರಿಂದ, ಹೊಟ್ಟೆಯ ಹಾಗೂ ಕರುಳಿನ ಒಳಪದರಗಳಲ್ಲಿ ಉರಿಯೂತವಾಗುತ್ತದೆ.

ಲಕ್ಷಣಗಳು ಏನು?

ಭತ್ತದ ಹೊಟ್ಟು ತಿಂದ ಒಂದೆರಡು ಗಂಟೆಗಳಲ್ಲಿ ಅದರಿಂದಾದ ತೊಂದರೆಯ ಲಕ್ಷಣಗಳು ಕಂಡುಬರುತ್ತದೆ. ಅವುಗಳು ಈ ರೂಪದಲ್ಲಿ ಕಾಣಿಸಬಹುದು. ಮೊದಲನೆಯದಾಗಿ ಜಾನುವಾರು ಹೊಟ್ಟೆ ಉಬ್ಬಲು ಪ್ರಾರಂಭವಾಗುತ್ತದೆ. ಭತ್ತದ ಜೊಳ್ಳು ದೊಡ್ಡ ಮತ್ತು ಚಿಕ್ಕ ಹೊಟ್ಟೆಗಳನ್ನು ದಾಟಿ ಕರುಳನ್ನು ಪ್ರವೇಶಿಸುತ್ತಿದ್ದಂತೆ, ಹೊಟ್ಟು ಕರುಳನ್ನು ಕೊರೆಯುವುದರಿಂದ ಜಾನುವಾರಿಗೆ ಕರುಳಿನ ನೋವು ಶುರುವಾಗುತ್ತದೆ. ಜಾನುವಾರು ಪದೇ ಪದೇ ಮಲಗಿ ಏಳುತ್ತಿರುತ್ತದೆ. ಕೆಲವೊಮ್ಮೆ ನೋವು ತೀವ್ರವಾದಾಗ ಕರುಳು ಒಂದಕ್ಕೊಂದು ಸುತ್ತಿಕೊಳ್ಳುವುದೂ ಇದೆ. ಈ ರೀತಿ ಆದಲ್ಲಿ, ಸಗಣಿಯು ಬರುವುದು ನಿಂತು ಹೋಗುತ್ತದೆ. ಜಾನುವಾರು ತೀವ್ರ ನೋವಿನಿಂದ ನರಳುತ್ತಿರುತ್ತದೆ. ಈ ಹಂತದಲ್ಲಿ ಜಾನುವಾರು ಮೇವು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ. ರೋಗ ಲಕ್ಷಣಗಳು ಉಲ್ಬಣವಾಗಿ, ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಜಾನುವಾರು ಸಾವನ್ನಪ್ಪುತ್ತದೆ.

ಯಾವ ರೀತಿ ಚಿಕಿತ್ಸೆ?

ಆರಂಭದಲ್ಲೇ ಜೊಳ್ಳು ತಿಂದಿರುವುದು ಗೊತ್ತಾದರೆ, ಪ್ರಾಥಮಿಕ ಚಿಕಿತ್ಸೆಯಾಗಿ ಜಾನುವಾರುಗೆ 1 ಲೀಟರ್ ಮಜ್ಜಿಗೆಯಲ್ಲಿ 10 ಗ್ರಾಂ ಇಂಗು ಬೆರೆಸಿ ಕುಡಿಸಿದರೆ ಪ್ರಯೋಜನವಾಗುತ್ತದೆ. ತೀವ್ರ ಉಲ್ಭಣಗೊಂಡಾಗ ಉದರ ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟನ್ನು ಹೊರ ತೆಗೆಯಬೇಕಾಗಬಹುದು.

ತಡೆಗಟ್ಟುವಿಕೆ ಹೇಗೆ?

ಜಾನುವಾರುಗೆ ಭತ್ತದ ಹೊಟ್ಟು ಸಿಗದಿರುವ ಹಾಗೆ ನೋಡಿಕೊಳ್ಳಬೇಕು. ಯಾರೇ ಆಗಲಿ ಭತ್ತದ ಹೊಟ್ಟನ್ನು ಎಲ್ಲೆಂದರಲ್ಲಿ ಚೆಲ್ಲುವುದನ್ನು ಬಿಡಬೇಕು. ಜಾನುವಾರು ಸಾಕಣೆದಾರರು ಅಕ್ಕಿ ಗಿರಣಿಗಳ ಕಡೆ ರಾಸುಗಳು ಹೋಗದಂತೆ ಎಚ್ಚರವಹಿಸುವುದು ಒಳ್ಳೆಯದು. ಭತ್ತದ ಹೊಟ್ಟನ್ನು ತಿಂದು, ಮೇಲೆ ತಿಳಿಸಿದ ಅನಾರೋಗ್ಯದ ಲಕ್ಷಣಗಳು ಕಂಡುಬಂದ ಕೂಡಲೇ ತಜ್ಞ ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಬೇಕು. ವೈದ್ಯರು ಅವಶ್ಯವಿದ್ದಲ್ಲಿ ಉದರದ ಶಸ್ತ್ರಚಿಕಿತ್ಸೆ ಮಾಡಿ ಜಾನುವಾರನ್ನು ಉಳಿಸಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT