ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸುಗಳಿಗೂ ಬಂತು ‘ಸ್ಮೈಲೇಜ್ ಪ್ಯಾಕ್‌ ಫುಡ್‌’

ಹಸಿರುಮೇವಿನ ಮೂಟೆ- ತುಂಬಲಿದೆ ಜಾನುವಾರುಗಳ ಹೊಟ್ಟೆ
ಅಕ್ಷರ ಗಾತ್ರ

‘ಇನ್ನು ಮೇಲೆ ವರ್ಷಪೂರ್ತಿ ಹಸಿರು ಮೇವು ಕೊಡಬಹುದು’– ಹೀಗೆ ಹೇಳಿದರೆ, ‘ಇವನಿಗೆಲ್ಲ ತಲೆ ಸರಿ ಇಲ್ಲ’ ಎನ್ನುವವರೇ ಹೆಚ್ಚು. ಏಕೆಂದರೆ, ಇವತ್ತಿನ ಕೂಲಿ ಆಳುಗಳ ಕೊರತೆಯಲ್ಲಿ ವರ್ಷ ಪೂರ್ತಿ ಹಸಿರು ಮೇವು ಬೆಳೆಸುವುದು ಅಸಾಧ್ಯ. ಒಳಸುರಿಯ ಖರ್ಚು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಹಸಿರು ಮೇವು ಬೆಳೆಸಿ, ರಾಸುಗಳಿಗೆ ಕೊಡುವುದು ಸಾಹಸದ ಕೆಲಸ. ಇನ್ನು ರಸ ಮೇವು ತಯಾರಿಕೆ ವಿಧಾನ ಹೇಳಿಕೊಟ್ಟಿದ್ದರೂ, ಆ ಮೇವನ್ನು ಕಾಪಿಡುವುದುಕ್ಕೆ ತುಂಬಾ ಪರಿಶ್ರಮ ಹಾಕಬೇಕು.

ಇಂಥ ಅಡೆತಡೆಗಳ ನಡುವೆಯೂ ರಾಸುಗಳಿಗೆ ವರ್ಷ ಪೂರ್ತಿ ಹಸಿರು ಮೇವು ಕೊಡಲು ಸಾಧ್ಯವಿದೆ. ಅಂತ ಮೇವಿನ ರೆಡಿಮೇಡ್ ಉತ್ಪನ್ನವೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದೇ ನಿರ್ವಾತದಲ್ಲಿ ಪ್ಯಾಕ್ ಮಾಡಿದ ಪ್ಯಾಕ್ಡ್‌ ರಸಮೇವು. ಶಿವಮೊಗ್ಗ, ಸಾಗರ, ಶಿರಸಿ ಭಾಗದಲ್ಲಿ ರಸಮೇವಿನ ಪೊಟ್ಟಣಗಳನ್ನು ರೈತರು ಖರೀದಿಸಿ, ಜಾನುವಾರುಗಳಿಗೆ ನೀಡುತ್ತಿದ್ದಾರೆ. ‘ಪೊಟ್ಟಣದಲ್ಲಿ ರಸಮೇವು ಲಭ್ಯವಾಗುತ್ತಿರುವುದರಿಂದ, ನನಗೆ ಹಸಿರು ಮೇವಿನ ಕೊರತೆಯೇ ಅನುಭವಕ್ಕೆ ಬರುತ್ತಿಲ್ಲ. ಈ ಹೊಸ ಮೇವನ್ನು ನನ್ನ ಹಸುಗಳು ಖುಷಿಯಿಂದ ತಿನ್ನುತ್ತಿವೆ. ಹಾಲಿನ ಪ್ರಮಾಣವೂ ಹೆಚ್ಚಾಗಿದೆ’ ಎನ್ನುತ್ತಾರೆ ಶಿರಸಿ ಬಳಿಯ ಸೋಂದಾ ಗ್ರಾಮದ ಮಹೇಶ ಅರಗಿನಮನೆ.

‘ಆಳುಗಳ ಕೊರತೆಯಿಂದಾಗಿ ಹಸಿರು ಮೇವು ಬೆಳೆಸುವುದು ಕಷ್ಟ. ಹೈನುರಾಸುಗಳ ಆರೋಗ್ಯಕ್ಕೆ ಒತ್ತು ನೀಡಬೇಕು, ಹೆಚ್ಚು ಹಾಲು ಹಿಂಡಬೇಕೆಂದರೆ ಉತ್ತಮ ಗುಣಮಟ್ಟದ ಹಸಿರುಮೇವು ಬೇಕು. ಪಶುಗಳ ಆಹಾರವಾದ ಒಣಮೇವು ಮತ್ತು ಹಿಂಡಿ(ದಾಣಿ). ಹಿಂಡಿ ಬೇಕಾದರೆ ಹಣಕೊಟ್ಟು ಖರೀದಿಸಬಹುದು. ಆದರೆ ಹಸಿರು ಮೇವನ್ನು ನಾವೇ ಬೆಳೆಸಬೇಕಿತ್ತು. ಈಗ ಮಾರುಕಟ್ಟೆಯಲ್ಲಿ ಹಸಿರು ಮೇವು ಲಭ್ಯವಾಗುತ್ತಿರುವುದು ಮೇವಿನ ಕೊರತೆಯನ್ನು ನೀಗಿಸಿದಂತಾಗಿದೆ ಎಂಬುದು ಮಹೇಶ್ ಅಭಿಪ್ರಾಯ.

ಪ್ಯಾಕ್ಡ್‌ ರಸಮೇವು ತಯಾರಿ
ಈ ರಸಮೇವಿನ ಮೂಲ ಸರಕು ಆಫ್ರಿಕನ್ ಟಾಲ್ ತಳಿಯ ಮೇವಿನ ಜೋಳ. ಇದರ ಗಿಡವನ್ನು ಯಂತ್ರದ ಮೂಲಕ ಸಣ್ಣದಾಗಿ ಕತ್ತರಿಸಿ ಲ್ಯಾಕ್ಟೋಬ್ಯಾಸಿಲ್ಲಸ್‍ನಂತಹ ಸೂಕ್ಷ್ಮಾಣುಜೀವಿಯನ್ನು ಸೇರಿಸುತ್ತಾರೆ. ಇದು ಮೇವಿನ ಗುಣಮಟ್ಟ ಕಾಪಾಡಲು ಅಗತ್ಯವಾದ ಹುದುಗುವಿಕೆಗೆ ಸಹಾಯ ಮಾಡುತ್ತದೆ. ನಂತರ ಇದನ್ನು ಯಂತ್ರದ ಮೂಲಕ ಫುಡ್‌ಗ್ರೇಡ್ ಪ್ಲಾಸ್ಟಿಕ್ ಹಾಳೆಯಿಂದ ಉಂಡೆಯ ರೂಪದಲ್ಲಿ ಬಿಗಿಯಾಗಿ ಸುತ್ತುತ್ತಾರೆ. ಈ ಬಿಗಿತ ಎಷ್ಟು ಗಟ್ಟಿಯಾಗಿರುತ್ತದೆಂದರೆ ಒಳಗೆ ಕೊಂಚಕೂಡ ಗಾಳಿ ಸೇರುವುದಿಲ್ಲ. ನಂತರ ಇದನ್ನು 21 ದಿನಗಳವರೆಗೆ ಹುದುಗುವಿಕೆ (ಮೈಕ್ರೋಬಿಯಲ್ ಫರ್ಮಂಟೇಶನ್)ಗೆ ಬಿಡುತ್ತಾರೆ. ಇದೀಗ ಹಸಿರುಮೇವು ಬಿಸ್ಕೆಟ್ ಬಣ್ಣಕ್ಕೆ ತಿರುಗುತ್ತದೆ. ಒಳ್ಳೆಯ ಸುವಾಸನೆಯೂ ಬರುತ್ತದೆ. ಬೇಗ ಕೆಡುವುದಿಲ್ಲ. 75-80 ಕಿಲೋ ತೂಕದ ಉಂಡೆ ಈಗ ಮಾರುಕಟ್ಟೆಗೆ ಸಿದ್ಧ. ಇದನ್ನು ಒಮ್ಮೆ ತೆರೆದಮೇಲೆ ಶಿಲೀಂಧ್ರ ಬೆಳೆಯಲು ಅವಕಾಶವಾಗದಂತೆ ವಾರದ ಒಳಗೇ ಬಳಸಿಬಿಡಬೇಕು. ಹಾಗೆಂದು ಒಡೆಯದೇ ಈ ಉಂಡೆಯನ್ನು ಹಾಗೆಯೇ ಇಟ್ಟರೆ ಒಂದೂವರೆ ವರ್ಷಗಳ ತನಕ ಹಾಳಾಗುವುದಿಲ್ಲ.

ಶಿವಮೊಗ್ಗದ ಎಸ್.ಎಸ್.ಎಂಟರ್ಪ್ರೈಸಸ್ ಸಂಸ್ಥೆಯವರು ‘ಸ್ಮೈಲೇಜ್’ (Smailage) ಎಂಬ ಹೆಸರಿನಲ್ಲಿ ಈ ಉತ್ಪನ್ನವನ್ನು ಪೂರೈಕೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ತಯಾರಾಗುವ ಸ್ಮೈಲೇಜಿನ ಮೇವಿನುಂಡೆಗಳನ್ನು ಸಂಗ್ರಹಿಸಿಡಲು ಗುಬ್ಬಿ, ರಾಮನಗರ, ಶಿವಮೊಗ್ಗಗಳಲ್ಲಿ ಇವರ ದಾಸ್ತಾನು ಘಟಕಗಳಿವೆ.

ಆಫ್ರಿಕನ್‌ ಟಾಲ್‌ ಜೋಳದ ತಳಿಯನ್ನು ರಸಮೇವಿಗೆ ಬಳಸುತ್ತಾರೆ. ‘ಇದನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಸಿ, ಬಳಸುತ್ತೇವೆ ಎನ್ನುತ್ತಾರೆ’ ಕಂಪನಿಯ ಅಧಿಕಾರಿ ಶ್ರೀಹರ್ಷ. ಈ ಮೇವು ಆಕಳುಗಳಲ್ಲಿ ಹಾಲಿನ ಇಳುವರಿ ಹೆಚ್ಚಿಸುವುದರ ಜೊತೆಗೆ ರಾಸುಗಳನ್ನು ಆರೋಗ್ಯವಾಗಿಡುತ್ತದೆ. ಪ್ರತಿ ಹಸುವಿಗೆ ದಿನವೊಂದಕ್ಕೆ 15-20 ಕೆ.ಜಿ ತನಕ ಇದನ್ನು ಕೊಡಬಹುದು. ಪಶುಆಹಾರದ ಪ್ರಮಾಣವನ್ನು ಶೇ 30 ರಷ್ಟು ಕಡಿಮೆ ಮಾಡಬಹುದು. ಪ್ರತಿ ಕೆ.ಜಿಗೆ ಸುಮಾರು ₹10 ದರ. ಸಾಗಾಣಿಕೆಯ ವೆಚ್ಚ ಪ್ರತ್ಯೇಕ’ ಎಂದು ಅವರು ವಿವರಣೆ ನೀಡುತ್ತಾರೆ.

ರೈತರ ಒಂದು ಪುಟ್ಟ ಗುಂಪು ಅಥವಾ ರೈತ ಸಹಕಾರಿ ಸಂಸ್ಥೆಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಈ ಮೇವನ್ನು ತರಿಸಿಕೊಂಡರೆ ಹಣ ಉಳಿತಾಯವಾಗುತ್ತದೆ. ಈಗ ಶಿರಸಿಯ ತೋಟಗಾರಿಕಾ ಮಾರುಕಟ್ಟೆ ಸಂಸ್ಥೆ(ಟಿ.ಎಂ.ಎಸ್.)ಯು ಸ್ಮೈಲೇಜನ್ನು ತರಿಸಿ ಹತ್ತಿರದ ರೈತರಿಗೆ ಸರಬರಾಜು ಮಾಡುತ್ತಿದೆ.

ಕಂಪನಿ ನೀಡುವ ಮಾಹಿತಿಯ ಪ್ರಕಾರ ಈ ಮೇವನ್ನು ಬಳಸಿದರೆ ಶೇ 30 ರಷ್ಟು ಹಾಲಿನ ಉತ್ಪಾದನೆ, ಮತ್ತು ಎಸ್.ಎನ್.ಎಫ್‌, ಲ್ಯಾಕ್ಟೋಮೀಟರ್ ರೀಡಿಂಗ್ ಹಾಗೂ ಕೊಬ್ಬಿನಂಶದ ರೂಪದಲ್ಲಿ ಅದರ ಗುಣಮಟ್ಟ ಕೂಡ ಹೆಚ್ಚುತ್ತದೆ. ಈ ಎಲ್ಲ ಪರಿಣಾಮ ಕಾಣಬೇಕೆಂದರೆ, ಒಂದೂವರೆಯಿಂದ ಎರಡು ತಿಂಗಳುಗಳ ಕಾಲ ಈ ರಸಮೇವನ್ನು ಬಳಸಬೇಕು.

ನೀಡುವ ವಿಧಾನ
ಈ ರಸಮೇವು ಸುವಾಸನೆ ಬೀರುವುದರಿಂದ ಜಾನುವಾರುಗಳು ಇಷ್ಟಪಟ್ಟು ತಿನ್ನುತ್ತವೆ. ಅವುಗಳಿಗೆ ರೂಢಿಯಾಗುವ ತನಕ ರಸಮೇವಿನ ಪೆಂಡಿ(ಬೇಲ್)ಯನ್ನು ತೆರೆದು ಅರ್ಧ ಗಂಟೆ ಬಿಟ್ಟು ತಿನ್ನಿಸುವುದು ಉತ್ತಮ. ಹೊಸದಾಗಿ ಪ್ರಾರಂಭಿಸುವಾಗ ಮೊದಲ ದಿನ ಒಂದು ಕೆ.ಜಿಯಿಂದ ಪ್ರಾರಂಭಿಸಿ ಪ್ರತಿದಿನ ಅರ್ಧ ಕೆ.ಜಿ ಹೆಚ್ಚಿಸುತ್ತ ಬರಬೇಕು. ಸುಮಾರು ಹದಿನೈದು ದಿನಗಳಲ್ಲಿ ದಿನದಲ್ಲಿ ಎರಡು ಸಲದಂತೆ ತಲಾ ಏಳೂವರೆ ಕೆ.ಜಿ ನೀಡಬಹುದು. ಹೀಗೆ ಮಾಡಿದಾಗ ಇದು ಜಾನುವಾರುಗಳ ಜೀರ್ಣಕ್ರಿಯೆಗೆ ಸರಿಯಾಗಿ ಹೊಂದಿಕೊಳ್ಳುವುದಲ್ಲದೇ ಹೊಟ್ಟೆ ಆಮ್ಲೀಯವಾಗುವುದನ್ನು ತಡೆಯುತ್ತದೆ.

ಶಿರಸಿಯ ರೈತ ಸಂಜಯ ಸ್ವಾದಿಯವರು ಇದನ್ನು ಕಳೆದ ಎರಡು ತಿಂಗಳುಗಳಿಂದ ಬಳಸುತ್ತಿದ್ದಾರೆ. ಇದರಿಂದ ಹಾಲಿನ ಪ್ರಮಾಣ ಶೇ. 20ರಷ್ಟು ಹೆಚ್ಚಾಗಿದೆ ಮತ್ತು ಬೆಣ್ಣೆ ಕೂಡಾ ಹೆಚ್ಚು ಬರುತ್ತಿದೆ ಎಂಬುದು ಅವರ ಅಭಿಪ್ರಾಯ.

ಹೆಚ್ಚಿನ ಮಾಹಿತಿಗಾಗಿ‌ ಎಸ್.ಎಸ್.ಎಂಟರ್ಪ್ರೈಸಸ್, ಶಿವಮೊಗ್ಗ 8762312344, ಟಿಎಂಎಸ್ ಶಿರಸಿ 08384 236239 ಇವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT