ಶುಕ್ರವಾರ, ಏಪ್ರಿಲ್ 10, 2020
19 °C
ಮೌಲ್ಯವರ್ದಿತ ಉತ್ಪನ್ನಗಳ ಅನಾವರಣ

ಪ್ಲಾಸ್ಟಿಕ್ ಬದಲಿಗೆ ಬಿದಿರು ಪರ್ಯಾಯ- ಬೆಂಗಳೂರಿನಲ್ಲಿ ಬಿದಿರಿನ ಹಬ್ಬ

ವರುಣ್ ಹೆಗಡೆ Updated:

ಅಕ್ಷರ ಗಾತ್ರ : | |

ಆ ಮಳಿಗೆಯ ಎದುರು ನಿಂತ ಮಹಿಳೆಯರು, ಅಲ್ಲಿ ಜೋಡಿಸಿಟ್ಟಿದ್ದ ಪ್ರತಿ ವಸ್ತುಗಳನ್ನು ಆಸಕ್ತಿಯಿಂದ ನೋಡುತ್ತಿದ್ದರು. ಅವರ ನೋಟವನ್ನು ಒಂದು ಕ್ಷಣ ಸರಕ್ ಎಂದು ಸೆಳೆದಿದ್ದು ಅಲ್ಲೇ ಜೋಡಿಸಿಟ್ಟಿದ್ದ ‘ಸ್ಟ್ರಾ’ಗಳ (ಕೊಳವೆ) ಗೊಂಚಲು ! ಅದೇ ಎಳನೀರು ಕುಡಿಯಲು ಬಳಸುತ್ತೇವಲ್ಲ, ಅದೇ ಕೊಳವೆ. ಅವರು ಕೊಳವೆಗಳನ್ನು ಕೈಯಲ್ಲಿ ಹಿಡಿದು ನೋಡಿದರು. ಅದು ಪ್ಲಾಸ್ಟಿಕ್‌ಗಿಂತ ಗಟ್ಟಿ ಇತ್ತು. ಆಕರ್ಷಕವಾಗಿತ್ತು. ಆದರೆ, ಅದು ಪ್ಲಾಸ್ಟಿಕ್ ಅಲ್ಲ. ‘ಇದ್ಯಾವುದರಿಂದ ಮಾಡಿದ್ದಾರೆ’ ಎಂದು ಪ್ರಶ್ನಿಸಿಕೊಳ್ಳುವಷ್ಟರಲ್ಲೇ ‘ಅದು ಬಿದಿರಿನ ಸ್ಟ್ರಾ’ ಎಂದರು ಮಳಿಗೆಯಲ್ಲಿದ್ದ ಉಸ್ತುವಾರಿ. ಕೊಳವೆ ಗೊಂಚಲು ಕೈಯಲ್ಲಿ ಹಿಡಿದವರ ಮುಖದಲ್ಲಿ ಅಚ್ಚರಿಯ ಭಾವ, ಜತೆಗೊಂದು ಕಿರು ನಗೆ..!

ಇತ್ತೀಚೆಗೆ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ವಿಶ್ವ ಬಿದಿರು ದಿನದ ಅಂಗವಾಗಿ (ಸೆ.18) ನಡೆದ ‘ಬ್ಯಾಂಬೂ ಫೆಸ್ಟಿವಲ್’ (ಬಿದಿರು ಮೇಳ)ನಲ್ಲಿಟ್ಟಿದ್ದ ಉತ್ಪನ್ನಗಳು ಮೇಳಕ್ಕೆ ಬಂದವರಲ್ಲಿ ಇಂಥ ಹಲವು ಅಚ್ಚರಿಗಳನ್ನು ಮೂಡಿಸಿತು. ಪ್ರತಿ ಮಳಿಗೆಯಲ್ಲೂ ಭಿನ್ನ ಭಿನ್ನ ಎನ್ನುವಂತಹ ವಸ್ತುಗಳಿದ್ದವು. ‘ಇದನ್ನು ಬಿದಿರಿನಿಂದ ಮಾಡಲು ಸಾಧ್ಯವೇ’ ಎಂದು ಬೆಕ್ಕಸ ಬೆರಗಾಗಿಸುತ್ತಿದ್ದವು.

ತೊಟ್ಟಿಲು, ಬುಟ್ಟಿ, ಚಾಪೆಯಂತಹ ಮನೆ ಬಳಕೆಯ ವಸ್ತುಗಳನ್ನಷ್ಟೇ ನೋಡಿದ್ದ ಜನರು ಟ್ರೇ, ಹೂದಾನಿ, ಪೆನ್‌ಸ್ಟ್ಯಾಂಡ್, ಗ್ರಾಮಾಫೋನ್, ಪುಸ್ತಕದ ಬೈಂಡ್, ಚಾಪೆಗಳು.. ಇವನ್ನೆಲ್ಲ ಕಂಡು ಬೆರಗಾದರು. ಮನೆಯ ಪೀಠೋಪಕರಣಗಳಿಗೆ ಹೆಚ್ಚಾಗಿ ಬಳಕೆಯಾಗುತ್ತಿದ್ದ ಬಿದಿರನ್ನು ಇದೀಗ ಬೆಳಿಗ್ಗೆ ಹಲ್ಲುಜ್ಜುವ ಬ್ರಷ್‌ನಿಂದ ಹಿಡಿದು ಮನೆಗೆ ಹಾಕುವ ನೆಲಹಾಸಿನವರೆಗೆ ಬಳಸುತ್ತಿರುವುದನ್ನು ಕಂಡಾಗ, ‘ಇದು ನಿಜಕ್ಕೂ ಪ್ಲಾಸ್ಟಿಕ್‌ ವಸ್ತುಗಳಿಗೆ ಪರ್ಯಾಯವಾಗುತ್ತದೆ’ ಎಂದು ಜನರು ಮನಸ್ಸಿನಲ್ಲೇ ಗುನುಗಿದರು. ಅವರ ಪಿಸುಮಾತುಗಳಿಗೆ ಇಂಬು ನೀಡುವಂತೆ, ಬೆಂಗಳೂರಿನ ಸ್ಪೆಕ್ಟಾಲೈಟ್‌, ಸೆಂಟರ್‌ ಫಾರ್‌ ಗ್ರೀನ್‌ ಬಿಲ್ಡಿಂಗ್ ಮೆಟೀರಿಯಲ್ಸ್‌ ಮತ್ತು ಟೆಕ್ನಾಲಜಿಯಂತಹ ಸಂಸ್ಥೆಗಳು, ತಾವು ಆವಿಷ್ಕರಿಸಿದ್ದ ಬಿದಿರಿನ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದವು.

ನಿಜ, ಬಿದಿರು ಈಗ ಕಾಡಿನ ಮರವಾಗಿ/ ಹುಲ್ಲಾಗಿ ಉಳಿದಿಲ್ಲ. ‘ನಾನಾರಿಗಲ್ಲದವಳು..ಬಿದಿರು’ ಎಂಬ ಷರೀಪಜ್ಜನ ತತ್ವಪದವನ್ನು ಮೀರಿ ಬಿದಿರು ಮೌಲ್ಯವರ್ಧನೆಗೊಳ್ಳುತ್ತಿದೆ. ಅದು ಕಾಡಿನಿಂದ ನಗರ ಪ್ರದೇಶಗಳಿಗೂ ತನ್ನ ಬೇರುಗಳನ್ನು ವಿಸ್ತರಿಸಿಕೊಂಡಿದೆ. ಬಿದಿರಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಿದೆ. ಬಿದಿರು ಬೆಳೆಯಲ್ಲಿ ಚೀನಾ ಪ್ರಥಮ ಸ್ಥಾನದಲ್ಲಿದ್ದು, ಭಾರತ ಎರಡನೇ ಸ್ಥಾನದಲ್ಲಿದೆ. ಬಿದಿರಿನಿಂದ ಏಣಿ, ತೊಟ್ಟಿಲು, ಕೊಳಲು, ಕುರ್ಚಿ, ಮೇಜು, ಚಾಪೆ, ಬುಟ್ಟಿ ಸೇರಿದಂತೆ ವಿವಿಧ ಸಾಂಪ್ರದಾಯಿಕ ಸಾಧನಗಳ ಜತೆಗೆ ಪ್ಲಾಸ್ಟಿಕ್‌ ವಸ್ತುಗಳಿಗೆ ಪರ್ಯಾಯವಾಗಿ ಬಳಸಬಹುದಾದ ಸಂಶೋಧನೆಗಳು ಮುಂಚೂಣಿಗೆ ಬಂದಿವೆ ಎಂದು ಸಂಪನ್ಮೂಲ ವ್ಯಕ್ತಿಗಳು ಹೇಳುತ್ತಿದ್ದರು.

ಅದಕ್ಕೆ ಸಾಕ್ಷಿಯಾಗಿ ಮೇಳದಲ್ಲಿ ಬಿದಿರು ಅಕ್ಕಿ, ಉಪ್ಪಿನಕಾಯಿ, ಸೋಪು, ಹಲ್ಲುಜ್ಜುವ ಪುಡಿ, ತೈಲ, ಕಳಲೆ, ಅಡುಗೆ ಉಪಕರಣ, ಸೀರೆ, ಮದ್ಯ, ಸೋಪಿನ ಬಾಕ್ಸ್, ಮಗ್‌, ಅಲಂಕಾರಿಕ ವಸ್ತುಗಳಂತಹ ಅನೇಕ ಮೌಲ್ಯವರ್ದಿತ ಬಿದಿರು ಉತ್ಪನ್ನಗಳು ಕಂಡವು. ಖಾದ್ಯಗಳಲ್ಲಿ ಬ್ಯಾಂಬೂ ಖಾದ್ಯಕ್ಕೂ ಜನ ಮನಸೋತರು.

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಬಿದಿರು ಉತ್ಪನ್ನಗಳದ್ದೇ ಮೇಲುಗೈ ಆಗಿತ್ತು. ‘ಮನೆಗೊಂದು ಕ್ಲಾಸಿಕ್‌ ಲುಕ್‌’ ಕೊಡಲು ಬಿದಿರಿನ ಸೋಫಾ, ಟೇಬಲ್, ಕಲಾತ್ಮಕ ಕೆತ್ತನೆಗಳು ಪೂರಕವಾಗುವ ಅಂಶವನ್ನು ಮೇಳ ಅನಾವರಣಗೊಳಿಸಿತು. ಮೇಳದಲ್ಲಿ ಸುತ್ತಾಡುತ್ತಿದ್ದವರನ್ನು ಸೂಜಿಗಲ್ಲಿನಂತೆ ಸೆಳೆದಿದ್ದು ಕೇರಳದ ಬಿದಿರು ಸಂಗೀತ ಉಪಕರಣಗಳ ವಾದ್ಯಗೋಷ್ಠಿ. ಅಲ್ಲಿದ್ದ ಡ್ರಮ್‌, ಕೊಳಲು ಸೇರಿದಂತೆ ಹತ್ತು ಹನ್ನೆರಡು ವಾದ್ಯಗಳೆಲ್ಲ ಬಿದಿರಿನಿಂದ ಮಾಡಿದಂ ತಹವು. ಅವುಗಳಿಂದ ಹೊಮ್ಮುತ್ತಿದ್ದ ನಾದ, ಮೇಳದಲ್ಲಿದ್ದವರಿಗೆ ಸಂಗೀತದ ರಸದೌತಣ ನಿಡಿತು.

ಬಿದಿರಿನಿಂದಲೇ ಕಾರಿನ ಟ್ರೆ, ಪ್ಲಾಸ್ಟಿಕ್‌ನಿಂದ ಮಾಡಬಹುದಾದ ಬಹುತೇಕ ಎಲ್ಲ ಉತ್ಪನ್ನಗಳನ್ನು ಬ್ಯಾಂಬೂ ಫೈಬರ್‌ನಿಂದ ತಯಾರಿಸಲು ‘ಸ್ಪೆಕ್ಟಾಲೈಟ್‌’ ಎಂಬ ಸಂಸ್ಥೆ ಮುಂದಾಗಿದೆ. ಬಿದಿರಿನ ಪುಡಿಯಿಂದಲೇ ‘ಕಾರಿನ ಟ್ರೆ’ ಸಿದ್ಧಪಡಿಸಿದೆ. ವಾಹನಗಳಲ್ಲಿ ಬಳಸುವ ಮ್ಯಾಟ್‌ಗಳನ್ನು ಕೂಡ ತಯಾರಿಸಲಾಗುತ್ತಿದೆಯಂತೆ. ಬಿದಿರು ಹಾಗೂ ಅಕ್ಕಿಯ ಹೊಟ್ಟಿನ ಮಿಶ್ರಣದಿಂದ ಫೈಬರ್ ತಯಾರಿ, ಅದರಿಂದ ಪ್ಲಾಸ್ಟಿಕ್‌ನಿಂದ ಮಾಡಬಹುದಾದ ವಸ್ತುಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಈಗಾಗಲೇ ಅಡುಗೆ ಸಾಧನಗಳನ್ನು ಮಾಡಿ, ವಿವಿಧ ಮೇಳಗಳಲ್ಲಿ ಪ್ರದರ್ಶಿಸಲಾಗಿದೆ.

‘ಬ್ಯಾಂಬೂ ಫೈಬರ್‌ನಿಂದ ತಯಾರಿಸಿದ ವಸ್ತುಗಳು ಪ್ಲಾಸ್ಟಿಕ್‌ಗಿಂತ ಹೆಚ್ಚು ಸದೃಢವಾಗಿರಲಿದೆ. ಮೈಕ್ರೋವೇವ್‌ನ ಶಾಖವನ್ನೂ ಇದು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಬೆಲೆಯಲ್ಲಿ ಕೂಡ ಹೆಚ್ಚು ವ್ಯತ್ಯಯ ಇರುವುದಿಲ್ಲ’ ಎನ್ನುವುದು ಸ್ಪೆಕ್ಟಾಲೈಟ್‌ ಸಂಸ್ಥೆ ನಿರ್ದೇಶಕ ಮಹದೇವ್ ಅವರ ಅಭಿಪ್ರಾಯ.

ಇಥೆನಾಲ್‌, ಕಾಂಕ್ರಿಟ್‌ ತಯಾರಿಕೆಯಲ್ಲಿ...

‘ದೇಶದಲ್ಲಿ 136 ಪ್ರಭೇದದ ಬಿದಿರುಗಳಿವೆ. ರಾಜ್ಯದಲ್ಲಿ 4ರಿಂದ 5 ಪ್ರಬೇಧದ ಬಿದಿರನ್ನಷ್ಟೇ ಬೆಳೆಯಲಾಗುತ್ತಿದೆ. ಬಿದಿರಿನಿಂದ ಇಥೆನಾಲ್‌ ತಯಾರಿಸಲಾಗುತ್ತಿದೆ. ಬಿದಿರಿನ ಒಣಗಿದ ಎಲೆಗಳಿಂದ ಪೌಡರ್ ತಯಾರಿಸಿ, ಸಿಮೆಂಟ್ ಜತೆಗೆ ಬಳಸುವುದರಿಂದ ಕಟ್ಟಡ ಇನ್ನಷ್ಟು ಬಲಿಷ್ಠವಾಗಲಿದೆ. ಕಾಂಕ್ರಿಟ್ ರಸ್ತೆಗಳಲ್ಲೂ ಈ ಪೌಡರ್ ಬಳಸಬಹುದು. ಬಿದಿರು ಬೇಸಾಯಕ್ಕೆ ಒಂದು ಎಕರೆಗೆ ₹ 50 ಸಾವಿರದಿಂದ ₹ 1 ಲಕ್ಷ ಹಣ ಖರ್ಚು ಮಾಡಿದರೆ ನಾಲ್ಕು ವರ್ಷದ ಬಳಿಕ ಕಟಾವಿಗೆ ಬರಲಿದೆ. ₹ 1 ಲಕ್ಷರಿಂದ ₹ 2 ಲಕ್ಷ ನಿವ್ವಳ ಲಾಭ ಸಿಗುತ್ತದೆ’ ಎಂದು ವಿವರಿಸುತ್ತಾರೆ ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಕೆ.ಸುಂದರ್ ನಾಯಕ್.

‘ಬುದ್ಧ ಬ್ಯಾಂಬೂ‘ ಹಾಗೂ ‘ಹಳದಿ ಬಿದಿರು’ ಗಿಡವನ್ನು ನಗರ ಪ್ರದೇಶದಲ್ಲಿ ಅಲಂಕಾರಿಕವಾಗಿ ಬೆಳೆಸಬಹುದು. ಬಿದಿರು ಬೆಳೆಗಾರರಿಗೆ ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ ತಲಾ ₹ 50 ಸಾವಿರ ಸಹಾಯಧನ ನೀಡಲಾಗುತ್ತದೆ. ಬಿದಿರು ಕೃಷಿಯಲ್ಲಿ ಆಸಕ್ತಿ ಇರುವವರು ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ಸಂಪರ್ಕಿಸಬಹುದು.

ಚಿತ್ರ: ಇರ್ಷಾದ್‌ ಮಹಮ್ಮದ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು