ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲಕ್ಕೆ ‘ತಳ ನೀರಾವರಿ’ ವರ!

Last Updated 7 ಜನವರಿ 2019, 19:30 IST
ಅಕ್ಷರ ಗಾತ್ರ

ಗಿಡಗಳ ಬುಡದಲ್ಲಿ ರಂಧ್ರಮಾಡಿದ ಶೀಶೆಯಲ್ಲಿ ನೀರಿಟ್ಟು, ಹನಿ ಹನಿ ನೀರನ್ನು ಗಿಡಗಳ ಬೇರಿಗೆ ಉಣಿಸುವಂತೆ ಮಾಡುವ ಬಾಟಲ್ ನೀರಾವರಿ ವಿಧಾನದಿಂದ, ಬೆಳೆ ಇಳುವರಿ ಹೆಚ್ಚಾಗಿಲ್ಲ. ಆದರೆ, ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ನೆಲಕಚ್ಚುವಂತಿದ್ದ ಹತ್ತಾರು ಕಾಡು ಗಿಡಗಳು, ಹಣ್ಣಿನ ಮರಗಳು ಬದುಕಿ ಉಳಿದಿವೆ. ಬಿರು ಬೇಸಿಗೆಯಲ್ಲಿ ತೋಟಗಾರಿಕೆ ಬೆಳೆ ಕಾಪಾಡಿಕೊಳ್ಳಲು ಈ ಪದ್ಧತಿ ನನಗೆ ವರದಾನವಾಯಿತು...

ನೀರು ತುಂಬಿದ ಎರಡು ಲೀಟರ್ ಪ್ಲಾಸ್ಟಿಕ್‌ ಬಾಟಲಿಯನ್ನು ಉಲ್ಟ ಮಾಡಿ, ಬಿರಡೆಯ ಮಧ್ಯದ ರಂಧ್ರದಿಂದ ತೊಟ್ಟಿಕ್ಕುತ್ತಿದ್ದ ಹನಿ ಹನಿ ನೀರನ್ನು ತೋರಿಸುತ್ತಾ ಕಾಡು ಗಿಡಗಳನ್ನು ಉಳಿಸಿದ ಬಾಟಲಿ ಹನಿ ನೀರಾವರಿ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು ಕೃಷಿಕ ಅರುಣ್ ಕುಮಾರ್.

'ಮೊದಲು ಇದನ್ನು ಕಾಡುಗಿಡಗಳಿಗೆ ಅಳವಡಿಸಿದೆ. ವಿಧಾನ ಯಶಸ್ವಿಯಾಯಿತು. ಅದನ್ನು ಹಣ್ಣಿನ ಬೆಳೆಗಳಿಗೂ ಅಳವಡಿಸಿದೆ. ಈಗ ನಮ್ ತೋಟಕ್ಕೆ ವರ್ಷಪೂರ್ತಿ ಹೀಗೆ ಲೀಟರ್ ಲೆಕ್ಕದಲ್ಲೇ ಕೊಡುತ್ತಿದ್ದೇನೆ. ಅಡಿಕೆ, ತೆಂಗಿಗೂ ವಿಸ್ತರಿಸುತ್ತಿದ್ದೇನೆ. ಸದ್ಯ ತೋಟ ತಂಪಾಗಿದೆ. ಬೆಳೆಗಳೂ ಜೀವಂತವಾಗಿವೆ' - ಬಾಟಲ್ ನೀರಾವರಿ ಪದ್ಧತಿ ವಿಸ್ತರಿಸಿದನ್ನು ಅವರು ಉಲ್ಲೇಖಿಸಿದರು.

ತುಮಕೂರು ಜಿಲ್ಲೆ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆಯ ಅರುಣ್ ಕುಮಾರ್‌ಗೆ ಏಳು ಎಕರೆ ಮೂವತ್ಮೂರು ಗುಂಟೆ ಜಮೀನಿದೆ. ಜಮೀನಿನಲ್ಲಿ ತೆಂಗು, ಅಡಿಕೆ, ಹಣ್ಣಿನ ಗಿಡಗಳು, ಭತ್ತ ಸೇರಿದಂತೆ ವೈವಿಧ್ಯಮಯ ಬೆಳೆಗಳಿವೆ. ಎರಡು ದಶಕಗಳಿಂದ ಸಾವಯವ ಕೃಷಿ ಅಳವಡಿಸಿಕೊಂಡಿದ್ದಾರೆ. ಬೆಳೆಗಳ ನಿರ್ವಹಣೆಗಾಗಿ ನಾಲ್ಕೈದು ಕೊಳವೆಬಾವಿಗಳನ್ನು ಕೊರೆಸಿದ್ದರು. ಒಂದೇ ಬೋರ್ ವೆಲ್ ಜೀವಂತವಾಗಿದೆ. 940 ಅಡಿ ಆಳದ ಆ ಕೊಳವೆಬಾವಿಯಿಂದ ಎರಡು ಇಂಚು ನೀರು. ಅದನ್ನೇ ಡ್ರಿಪ್ ಮೂಲಕ ಎಲ್ಲ ಬೆಳೆಗಳಿಗೂ ಪೂರೈಸುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ತೀವ್ರ ಬರಗಾಲ ಎದುರಾಗಿ, ಇರುವ ನೀರು ಸಾಕಾಗಲಿಲ್ಲ. ಜಮೀನಿನ ಗಡಿ ಭಾಗಕ್ಕೆ ಡ್ರಿಪ್ ನೀರು ಹೋಗುತ್ತಿರಲಿಲ್ಲ. ಅಲ್ಲಿ ಮಾಡಿದ್ದ ಹೆಬ್ಬೇವು, ತೇಗ, ರಕ್ತಚಂದನದಂತಹ ಕಾಡುಗಿಡಗಳು ನೀರಿಲ್ಲದೇ ಸೊರಗುತ್ತಿದ್ದವು. ಇದನ್ನು ಗಮನಿಸಿದ ಅರುಣ್, ‘ಕನಿಷ್ಠ ಇವುಗಳ ಬೇರಿಗಾದರೂ ನೀರುಣಿಸಿ, ಗಿಡಗಳನ್ನು ಉಳಿಸಿಕೊಳ್ಳಬೇಕು’ ಎಂದು ನಿರ್ಧರಿಸಿದರು. ಆಗ ಶುರುಮಾಡಿದ್ದೇ ಬಾಟಲ್ ನೀರಾವರಿ ಪದ್ಧತಿ.

ಹೋಟೆಲ್, ಡಾಬಾಗಳಲ್ಲಿ ವ್ಯರ್ಥವಾಗಿ ಬಿಸಾಡುವ ಎರಡು ಲೀಟರ್ ಹಿಡಿಯುವ ನೀರಿನ ಬಾಟಲಿಗಳನ್ನು ಖರೀದಿಸಿ ತಂದರು. ಪ್ರತಿಯೊಂದು ಶೀಶೆಯ ಬಿರಡೆಗೆ ತೂತು ಮಾಡಿದರು. ಶೀಶೆಯ ತಳವನ್ನು ಕತ್ತರಿಸಿ, ಮುಚ್ಚಳದಂತೆ ಮಾಡಿದರು. ಶೀಶೆಗಳಿಗೆ ನೀರು ತುಂಬಿಸಿದರು.

ಪ್ರತಿ ಗಿಡದ ಬುಡದಿಂದ ಅರ್ಧ ಅಡಿ ದೂರದಲ್ಲಿ ಒಂದು ಅಡಿ ಗುಂಡಿ ತೆಗೆದು, ತಳದಲ್ಲಿ ತೆಂಗಿನ ಸಿಪ್ಪೆಯ ಗುಂಜು, ಅಡಿಕೆ ಸಿಪ್ಪೆಯಂತಹ ನೀರು ಹಿಡಿದಿಟ್ಟುಕೊಳ್ಳುವ ಸಾವಯವ ತ್ಯಾಜ್ಯಗಳನ್ನು ತುಂಬಿಸಿದರು. ರಂಧ್ರಮಾಡಿದ ಶೀಶೆಯ ಭಾಗವನ್ನು ಗುಂಡಿಯಲ್ಲಿ ಹೂಳಿದರು.

ಶೀಶೆಯಲ್ಲಿ ನೀರು ಖಾಲಿಯಾದಂತೆಲ್ಲ, ಬಿಂದಿಗೆಯಿಂದ ನೀರು ಹೊತ್ತು ತಂದು, ಈ ಶೀಶೆಗಳಿಗೆ ತುಂಬಿಸುತ್ತಿದ್ದರು. ವಾರದಲ್ಲಿ ಒಂದೆರಡು ದಿನ ಶೀಶೆಗಳಿಗೆ ನೀರು ತುಂಬಿಸುತ್ತಿದ್ದರು. ಬೇಸಿಗೆಯಲ್ಲೂ ಗಿಡಗಳಲ್ಲಿ ಚಿಗುರು ಕಾಣಿಸುತ್ತಿತ್ತು. ಬಾಟಲಿ ಹನಿ ನೀರಿನ ವಿಧಾನ ಯಶಸ್ವಿಯಾಗಿತ್ತು.

‘ಈ ವಿಧಾನದಿಂದ ಹನಿ ಹನಿ ನೀರು ಗಿಡದ ಬೇರು ತಲುಪುತ್ತದೆ. ನಾರು, ಅಡಿಕೆ ಸಿಪ್ಪೆ ನೀರನ್ನು ಹೀರಿಕೊಂಡು ನಿಧಾನವಾಗಿ ಬೇರಿಗೆ ಪೂರೈಸುವುದರಿಂದ, ನೆಲದೊಳಗೆ ಸದಾ ತೇವಾಂಶವಿರುತ್ತದೆ. ಕಾಂಡ, ಎಲೆ ಹಸಿರಾಗಿರುತ್ತದೆ’ ಎಂದು ವಿವರಿಸುತ್ತಾರೆ ಅರುಣ್.

ಎರಡು ವರ್ಷಗಳ ಹಿಂದೆ ತೀವ್ರ ಬರಗಾಲದಿಂದಾಗಿ ನೀರಿನ ಸಮಸ್ಯೆ ಎದುರಾಯಿತು. ತೋಟದ ಎಲ್ಲ ಭಾಗಕ್ಕೂ ಡ್ರಿಪ್ ನಲ್ಲಿ ನೀರು ಪೂರೈಸಿದರು. ಆದರೆ ಜಮೀನಿನ ಗಡಿಯಲ್ಲಿ ನಾಟಿ ಮಾಡಿದ್ದ ಹೆಬ್ಬೇವು, ತೇಗದಂತಹ ಕಾಡುಗಿಡಗಳಿಗೆ ಡ್ರಿಪ್ ನೀರು ಪೂರೈಸಲು ಆಗಲಿಲ್ಲ. ಬಿರು ಬಿಸಿಲು, ನೀರಿನ ಕೊರತೆಯಿಂದಾಗಿ ಗಿಡಗಳು ಸೊರಗುತ್ತಿದ್ದವು. ಇದನ್ನು ಗಮನಿಸಿದ ಅರುಣ್, ‘ಕನಿಷ್ಠ ಇವುಗಳ ಬೇರಿಗಾದರೂ ನೀರುಣಿಸಿ, ಗಿಡಗಳನ್ನು ಉಳಿಸಿಕೊಳ್ಳಬೇಕು’ ಎಂದು ತೀರ್ಮಾನಿಸಿದರು. ಆಗ ಹೊಳೆದಿದ್ದೇ ಬಾಟಲ್ ನೀರಾವರಿ ಪದ್ಧತಿ.

ಬಾಟಲಿಗೆ ಡ್ರಿಪ್ ಅಳವಡಿಕೆ :

ಕಾಡು ಗಿಡಗಳಿಗೆ ಅನುಸರಿಸಿದ ಬಾಟಲಿ ನೀರಾವರಿ ವಿಧಾನವನ್ನು ತೋಟದ ಹಣ್ಣಿನ ಗಿಡಗಳಿಗೂ ಅಳವಡಿಸಿದರು ಅರುಣ್. ಆದರೆ, ಇಲ್ಲಿ ಒಂದಷ್ಟು ಸುಧಾರಣೆ ಮಾಡಿಕೊಂಡರು. ಮೊದಲನೆಯದಾಗಿ ಬಿಂದಿಗೆಯಲ್ಲಿ ನೀರು ಹಾಕುವ ಬದಲಿಗೆ, ಡ್ರಿಪ್ ಪೈಪ್ ಗೆ ಮೈಕ್ರೋಟ್ಯೂಬ್ ಅಳವಡಿಸಿದ್ದಾರೆ. ಈ ಟ್ಯೂಬ್ ನಿಂದ ನೀರು ಶೀಶೆಗೆ ಬೀಳುತ್ತದೆ. ಹನಿ ಹನಿ ನೀರು ಬೇರಿಗೆ ತಲುಪುತ್ತದೆ. ಗುಂಡಿಯ ತಳಭಾಗದಲ್ಲಿ ಅಡಿಕೆ ಸಿಪ್ಪೆ, ತೆಂಗಿನ ನಾರಿನ ಜತೆಗೆ, ಇದ್ದಿಲಿನ ಚೂರುಗಳನ್ನು (ಬಯೋಚಾರ್) ತುಂಬಿಸಿದರು. 'ಹಣ್ಣಿನ ಗಿಡಗಳಿಗೆ ಒಂದೂವರೆ ವರ್ಷದಿಂದ ಈ ವಿಧಾನ ಅಳವಡಿಸಿದ್ದೇನೆ.ಇದರಿಂದ ಇಳುವರಿ ಹೆಚ್ಚದಿದ್ದರೂ, ಬೇಸಿಗೆಯಲ್ಲೂ ಮರ-ಗಿಡಗಳನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು' ಎನ್ನುತ್ತಾ ಅನುಸರಿಸಿದ ವಿಧಾನದ ಪರಿಣಾಮವನ್ನು ವಿವರಿಸುತ್ತಾರೆ ಅರುಣ್.

'ತಳ ನೀರಾವರಿ' ಪದ್ಧತಿ :

ಬಾಟಲಿ ನೀರಿನ ಪದ್ಧತಿ ಯಶಸ್ವಿಯಾದರೂ, ದೊಡ್ಡ ಹಿಡುವಳಿಯ ಹಣ್ಣಿನ ತೋಟಗಳಿಗೆ, ಈ ವಿಸ್ತರಿಸುವುದು ತುಸು ಸವಾಲು ಎನ್ನಿಸಿತು ಅರುಣ್ ಅವರಿಗೆ. ಹೆಚ್ಚು ಹೆಚ್ಚು ಶೀಶೆಗಳನ್ನು ಹೊಂದಿಸುವುದು, ಗುಣಮಟ್ಟದ ಶೀಶೆಗಳ ಲಭ್ಯತೆ, ಇವೆಲ್ಲ ಕಷ್ಟವಾಯಿತು. ಆಗ ಯೋಚನೆಗೆ ಬಂದಿದ್ದೇ ಪಿವಿಸಿ ಪೈಪ್ ಬಳಕೆಯ 'ತಳ ನೀರಾವರಿ' ಪದ್ಧತಿ.

ಈ ವಿಧಾನದಲ್ಲಿ ಬಾಟಲಿಯ ಬದಲಿಗೆ ಮುಕ್ಕಾಲು ಇಂಚಿನ ಎರಡು ಅಡಿಯ ಪಿವಿಸಿ ಪೈಪ್ ಬಳಸಿದ್ದಾರೆ. ಪೈಪ್ ಮೇಲ್ಭಾಗದಲ್ಲಿ ದೊಡ್ಡ ರಂಧ್ರ, ಕೆಳಭಾಗದಲ್ಲಿ ಕೊಳವೆ ಸುತ್ತಾ 20 ರಿಂದ 25 ಸಣ್ಣ ರಂಧ್ರಗಳನ್ನು ಮಾಡಿದರು. ಬಾಟಲಿಯನ್ನು ನೆಲದಲ್ಲಿ ಹೂಳಿದಂತೆ, ಗಿಡದ ಬುಡದಿಂದ ಒಂದು ಅಡಿ ದೂರದಲ್ಲಿ ಪಿವಿಸಿ ಪೈಪ್ ಹೂಳಿದರು. ಗಿಡದ ಪಕ್ಕದಲ್ಲೇ ಹಾದು ಹೋಗುವ ಡ್ರಿಪ್ ಪೈಪ್ ಗೆ ಮೈಕ್ರೋಟ್ಯೂಬ್ ಸಿಕ್ಕಿಸಿ, ಅದನ್ನು ಪೈಪ್ ಒಳಕ್ಕೆ ಜೋಡಿಸಿದರು.

ಪಿವಿಸಿ ಪೈಪ್ ಒಳಗೆ ಹನಿ ಹನಿಯಾಗಿ ಬೀಳುವ ನೀರು, ನೆಲದಾಳದಲ್ಲಿರುವ ಬಯೋಚಾರ್, ತೆಂಗಿನ ನಾರು, ಅಡಿಕೆ ಸಿಪ್ಪೆ ಮೂಲಕ, ಗಿಡದ ಬೇರು ತಲುಪುತ್ತದೆ. ತಳದಲ್ಲಿರುವ ಸಾವಯವ ವಸ್ತುಗಳು ನೀರನ್ನು ಹೀರಿ, ತೇವಾಂಶವನ್ನು ಸುಧೀರ್ಘವಾಗಿ ಉಳಿಸಿಕೊಂಡು, ನೆಲದಾಳದ ಸುತ್ತಲಿನ ಜಾಗವನ್ನೂ ತೇವವಾಗಿಡುತ್ತವೆ. ಬಾಟಲಿ ನೀರಿನ ಪದ್ಧತಿ ವಿಧಾನದಲ್ಲೂ ಹೀಗೆ ಆಗುತ್ತದೆ. 'ಈ ಕಾರಣದಿಂದಲೇ ಕಳೆದ ಬೇಸಿಗೆಯಲ್ಲಿ ತೋಟದ ಹಣ್ಣಿನ ಬೆಳೆಗಳು ಸೊರಗಲಿಲ್ಲ' ಎನ್ನುವುದು ಅರುಣ್ ಅವರ ಅಭಿಪ್ರಾಯ.

ತೋಟದಲ್ಲಿ ಉಳುಮೆ ನಿಲ್ಲಿಸಿರುವವರಿಗೆ ಬಾಟಲ್ ವಿಧಾನ ಸೂಕ್ತ. ಉಳುಮೆ ಮಾಡಿಸುವವರಿಗೆ ಪೈಪ್ ವಿಧಾನ ಅನುಕೂಲ. ಏಕೆಂದರೆ, ಉಳುಮೆ ಮಾಡುವಾಗ, ಪೈಪ್ ತೆಗೆಯಬಹುದು. ನಂತರ ಜೋಡಿಸಿಕೊಳ್ಳಬಹುದು. 'ಪೈಪ್ ಪದ್ಧತಿಗೆ ಪೂರಕವಾಗುವ ರೆಡಿಮೇಡ್ ಪೈಪ್ ಗಳನ್ನು ಚೈನೈನ ಕಂಪನಿಯೊಂದು ತಯಾರಿಸಿದೆ. ಆದರೆ, ಬೆಲೆ ದುಬಾರಿ. ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಅದು ಹೊರೆ ಕೂಡ. ಅದರ ಬದಲಿಗೆ ಮುಕ್ಕಾಲು ಇಂಚಿನ ಪೈಪ್ ಬಹಳ ಬೆಸ್ಟ್' ಎನ್ನುತ್ತಾರೆ ಅರುಣ್.

ಅರುಣ್ ಅವರ ಈ ಬಾಟಲಿ ವಿಧಾನವನ್ನು ನೋಡಿದ ಕೆಲವು ರೈತರು, ಈಗಾಗಲೇ ತಮ್ಮ ಜಮೀನಿನಲ್ಲಿ ಅಳವಡಿಸಿ ನೋಡಿದ್ದಾರೆ. ಪಿವಿಸಿ ಪೈಪ್ ವಿಧಾನವನ್ನು ಅಡಿಕೆ ಮರಗಳಿಗೆ ಅಳವಡಿಸಿಕೊಡಿಸಿದ್ದಾರೆ. ಇದರಿಂದ ನೀರು ಕೊಡುವ ಪ್ರಮಾಣದಲ್ಲಿ ಶೇ 50ರಷ್ಟು ಕಡಿಮೆಯಾಗಿದೆಯಂತೆ.

ತಳನೀರಾವರಿ ಪದ್ಧತಿ ಮೂಲಕ ಬೇಸಿಗೆಯಲ್ಲೂ ಮರ-ಗಿಡಗಳನ್ನು ಉಳಿಸಿಕೊಂಡಿರುವ ಅರುಣ್ ಕುಮಾರ್ ಅವರ ಪ್ರಯತ್ನ ವಿಜ್ಞಾನಿಗಳನ್ನು ಆಕರ್ಷಿಸಿದೆ. ತೋಟಗಾರಿಕೆ ಸಂಶೋಧನ ಕೇಂದ್ರವೊಂದು ಮರ- ಗಿಡಗಳ ಕಾಂಡದಲ್ಲಿರುವ ನೀರು ಸರಬರಾಜಾಗುವ(ಝೈಲಮ್) ಅಂಗಕ್ಕೇ ನೇರವಾಗಿ ನೀರು ಪೂರೈಸುವಂತಹ ಸಂಶೋಧನೆಗಾಗಿ ಅರುಣ್ ಅವರ ತೋಟವನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ.

**

ಮಿತ ನೀರು ಬಳಕೆಯ ತೋಟ!

ತಳ ನೀರಾವರಿಯಂತಹ ಮಿತ ನೀರು ಬಳಕೆ ಅಳವಡಿಸಿಕೊಂಡಿರುವ ಅರುಣ್, ಜಮೀನಿನಲ್ಲಿ ಬೀಳುವ ಹನಿ ನೀರು ಅಲ್ಲೇ ಇಂಗುವಂತೆ ಹಾಗೂ ಇಂಗಿದ ನೀರು ಧೀರ್ಘಕಾಲ ನೆಲದಲ್ಲೇ ಉಳಿಯುವಂತಹ ವಾತಾವರಣ ಸೃಷ್ಟಿಸಿದ್ದಾರೆ. ಅದಕ್ಕಾಗಿ ತೋಟದ ತುಂಬಾ ಮುಚ್ಚಿಗೆ ಬೆಳೆ ಬೆಳೆದಿದ್ದಾರೆ. ಪ್ರತಿ ಮರ, ಗಿಡದ ಬುಡದಲ್ಲಿ ತೋಟದಲ್ಲೇ ಸಿಗುವ ಕೃಷಿ ತ್ಯಾಜ್ಯವನ್ನು ಮುಚ್ಚಿಗೆ ಮಾಡಿದ್ದಾರೆ. ಈ ತೋಟದಲ್ಲಿ ಮಿತ ನೀರಿನ ಬಳಕೆ ಜತೆಗೆ, ಭೂರಕ್ಷಣೆಯ ಪಾಠವೂ ಇದೆ.

7 ಎಕರೆ 33 ಗುಂಟೆ ಜಮೀನನ್ನು ನಾಲ್ಕು ವಿಭಾಗ ಮಾಡಿದ್ದಾರೆ. ಒಂದುಕಡೆ ಭತ್ತ, ರಾಗಿ, ತೊಗರಿಯಂತಹ ಧಾನ್ಯದ ಬೆಳೆ. ಒಂದು ಭಾಗದಲ್ಲಿ ತೆಂಗು, ಅಡಿಕೆ, ವೆನಿಲ್ಲಾ, ಕೋಕೊ, ಸಪೋಟ, ಸೇಬು, ಮೆಣಸು, ಅರಿಸಿನ, ತರಕಾರಿ ಬೆಳೆದಿದ್ದಾರೆ. ತೋಟದಲ್ಲಿ ಒಟ್ಟು 26 ಬಗೆಯ ಹಣ್ಣಿನ ಬೆಳೆಗಳಿವೆ. ಜತೆಗೆ ಜೇನು ಸಾಕುತ್ತಾರೆ. ಬೇಲಿಯಲ್ಲಿ ತೇಗ, ಸಿಲ್ವರ್‌, ರಕ್ತ ಚಂದನ, ಹೆಬ್ಬೇವು ಮರಗಳೊಂದಿಗೆ ಕಾಡು ನಿರ್ಮಾಣಕ್ಕೂ ಪ್ರಯತ್ನ ಮಾಡಿದ್ದಾರೆ.

ರಸಗೊಬ್ಬರ, ಕೀಟನಾಶಕ ಸೋಂಕದ ತೋಟ ಇವರದ್ದು. ತೋಟದಲ್ಲಿ ರೋಗ, ಕೀಟ ಬಾಧೆ ಹತೋಟಿಯಲ್ಲಿಡಲು ಸಸ್ಯಜನ್ಯ ಕಷಾಯ ಬಳಕೆ ಮಾಡುತ್ತಾರೆ. ಕೃಷಿ ತ್ಯಾಜ್ಯ ಹಾಗೂ ಸಗಣಿ, ಗಂಜಲ, ಎರೆಜಲ ಬಳಕೆ ಮಾಡಿ ರಸಸಾರ ದ್ರಾವಣ ಉತ್ಪಾದನೆ ಮಾಡಲಾಗುತ್ತದೆ. ಬೆಳಗಳಿಗೆ ಡ್ರಿಪ್‌ ವೆಂಚುರಿ ಮೂಲಕ ದ್ರವರೂಪಿ ಗೊಬ್ಬರವನ್ನು ಬೆಳೆಗಳಿಗೆ ಪೂರೈಸುತ್ತಾರೆ. ಕೃಷಿ, ತಳ ನೀರಾವರಿ ಕುರಿತ ಹೆಚ್ಚಿನ ಮಾಹಿತಿಗಾಗಿ ಅರುಣ್ ಅವರ ಸಂಪರ್ಕ ಸಂಖ್ಯೆ : +91 99008 24420.

**

ಗಿಡಗಳಿಗೆ ಮೇಲ್ಪದರಲ್ಲಿ ಪೂರೈಸುವ ಹತ್ತು ಲೀಟರ್ ನೀರಿನಲ್ಲಿ, ಶೇ 20ರಷ್ಟು ನೀರು ಮಾತ್ರ ಗಿಡಗಳ ಬೇರುಗಳಿಗೆ ತಲುಪುತ್ತದೆ. ತಳನೀರಾವರಿ ಪದ್ಧತಿಯಲ್ಲಿ ಶೇ 80ರಷ್ಟು ನೀರು ಬೇರುಗಳಿಗೆ ತಲುಪುತ್ತದೆ. ಈ ಪದ್ಧತಿಯಲ್ಲಿ ನೀರು ಆವಿಯಾಗುವ ಪ್ರಮಾಣ ಕಡಿಮೆ. 'ಇರುವುದಿಷ್ಟೇ ನೀರು, ಬೆಳೆ ಉಳಿಸಿಕೊಳ್ಳುವುದು ಹೇಗೆ' ಎಂದು ಯೋಚಿಸುವವರಿಗೆ ಈ ನೀರವಾರಿ ಪದ್ಧತಿಗಳು ತುಂಬಾ ಸಹಕಾರಿ.
- ಅರುಣ್ ಕುಮಾರ್. ಎಸ್.ಆರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT