ಸಸ್ಯಾಮೃತ

7
ರೋಗ, ಕೀಟ ನಿಯಂತ್ರಣಕ್ಕೆ ಜೈವಿಕ ಟಾನಿಕ್

ಸಸ್ಯಾಮೃತ

Published:
Updated:

ತುಮಕೂರು ತಾಲ್ಲೂಕು ಬಳ್ಳಗೆರೆ ಕಾವಲ್‍ನ ರಾಜೇಶ್ ಮತ್ತು ರೂಪಾ ದಂಪತಿಗೆ ಎಂಟು ಎಕರೆ ಜಮೀನಿದೆ. ಬಾಳೆ, ತೊಗರಿ, ರಾಗಿ, ತೆಂಗು ಜತೆಗೆ, ಅರ್ಧ ಎಕರೆ ಕಾಕಡ ಹೂವನ್ನು ಪ್ರಮುಖವಾಗಿ ಬೆಳೆಯುತ್ತಾರೆ.

ವರ್ಷದ ಹಿಂದೆ, ಕಾಕಡ ಹೂವಿನ ಗಿಡಗಳಿಗೆ ಎಲೆಮುದುರು ರೋಗ ಕಾಣಿಸಿಕೊಂಡಿತು. ಕೆಲವು ಗಿಡಗಳಲ್ಲಿ ಎಲೆ ಚುಕ್ಕಿರೋಗ ಹಾಗೂ ರಸ ಹೀರುವ ಕೀಟಗಳ ಹಾವಳಿ ಕಾಣಿಸಿಕೊಂಡಿತು. ಈ ರೋಗ ಮತ್ತು ಕೀಟ ನಿವಾರಣೆಗಾಗಿ ಪ್ರತಿ ತಿಂಗಳಿಗೆ ಒಂದೂವರೆ ಸಾವಿರ ರೂಪಾಯಿ ವೆಚ್ಚದ ರಾಸಾಯನಿಕ ಕೀಟನಾಶಗಳನ್ನು ಸಿಂಪಡಿಸುತ್ತಿದ್ದರು. ವರ್ಷಕ್ಕೆ ಹೆಚ್ಚೂ ಕಡಿಮೆ ₹18 ಸಾವಿರ ಹಣವನ್ನು ಕೀಟನಾಶಕಕ್ಕೇ ಬಳಸುತ್ತಿದ್ದರು.

ಇಷ್ಟಾದರೂ, ಸಮಸ್ಯೆ ಪೂರ್ಣವಾಗಿ ಬಗೆಹರಿಯಲಿಲ್ಲ. ಪರಿಹಾರಕ್ಕಾಗಿ ರೈತ ದಂಪತಿ ಹುಡುಕಾಟ ಆರಂಭಿಸಿದರು. ಇದೇ ವೇಳೆ ಬಳ್ಳಗೆರೆ ಕಾವಲ್ ವ್ಯಾಪ್ತಿಯಲ್ಲಿ ಐಡಿಎಫ್ ಸಂಸ್ಥೆ ಸುಸ್ಥಿರ ಕೃಷಿ ಯೋಜನೆ ಅನುಷ್ಠಾನಕ್ಕೆ ಮುಂದಾಯಿತು. ಈ ಯೋಜನೆಯಡಿ, ಫಲಾನುಭವಿಗಳಿಗೆ ಜೈವಿಕ ಕೀಟ–ರೋಗ ನಿಯಂತ್ರಣಾ ವಿಧಾನಗಳ ಬಗ್ಗೆ ಮಾಹಿತಿ ಹಂಚಿಕೆ, ಪ್ರಾತ್ಯಕ್ಷಿಕೆ, ಸಂವಾದಗಳನ್ನು ಏರ್ಪಡಿಸಿತು. ಈ ತರಬೇತಿಯಲ್ಲಿ ಪಾಲ್ಗೊಂಡಿದ್ದ ರೈತ ದಂಪತಿ ರಾಜೇಶ್ ರೂಪ ಅವರನ್ನು ‘ಸಸ್ಯಾಮೃತ’ ಎಂಬ ಜೈವಿಕ ಕೀಟ–ರೋಗ ನಿಯಂತ್ರಕ (ಬಾಕ್ಸ್ ನೋಡಿ) ಹಾಗೂ ಬೆಳೆ ಪ್ರಚೋದಕ ಆಕರ್ಷಿಸಿತು. ಸ್ಥಳೀಯ ಸಸ್ಯ ಸಂಪನ್ಮೂಲಗಳನ್ನು ಬಳಸಿ, ಮನೆಯಲ್ಲೇ ಈ ಕಷಾಯ ತಯಾರಿಸಲು ಆಸಕ್ತರಾದರು. ಇದನ್ನು ಬಾಳೆ ಮತ್ತು ರೋಗಪೀಡಿತವಾಗಿರುವ ಕಾಕಡ ಗಿಡಗಳಿಗೆ ಪ್ರಾಯೋಗಿಕವಾಗಿ ಉಪಯೋಗಿಸಲು ನಿರ್ಧರಿಸಿದರು.

ಹಂತ ಹಂತವಾಗಿ ಪ್ರಯೋಗ
ಈ ದಂಪತಿಯದ್ದು ಪ್ರಯೋಗಶೀಲ ಮನಸ್ಸು. ಯಾವುದೇ ಕೃಷಿ ಚಟುವಟಿಕೆಗಳನ್ನು ಕಲಿತರು, ಅದನ್ನು ಮೊದಲು ಪ್ರಾಯೋಗಿಕವಾಗಿ ಕಡಿಮೆ ಜಾಗದಲ್ಲಿ ಅನುಸರಿಸಿ, ಯಶಸ್ವಿಯಾದರೆ, ಮುಂದೆ ವಿಸ್ತರಿಸುತ್ತಾರೆ. ಈ ಸಸ್ಯಾಮೃತ ಮತ್ತು ಬೆಳೆ ಪ್ರಚೋದಕ ಬಳಕಸುವ ವಿಷಯದಲ್ಲೂ ಹೀಗೆ ಯೋಚಿಸಿ ತೀರ್ಮಾನಿಸಿದರು.

ಮೊದಲು 20 ಕಾಕಡ ಗಿಡಗಳ ಸಾಲಿನಲ್ಲಿ 17 ಸಾಲುಗಳನ್ನು ಈ ಪ್ರಯೋಗಕ್ಕಾಗಿ ಆಯ್ಕೆ ಮಾಡಿಕೊಂಡರು. ಆಯ್ಕೆ ಮಾಡಿದ ಸಾಲುಗಳಿಗೆ ಹದಿನೈದು ದಿನಕ್ಕೊಮ್ಮೆ ಸಸ್ಯಾಮೃತ ಕಷಾಯ ಸಿಂಪಡಿಸಿದರು. ಉಳಿದ ಮೂರು ಸಾಲುಗಳನ್ನು ಹಾಗೆ ಬಿಟ್ಟರು. ಹಾಗೆಯೇ ಅರ್ಧ ಎಕರೆ ಬಾಳೆಯಲ್ಲಿ ನಾಲ್ಕು ಸಾಲುಗಳನ್ನು ಹೊರತುಪಡಿಸಿ, ಉಳಿದ ಭಾಗಕ್ಕೆ ಸಿಂಪಿಡಿಸಿದರು. ‘ಹೀಗೆ ಮಾಡುವುದರಿಂದ, ಕಷಾಯದ ಪರಿಣಾಮವನ್ನು ಸುಲಭವಾಗಿ ಪತ್ತೆಮಾಡಬಹುದು’ ಎನ್ನುವುದು ರಾಜೇಶ್ ಅಭಿಪ್ರಾಯ.

ಪರಿಣಾಮ ಏನಾಯ್ತು ?
ಸಸ್ಯಾಮೃತ ಬಳಸಿದ ಎರಡು ವಾರಗಳಲ್ಲಿ ಕಾಕಡ ಸಸಿಗಳಲ್ಲಿ ಎಲೆಮುದುರು ರೋಗ, ಎಲೆಚುಕ್ಕಿ ರೋಗ ಕಡಿಮೆಯಾಯಿತು. ರಸ ಹೀರುವ ಕೀಟಗಳ ಹಾವಳಿ ಶೇಕಡ 90ರಷ್ಟು ಕಡಿಮೆಯಾಗಿತ್ತು. ಬದಲಿಗೆ, ಆ ಸಾಲುಗಳಲ್ಲಿ ಎಲೆ ಉದುರಿದ್ದ ಜಾಗದಲ್ಲಿ ಹೊಸ ಕುಡಿಗಳು ಚಿಗುರೊಡೆದವು.

ಸ್ವಲ್ಪ ದಿನ ಬಿಟ್ಟು, ಅದೇ ಸಾಲಿನ ಗಿಡಗಳಲ್ಲಿನ ಹೂವು ಬಿಡುವ ಪ್ರಮಾಣ ಹೆಚ್ಚಿದ್ದನ್ನು ಈ ದಂಪತಿ ಗಮನಿಸಿದರು. ಅವರ ಪ್ರಕಾರ ‘ಕಷಾಯ ಸಿಂಪಡಣೆಗೆ ಮುನ್ನ ಹದಿನೇಳು ಸಾಲು ಗಿಡಗಳಿಂದ 600 ಗ್ರಾಂ ಹೂವು ಸಿಗುತ್ತಿತ್ತು. ಈಗ ಅದು ಒಂದು ಕೆಜಿಗೆ ಏರಿಕೆಯಾಗಿದೆ. ಹೂವಿನ ಹೊಳಪು ಕೂಡ ಹೆಚ್ಚಾಗಿದೆ. ಕಷಾಯ ಸಿಂಪಡಿಸದ ಸಾಲುಗಳಲ್ಲಿ ಮಾತ್ರ ರೋಗ, ಕೀಟಬಾಧೆ ಮುಂದುವರಿದಿದೆ’ ಎಂದು ಎರಡೂ ಗಿಡಗಳ ಹೂವಿನ ದಳಗಳನ್ನು ಬೊಗಸೆಯಲ್ಲಿ ಹಿಡಿದು ರಾಜೇಶ್‌ ತೋರಿಸಿದರು. ಕಷಾಯ ತಯಾರಿಕೆಯಲ್ಲಿ ಖರ್ಚಿಲ್ಲ. ಈಗ ಅದನ್ನು ಬಳಸಿದ್ದರಿಂದ ಕೀಟನಾಶಕಕ್ಕೆ ಖರೀದಿಗಾಗಿ ವಾರ್ಷಿಕವಾಗಿ ವ್ಯಯಿಸುತ್ತಿದ್ದ ₹5ಸಾವಿರ ಹಣ ಉಳಿತಾಯವಾಗಿದೆ. ಹಾಗಾಗಿ, ಇಳುವರಿ ಹೆಚ್ಚಳದ ಲಾಭದ ಜತೆಗೆ, ಉಳಿತಾಯವೂ ಸೇರುತ್ತದೆ’ ಎಂದು ರೂಪಾ ವಿಶ್ಲೇಷಿಸುತ್ತಾರೆ.

ಸಸ್ಯಾಮೃತ ಕಷಾಯ ಸಿಂಪಡಿಸಿದ ಬಾಳೆ ಗಿಡಗಳು ಆರೋಗ್ಯಪೂರ್ಣವಾಗಿವೆ. ಕಷಾಯದ ಪರಿಣಾಮ ತಿಳಿಯಬೇಕೆಂದರೆ ಗೊನೆ ಬಿಡಲು ಶುರುವಾಗಬೇಕು. ಆಗ ಕಾಯಿಗಳ ಸಂಖ್ಯೆ, ತೂಕ, ರುಚಿ, ಹೊಳಪು ಎಲ್ಲವನ್ನೂ ಪರಿಶೀಲಿಸಿ ಹೇಳಬಹುದು. ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎನ್ನುತ್ತಾರೆ ದಂಪತಿ.

ಈ ಕಷಾಯದ ಯಶಸ್ಸಿನಿಂದ ಉತ್ತೇಜಿತರಾಗಿರುವ ರಾಜೇಶ್ – ರೂಪಾ, ಉಳಿದ ಬೆಳೆಗಳಿಗೆ ಜೀವಾಮೃತ, ಶುಂಠಿ-ಬೆಳ್ಳುಳ್ಳಿ ಕಷಾಯದಂತಹ ಜೈವಿಕ ಕೀಟನಿಯಂತ್ರಕ ವಿಧಾನಗಳ ಪ್ರಯೋಗಕ್ಕೂ ಮುಂದಾಗಿದ್ದಾರೆ.

ಸಸ್ಯಾಮೃತ ಕಷಾಯ ಮತ್ತು ಪರಿಣಾಮ ಕುರಿತು ಮಾಹಿತಿ ಹಂಚಿಕೊಳ್ಳಲು ರಾಜೇಶ್ ಅವರನ್ನು ದೂರವಾಣಿ : 9141329895 ಸಂಪರ್ಕಿಸಬಹುದು. 

‘ಸಸ್ಯಾಮೃತ’ ತಯಾರಿಕೆ ವಿಧಾನ
ಬೇಕಾಗುವ ಪದಾರ್ಥಗಳು

*100 ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಡ್ರಮ್ ಅಥವಾ ಮಣ್ಣಿನ ಮಡಕೆ.
*80 ಲೀ ನೀರು
*10 ಕೆ.ಜಿ.ಯಷ್ಟು ಆಡು ಮುಟ್ಟದ ವಿವಿದ ಬಗೆಯ ಎಲೆಗಳು.
(ಬೇವು, ಪಾರ್ಥೇನಿಯಂ, ರೋಜೆಳ್ಳು, ಎಕ್ಕ, ಲಕ್ಕಿ, ಚೆಂಡು ಹೂ, ಹೊಗೆಸೊಪ್ಪು, ಲೋಳೆಸರ, ದತ್ತೂರಿ, ವಿಷಮದಾರಿ, ಹೊಂಗೆ, ಹರಳು, ದಾಳಿಂಬೆ, ಪರಂಗಿ, ಹಾಗಲ, ಕಳ್ಳಿ, ಸೀತಾಪಲ, ನುಗ್ಗೆ, ಬಿಲ್ವಪತ್ರೆ, ತುಳಸಿ, ಚಿಗರೆ, ಪುದೀನ, ತುರುಕೆ, ನೆಲಬೇವು, ಬೋಗನ್ ವಿಲ್ಲಾ, ಕತ್ತಾಳೆ, ಉತ್ತರಾಣಿ, ಕಣಿಗಲೆ ). ಇವುಗಳಲ್ಲಿ ಕನಿಷ್ಠ 7 ರೀತಿಯ ಸೊಪ್ಪುಗಳು ಬೇಕು.

*10 ಲೀಟರ್ ಗಂಜಲ, 2 ಕೆ.ಜಿ ಸಗಣಿ, 2 ಲೀಟರ್ ಹುಳಿಮಜ್ಜಿಗೆ, 1 ಲೀಟರ್ ಹುಳಿ ಬರಿಸಿದ ಎಳನೀರು

*ಲಭ್ಯವಿದ್ದರೆ ತಲಾ 2 ಕೆ.ಜಿ ಬೇವು, ಹೊಂಗೆ, ಹಿಪ್ಪೆ ಬೀಜ ಅಥವಾ ಹಿಂಡಿಗಳು

*ತಲಾ 500 ಗ್ರಾಂ ಹಸಿಮೆಣಸಿನಕಾಯಿ, ಈರುಳ್ಳಿ, ತಂಬಾಕು ಮತ್ತು ಮೀನು

*ತಲಾ 200 ಗ್ರಾಂ ಬೆಳ್ಳುಳ್ಳಿ, ಶುಂಠಿ ಹಾಗೂ ಕೊತ್ತಂಬರಿ ಬೀಜ

*ಲಭ್ಯವಿದ್ದರೆ ತಲಾ 100 ಗ್ರಾಂನಷ್ಟು ಇಂಗು, ಬಜೆ, ಕರಿಮೆಣಸು, ಅರಿಸಿನ, ಸೀಗೇಕಾಯಿ


ತಯಾರಿಸುವ ವಿದಾನ
ಪ್ಲಾಸ್ಟಿಕ್ ಡ್ರಂ ಅಥವಾ ಮಡಕೆಗೆ 10 ಕೆ.ಜಿ.ಯಷ್ಟು ವಿವಿದ ಬಗೆಯ ಎಲೆಗಳು ಜಜ್ಜಿ ಹಾಕಿ. ಅದಕ್ಕೆ 10 ಲೀಟರ್ ಗಂಜಲ, 2 ಕೆ.ಜಿ ಸಗಣಿ, 2 ಲೀಟರ್ ಹುಳಿಮಜ್ಜಿಗೆ, 1 ಲೀಟರ್ ಹುಳಿ ಬರಿಸಿದ ಎಳನೀರನ್ನು ಹಾಕಿ. ಲಭ್ಯವಿದ್ದರೆ ತಲಾ 2 ಕೆ.ಜಿ ಬೇವು, ಹೊಂಗೆ, ಹಿಪ್ಪೆ ಬೀಜ ಅಥವಾ ಹಿಂಡಿಯನ್ನು ಜಜ್ಜಿ ಹಾಕಿ. ತಲಾ 500 ಗ್ರಾಂ ಹಸಿ ಮೆಣಸಿನಕಾಯಿ, ಈರುಳ್ಳಿಯನ್ನು ಜಜ್ಜಿ ಹಾಕಿ, ತಲಾ 200 ಗ್ರಾಂ ಬೆಳ್ಳುಳ್ಳಿ, ಶುಂಠಿ ಹಾಗೂ ಕೊತ್ತಂಬರಿ ಬೀಜಗಳನ್ನು ಜಜ್ಜಿ ಹಾಕಿ. ಇವುಗಳ ಜೊತೆಗೆ ತಲಾ 100 ಗ್ರಾಂನಷ್ಟು ಇಂಗು, ಬಜೆ, ಕರಿಮೆಣಸು, ಅರಿಸಿನ ಮತ್ತು ಸೀಗೇಕಾಯಿಯನ್ನು ಪುಡಿಮಾಡಿ ಹಾಕಿದರೆ ಪರಿಣಾಮಕಾರಿ.

ಈ ಮಿಶ್ರಣಕ್ಕೆ 80 ಲೀಟರ್ ನೀರನ್ನು ಸುರಿದು, ಕಲೆಸಿ ಗಾಳಿ ಆಡದಂತೆ ಡ್ರಂ ಬಾಯನ್ನು ಕಟ್ಟಿ. ಪ್ರತಿ ದಿನ 2 ಬಾರಿ ಮುಚ್ಚಳ ತೆಗೆದು ಗೊಟಾಯಿಸಬೇಕು (ತಿರುಗುಸುತ್ತಿರಿ). ಈ ಮಿಶ್ರಣವನ್ನು ಒಂದು ವಾರದವರೆಗೆ ಕಳಿಯಲು ಬಿಡಿ. ನಂತರ ಸಸ್ಯಾಮೃತ ಬಳಕೆಗೆ ಸಿದ್ದ. ಈ ಕಷಾಯವನ್ನು 6 ತಿಂಗಳವರೆಗೆ ಇಟ್ಟು ಬಳಸಬಹುದು.

ಬಳಸುವ ವಿಧಾನ
ತೆಳುವಾದ ಗೋಣಿ ಚೀಲ ಹಾಗೂ ಬಟ್ಟೆಯಿಂದ ಎರಡು ಬಾರಿ ಕಷಾಯವನ್ನು ಶೋಧಿಸಿಕೊಳ್ಳಿ. ಒಂದು ಕ್ಯಾನಿಗೆ 2-3 ಲೀಟರಿನಷ್ಟು ಸಸ್ಯಾಮೃತ ದ್ರಾವಣವನ್ನು ಹಾಕಿ. ಅದಕ್ಕೆ ಸ್ವಲ್ಪ ಸೋಪಿನ ಪುಡಿ ಮತ್ತು ಬೆಲ್ಲದ ಪುಡಿಗಳನ್ನು ಮಿಶ್ರಮಾಡಿ. ನಂತರ ಬೆಳೆಗಳಿಗೆ ಸಿಂಪಡಿಸಿ.


‘ಸಸ್ಯಾಮೃತ’ ಎಂದರೆ...
ಸ್ಥಳೀಯ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ತಯಾರಿಸುವ ರೋಗ-ಕೀಟ ನಿಯಂತ್ರಕ. ಜೊತೆಗೆ ಸಸ್ಯ ಪ್ರಚೋದಕವಾಗಿಯೂ ಕೆಲಸ ನಿರ್ವಹಿಸುತ್ತದೆ. ಇದೊಂದು ದ್ರವರೂಪದ ಪದಾರ್ಥ. ಸರಳವಾಗಿ ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಯಾವುದೇ ಖರ್ಚಿಲ್ಲ. ಬಳಸುವುದೂ ಸುಲಭ’ ಎನ್ನುತ್ತಾರೆ ಐಡಿಎಫ್ ಸಂಸ್ಥೆಯ ಎಂ.ಎಲ್. ಕೆಂಪೇಗೌಡ.

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !