ಚಂದ್ರಹಲಸಿನ ವಿಶ್ವರೂಪ...!

7
ಕೆಂಪು ಹಲಸು

ಚಂದ್ರಹಲಸಿನ ವಿಶ್ವರೂಪ...!

Published:
Updated:

‘ಅದನ್ನು ತಿನ್ನಹೊರಟವರಿಗೆ ನಿಲ್ಲಿಸಬೇಕೆನಿಸುವುದಿಲ್ಲ’. ಇದು ರಾಜ್ಯದ ಶೇಷ್ಠ ಚಂದ್ರ ಹಲಸಿನ ಹಣ್ಣು ತಿಂದ ಹಲವರ ಅಭಿಪ್ರಾಯ.

ಚಂದ್ರ ಹಲಸು ಅಂದರೆ, ಕೆಂಪು ಸೊಳೆಯ ಹಲಸಿನಹಣ್ಣಿನ ವರ್ಗ. ಇವುಗಳಿಗೆ ಹೆಸರಿನ ಜತೆ ‘ಚಂದ್ರ’ ಸೇರಿಸುವುದಿದೆ - ಬೈರಚಂದ್ರ, ರಾಮಚಂದ್ರ – ಹೀಗೆ. ಮಲೆಯಾಳದಲ್ಲಿ ಈ ಹಣ್ಣಿನ ತಳಿಗೆ ‘ಚೆಂಬರತ್ತಿ ವರಿಕ್ಕ’ ಎಂದು ಹೆಸರು. ಉದಾಹರಣೆಗೆ ಸಿಂಧೂರ, ಪತ್ತಾಮುಟ್ಟಮ್ ತಳಿಗಳು.

‘ಕೆಂಪು ಸೊಳೆ ಹಲಸು ಸಾಕೆನಿಸುವಷ್ಟು ಸಿಹಿಯನ್ನಾಗಲೀ, ಪರಿಮಳವನ್ನಾಗಲೀ ಹೊಂದಿರುವುದಿಲ್ಲ’- ಮಣಿಪಾಲದ ಬಳಿಯ ಕಸಿ ತಜ್ಞ ಗುರುರಾಜ ಬಾಳ್ತಿಲ್ಲಾಯ ವಿಶ್ಲೇಷಿಸುತ್ತಾರೆ. ‘ಆದರೆ ಇನ್ನೊಂದು, ಮತ್ತೊಂದು ತಿನ್ನಬೇಕು ಅಂತ ಅನಿಸುವುದು ಸತ್ಯ’. ಇವರ ಬಳಿ ಬೇರೆಬೇರೆ ಪ್ರದೇಶಗಳ ಮೂರು ಡಜನ್‌ಗೂ ಹೆಚ್ಚು ಆಯ್ದ ‘ಕೆಂಪು’ ತಳಿಗಳಿವೆ.

ಎಲ್ಲ ಚಂದ್ರ ಹಲಸುಗಳೆಲ್ಲವೂ ತುಂಬಾ ರುಚಿಯಾಗಿರುತ್ತವೆ ಎನ್ನುವಂತೆಯೂ ಇಲ್ಲ. ಆದರೆ ಕೆಲವಂತೂ ನಿಜಕ್ಕೂ ಸೂಪರ್! ‘ಕೆಂಪು ಸೊಳೆ’ ಎಂಬ ಹೆಸರು ಕೇಳಿ ಅಚ್ಚಗೆಂಪನ್ನೇ ಮನದಲ್ಲಿಡಬೇಡಿ. ನಸು ಹಳದಿಗೆಂಪಿನಿಂದ ಆರಂಭಿಸಿ ನಸುಕೇಸರಿ, ಕೇಸರಿ, ತೆಳು ಕೆಂಪಿನ ಬಣ್ಣದ ಹಣ್ಣುಗಳೂ ಇವೆ. ಕೆಲವರು ಈ ಹಣ್ಣಿನ ಫೋಟೊ ತೋರಿಸಿದಾಗ, ಇದು ‘ಅಸಲಿ ಬಣ್ಣವೇ’ ಎಂದು ಕೇಳುವಷ್ಟು ಕೆಂಬಣ್ಣದ ಹಣ್ಣುಗಳೂ ಇವೆ.

‘ಕೆಂಪು ಸೊಳೆಯದು ಸಿಕ್ಕರೆ ಮಾಮೂಲಿಯಾಗಿ ಹಲಸಿನ ಎರಡು ಪ್ಯಾಕೆಟ್ ಒಯ್ಯುವವರು ಮೂರ್ನಾಲ್ಕು ಪ್ಯಾಕೆಟ್ ಒಯ್ಯುತ್ತಾರೆ. ಇವುಗಳಿಗೆ ಮಾರುಕಟ್ಟೆ ಉತ್ತಮವಾಗಿರುವುದಂತೂ ಖಚಿತ’ ಎನ್ನುತ್ತಾರೆ ಬೆಂಗಳೂರಿನ ತೀರ್ಥಕುಮಾರ್. ಇವರು ಹಲಸಿನ ಹಣ್ಣನ್ನು ಪ್ಯಾಕೆಟ್ ಮಾಡಿ ಸೂಪರ್ ಮಾರ್ಕೆಟ್‌ಗಳಿಗೆ ಸರಬರಾಜು ಮಾಡುತ್ತಾರೆ. ಅವರ ಪ್ರಕಾರ ‘ಕೆಂಪು ಸೊಳೆಯ ಉತ್ತಮ ಹಣ್ಣುಗಳನ್ನು ಆಯ್ದು ಬ್ರಾಂಡ್ ಮಾಡಿ ಮಾರಬಹುದು. ಇವು ಲಭ್ಯವಾಗುವುದು ಮೇ ತಿಂಗಳಿಂದ ಜುಲೈವರೆಗೆ ಮಾತ್ರ’.

ಭಾರತವೇ ಅಗ್ರಗಣ್ಯ...
ಬಹುಶಃ ಜಗತ್ತಿನಲ್ಲೇ ಚಂದ್ರಹಲಸಿನ ಗರಿಷ್ಠ ಉತ್ಪಾದನೆ ಇರುವುದು ಭಾರತದಲ್ಲಿ. ಅಂದರೆ, ಕರ್ನಾಟಕದ ತುಮಕೂರು ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೂಬುಗೆರೆ ಸುತ್ತಮುತ್ತ. ಆದರೆ ಎಷ್ಟು ‘ಕೆಂಪು’ ಮರವಿದೆ ಎಂಬ ದತ್ತಾಂಶ(ಅಂಕಿ ಅಂಶಗಳು) ಆಗಲೀ, ಎಲ್ಲೆಲ್ಲಿ ಇದೆ ಎನ್ನುವ ವಿವರವಾಗಲೀ ಈವರೆಗೆ ಯಾರೂ ಸಮಗ್ರವಾಗಿ ಕಲೆ ಹಾಕಿಲ್ಲ.

ತುಮಕೂರು ಜಿಲ್ಲೆಯ ಕೆ.ಬಿ. ಕ್ರಾಸ್ ಮತ್ತು ಡಾಬಸ್ ಪೇಟೆಯ ಮಾರಾಟಗಾರರು ಲಭ್ಯವಿರುವಾಗ ತಪ್ಪದೆ ಕೆಂಪು ಹಲಸು ಮಾರಾಟಕ್ಕಿಡುತ್ತಾರೆ. ಮಧ್ಯವರ್ತಿಗಳೇನೋ ‘ಕೆಂಪಿನಿಂದ’ ಒಳ್ಳೆ ಹಣ ಮಾಡುತ್ತಾರೆ. ಆದರೆ ರೈತರಿಗೆ ಪ್ರೀಮಿಯಂ ದರ ಬಿಡಿ, ನ್ಯಾಯ ಬೆಲೆಯೂ ಸಿಗುವುದಿಲ್ಲ.

ಈ ಚಂದ್ರ ಹಲಸಿನ ಅದ್ಭುತ ತಳಿ ಸಂಪತ್ತಿನ ಲಾಭ ಕೃಷಿಕ ಸಮುದಾಯಕ್ಕೆ ಸಿಗುವಂತೆ ಮಾಡುವ ಪ್ರಯತ್ನ ಅಷ್ಟಾಗಿ ಆಗಿಯೇ ಇಲ್ಲ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಡಾ.ಶ್ಯಾಮಲಮ್ಮ ಮತ್ತು ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರಗಳು ‘ಕೆಂಪಿನತ್ತ’ ದೃಷ್ಟಿ ಹಾಯಿಸಿದವರಲ್ಲಿ ಮೊದಲಿಗರು. ಇವರು ತೂಬುಗೆರೆಯ ಕೆಲವು ಉತ್ತಮ ತಳಿಗಳನ್ನು ಆಯ್ದು ಕಸಿ ಗಿಡ ಮಾಡುತ್ತಿದ್ದಾರೆ; ಇನ್ನೊಂದಷ್ಟು ತಳಿಗಳನ್ನು ಗುರುತಿಸಿದ್ದಾರೆ.


ಕೆಂಪು ಹಲಸು ಸೊಳೆಗಳ ವೈವಿಧ್ಯ

‘ತೂಬುಗೆರೆ ಹಲಸು ಬೆಳೆಗಾರ ಸಂಘ’ದ ಕೃಷಿಕರು ಹಲಸು ಹಬ್ಬಗಳಿಗೆ ಮಾರಲು ಒಯ್ಯುವ ಹಣ್ಣುಗಳಲ್ಲಿ ಕೆಂಪಿನವೂ ಕಡ್ಡಾಯವಾಗಿ ಇರುತ್ತವೆ. ಅವರು ಹೋದಲ್ಲೆಲ್ಲಾ ಇವು ಗ್ರಾಹಕರಿಗೆ ಮುಖ್ಯ ಆಕರ್ಷಣೆ! ಆರೇಳು ವರ್ಷಗಳಲ್ಲಿ ಈ ಸಂಘ ಕನಿಷ್ಠ ಇಪ್ಪತ್ತೈದು ಹಲಸಿನ ಹಬ್ಬಗಳಲ್ಲಿ ಭಾಗವಹಿಸಿದೆ. ಗ್ರಾಹಕರಿಗೆ ರುಚಿರುಚಿಯ ಕೆಂಪು ತಳಿಗಳನ್ನು ಪರಿಚಯಿಸುವುದರಲ್ಲಿ ದೊಡ್ಡ ಪಾತ್ರ ವಹಿಸಿದೆ.

‘ತುಸು ಸಿಹಿ ಮತ್ತು ಆಕರ್ಷಕ ಬಣ್ಣ ಕೆಂಪು ಹಲಸನ್ನು ಎತ್ತರದ ಸ್ಥಾನಕ್ಕೇರಿಸಿದೆ’ ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ (ಐಐಎಚ್ಆರ್) ನಿರ್ದೇಶಕ ಡಾ. ಎಂ.ಆರ್.ದಿನೇಶ್ ಅಭಿಪ್ರಾಯಪಡುತ್ತಾರೆ. ದಿನೇಶ್ ಅವರ ಉತ್ಸಾಹದಿಂದಾಗಿ ಈ ಸಂಸ್ಥೆ ಈಚೆಗಿನ ದಿನಗಳಲ್ಲಿ ಚಂದ್ರ ಹಲಸನ್ನು ಹೆಚ್ಚು ಪರಿಚಯಿಸಲು ಶ್ರಮಿಸಿದೆ.

ಡಾ. ಜಿ. ಕರುಣಾಕರನ್ ತುಮಕೂರು ಸಮೀಪದಲ್ಲಿರುವ ಐಐಎಚ್ಆರ್ ಹಿರೇಹಳ್ಳಿ ಉಪಕೇಂದ್ರದ ಮುಖ್ಯಸ್ಥರು. ಅವರು ಊರಿಡೀ ಹುಡುಕಾಡಿ ಮೂರು ಬಾರಿ ಚಂದ್ರ ಹಲಸು ತಳಿಗಳನ್ನು ಪ್ರದರ್ಶಿಸಿದ್ದಾರೆ. ಕಳೆದ ವರ್ಷ ಬೆಂಗಳೂರು ಐಐಎಚ್ಆರ್‌ನಲ್ಲಿ ನಡೆಸಿದ ಪ್ರದರ್ಶನದಲ್ಲಿ 45 ಕೆಂಪು ಸೊಳೆ ತಳಿಗಳಿದ್ದವು; ಈ ಬಾರಿ 65! ಚಂದ್ರ ಹಲಸಿಗೆ ಕನ್ನಡಿ ಹಿಡಿಯುವ ಇಂಥ ಗಂಭೀರ ಯತ್ನ ದೇಶದಲ್ಲಿ ಇವೇ ಮೊದಲು!

ಇದೇ ಐಐಎಚ್ಆರ್ ದೇಶದಲ್ಲೇ ಪ್ರಪ್ರಥಮವಾಗಿ ಕೃಷಿಕರೊಬ್ಬರ ಹೆಸರಿನಲ್ಲಿ ಹಲಸಿನ ತಳಿ ನೋಂದಣಿ ಮಾಡಿದೆ. ಈ ಅಚ್ಚಗೆಂಪು ತಳಿ ‘ಸಿದ್ದು’ ಈಗ ಜಗತ್ಪ್ರಸಿದ್ಧ. ತಳಿ ನೋಂದಣಿಯಿಂದ ಮರದ ಒಡೆಯ ಎಸ್. ಕೆ.ಸಿದ್ದಪ್ಪರಿಗೆ ಗಣನೀಯ ಆದಾಯವೂ ಬರುತ್ತಿದೆ.

ಹಲಸಿನ ಋತುವಿನಲ್ಲಿ ಕರುಣಾಕರನ್ ಓಡಾಡುವಾಗಲೆಲ್ಲಾ ಅವರ ವಾಹನದಲ್ಲಿ ‘ಕೆಂಪು ಹಣ್ಣು’ ಇರುತ್ತದೆ. ಅವರೇ ತೊಳೆ ಬಿಡಿಸಿ ಅತಿಥಿಗಳಿಗೆ, ಗಣ್ಯರಿಗೆ ರುಚಿ ತೋರಿಸಿ ಖುಷಿಪಡುತ್ತಾರೆ. ‘ಲೆಕ್ಕ ಇಟ್ಟಿಲ್ಲ, ಈವರೆಗೆ ಐವತ್ತರಷ್ಟು ಕೆಂಪು ಹಲಸಿನ ರುಚಿ ನೋಡಿರಬಹುದು. ಆದರೆ, ಇದು ತುಮಕೂರು ಜಿಲ್ಲೆಯ ‘ಕೆಂಪು ಹಣ್ಣು ಸಂಪತ್ತಿನ ಶೇ 30 ಕೂಡಾ ಆಗದೇನೋ. ಪ್ರತಿವರ್ಷ ಹಲವು ಹೊಸಹೊಸ ತಳಿಗಳು ಬೆಳಕಿಗೆ ಬರುತ್ತಿರುತ್ತವೆ’ ಎನ್ನುತ್ತಾರೆ ಅವರು.

ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಪಿ.ಎಂ. ಸಂಪತ್ ಅವರ ಪ್ರಕಾರ, ‘ಚಂದ್ರ ಹಲಸಿನ ಮೊದಲ ಸೆಳೆತ ಅದರ ಮನಮೋಹಕ ಬಣ್ಣವೇ. ಆದರೆ ಉತ್ತಮ ಕೆಂಪು ತಳಿಗಳಲ್ಲಿ ರುಚಿಯೇ ಪ್ರಾಮುಖ್ಯವಾಗಿರುವುದು ಸತ್ಯ. ಇದು ಯಾಕೆ ಎಂಬುದು ಜೀವರಸಾಯನ ಪರೀಕ್ಷೆ (ಬಯೋಕೆಮಿಕಲ್) ವಿಶ್ಲೇಷಣೆಯಿಂದಷ್ಟೇ ಗೊತ್ತಾಗಬಹುದು’. ಅಂದ ಹಾಗೆ ಸಂಪತ್ ಮೈಸೂರಿನಲ್ಲಿ ಉತ್ಕೃಷ್ಟ ಹಲಸಿನ ತಳಿಗಳ ಬಗ್ಗೆ ಪಿಎಚ್ ಡಿ ಮಾಡುತ್ತಿದ್ದಾರೆ.
**
ಮಲೆನಾಡಿಗೆ ಅಷ್ಟು ಸೂಕ್ತವಲ್ಲ..
‘ಕಡಿಮೆ ಮಳೆ ಪ್ರದೇಶದ ಕೆಂಪು ತಳಿ ಮಲೆನಾಡಿನಲ್ಲಿ ಅಷ್ಟು ಚೆನ್ನಾಗಿ ಬರುವುದಿಲ್ಲ. ಇಲ್ಲಿ ಕೊಳೆರೋಗ ಬಾಧೆಯೂ ಜಾಸ್ತಿ’ ಎನ್ನುತ್ತಾರೆ ಕಸಿ ತಜ್ಞ ಗುರುರಾಜ್. ಮಲೆನಾಡಿಗೆ ಹೆಚ್ಚು ಮಳೆ ಬೀಳುವ ಊರುಗಳ ತಳಿಗಳೇ ಸೂಕ್ತ ಎನ್ನುವುದು ಅವರ ಸಲಹೆ. ಮಲೆನಾಡಿನಲ್ಲೂ ಕೆಂಪು ತಳಿ ಅತ್ಯಪೂರ್ವವಲ್ಲ. ತೀವ್ರ ಶೋಧ ನಡೆಸಿದರೆ ಹಲವು ಸಿಗಬಹುದು. ಗುರುರಾಜರ ಬಳಿಯೇ ಇಂಥ 15 ಕ್ಕೂ ಹೆಚ್ಚು ಆಯ್ದ ತಳಿಗಳಿವೆ.

ಮಲೆನಾಡಿನಲ್ಲಿ ಕೆಂಪು ತಳಿ ಶೋಧಕ್ಕಾಗಿ ಒಂದು ವಿಶೇಷ ಯತ್ನ ಮಾಡಬಹುದು. ಹಲಸು ಹಬ್ಬದಲ್ಲಿ ಆಕರ್ಷಕ ನಗದು ಬಹುಮಾನದೊಂದಿಗೆ ‘ಉತ್ತಮ ಚಂದ್ರ ಹಲಸಿನ ಸ್ಪರ್ಧೆ’ ಏರ್ಪಡಿಸಬೇಕು. ಆಗ ಒಂದಷ್ಟು ಕೆಂಪು ತಳಿಗಳು ಬೆಳಕಿಗೆ ಬರಬಹುದು.

ಸಂಶೋಧನೆ, ಪ್ರಚಾರ ಅಗತ್ಯ 
‘ಸಿದ್ದು’ವಿನಂತೆ ಕತ್ತಲಲ್ಲೇ ಉಳಿದ ಶ್ರೇಷ್ಠ ಚಂದ್ರ ಹಲಸು ತಳಿ ಎಷ್ಟಿದೆಯೋ! ಇಂಥ ತಳಿಗಳ ಆಯ್ಕೆ, ಪ್ರತ್ಯುತ್ಪಾದನೆ, ವೈಜ್ಞಾನಿಕ ವಿಶ್ಲೇಷಣೆ ಮತ್ತು ಪ್ರಚಾರ ನಡೆಯಬೇಕಿದೆ. ಕೃಷಿಕರು – ವಿಜ್ಞಾನಿಗಳು ಒಗ್ಗೂಡಿ ಮನಸಾರೆ ಕೆಲಸ ಮಾಡಬೇಕಿದೆ.

(ಚಂದ್ರ ಹಲಸು ಗಿಡ ಹಾಗೂ ಮಾಹಿತಿಗಾಗಿ ಗುರುರಾಜ್ ಬಾಳ್ತಿಲ್ಲಾಯ (97317 34688 ) ಜಾಕ್ ಅನಿಲ್ (94487 78497) ಅವರನ್ನು ಸಂಪರ್ಕಿಸಬಹುದು. ಸಂಪರ್ಕ ಸಮಯ ರಾತ್ರಿ 7 ರಿಂದ 8 ಗಂಟೆವರೆಗೆ).

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !