ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಲಾಕ್‌ಡೌನ್‌ನಿಂದಾಗಿ ಊರಿಗೆ ಬಂದಾತ ₹7 ಲಕ್ಷ ಸಂಪಾದಿಸಿದ!

ಟೊಮೆಟೊ ಬೆಳೆದ ಯುವ ರೈತ; ಈಗ ಸೌತೆ ಬೆಳೆಯುವುದರಲ್ಲಿ ನಿರತ
Last Updated 2 ಸೆಪ್ಟೆಂಬರ್ 2020, 6:21 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನಿಂದ ಸಾವಿನ ಭೀತಿ ಹುಟ್ಟಿಸಿದ್ದ ದಿನಗಳವು. ಇಡೀ ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಿಂದ, ಕೆಲಸ ಅರಸಿ ಮಹಾನಗರಗಳಿಗೆ ವಲಸೆ ಹೋಗಿದ್ದ ಎಷ್ಟೋ ಯುವಕರು ಹಳ್ಳಿಗಳಿಗೆ ಮರಳಿದ್ದರು. ಹೀಗೆ ಬಂದ ಅನೇಕ ಯುವಕರು ಉದ್ಯೋಗವಿಲ್ಲದೆ, ಖರ್ಚಿಗೂ ದುಡ್ಡಿಲ್ಲದೆ ಪರಿತಪಿಸುತ್ತಿದ್ದರು. ಆದರೆ, ಗೋಪಾಲಗೌಡ ಎಂಬ ಯುವಕ ಸುಮ್ಮನೆ ಕೂರಲಿಲ್ಲ. ಇದ್ದ ಜಮೀನಿನ ಪೈಕಿ ಒಂದೂವರೆ ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆದರು. ಒಳ್ಳೆಯ ಬೆಲೆಯೂ ಸಿಕ್ಕಿದ್ದರಿಂದ ಸುಮಾರು ₹7 ಲಕ್ಷ ಆದಾಯ ಗಳಿಸಿದರು!

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಆಲಂಬಗಿರಿ ಗ್ರಾಮದ ವೆಂಕಟೇಶಗೌಡ ಮತ್ತು ಸರಸ್ವತಮ್ಮ ದಂಪತಿಯ ಮಗನಾದ ಗೋಪಾಲಗೌಡ (23), ಬೆಂಗಳೂರಿನ ಕಂಪನಿಯೊಂದರಲ್ಲಿ ಟೆಕ್ನಿಷಿಯನ್‌ ಆಗಿ ಕೆಲಸ ಮಾಡುತ್ತಿದ್ದರು. ಜಮೀನು ಇದ್ದರೂ ಬೆಳೆ ಬೆಳೆಯುವ ಮನಸ್ಸು ಇರಲಿಲ್ಲ. ಮನೆಗೆಂದು ರಾಗಿ ಬೆಳೆದುಕೊಳ್ಳುತ್ತಿದ್ದರು. ಎಲ್ಲರಂತೆ ಬೆಂಗಳೂರಿನಲ್ಲಿ ನೌಕರಿ ಗಿಟ್ಟಿಸಿಕೊಂಡರೆ, ಹಣ ಸಂಪಾದಿಸಬಹುದು, ಊರಿನಲ್ಲಿ ಮರ್ಯಾದೆಯೂ ಸಿಗುತ್ತದೆ ಎಂಬ ಆಸೆ ಗೋಪಾಲಗೌಡ ಹಾಗೂ ಅವರ ಮನೆಯವರದ್ದು. ಹೀಗಾಗಿ, ಬೆಂಗಳೂರಿನಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡ ಅವರು, ಆರಂಭದಲ್ಲಿ ₹10 ಸಾವಿರ ಸಂಪಾದಿಸುತ್ತಿದ್ದರು. ಒಂದೆರಡು ವರ್ಷಗಳ ಬಳಿಕ ₹15 ಸಾವಿರ ಸಂಬಳ ಪಡೆಯಲಾರಂಭಿಸಿದರು. ಆದರೆ, ಕೊರೊನಾ ಸೋಂಕು ಎಲ್ಲೆಡೆ ಹರಡಲಾರಂಭಿಸಿತ್ತು. ಲಾಕ್‌ಡೌನ್ ಘೋಷಣೆಯನ್ನೂ ಮಾಡಲಾಯಿತು. ಇದರಿಂದಾಗಿ ಎಲ್ಲರಂತೆ ಗೋಪಾಲಗೌಡ ಸಹ ಬೆಂಗಳೂರನ್ನು ತೊರೆದು ಊರಿಗೆ ಬಂದರು.

ಊರಿನಲ್ಲಿ ಸ್ನೇಹಿತರೊಂದಿಗೆ ಒಂದಷ್ಟು ದಿನಗಳವರೆಗೆ ಹರಟುತ್ತಾ, ತಿರುಗಾಡಿಕೊಂಡಿದ್ದರು. ಆದರೆ, ದಿನಗಳು ಕಳೆದಂತೆ ಬೇಸರ ಶುರುವಾಯಿತು.‌ ಭವಿಷ್ಯದ ಚಿಂತೆ ಕಾಡಲಾರಂಭಿಸಿತು. ಹೀಗಾಗಿ, ಇರುವ ಜಮೀನಿನಲ್ಲಿಯೇ ಟೊಮೆಟೊ ಬೆಳೆಯಲು ನಿರ್ಧರಿಸಿದರು. ಆದರೆ, ಕೈಯಲ್ಲಿ ಬಂಡವಾಳವಿರಲಿಲ್ಲ. ನೀರಿನ ಕೊರತೆಯೂ ಇತ್ತು. ಕೊಳವೆಬಾವಿಯಲ್ಲಿ ಬರುತ್ತಿದ್ದ ಸ್ವಲ್ಪ ಪ್ರಮಾಣದಲ್ಲಿ ನೀರಿನಲ್ಲೇ ಬೆಳೆ ಬೆಳೆಯಲು ಮುಂದಾದರು. ₹50 ಸಾವಿರ ಸಾಲ ಮಾಡಿದ ಅವರು, ಜಮೀನು ಉಳುಮೆ ಮಾಡಿ ಟೊಮೆಟೊ ಬೆಳೆಗೆ ಬೇಕಾದ ಸಿದ್ಧತೆ ಮಾಡಿಕೊಂಡರು. ನರ್ಸರಿಯೊಂದರಲ್ಲಿ 10 ಸಾವಿರ ಟೊಮೆಟೊ ಸಸಿಗಳನ್ನು ತಂದು ನಾಟಿ ಮಾಡಿದರು.

ಎರಡು ತಿಂಗಳು ಕಳೆಯುತ್ತಿದ್ದಂತೆ ಕೊಳವೆಬಾವಿಯಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಯಿತು. ಬೆಳೆ ಒಣಗಲಾರಂಭಿಸಿತು. ಬೆಳೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಟ್ಯಾಂಕರ್‌ ನೀರಿನ ಮೊರೆ ಹೋದರು. ದಿನ ಬಿಟ್ಟು ದಿನ 5 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಿದರು. ಪ್ರತಿ ಟ್ಯಾಂಕರ್‌ಗೆ ₹800 ಪಾವತಿಸಿದರು. ಹೀಗೆ, ಒಂದು ತಿಂಗಳವರೆಗೆ ಟ್ಯಾಂಕರ್‌ ಮೂಲಕವೇ ನೀರು ಪೂರೈಕೆ ಮಾಡಿದರು. ಪ್ರತಿ ಬಾರಿ 100ರಿಂದ 150 ಬಾಕ್ಸ್‌ ಟೊಮೆಟೊ ಫಸಲು ದೊರೆಯುತ್ತಿತ್ತು. ಅದನ್ನು ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಿದರು. ಒಳ್ಳೆಯ ಬೆಲೆಯೂ ಸಿಕ್ಕಿತು. ಹೀಗೆ ಗಳಿಸಿದ ಆದಾಯ ಸುಮಾರು ₹7 ಲಕ್ಷ!

ಈಗ ಸೌತೆಕಾಯಿ ಬೀಜ ಬಿತ್ತನೆ ಮಾಡಿದ್ದಾರೆ. ಬೆಂಗಳೂರಿನಿಂದ ವಾಪಸ್ ಬಂದ ಎಷ್ಟೋ ಯುವಕರು ಕೆಲಸವಿಲ್ಲದೆ ಕಂಗೆಟ್ಟಿದ್ದಂತಹ ಹೊತ್ತಿನಲ್ಲೂ ಗೋಪಾಲಗೌಡ ಧೃತಿಗೆಡದೆ ಕೃಷಿ ಮಾಡಿದ್ದರಿಂದ ಲಾಭದ ಜತೆಗೆ ಕೃಷಿಯ ಮೇಲೆ ಭರವಸೆ ಹುಟ್ಟಿದೆ. ಸ್ವಾವಲಂಬಿ‌ ಜೀವನ ಸಾಗಿಸಲು ಕೃಷಿಯೂ ಉತ್ತಮ ಆಯ್ಕೆಯಾಗಿ ಅವರಿಗೆ ಗೋಚರಿಸಿದೆ.

ಯೋಜನಾಬದ್ಧ ಕೃಷಿಯಿಂದ ಯಶಸ್ಸು ಸಾಧ್ಯ

ನೀರಿನ ಕೊರತೆ, ಕೂಲಿಕಾರ್ಮಿಕರು ಹಾಗೂ ಮಾರುಕಟ್ಟೆ ಸಮಸ್ಯೆ, ಬೆಲೆ ಕುಸಿತದಂತಹ ಸಮಸ್ಯೆಗಳಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ,ಕೃಷಿಯನ್ನು ಬಿಟ್ಟು ಬೆಂಗಳೂರು ಸೇರಿದ್ದೆ. ಲಾಕ್‌ಡೌನ್‌ ನನ್ನ ಜೀವನದ ದಿಕ್ಕನ್ನೇ ಬದಲಿಸಿತು. ಕೃಷಿಯನ್ನು ನಂಬಿ ಜೀವನ ನಡೆಸಬಹುದು. ಆದರೆ, ಸ್ವಲ್ಪ ತಾಳ್ಮೆ ಇರಬೇಕು. ಯೋಜನಾಬದ್ಧವಾದ ಕೃಷಿಯಿಂದ ಯಶಸ್ಸು ಸಾಧ್ಯ ಎನ್ನುತ್ತಾರೆ ಗೋಪಾಲಗೌಡ.

****

ಸದ್ಯಕ್ಕೆ ಬೆಂಗಳೂರಿಗೆ ಹೋಗುವ ಆಸೆ ಇಲ್ಲ. ಕೃಷಿಯಲ್ಲೇ ಮುಂದುವರೆಯುವ ನಿರ್ಧಾರಕ್ಕೆ ಬಂದಿದ್ದೇನೆ.
– ಗೋಪಾಲಗೌಡ, ಯುವ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT